ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಂ ಕೋರ್ಸ್ನಲ್ಲಿ ಭಟ್ಟರು

Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ‘ಮುಂಗಾರು ಮಳೆ’ ಚಿತ್ರದ ಯಶಸ್ಸನ್ನು ಪಾಠದ ವಿಷಯವಾಗಿ ಅಳವಡಿಸಿಕೊಂಡಿದೆ. ನಿರ್ದೇಶಕ ಯೋಗರಾಜ್ ಭಟ್ಟರ ಬಗ್ಗೆ ಒಂದು ಮಾಡ್ಯೂಲ್ ಕಲಿಸಿಕೊಡುತ್ತದೆ.

ಆ ಹಿಟ್ ಚಿತ್ರ ಬಿಡುಗಡೆಯಾಗಿ ಏಳು ವರ್ಷ ಸಂದಿದೆ. ಹಿಂದಿನ ದಾಖಲೆಗಳನ್ನು ಮುರಿದು ದೊಡ್ಡ ಪ್ರಮಾಣದಲ್ಲಿ ಹಣ ಗಳಿಸಿದ ಚಿತ್ರವದು. ಅದರ ಬಗೆಗಿನ ಮ್ಯಾನೇಜ್‌ಮೆಂಟ್‌ ಪಠ್ಯವನ್ನು ಅಪ್‌ಡೇಟ್ ಮಾಡಬೇಕು ಎಂದು ಐಐಎಂನ ಕೆ.ಕವಿತಾ ಹೊರಟಿದ್ದಾರೆ. ಇದರ ಸಲುವಾಗಿ ಅವರು ನಿರ್ದೇಶಕ ಯೋಗರಾಜ್ ಭಟ್ಟರನ್ನು ಭೇಟಿಯಾದಾಗ ನನ್ನನ್ನೂ ಜೊತೆ ಕರೆದೊಯ್ದರು.

ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳು ಭಟ್ಟರ ಬಿಸಿನೆಸ್ ಮಾಡೆಲ್ ಏನು ಎಂದು ತಿಳಿಯಲು ಕುತೂಹಲವಾಗಿರುತ್ತಾರೆ. ‘ಮುಂಗಾರು ಮಳೆ’ ಚಿತ್ರಕ್ಕೆ ಸಾಂಪ್ರದಾಯಕ ನಿರ್ಮಾಪಕರೇ ದುಡ್ಡು ಹಾಕಿದ್ದರು. ಅಲ್ಲಿಂದೀಚೆಗೆ ಚಿತ್ರರಂಗದ ಹಣ ಹೂಡಿಕೆಯ ಪ್ಯಾಟರ್ನ್ ಸ್ವಲ್ಪ ಬದಲಾಗಿದೆ. ಸ್ನೇಹಿತರು, ಹೂಡಿಕೆದಾರರ ಜೊತೆಗೂಡಿ ಭಟ್ಟರು ಕೂಡ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಚಿತ್ರ ನಿರ್ಮಾಣಕ್ಕೆ ಕಾಲಿಡುತ್ತಿವೆ. ಮುಂಬೈ ಚಿತ್ರರಂಗದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿವೆ. ಇವೆಲ್ಲ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳು ಅಧ್ಯಯನ ಮಾಡುವ ವಿಷಯಗಳು.  

ಭಟ್ಟರ ಆಫೀಸ್ ಇರುವುದು ಬನಶಂಕರಿಯಲ್ಲಿ. ಟೀ ತರಿಸಿ ಮಾತಿಗೆ ಕೂತ ಭಟ್ಟರು ಕನ್ನಡ ಚಿತ್ರರಂಗದಲ್ಲಿ

ತಾವು ಹತ್ತಿರದಿಂದ ಕಂಡ ಕೆಲವು ವಿಷಯಗಳನ್ನು ಹೇಳಿದರು. ಇಲ್ಲಿ ಚಿತ್ರಗಳನ್ನು ೧೮ರಿಂದ ೨೩ ವರ್ಷದವರಿಗೆ ನಿರ್ಮಿಸಬೇಕು ಎಂಬುದು ಅವರ ಅನುಭವದ ಮಾತು. (ಈ ಯೂಥ್ ಡೆಮೊಗ್ರಫಿಕ್ಸ್ ಮತ್ತು ಅದು ಒಡ್ಡುವ ಸವಾಲುಗಳು, ಅವಕಾಶಗಳ ಬಗ್ಗೆ ನಂದನ್ ನಿಲೇಕಣಿ ತಮ್ಮ ಪುಸ್ತಕ ‘ಇಮ್ಯಾಜಿನಿಂಗ್ ಇಂಡಿಯಾ’ದಲ್ಲಿ ಸುದೀರ್ಘವಾಗಿ ಬರೆದಿದ್ದಾರೆ).

‘ಮುಂಗಾರು ಮಳೆ’ ನೋಡಿ ಇಷ್ಟ ಪಟ್ಟ ಪ್ರೇಕ್ಷಕ ಇಂದು ಕೆಲಸ, ಟಾರ್ಗೆಟ್, ಗರ್ಲ್‌ಫ್ರೆಂಡ್, ಮದುವೆ ಗೊಂದಲದಲ್ಲಿ ಬಿದ್ದಿರುತ್ತಾನೆ. ಸಿನಿಮಾ ನೋಡಲು ಅವನಿಗೆ ಸಮಯವಿರುವುದಿಲ್ಲ. ಮತ್ತೊಮ್ಮೆ ಅದೇ ಪ್ರೇಕ್ಷಕನಿಗೆ ಸಿನಿಮಾ ಮಾಡಿದರೆ ಓಡುವುದಿಲ್ಲ ಎಂಬುದು ಭಟ್ಟರ ತರ್ಕ. ಆ ಪ್ರೇಕ್ಷಕನ ತಮ್ಮನಿದ್ದರೆ ಅವನಿಗೆ ಚಿತ್ರ ಮಾಡಬೇಕು. ಅವನು ಚಿತ್ರದ ಬಗ್ಗೆ ಮಾತಾಡಿ, ಅದರ ಹಾಡು ಮತ್ತೆ ಮತ್ತೆ ಕೇಳಿ, ಮನೆ ಮಂದಿಯನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಬಲ್ಲ ಎಂಬುದು ಭಟ್ಟರ ಅನಿಸಿಕೆ.

ಈ ಹುಡುಗನನ್ನೇ ಉದ್ದೇಶಿಸಿ ಸಿನಿಮಾ ಮಾಡಹೊರಟಾಗ ಸ್ವಲ್ಪ ಪಕ್ವವೆನಿಸುವ, ಜೀವನದ ಅನುಭವದ ಸಿಹಿ, ಕಹಿ ಬೆರೆತಿರುವ ಕಥೆ ಹೇಳುವುದು ಕಷ್ಟ. ಸಿನಿಮಾ ನೋಡುವ ಅಭ್ಯಾಸ ಆಳವಾಗಿ ರೂಢಿಸಿಕೊಂಡಿರುವ ತೆಲುಗರು, ತಮಿಳರು ಕನ್ನಡಿಗರಿಗಿಂತ ಭಿನ್ನ ಎಂಬುದು ಭಟ್ಟರ ಊಹೆ. ಕನ್ನಡಿಗರು ಸಾಹಿತ್ಯವನ್ನು ಹಚ್ಚಿಕೊಂಡಂತೆ ಸಿನಿಮಾವನ್ನು ಹಚ್ಚಿಕೊಂಡಿಲ್ಲ. ಇದರಿಂದ ಒಂದು ಮಟ್ಟದ ಇಂಟೆಲಿಜೆನ್ಸ್ ಇಲ್ಲದ ಚಿತ್ರಗಳು ಇಲ್ಲಿ ಓಡುವುದು ಕಷ್ಟ.

ಕಾರ್ಪೊರೇಟ್ ನಿರ್ಮಾಣದಲ್ಲಿ ಲೆಕ್ಕ ಪತ್ರ ಕರಾರುವಕ್ಕಾಗಿರುತ್ತೆ. ಆದರೆ ಅವರಿಗೆ ಸಾಂಪ್ರದಾಯಿಕ ನಿರ್ಮಾಪಕರಿಗೂ ಸೃಜನಾತ್ಮಕ ಜನರ ನಡುವೆ ಇರುವ ಸಂಬಂಧ ಇರುವುದಿಲ್ಲ. ಆಫೀಸ್ ವೇಳೆಯಲ್ಲಿ ಕಾರ್ಪೊರೇಟ್ ಸಂಸ್ಥೆಯ ಅಧಿಕಾರಿಯ ಫೋನಿಗೆ ನಿರ್ದೇಶಕ ಸಿಕ್ಕದಿದ್ದರೆ ಅವನನ್ನು ಕೈಬಿಡುವ ಸಾಧ್ಯತೆಗಳಿರುತ್ತದೆ. ಹಣ ಹೂಡುವ ತೀರ್ಮಾನ ತೆಗೆದುಕೊಳ್ಳುವ ಅಧಿಕಾರಿ ಒಬ್ಬ ಸೃಜನಶೀಲನ ಕೆಲಸದ ಬಗ್ಗೆ ತಿಳಿದುಕೊಳ್ಳದೆ ಮಾತಿಗೆ ಕೂರುವ ಸಂಭವ ಕೂಡ ಇರುತ್ತದೆ.

ಭಟ್ಟರ ಅತಿ ದೊಡ್ಡ ಬಂಡವಾಳವೆಂದರೆ ಅವರ ವಿಟ್. ಅವರ ಕಥೆಗಳನ್ನು ಚಿತ್ರಗಳನ್ನು ಮುನ್ನಡೆಸುವುದೇ ಈ ತಮಾಷೆಯ, ಆಡು ಭಾಷೆಯ ಸಾಧ್ಯತೆಗಳಲ್ಲಿ ಸಂಭ್ರಮಿಸುವ ಪ್ರವೃತ್ತಿ. ಅದರ ಮುಖಾಂತರವೇ ತಮ್ಮ ತತ್ವ, ನೀತಿ, ಎಲ್ಲವನ್ನೂ ಹೇಳುವ ಭಟ್ಟರು ತೀಕ್ಷ್ಣ ಸಂಭಾಷಣೆಯ ಜೊತೆ ಅಚ್ಚುಕಟ್ಟಾದ ಸ್ಕ್ರೀನ್ ಪ್ಲೇ ಕೈಲಿಟ್ಟುಕೊಂಡು ಶೂಟಿಂಗ್‌ನಲ್ಲಿ ತೊಡಗುತ್ತಾರೆ.

ಮೊನ್ನೆ ಬಿಡುಗಡೆಯಾದ ‘ಲೂಸಿಯಾ’ ಚಿತ್ರದ ನಿರ್ದೇಶಕ ಪವನ್ ಕುಮಾರ್ ಥರದ ಹಲವು ಉತ್ಸಾಹಿ ನಿ

ರ್ದೇಶಕರನ್ನು ಹುರಿದುಂಬಿಸಿ ಕೆಲಸಕ್ಕೆ ಹಚ್ಚಿರುವ ಭಟ್ಟರು ಹೊಸ ಪ್ರಯತ್ನಗಳಲ್ಲಿ ಕನ್ನಡ ಚಿತ್ರದ ಭವಿಷ್ಯವನ್ನು ಕಾಣುತ್ತಾರೆ.  ಹಿಂದಿ ಚಿತ್ರವೊಂದರ ಸ್ಕ್ರಿಪ್ಟ್ ಮಾಡಲು ಈಗ ಮುಂಬೈಯಲ್ಲಿ ತಂಗಿರುವ ಭಟ್ಟರು ಆ ಪ್ರಾಜೆಕ್ಟ್ ಬಗ್ಗೆಯೂ ತುಂಬ ಆತ್ಮವಿಶ್ವಾಸದಿಂದ ಮಾತಾಡಿದರು. 

ಆಡಳಿತದಲ್ಲಿ ಡಬಲ್ ಆಕ್ಟಿಂಗ್
ಆಡಳಿತದಲ್ಲಿನ ಅತಿಶಯಗಳ ಬಗ್ಗೆ ಕೇಳಿರುತ್ತೇವೆ. ಆದರೆ ಈ ಥರದ ಪ್ರಸಂಗ ನನ್ನ ಕಿವಿಗಂತೂ ಬಿದ್ದಿರಲಿಲ್ಲ. ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ತಾವೇ ಕಾಗದ ಬರೆದುಕೊಳ್ಳುತ್ತಾರಂತೆ. ಒಮ್ಮೊಮ್ಮೆ ಖಾರವಾದ ಭಾಷೆಯಲ್ಲಿ ತಮ್ಮನ್ನು ತಾವೇ ಬೈದುಕೊಳ್ಳುತ್ತಾರಂತೆ.

ಇದು ಜೋಕ್ ಅಲ್ಲ. ಡಿ.ಐ.ಜಿ. ಭಾಸ್ಕರ್ ರಾವ್ ಅವರು ಆಂತರಿಕ ಸುರಕ್ಷಾ ವಿಭಾಗದ ಮುಖ್ಯಸ್ಥರು. ಅವರಿಗೆ ತರಬೇತಿ ವಿಭಾಗದ ಜವಾಬ್ದಾರಿಯನ್ನೂ ಮೇಲಧಿಕಾರಿಗಳು ವಹಿಸಿದ್ದಾರೆ. ದಿಲ್ಲಿಯಿಂದ ಪ್ರಕಟವಾಗುವ ‘ಓಪನ್’ ವಾರಪತ್ರಿಕೆ ಹೇಳುವಂತೆ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಕಾಗದ ಬರೆದು, ಆಯಾ ಆಫೀಸಿನಲ್ಲಿ ಕೂತು ಉತ್ತರ ಬರೆಯುತ್ತಾರಂತೆ. ತರಬೇತಿ ವಿಭಾಗದಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಆಗದಿದ್ದಾಗ ತಡ ಮಾಡುವುದು ತರವಲ್ಲ ಎಂಬ ಧ್ವನಿಯ ಪತ್ರಗಳನ್ನು ಡಿ.ಐ.ಜಿ ಸಾಹೇಬರು ಬರೆದಿದ್ದಿದೆಯಂತೆ.  

ಪೊಲೀಸ್ ವಿಭಾಗದಲ್ಲಿನ ಸಿಬ್ಬಂದಿ ಕೊರತೆಯನ್ನು ಇದು ಒತ್ತಿ ಹೇಳುತ್ತದೆ, ನಿಜ. ಎಲ್ಲ ವಿಷಯವೂ ಟಿಪ್ಪಣಿಯಾಗಬೇಕು ಎಂಬ ಭಾಸ್ಕರ ರಾಯರ ವರಸೆ ಸದುದ್ದೇಶದ್ದಾದರೂ, ತಮಗೆ ತಾವೇ ಕಾಗದ ಬರೆದುಕೊಳ್ಳುವ ಐಡಿಯಾ ಸಾಮಾನ್ಯರಿಗೆ ತಮಾಷೆಯಾಗಿ ಕಂಡರೆ ಆಶ್ಚರ್ಯವಿಲ್ಲ. ಇಲ್ಲೊಬ್ಬ ತರಲೆ ಈ ವ್ಯವಸ್ಥೆಯನ್ನು ಹೇಗೆ ವಿಸ್ತರಿಸಬಹುದು ಎಂದು ಯೋಚನೆ ಮಾಡುತ್ತಿದ್ದಾನೆ.

ಎಲ್ಲ ಪೊಲೀಸರಿಗೂ ಲೋಕಾಯುಕ್ತ ಪೊಲೀಸ್‌ ಹುದ್ದೆಯನ್ನು ಹೆಚ್ಚುವರಿಯಾಗಿ ಕೊಟ್ಟುಬಿಟ್ಟರೆ, ಲಂಚ ತಿಂದ ಕೂಡಲೇ ತಮ್ಮನ್ನು ತಾವೇ ಅರೆಸ್ಟ್ ಮಾಡಿಕೊಳ್ಳಬಹುದು. ತಮ್ಮ ವಿರುದ್ಧ ತಾವೇ ವಾದಿಸಿ ಜೈಲಿಗೆ ತಳ್ಳಿಸಿಕೊಳ್ಳಬಹುದು. ತಮಗೆ ತಾವೇ ಚಿತ್ರಹಿಂಸೆ ಕೊಟ್ಟುಕೊಳ್ಳಬಹುದು. ಅನ್ಯಾಯ, ಅವಮಾನ ಆಗಿದೆ ಅನಿಸಿದರೆ ತಮ್ಮ ಮೇಲೆ ತಾವೇ ಮಾನನಷ್ಟ ಪ್ರಕರಣ ದಾಖಲಿಸಿಕೊಳ್ಳಬಹುದು. ಮತ್ತೊಬ್ಬ ತರಲೆ ಇದನ್ನು ಕೇಳಿ ಉದ್ಗರಿಸಿದ: ಓಹ್, ಸಾಮಾನ್ಯರ ಹಗಲುಗನಸುಗಳು ಎಷ್ಟು ಮುಗ್ಧ!.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT