ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿಯಲ್ಲಿ ಹೊಸ ಶಿಖರ

ಬೊಗಸೆಯಲ್ಲಿ ಹೊಳೆ ನೀರು
Last Updated 2 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಅವಳು ತನ್ನವಳಾದಷ್ಟು ತಾನು ಅವಳವನಲ್ಲ
 ತನ್ನ ವೀರ್ಯದ ಆತ್ಮಕ್ಕೆ ಸಾಟಿಯೇ ಅವಳ ಬಸಿರಕಾಯ
   - ಪ್ರತಿಭಾ ನಂದಕುಮಾರ್

ಆತ್ಮ-ಶರೀರಗಳು ಲಿಂಗತಾರತಮ್ಯದ ವಿಷಯಗಳಾದದ್ದು ಯಾವ ಕಾಲದಲ್ಲಿ? ತಿಳಿಯದು. ಆದರೆ ತಾನು ಅವಳವನಾಗದೆ ಉಳಿಯಬಲ್ಲೆ ಎನ್ನುವ ಈ ಸಾಧ್ಯತೆಯೇ `ಆತ ಶ್ಯಾಮ, ನಾವೇ ರಾಧೆ ಬೇರೆ ಬಗೆಯ ಮಾಣಿರೇ' ಎನ್ನುವ ದೇಹ-ಆತ್ಮಗಳ `ಗೋಪಿಕಾ ಗೀತ'ದ ಮೂಲದಲ್ಲಿದೆ.

ಬರಿಯ `ಬಸಿರ ಕಾಯ'ವಾಗಿ ತಿರಸ್ಕೃತ ಜಾಗದಲ್ಲಿ ಉಳಿಯಲೊಲ್ಲದ ಆಧುನಿಕ ಹೆಣ್ಣು ದೇಹವನ್ನು ಸ್ವಂತ ತೃಪ್ತಿಗಾಗಿ ಅಲ್ಲದೆ ಅವಕಾಶವಾದಿತ್ವಕ್ಕೂ ಉಪಕರಣವಾಗಿ ಬಳಸಿಕೊಳ್ಳುತ್ತ ತನ್ನನ್ನು ಒಬ್ಬ ವ್ಯಕ್ತಿಯಾಗಿ ಸಾಬೀತುಮಾಡಿಕೊಳ್ಳುವ ಯತ್ನಕ್ಕೂ  ತೊಡಗಬಹುದು. ಆದರೆ ಬಹಿರಂಗದಲ್ಲಿ ಬದುಕಿನಲ್ಲಿ ಮಾನ್ಯತೆ ಕೊಡಲಾರದ ಯಾವುದೇ ಸಂಬಂಧದೊಳಗೆ ಹೆಣ್ಣನ್ನು ವಸ್ತುವೋ ಉಪಕರಣವೋ ಆಗಿರುವಂತೆಯೇ ಉಳಿಸುವ ವ್ಯವಸ್ಥೆಯಲ್ಲಿ ತನ್ನತನದ ನೆಲೆಯನ್ನು ಇತರ ಸ್ತ್ರೀಯರಿಂದ ಭಿನ್ನವಾಗಿಸಿಕೊಳ್ಳಲು ಗಂಡಿನ ದಾರಿಯನ್ನೇ ತಾನೂ ಕಂಡುಕೊಳ್ಳಬಹುದು. ಆ ಮಟ್ಟಿಗೆ ತನ್ನನ್ನು ಮಾಯೆ ಎಂದು ಮೋಹವೆಂದು, ಮೋಹಿನಿಯೆಂದು ಕರೆದು ಹಾಗೆಯೇ ನಡೆಸಿಕೊಂಡು ಬಂದಿರುವ ವ್ಯವಸ್ಥೆಗೆ ಪೂರಕವಾಗಿಯೇ ತನ್ನದೂ ಅವಕಾಶವನ್ನು ಕಟ್ಟಿಕೊಂಡಿರುವುದೂ ಸಾಧ್ಯ. ಅದೇ ವಿಮುಕ್ತ ಹೆಣ್ಣಿನ ನೆಲೆ ಎನ್ನಬೇಕೇ? ಅಥವಾ ಪುಂ ಸಂಸ್ಕೃತಿಯೊಂದಿಗಿನ ಯಾವತ್ತೂ ತೆರೆದೇ ಇರುವ ಗುಪ್ತ ಅನುಸಂಧಾನದ ದಾರಿ ಅನ್ನಬೇಕೆ ಎನ್ನುವುದು ಬೇರೆಯ ಪ್ರಶ್ನೆ.

ವ್ಯಕ್ತಿಯಾಗಿ ತನ್ನತನವನ್ನು ಗಟ್ಟಿಗೊಳಿಸಿಕೊಳ್ಳುವುದು ಎಂದರೆ ಅನುಕ್ಷಣವೂ ಎದುರಾಗುತ್ತಲೇ ಇರುವ ಪ್ರತಿರೋಧವನು ಬಹಿರಂಗವಾಗಿಯೂ ಆಂತರಂಗಿಕವಾಗಿಯೂ ಎದುರಿಸುತ್ತಲೇ ಬದುಕಬೇಕಾದ ರೀತಿಯೂ ಆಗಿರುತ್ತದೆ. ಆ ರೀತಿಯನ್ನು ಅನುಭೂತಿಯಿಂದ ಕಾಣುವ, ಪೋಷಿಸುವಂಥ ಅನುಕೂಲ ಆವರಣವೊಂದು ಸಿಕ್ಕಿರಲಿ, ಸಿಕ್ಕದಿರಲಿ ತಾನಿರುವ ನಿಲುವನ್ನು ಬಿಡಲು ಬಾರದು. ವಿಮುಕ್ತಿ ಎನ್ನುವುದು ವ್ಯಕ್ತಿತ್ವದ ಅನನ್ಯತೆಯ ಮೂಲಕ ಸಿದ್ಧಿಸಿಕೊಳ್ಳಬೇಕಾದ ಜಾಗ ಎಂದಾದರೆ ಅದು ಅನವರತ ಏಕಾಂತ ಅನೇಕಾಂತಗಳ ಮುಖಾಮುಖಿಯ ಕ್ರಿಯೆಯೂ ಹೌದು. ಆರಂಭದಲ್ಲಿ ಉಲ್ಲೇಖಿಸಿರುವ ಸಾಲುಗಳಲ್ಲಿ ಬುದ್ಧನ `ಮಹಾನಿಶೀಥ' ವನ್ನು ಯಶೋಧರೆಯ ವ್ಯಕ್ತಿತ್ವ, ಅವಳ ಹೆಣ್ತನ, ಅವಳ ಬಯಕೆ, ಬೆದೆ ಈ ಎಲ್ಲಕ್ಕೂ ಆದ ಅಪಚಾರ, ತಿರಸ್ಕಾರಗಳ  “ಮಹಾ ನಿರ್ಗಮನ“ವನ್ನಾಗಿ ಕಾಣಿಸಿಕೊಡುವ  ರೀತಿಯು ನಮ್ಮ ಎಲ್ಲಾ ದಾರ್ಶನಿಕ ಸಿದ್ಧಾಂತಗಳ ಲೌಕಿಕಮೂಲದ  ಪ್ರಶ್ನೆಯೂ ಆಗುತ್ತದೆ ಅನ್ನಿಸುತ್ತದೆ. ಈ ಲೇಖನ ಎತ್ತಲು ಯತ್ನಿಸುವ ಪ್ರಶ್ನೆಗೆ ಸಂಬಂಧಿಸಿರುವುದೆಂದು ಇಲ್ಲಿ ಬಳಸಿಕೊಂಡ್ದ್ದಿದೇನೆ.

ವ್ಯಕ್ತಿ ಮೂಲದ್ದಾದ ಅನುಭವದ ಅಭಿವ್ಯಕ್ತಿ ಸಮಷ್ಟಿಯ ಹಿತಚಿಂತನೆಯ ಧ್ವನಿ ಮೂಡಿಸುವಷ್ಟು ಬಲವಾಗಿ ಕಾವ್ಯದಲ್ಲಿ, ಕಥನದಲ್ಲಿ ಹೊಮ್ಮುವಂತೆ ಆದಾಗ ಅದು ಮಾನವಜನಾಂಗೀಯ ಕಾವ್ಯವೋ ಕಥನವೋ ಆಗಬಲ್ಲದು. ಮಹಿಳೆಯ ಅಥವಾ ಪುರುಷನ ಕಾವ್ಯ ಎನ್ನುವ ಅಂಕಿತದಿಂದಲೂ ಮುಕ್ತವಾಗಬಲ್ಲದು. ಹೊಸ ಲೇಖಕಿಯರ ಕಾವ್ಯದಲ್ಲಿ ಇಂಥ ಸಾಧ್ಯತೆಯ ಹಲವು ದನಿಗಳ ನಡುವಿನ ಒಂದು ಕೊರಳಿನ ದನಿ ಹೀಗಿದೆ:

       ಏನಾದರಾಗಬೇಕೀಗಲೆ ಎಂದು ಹೊರಟ ಹಿಂಡಲ್ಲಿ
        ಹಾಡಿಲ್ಲ, ಕೊಳಲಿಲ್ಲ, ಇಲ್ಲ ಬಣ್ಣ
        ಕಣ್ಣಮುಂದೆ ಕುಣಿವ ಆಲಿಬಾಬನ ಚಾಪೆ
        ಬುತ್ತಿ ಕೈಯಲ್ಲಿಡಿದು ಬರದ ಮಕ್ಕಳ ಕರೆವ
        ತಾಯಿ ಬಿಕನಾಸಿ, ಮಾತಿಲ್ಲದ ಪರದೇಸಿ
        ತಕಲಿಯ ಮೊನೆಯ ಮಿಥಿಲೆಯ ಮಣ್ಣ
        ಅಕ್ಕನ ಕನಸ ಬಣ್ಣಿಸಲೀಗ ತಾವಿಲ್ಲ
        ಎದೆಯೊಳಗೆಂಥದೋ ಹೇಸಿಗೆಯ ಕಮರು
        (ಕ್ಷಮಿಸು ಸೂರ್ಯನೇ/ವಿನಯಾ ಒಕ್ಕುಂದ/ ನೂರು ಗೋರಿಯ ದೀಪ)

ವಿನಯಾ ಅವರ ಈ ದನಿ ಈ ಮೊದಲು ನಮಗೆ ಕೇಳಿಸುತ್ತಿದ್ದ ಮಲ್ಲಿಕಾ ಘಂಟಿಯವರ ಅಥವಾ ಬಿ.ಟಿ. ಲಲಿತಾ ನಾಯಕರ ಮಾರ್ಗವನ್ನು ಬಿಡದೆಯೂ ಕಳೆದ ಮೂರು ದಶಕಗಳ ಮಹಿಳಾ ಕಾವ್ಯದ ಸಾಧಿತ ಗುಣಗಳನ್ನೂ ಅರಗಿಸಿಕೊಳ್ಳುತ್ತದೆ ಎನ್ನುವುದು ಗಮನಿಸಬೇಕಾದದ್ದು. ಪರಂಪರೆಯ ಜೊತೆ ಸಾಗಲು ಇಂಥ ಅರಗಿಸಿಕೊಳ್ಳುವಿಕೆಯೇ ಜೀವಧಾತುವಲ್ಲವೆ? ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಸ್ತ್ರೀವಾದದ ಕನ್ನಡ ಲಕ್ಷಣದ ಬಹುತ್ವವನ್ನು ಮುನ್ನೆಲೆಗೆ ತರಲು ಯತ್ನಿಸುತ್ತೇನೆ.
*** 
ಸ್ತ್ರೀವಾದಿಗಳಿಗೆ (ವಿಶೇಷವಾಗಿ ಅಮೆರಿಕಾದವರಿಗೆ) ತುಂಬ ಮುಖ್ಯವಾದ ತಾಕಲಾಟದ ಪ್ರಶ್ನೆ ಸೆಕ್ಸ್-ಜೆಂಡರ್‌ಗಳ ಸ್ವರೂಪ ನಿರ್ಣಯಕ್ಕೆ ಸಂಬಂಧಿಸಿದ್ದಾಗಿದೆ. ಕಳೆದ ಮೂರು ದಶಕಗಳಿಂದಲೂ ಈ ಬಗ್ಗೆ ಸ್ತ್ರೀವಾದಿ ಸಮಾಜ ಶಾಸ್ತ್ರ, ತತ್ವಶಾಸ್ತ್ರ, ಜೀವಶಾಸ್ತ್ರ ಮತ್ತು ಮನೋವಿಜ್ಞಾನಗಳೂ ಬಹುವಾಗಿ ಚರ್ಚಿಸಿರುತ್ತವೆ. ಫಲವಾಗಿ ಸ್ತ್ರೀವಾದದಲ್ಲಿ ಎರಡು ಸೀಳುಗಳು ಹುಟ್ಟಿರುತ್ತವೆ. ಅವುಗಳನ್ನು `ಕನ್‌ಸ್ಟ್ರಕ್ಟಿವಿಸಂ' ಮತ್ತು `ಎಸ್ಸೆನ್ಷಿಯಲಿಸಂ' ಎಂದು ನಾಮಕರಣ ಮಾಡಿರುತ್ತಾರೆ.

ಜೀವಶಾಸ್ತ್ರೀಯ ವ್ಯತ್ಯಾಸ ಹೇಳುವ ಹೆಣ್ಣುತನ ಗಂಡುತನಗಳು ಬೇರೆ. ಅವು ಸೂಚಿಸುವ ವ್ಯತ್ಯಾಸವನ್ನು ಆಧರಿಸಿ ಸಮಾಜ, ಸಂಸ್ಕೃತಿಗಳು ಕಟ್ಟಿ ಬೆಳೆಸಿರುವ ಸ್ತ್ರೀತ್ವ- ಪುರುಷತ್ವಗಳ ಬಗೆಗಿನ ರೂಢ ನಂಬಿಕೆಗಳು ಬೇರೆ. ಮೊದಲನೆಯದು ಅನಿವಾರ್ಯ ವಾಸ್ತವ. ಆದರೆ ಎರಡನೆಯದು ಕಾಲ ದೇಶ, ಸಂಸ್ಕೃತಿಗಳಿಗೆ ತಕ್ಕಂತೆ ಭಿನ್ನ ಭಿನ್ನ.  ಹಾಗಾಗಿ ಅದು ಬದಲಾಗಬಲ್ಲದು. ಸ್ತ್ರೀಯರು ಅನುಭವಿಸುತ್ತಿರುವ ಲಿಂಗ-ಲಿಂಗತ್ವಗಳ ಮೂಲದ ಎಲ್ಲಾ ಶೋಷಣೆಗಳು ಕೊನೆಗೊಳ್ಳಬೇಕಾದರೆ ಈ ಸೆಕ್ಸ್-ಜೆಂಡರ್ ಕೋಟೆಯನ್ನು ಕಳಚಿಡಬೇಕು ಎನ್ನುವುದು ಸ್ತ್ರೀವಾದದ  ತಳಪಾಯದಲ್ಲಿರುವ ಒಂದು ತತ್ವ.

ಕನ್ನಡದ ಮಹಿಳಾ ಬರಹದ ಸಂದರ್ಭದಲ್ಲಿ ಇಂಥ ಅರಿವೊಂದು ಕಾಣಿಸಿಕೊಂಡಾಗ ಬರಹದ ಮೂಲಕ ಅನುಭವದ ಸ್ವಾಭಿವ್ಯಕ್ತಿಯಲ್ಲಿ ಮೊದಲು ಕಾಣಿಸಿಕೊಂಡದ್ದು ಜೆಂಡರ್ ರಚನೆಯನ್ನು ಪಲ್ಲಟಗೊಳಿಸಬೇಕು ಎನ್ನುವ ಉಮೇದು. ನಮ್ಮಲ್ಲಿ ಅಲ್ಲಿಯವರೆಗೂ ಸೆಕ್ಸ್ ಎನ್ನುವುದು ಹೆಂಗಸರಿಗೆ ಸಾರ್ವಜನಿಕವಾಗಿ ಮಾತನಾಡುವ ವಸ್ತು ಆಗುವುದೂ ಸಾಧ್ಯವಿದ್ದಿಲ್ಲ. ಇನ್ನು ಲೈಂಗಿಕ ಅನುಭವಗಳ ಸ್ವರೂಪ ಮಹಿಳಾ ಬರಹಗಳಲ್ಲಿ ಅರಿವಿಗೆ ಬರುತ್ತಿದ್ದುದೂ ಅದರೊಳಗಿನ ತಾರತಮ್ಯ, ಹಿಂಸೆಗಳಾಗಿ ಮಾತ್ರ. ಹೆಚ್ಚೆಂದರೆ ಭಿನ್ನವಾದ ಸಾಂಗತ್ಯಕ್ಕಾಗಿ ಹಂಬಲ. ಆ ಹಂಬಲದ ಸೂಕ್ಷ್ಮತೆ, ಕೋಮಲತೆಗಳ ಅನುರಣನ ಮಾತ್ರ. ಯಾಕೆ ಕಾಡುತ್ತೀಯೋ.. ಎನ್ನುವಂಥ ಪ್ರೇಮ, ಏಕೆ ಕಾಡಲಿಲ್ಲವೋ ಎಂಬ ಆತಂಕ, ನಿಜ ಬದುಕಿನೊಳಗೆ ತನ್ನನ್ನು ಕತ್ತಿ ಕೂರಿಸಿರುವ ನೂರಾರು ಸಾಮಾಜಿಕ ತೊಡಕು ಸಂಕೋಲೆಗಳ ಅರಿವು, ಅವುಗಳಿಂದಕಳಚಿಕೊಳ್ಳುವ ತವಕ, ಅದು ಅಸಾಧ್ಯ ಎನ್ನುವಾಗ ಹತಾಶೆ...ಇತ್ಯಾದಿ.

ಇಷ್ಟರ ಆಚೆಗೆ ತನ್ನ ವೈಯಕ್ತಿಕ ಇಚ್ಛಾನಿಚ್ಛೆ, ಆಸ್ಥೆ, ಅನಾಸಕ್ತಿಗಳ ಶೋಧನೆ ಆ ಸ್ಥಿತಿಯ ಜೊತೆಗಿನ ಮುಖಾಮುಖಿಯ ಮೂಲಕ ಹೊಮ್ಮಿಬಂದುದಕ್ಕಿಂತ ಚಿಂತನೆಯ ರೀತಿಯಲ್ಲಿ ಕಾಣಿಸಿಕೊಳ್ಳುವುದು ಅಂದಿನ ಅನಿವಾರ್ಯತೆ ಅಥವಾ ಮಿತಿ ಇಲ್ಲವೇ ರೀತಿ ಆಗಿತ್ತು. ಜೊತೆಗೆ, ತನ್ನ ಒಳಗಿನ ನಿಜವನ್ನು ಹೇಳಲು ಸಾಮಾಜಿಕ ಹಿಂಜರಿಕೆ ಮತ್ತು ಹಾಗೆ ಹೇಳಿದರೂ ಅದರ ನಿಜತ್ವವನ್ನು ನಂಬುವಂತೆ ಮಾಡಲು ಸಾಧ್ಯವೇ ಎನ್ನುವ ಸಂದೇಹ ಒಂದು ಕಡೆ; ಮತ್ತೊಂದು ಕಡೆ ಅದಕ್ಕೇ ಬೇಕಾದ ಭಾಷೆಯೇ ಗೊತ್ತಿಲ್ಲ ಮತ್ತು ಸಿಕ್ಕಿಲ್ಲದಿರುವ ತೀವ್ರವಾದ ತಳಮಳ. ಆಗಿನ ಕಾವ್ಯದ ಮನೋ ಬೌದ್ಧಿಕ ಪ್ರತಿನಿಧಿ ಎಂದು ಈ ಸಾಲುಗಳನ್ನು ಓದೋಣ:

        ಬಿಚ್ಚಬಹುದು;
        ಉಟ್ಟ ಸೀರೆಯನ್ನೂ
        ಕಟ್ಟಿದ ಪೇಟವನ್ನೂ,
        ಬಿಚ್ಚಿತೋರಿಸಬಹುದೆ?
        ತೋರಿಸಿ ಒಪ್ಪಿಸಬಹುದೆ?
        ನಮ್ಮೆಲ್ಲ ಭೂತ-ವರ್ತಮಾನದ
        ಸತ್ಯವನ್ನು?
        (ಸನಿಹದ ಬದುಕು/ವಿಜಯಾ ದಬ್ಬೆ/ನೀರುಲೋಹದ ಚಿಂತೆ/1985)

ವೈಯಕ್ತಿಕ ಅನುಭವದ ಅಥವಾ ತನ್ನದಾದ ನಂಬಿದ ಬಾಳಿನ ಸತ್ಯವನ್ನು ಕಾವ್ಯದಲ್ಲಿ ಹೇಗೆ ಹೇಳಿಕೊಳ್ಳಬಹುದು? ಮತ್ತು ಹಾಗೊಂದು ವೇಳೆ ಹೇಳಿದರೂ ಅದು ತಲುಪೀತೆ? ಅನ್ನಿಸುತ್ತಿದ್ದ ಪರಿಸ್ಥಿತಿಯಿಂದ ಮಹಿಳೆಯರು ಅಭಿವ್ಯಕ್ತಿಯಲ್ಲಿ ಈಗ ಇನ್ನೊಂದು ಶಿಖರ ತಲುಪಿರುವುದಕ್ಕೆ ಈ ಕೆಳಗಿನ ಸಾಲುಗಳತ್ತ ನೋಡಬಹುದು:

      ಬೆದೆಗೆ ಬಂದವಳನ್ನು ಬಲೆಗೆ ಸಿಕ್ಕಿಸಿ ಉಜ್ಜಿ ಸಿಪ್ಪೆ ಸಿಗಿದು
        ಕತ್ತರಿಸಿ ಬಾಂಡಲೆಯಲ್ಲಿ ಮಸಾಲೆಸಹಿತ ಹುರಿದು
        ಕರುಳ ಕುದಿತಕ್ಕೆ ಬಲಿಕೊಟ್ಟು ಬಾಯೊಡ್ಡಿ ಚಪ್ಪರಿಸಿ ತೇಗಿ ಆಹಾ
        ಜೋತ ಮೊಲೆ ಸೋತ ತುಟಿಯ ಪುಲಕವೇನು ಮಹಾ
        ಎಂದು ಹಂಗಿಸಿ ನಿಗುರಿದ ಶಿಶ್ನದಿಂದ ತಿವಿದು ಮೂತಿ
        .........................
        .........................
        ಏನೀಗ ಎದ್ದು ಹೋದರೆ
        ಯೋನಿಗೆ ಅಪಚಾರವಾದರೆ
        ಉನ್ಮತ್ತ ಮೊಲೆತೊಟ್ಟು ಬಿಟ್ಟು ನಡೆದರೆ
        ಏನೀಗ?
   (ಮಹಾನಿರ್ಗಮನ/ಪ್ರತಿಭಾ ನಂದಕುಮಾರ್/ಮುನ್ನುಡಿ ಬೆನ್ನುಡಿಗಳ ನಡುವೆ)

ವಿಜಯಾ ದಬ್ಬೆಯವರ ಕವಿತೆ ರಚಿತವಾದ ಕಾಲಕ್ಕೆ ಮಹಿಳಾ ಬರಹದ ಬೆನ್ನಿಗೆ ಆಸರೆಯಾಗಿ ಒದಗುತ್ತಿದ್ದುದು ಈ ನೆಲದ್ದೇ ಆದ ಸಮಾಜವಾದ, ಮಾರ್ಕ್ಸ್ ವಾದ, ಉದಾರವಾದಿ ಸ್ತ್ರೀವಾದ ಇತ್ಯಾದಿಗಳು. ಅವು ಹೇಳುವ ಬದಲಾವಣೆಯ ಸಾಧ್ಯತೆಗಳ ಅಮೂರ್ತ ಆಶಾವಾದ ಬಹುಜನ ಲೇಖಕಿಯರ ಕಾವ್ಯವನ್ನು ಮುನ್ನಡೆಸುತ್ತಿದ್ದರೆ, ಮಹಿಳಾ ಹೋರಾಟವೂ ಸೇರಿದಂತೆ ಹಲವು ಸಾಮೂಹಿಕ ಯತ್ನಗಳು `ಆಕ್ಟಿವಿಸಂ'ಗಾಗಿ ಒತ್ತಾಯಿಸುತ್ತಿದ್ದವು. ಹೋರಾಟದ ಮೂಲಕ ವ್ಯವಸ್ಥೆಯನ್ನು ಪರಿವರ್ತಿಸಬಲ್ಲ ಕ್ರಿಯಾಶೀಲ ರಾಜಕಾರಣದಲ್ಲಿ ತೊಡಗುವುದು ಮುಖ್ಯ ಆಸಕ್ತಿಯಾದಾಗ  ಬರಹದ ಒಳಗೇ ಸಿದ್ಧಿಸಿಕೊಳ್ಳಬೇಕಾದ ಬಿಡುಗಡೆಯ ಅನ್ಯ ಆಯಾಮಗಳ ಹುಡುಕಾಟವನ್ನು  ಕೆಲವು ಕಾಲ ಮುಂದಕ್ಕೆ ಹಾಕಿತು ಅನ್ನಿಸುತ್ತದೆ. ವಿಜಯಾ ದಬ್ಬೆಯವರ ಅಂದಿನ ಕವಿತೆಗಳಿಗೂ ಪ್ರತಿಭಾ ನಂದಕುಮಾರ್ ಅವರ ಇಂದಿನ ಕವಿತೆಗಳಿಗೂ ಇರುವ ಅಂತರವು ಬಹುಶಃ ನಾನು ಹೇಳುತ್ತಿರುವ ಮಾತನ್ನು ಸ್ಪಷ್ಟಗೊಳಿಸಬಲ್ಲದು.

ಈ ಇಬ್ಬರ ಕಾವ್ಯಗಳ ಯಾವುದೇ ರೀತಿಯ ತುಲನೆಯೂ ಇಲ್ಲಿ ನನ್ನ ಉದ್ದೇಶವಲ್ಲ. ಅಭಿವ್ಯಕ್ತಿಯಲ್ಲಿ ಆಗಿರುವ, ಆಗುತ್ತಲೂ ಇರುವ ವಿವಿಧ ಬೆಳವಣಿಗೆಗಳನ್ನು ಚರಿತ್ರೆಯೊಂದಿಗೇ ಗುರುತಿಸಲು ಇದು ಆಧಾರ ಅಷ್ಟೆ. ಅಂದರೆ, ಅಭಿವ್ಯಕ್ತಿಯಲ್ಲಿ ಇಂದು ಕಾಣಿಸುವ ಹೆಣ್ಣಿನ ದಿಟ್ಟತನ ಯಾರದೋ ಎಲ್ಲಿಯದೋ ಕೊಡುಗೆ ಅಥವಾ ಕಾಣಿಕೆಯಲ್ಲ; ಅದು ಒಳಗಿನ ಶತಶತ ಯತ್ನಗಳ ಫಲವಾಗಿದೆ. ಇದಕ್ಕಾಗಿಯೇ ನಮ್ಮ ಲೇಖಕಿಯರ ಕಥೆ, ಕವಿತೆಗಳನ್ನು  `ಕನ್ಸ್ಟ್ರಕ್ಟಿವಿಸ್ಟ್' ಎಂದೋ ಅಥವಾ `ಎಸ್ಸೆನ್ಷಿಯಲಿಸ್ಟ್' ಎಂದೋ ತೀರ್ಮಾನಿಸಲು ಬರುವುದಿಲ್ಲ.  ಹಾಗೆ ವಿಭಜಿಸಿ ನೋಡಲು ಹೊರಟರೆ ಎರಡು ರೀತಿಯ ಸಮಸ್ಯೆ ಎದುರಾಗಬಲ್ಲದು.
ಮೊದಲನೆಯದಾಗಿ, ಸಾಂಸ್ಕೃತಿಕ ಕಟ್ಟೋಣವಾದ ಜೆಂಡರ್, ಕಾಲದೊಂದಿಗೆ ಬದಲಾಗುವ ರೀತಿಯನ್ನೂ ಲೇಖಕಿಯರು ಗುರುತಿಸುತ್ತಲೇ ಬಂದಿರುವುದನ್ನು ನಿರ್ಲಕ್ಷಿಸಿ, ಹೆಣ್ತನದ ಜೀವಶಾಸ್ತ್ರೀಯ ಅನಿವಾರ್ಯತೆಗೇ ಅವರನ್ನು ಸೀಮಿತಗೊಳಿಸುವ ಅಪಾಯವಿರುತ್ತದೆ. ಹುಡುಕಲು ಹೊರಟರೆ ಕನ್ನಡದ ಒಬ್ಬೊಬ್ಬ ಲೇಖಕಿಯ ಬರಹದೊಳಗೂ ಆತ್ಮಾಭಿಮಾನದ ಜಾಗವಾದ ಹೆಣ್ತನವೂ ಬದಲಾಗಬೇಕಾದ ಪೈತೃಕ ವ್ಯವಸ್ಥೆಯ ಜೊತೆಗಿನ ಗುದ್ದಾಟವೂ ಜೊತೆ ಜೊತೆಯಾಗಿಯೇ ಸಾಗುವುದನ್ನು ಕಾಣಬಹುದು.

ಎರಡನೆಯ ಸಮಸ್ಯೆ ಎಂದರೆ ಇಲ್ಲಿ ಇಲ್ಲದ ರೀತಿಯ ಸೆಕ್ಸ್-ಜೆಂಡರ್ ಗ್ರಹಿಕೆಗಳ ತಾತ್ವಿಕ ಚೌಕಟ್ಟಿಗೆ ಬಲವಂತವಾಗಿ ತುರುಕಿದಂತೆಯೂ ಆಗಬಹುದು. ಏಕೆಂದರೆ ತೀವ್ರ ವ್ಯಕ್ತಿವಾದಿ ಪಶ್ಚಿಮ ಸಮಾಜಗಳ ಲೈಂಗಿಕ ಜಿಜ್ಞಾಸೆಗಳ ತೀವ್ರತೆಗಳೇ ಬೇರೆ. ಕನ್ನಡತಿಯರು ಯಾವುದೇ ವರ್ಗ, ಜಾತಿ, ಬುಡಕಟ್ಟಿನ ಅಥವಾ ಅಲ್ಪಸಂಖ್ಯಾತ ಹಿನ್ನೆಲೆಯಿಂದ ಬರೆದರೂ ಅವರು ಕಂಡುಕೊಳ್ಳಲು ಯತ್ನಿಸುತ್ತಿರುವ ಹೆಣ್ತನದ ಅನನ್ಯತೆಯ ಮಾದರಿಗೆ ಇರುವ ಆಧಾರ ಅತ್ಯಂತ ಸ್ಠಳೀಯವಾದದ್ದು. ಅದು ರ‌್ಯಾಡಿಕಲ್ ಮಿನಿಸಂಗೆ ಅಂಚಿನಲ್ಲಿ ಇರಬಲ್ಲದು ಅಷ್ಟೆ. ಇಲ್ಲಿ 'ತಾಯಿಸಂಸ್ಕೃತಿ' ಬೇರುಳ್ಳ ಬಲವಾದ  ಪುರಾತನ ಪರಂಪರೆಯೊಂದು ಮಹಿಳೆಯರಿಗೆ ಇದ್ದೇ ಇದೆ. ಮತ್ತು ಅದು ಆದಿಮ ಕೃಷಿ ಮೂಲದ ನಾಗರಿಕತೆಯಲ್ಲಿ ಬೇರನ್ನು ಹೊಂದಿದ್ದು, ಪ್ರಚಂಡ ಕೈಗಾರಿಕೀಕರಣದಿಂದಲೂ ಮಹಾ ಯುದ್ಧಗಳಿಂದಲೂ ಪೂರ್ತಿಯಾಗಿ ಇಲ್ಲಿ ಕೊಚ್ಚಿಹೋಗಲಿಲ್ಲ.

ಹಾಗಾಗಿ ನೆಲದ ತವನಿಧಿಯಾದ ಆದಿಮ ಮಾತೃತ್ವದ ಮಡಿಲೊಳಗೆ ಹೊಕ್ಕು ಒಂದು ತಾವನ್ನು ಸೃಷ್ಟಿಸಿಕೊಳ್ಳಲು ಇಲ್ಲಿ ಲೇಖಕಿಯರಿಗೆ ಸುಲಭ. ಬೆಟ್ಟ ಕಡಿದು ದಾರಿ ಮಾಡಿಕೊಳ್ಳುವಂಥ ಹೊಸ ಯತ್ನವೇನೂ ಬೇಕಾಗದು. ಮುಖ್ಯವಾಹಿನಿಯ ದಾರ್ಶನಿಕ ಲೋಕದೊಳಕ್ಕೆ ಚಲಿಸಿ ಕೊಂಚ ಭೂತಕಾಲಕ್ಕೆ ಅಡಿಯಿಟ್ಟರೆ ಸಾಕು. ಪುರುಷನಿಗಿರದ, ಆದ್ದರಿಂದಲೇ ಪವಿತ್ರವೆಂದು, ಶ್ರೇಷ್ಠವೆಂದು ಪುಂವ್ಯವಸ್ಥೆ ಕೂಡ ಕೊಂಡಾಡುವ ಜಾಗಕ್ಕೆ ತಲುಪಬಲ್ಲರು. ಅದರೊಳಗೆ ತಮ್ಮತನವನ್ನು ಕಂಡುಕೊಳ್ಳಲು ಮಹಿಳೆಯರು ಆಧುನಿಕ ಕಲಿಕೆಯಿಂದ ಗಳಿಸಿಕೊಂಡಿರುವ ವ್ಯಕ್ತಿವಾದಿ ಅಹಮಿಕೆಯಿಂದ ಸ್ವಲ್ಪವೇ ಹಿನ್ನಡೆಯಬೇಕಷ್ಟೆ. ನಾನೇ ನೆಲ, ನಾನೇ ಜಲ, ನಾನೇ ಆಕಾಶ, ಪ್ರಕೃತಿ ಎಂದು ಸ್ವಯಂ ಆರೋಪಿಸಿಕೊಳ್ಳುವಿಕೆ ತಲೆಯೆತ್ತಿದೆ. ಇವೆಲ್ಲ ಈ ಲೇಖಕಿಯರು ಒಳಗೆ  ನಿಜಕ್ಕೂ ಸಾಕ್ಷಾತ್ಕಾರ ಮಾಡಿಕೊಂಡಿರುವ, ಅನುಭವಸಿದ್ಧ ಲಕ್ಷಣಗಳೆ? ಅಥವಾ ಗತಾನುಗತಿಕರೂಪಕ, ಪ್ರತಿಮೆ, ಶಬ್ದಗಳ  ಮರು ಉಚ್ಚಾರಣೆಗಳೆ? ಎನ್ನುವುದನ್ನು ಯಾರು ಅಳೆಯಬೇಕು? ಹಾಗೆ  ವಿಚಾರಿಸಬೇಕಾದದ್ದು ಸೃಜನಶೀಲ ಅನನ್ಯತೆಗೆ ಅಗತ್ಯವಿಲ್ಲವೆ? ಹಾಗೆ ಅಳೆದು ವಿಮರ್ಶಿಸಿಕೊಳ್ಳಲು ಸ್ವಪ್ರಜ್ಞೆಯ ತೀವ್ರ ಎಚ್ಚರ ಅವಶ್ಯಕವಲ್ಲವೆ?

ತಾನು, ತನ್ನತನ ಎನ್ನುತ್ತಾ ಅರಸಿಕೊಂಡು ಹೊರಟ ಕಾವ್ಯವಾಗಲೀ ಕಥನವಾಗಲೀ ಕೊನೆಗೆ ಗರ್ಭದ ಮೂಲಕ್ಕೇ ಹಿಂದಿರುಗಿದೆಯೆ? ಅರ್ಥಾತ್ ಜೀವಶಾಸ್ತ್ರೀಯ ಹೆಣ್ತನದ ಔನ್ನತ್ಯವನ್ನು ಸ್ವತ್ವದ ಲಕ್ಷಣವಾಗಿ ಸ್ವೀಕರಿಸಿ ಅದರ ಸುತ್ತಲೂ ಬೆಳೆದಿರುವ ಸಾಂಸ್ಕೃತಿಕ ಮುಳ್ಳುಕಂಟಿಯನ್ನು ಎಳೆದು ತೋರಿಸುವುದು, ಆ ಜಾಗದಲ್ಲಿ ಔನ್ನತ್ಯದ ಗೃಹೀತಗಳನ್ನು ಕೂರಿಸುವುದೇ ಪರ್ಯಾಯ ಎನ್ನಬಹುದೆ? ಈ ದಾರಿ ಎಲ್ಲಿಯವರೆಗೆ ಚಾಲನೆಯಲ್ಲಿ ಇರುತ್ತದೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT