ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇತಾಳಕ್ಕೇ ಪ್ರಶ್ನೆಗಳು!

Published 16 ಮೇ 2024, 20:20 IST
Last Updated 16 ಮೇ 2024, 20:20 IST
ಅಕ್ಷರ ಗಾತ್ರ

ಹುಣಿಸೆಮರದ ಕೆಳಗೆ ಸಿಗರೇಟು ಸೇದುತ್ತ ನಿಂತಿದ್ದ ತೆಪರೇಸಿಯ ಹೆಗಲೇರಿದ ಬೇತಾಳ ‘ಎಲೈ ತೆಪರನೆ, ಎಷ್ಟು ಸಲ ಹೇಳೋದು ಇಲ್ಲಿಗೆ ಬರಬೇಡ ಅಂತ. ಇರಲಿ, ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳದಿದ್ದಲ್ಲಿ ನಿನ್ನ ತಲೆ ಸಿಡಿದು ಸಾವಿರ ಹೋಳಾದೀತು’ ಎಂದು ಎಚ್ಚರಿಸಿತು.

ಬೇತಾಳದ ಬೆದರಿಕೆಗೆ ಗಹಗಹಿಸಿ ನಕ್ಕ ತೆಪರೇಸಿ ‘ಎಲೈ ತಗಡು ಬೇತಾಳವೆ, ನೀನು ಪ್ರಶ್ನೆ ಕೇಳುವ ಕಾಲ ಮುಗೀತು. ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸು. ಇಲ್ಲವಾದಲ್ಲಿ ನಿನ್ನನ್ನು ಇ.ಡಿ. ವಶಕ್ಕೆ ಒಪ್ಪಿಸಬೇಕಾದೀತು’ ಎಂದ.

ನನ್ ಬುಡಕ್ಕೇ ಬಂದ್ನಲ್ಲಪ್ಪ ಇವ್ನು ಎಂದು ಕೊಂಡ ಬೇತಾಳ, ‘ಅದೇನು ಕೇಳು’ ಎಂದಿತು.

‘ಪೆನ್‌ಡ್ರೈವ್ ಫ್ಯಾಕ್ಟರಿ ಎಲ್ಲಿದೆ, ಹಾಸನದಲ್ಲಿ ಅವನ್ನು ಹಂಚಿಸಿದವರಾರು?’

‘ದೇವ್ರಾಣೆ ಗೊತ್ತಿಲ್ಲ’.

‘ಈ ನಿಂಬೆಹಣ್ಣು, ತಾಯತ, ಕೈದಾರ, ಉಡುದಾರದ ಪವರ್ ಎಷ್ಟು ವರ್ಷ ಇರುತ್ತೆ?’

‘ಅದೂ ಗೊತ್ತಿಲ್ಲ’.

‘ಓಕೆ, ಈಗ ವಿದೇಶದಲ್ಲಿರುವ ಉಜ್ವಲ್ ಯಾವಾಗ ವಾಪಸ್ ಬರಬಹುದು?’

‘ಅದು ಉಜ್ವಲ್ ಅಲ್ಲ...’ ಬೇತಾಳ ವಾದಿಸಿತು.

‘ಗೊತ್ತು, ಜನ ಆ ವಿಡಿಯೊ ನೋಡಾಕೆ ಮೊಬೈಲ್‌ನ ಉಜ್ಜಿ ಉಜ್ಜಿ ಅದೀಗ ಉಜ್ವಲ್ ಆಗೋಗಿದೆ. ಇರ್‍ಲಿ, ಈಗ ಸೆಂಟ್ರಲ್‌ನಲ್ಲಿ ‘ಅಬ್ಕೀ ಬಾರ್...’ ಎಷ್ಟು ಬರಬಹುದು?’

‘ಗೊತ್ತಿಲ್ಲ, ನಾನು ಬೇತಾಳ, ಜ್ಯೋತಿಷಿ ಅಲ್ಲ’.

‘ಆಯ್ತು, ಫಲಿತಾಂಶದ ನಂತರ ‘ವಾಲು’ ಬಿಡುಗಡೆ ಆಗಬೋದಾ? ‘ಬಂಡೆ’ ಸಿಂಹಾಸನ ಏರಬೋದಾ?’

‘ಗೊತ್ತಿಲ್ಲ, ಇದನ್ನ ಟಿ.ವಿ.ಯೋರಿಗೆ ಕೇಳು, ಚೆನ್ನಾಗಿ ಹೇಳ್ತಾರೆ’.

‘ಹೋಗ್ಲಿ, ಬಂಡೆ ಮತ್ತು ಬ್ರದರ್ ಮಾತಿನ ಯುದ್ಧ ಎಲ್ಲಿಗೆ ಹೋಗಿ ನಿಲ್ಲಬಹುದು?’

‘ಗೊತ್ತಿಲ್ಲ, ಆದ್ರೆ ಡಿಕ್ಷನರಿಗೆ ಹೊಸ ಹೊಸ ಪದಗಳು ಸಿಗಬಹುದು’.

‘ಏನು ಕೇಳಿದ್ರೂ ಗೊತ್ತಿಲ್ಲ ಅಂತೀಯ, ನಿನ್ ತಲೆ ಸಿಡಿದು ಹೋಳಾಗಲ್ವಾ?’ ತೆಪರೇಸಿಗೆ ಸಿಟ್ಟು ಬಂತು. ‘ನಂಗೆ ತಲೆಯೇ ಇಲ್ಲ...’ ಬೇತಾಳ ನಗುತ್ತಾ ಹಾರಿಹೋಗಿ ಹುಣಿಸೆಮರಕ್ಕೆ ನೇತು ಹಾಕಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT