ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸೌರವಿದ್ಯುತ್ ಮೇಲೆ ಮಾಲಿನ್ಯದ ಮೋಡ

ವಾಯುಮಾಲಿನ್ಯದ ಬಗ್ಗೆ ವಿಜ್ಞಾನಿಗಳ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ
Last Updated 21 ನವೆಂಬರ್ 2022, 19:30 IST
ಅಕ್ಷರ ಗಾತ್ರ

2030ರ ವೇಳೆಗೆ ನಮ್ಮ ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಶೇ 50 ಭಾಗವನ್ನು ನವೀಕರಿಸಬಹುದಾದ ಶಕ್ತಿಮೂಲಗಳಿಂದ ಪಡೆಯುವ ವಿಶ್ವಾಸವನ್ನು 2021ರ ನವೆಂಬರ್‌ನಲ್ಲಿ ನಡೆದ ಗ್ಲಾಸ್ಗೊ ಶೃಂಗಸಭೆಯಲ್ಲಿ ಪ್ರಧಾನಿ ವ್ಯಕ್ತಪಡಿಸಿದ್ದರು. ಈ ಗುರಿಯನ್ನು ಹಂತ ಹಂತವಾಗಿ ಮುಟ್ಟುವ ಯೋಜನೆಯ ಅಂಗವಾಗಿ, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ನವೀಕರಿಸಬಹುದಾದ ಮೂಲಗಳಿಂದ 175 ಗಿಗಾವಾಟ್ ವಿದ್ಯುತ್ತನ್ನು ಉತ್ಪಾದಿಸುವ ಲಕ್ಷ್ಯವನ್ನು ಹೊಂದಲಾಗಿತ್ತು. ಆದರೆ ಇದೀಗ ಈ ಗುರಿ ಮುಟ್ಟುವುದು ಅಸಾಧ್ಯವೆಂಬ ಅಂಶ ಸ್ಪಷ್ಟವಾಗುತ್ತಿದೆ.

ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವಾಲಯವು ಪ್ರತೀ ತಿಂಗಳು ತನ್ನ ಅಧಿಕೃತ ಜಾಲತಾಣದಲ್ಲಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ತನ್ನು ಉತ್ಪಾದಿಸುವ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪ್ರಕಟಿಸುತ್ತದೆ.
ಆಗಸ್ಟ್ ತಿಂಗಳ ಅಂತ್ಯದವರೆಗಿನ ಅಂಕಿಅಂಶಗಳನ್ನು ವಿವರವಾಗಿ ವಿಶ್ಲೇಷಿಸಿರುವ ಬ್ರಿಟನ್ ಮೂಲದ ‘ಗ್ಲೋಬಲ್ ಎನರ್ಜಿ ಥಿಂಕ್ ಟ್ಯಾಂಕ್- ಎಂಬರ್’, 2022ರ ಆಗಸ್ಟ್ ಅಂತ್ಯದ ವೇಳೆಗೆ 116 ಗಿಗಾವಾಟ್‍ಗಳಷ್ಟು ವಿದ್ಯುತ್ತನ್ನು ಈ ಮೂಲಗಳಿಂದ ಉತ್ಪಾದಿಸುವ ಸಾಮರ್ಥ್ಯವನ್ನು ದೇಶದಲ್ಲಿ ಕಲ್ಪಿಸಲಾಗಿದೆ ಎಂಬ ವರದಿಯನ್ನು ನೀಡಿದೆ. ಇದು, ಉದ್ದೇಶಿತ 175 ಗಿಗಾವಾಟ್‍ಗಳ ಶೇ 66ರಷ್ಟು. ಈ 175 ಗಿಗಾವಾಟ್‍ಗಳಲ್ಲಿ,

100 ಗಿಗಾವಾಟ್ ಸೌರಶಕ್ತಿಯಿಂದ, 60 ವಾಯುಶಕ್ತಿ, 10 ಬಯೊಮಾಸ್ ಮತ್ತು ಉಳಿದ 5 ಗಿಗಾವಾಟ್ ಸಣ್ಣ ಜಲವಿದ್ಯುತ್ ಸ್ಥಾವರಗಳಿಂದ ಬರುವ ಅಂದಾಜಿತ್ತು. ಆದರೆ ಆಗಸ್ಟ್ ಅಂತ್ಯದ ವೇಳೆಗೆ ಸೌರಮೂಲದಿಂದ 61 ಗಿಗಾವಾಟ್ ದೊರೆತಿದ್ದು, ಉಳಿದ ನಾಲ್ಕು ತಿಂಗಳಲ್ಲಿ ಗರಿಷ್ಠ 7 ಗಿಗಾವಾಟ್ ಮಾತ್ರ ದೊರೆಯುವ ಸಾಧ್ಯತೆಯಿದೆ. ‘ಕೋವಿಡ್ ಸಾಂಕ್ರಾಮಿಕ ತಂದ ಅನಿರೀಕ್ಷಿತ ತೊಂದರೆಗಳು, ಸೌರ, ವಾಯು ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳ ಪೂರೈಕೆಯಲ್ಲಿನ ವ್ಯತ್ಯಯಗಳು ಈ ವಿಳಂಬಕ್ಕೆ ಕಾರಣ’ ಎಂದು ಲೋಕಸಭೆಯ ಸ್ಥಾಯಿ ಸಮಿತಿಯ ಮುಂದೆ ಇಲಾಖೆಯ ಕಾರ್ಯದರ್ಶಿ ಒಪ್ಪಿಕೊಂಡಿದ್ದಾರೆ.

175 ಗಿಗಾವಾಟ್ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯವನ್ನು 2022ರ ಅಂತ್ಯದೊಳಗಾಗಿ ಕಲ್ಪಿಸುವ ಜವಾಬ್ದಾರಿಯನ್ನು ದೇಶದ ಎಲ್ಲ ರಾಜ್ಯಗಳಿಗೆ ಅವುಗಳ ಸಾಮರ್ಥ್ಯಕ್ಕೆ ಅನುಸಾರವಾಗಿ ವಿತರಿಸಲಾಗಿತ್ತು. ಇದರಲ್ಲಿ ಕರ್ನಾಟಕ, ರಾಜಸ್ಥಾನ, ತೆಲಂಗಾಣ, ಗುಜರಾತ್ ಮತ್ತು ಅಂಡಮಾನ್ ನಿಕೊಬಾರ್ ದ್ವೀಪಗಳು ನಿಗದಿತ ಅವಧಿಗೆ ಮುಂಚಿತವಾಗಿಯೇ ಯಶಸ್ವಿಯಾಗಿ ತಮ್ಮ ಗುರಿಯನ್ನು ಮುಟ್ಟಿವೆ. ಇದಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶವು ಶೇ 1ರಿಂದ 3 ಭಾಗದಷ್ಟು ಗುರಿಯನ್ನು ಮುಟ್ಟಿವೆ. ಈ ವರ್ಷದ ಅಂತ್ಯದಲ್ಲಿ ಗುರಿ ಮುಟ್ಟುವಲ್ಲಿ ಕಂಡುಬರಲಿರುವ ಒಟ್ಟು ಕೊರತೆಯ ಶೇ 61 ಭಾಗಕ್ಕೆ ಈ ನಾಲ್ಕು ರಾಜ್ಯಗಳು ಕಾರಣವಾಗಲಿವೆ. ನವೀಕರಿಸ ಬಹುದಾದ ಮೂಲಗಳಿಂದ ವಿವಿಧ ರಾಜ್ಯಗಳು ಉತ್ಪಾದಿಸಬೇಕಾದ ವಿದ್ಯುತ್ತಿನ ಪ್ರಮಾಣವನ್ನು ಕೇಂದ್ರ ಸಚಿವಾಲಯ ನಿರ್ಧರಿಸಿ, ಗುರಿಯನ್ನು ನಿಗದಿಪಡಿಸುತ್ತದೆ. ಈ ಕೆಲಸವು ರಾಜ್ಯಗಳ ಸಹಭಾಗಿತ್ವದಲ್ಲಿ, ಹೆಚ್ಚು ಪಾರದರ್ಶಕವಾಗಿ ನಡೆಯಬೇಕೆಂಬುದು ಕೆಲವು ರಾಜ್ಯಗಳ ಕೋರಿಕೆ. ಆದರೆ, ರಾಜ್ಯಗಳಿಗೆ ಗುರಿಯನ್ನು ಮುಟ್ಟಲೇಬೇಕೆಂಬ ಒತ್ತಡ, ಹೊಣೆಗಾರಿಕೆಯೂ ಇರಬೇಕು. ಅದರ ಕೊರತೆಯ ಕಾರಣದಿಂದಾಗಿ ಗುರಿ ತಲುಪಲು ಆಗುತ್ತಿಲ್ಲ.

ನಮ್ಮ ದೇಶ ಉತ್ಪಾದಿಸುತ್ತಿರುವ ಸೌರ ವಿದ್ಯುತ್ತಿನ ಶೇ 70 ಭಾಗಕ್ಕೆ ಅಗತ್ಯವಾದ ಸೌರಕೋಶಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷದ ಏಪ್ರಿಲ್ ತಿಂಗಳಿನಿಂದ ಹೀಗೆ ಆಮದು ಮಾಡಿಕೊಳ್ಳುವ ಸೌರಕೋಶಗಳ ಮೇಲೆ ಕಸ್ಟಮ್ಸ್‌ ಸುಂಕ ವಿಧಿಸಲಾಗಿದೆ. ಇದರಿಂದ ದೀರ್ಘಾವಧಿಯಲ್ಲಿ ಸ್ಥಳೀಯವಾಗಿ ಸೌರಕೋಶಗಳ ಉತ್ಪಾದನೆಗೆ ಪ್ರೋತ್ಸಾಹ ದೊರೆಯುವುದಾದರೂ ಸದ್ಯಕ್ಕಂತೂ ಗುರಿ ಮುಟ್ಟುವಲ್ಲಿನ ವಿಳಂಬಕ್ಕೆ ಕಾರಣವಾಗಿದೆ. 2022ರ ಅಂತ್ಯದ ವೇಳೆಗೆ ನಿಗದಿಯಾಗಿರುವ ಗುರಿಯನ್ನು ಮುಟ್ಟುವುದರಲ್ಲಿ ಸುಮಾರು ಶೇ 30ರಷ್ಟು ಕೊರತೆ ಕಂಡುಬರುವ ಸಾಧ್ಯತೆ ಸ್ಪಷ್ಟವಾಗುತ್ತಿರುವ ಸಮಯದಲ್ಲೇ, ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವು ಸೌರವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಕುಗ್ಗಿಸಲಿದೆ ಎಂಬ ದೆಹಲಿ ಐಐಟಿಯ ವಿಜ್ಞಾನಿಗಳ ತಂಡದ ಎಚ್ಚರಿಕೆ ಕಳವಳಕಾರಿಯಾಗಿದೆ.

ವಾಯುಮಂಡಲದಲ್ಲಿರುವ 0.01ನಿಂದ 100 ಮೈಕ್ರಾನ್ ಗಾತ್ರದ ಘನಕಣಗಳು, ದೂಳು, ಹೊಗೆ, ಕಾವಳ, ಇಂಗಾಲ ಮತ್ತು ಗಂಧಕದಂಥ ಅಜೈವಿಕ ಪದಾರ್ಥಗಳು ಸೂರ್ಯ ವಿಕಿರಣವನ್ನು ಹೀರಿಕೊಂಡು, ಚೆದುರಿಸಿ ದುರ್ಬಲಗೊಳಿಸುತ್ತವೆ. ಇದರೊಡನೆ ಸೋಲಾರ್ ಪ್ಯಾನೆಲ್‍ಗಳ ಮೇಲೆ ಸಂಗ್ರಹವಾಗುವ ದೂಳು ಫೋಟೊವೋಲ್ಟಾಯಿಕ್ ಕೋಶಗಳ ಸಾಮರ್ಥ್ಯವನ್ನು ಕುಗ್ಗಿಸಿ, ವಿದ್ಯುತ್‌ ಉತ್ಪಾದನೆಯ ಪ್ರಮಾಣವನ್ನು ಇಳಿಸುತ್ತದೆ. ದೆಹಲಿ ಐಐಟಿಯ ‘ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಸೈನ್ಸಸ್’ನ ಸಂಶೋಧಕರ ತಂಡದ ಮುಖ್ಯ ವಿಜ್ಞಾನಿ ಪ್ರೊಫೆಸರ್ ಸಾಗ್ನಿಕ್ ಡೇ, ‘2001- 2018ರ ನಡುವೆ ವಾಯುಮಾಲಿನ್ಯದ ಕಾರಣದಿಂದಾಗಿ ಶೇ 29ರಷ್ಟು ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು ದೇಶ ಕಳೆದುಕೊಂಡಿದೆ’ ಎನ್ನುತ್ತಾರೆ. 2016- 17ರಲ್ಲಿ ದೆಹಲಿಯ ಮೇಲೆ ಕವಿದ ಕಾವಳದಿಂದಾಗಿ ಸೌರವಿದ್ಯುತ್ ಉತ್ಪಾದನೆ ಶೇ 11.5ರಷ್ಟು ಕಡಿಮೆಯಾದದ್ದು ದಾಖಲಾಗಿದೆ. ಇದರ ಅಂದಿನ ಮೌಲ್ಯ ಸುಮಾರು ₹ 140 ಕೋಟಿ. ಇಡೀ ದೇಶವನ್ನು ಪರಿಗಣಿಸಿದಾಗ, ವಾಯುಮಾಲಿನ್ಯದಿಂದ ಪ್ರತಿವರ್ಷ ಕನಿಷ್ಠ ₹ 2,000 ಕೋಟಿ, ಗರಿಷ್ಠ ₹ 7,000 ಕೋಟಿಯಷ್ಟು ಮೌಲ್ಯದ ಸೌರವಿದ್ಯುತ್‌ ಉತ್ಪಾದನೆ ಸಾಧ್ಯವಾಗುತ್ತಿಲ್ಲ.

ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಿ, ಮುಂದಿನ ವರ್ಷಗಳಲ್ಲಿ ಸೌರವಿದ್ಯುತ್ ಉತ್ಪಾದನೆಯ ಗುರಿಯನ್ನು ಮುಟ್ಟಲು ಐಐಟಿ ಸಂಶೋಧಕರ ತಂಡವು ಹಲವಾರು ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ. ಇವುಗಳಲ್ಲಿ ಮುಖ್ಯವಾದುದು ಗರಿಷ್ಠ ಪ್ರಮಾಣದಲ್ಲಿ ಸೂರ್ಯ ವಿಕಿರಣ ಬೀಳುವಂತೆ ಸೋಲಾರ್ ಪ್ಯಾನೆಲ್‌ಗಳನ್ನು ಓರೆಯಾಗಿ ನಿಲ್ಲಿಸುವುದು. ಈ ರೀತಿಯ ಪ್ಯಾನೆಲ್‍ಗಳ ಮೇಲೆ ದೂಳು ಸಂಗ್ರಹವಾಗುವುದು ಕಡಿಮೆಯಾಗುತ್ತದೆ. ಇದಕ್ಕಿಂತ ಉತ್ತಮ ಪರಿಹಾರವೆಂದರೆ, ಸತತವಾಗಿ ಸೂರ್ಯನತ್ತಲೇ ಮುಖ ಮಾಡುವುದನ್ನು ಸಾಧ್ಯವಾಗಿಸುವ, ಸ್ವಲ್ಪ ಹೆಚ್ಚಿನ ವೆಚ್ಚದ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪ್ಯಾನೆಲ್‍ಗಳಲ್ಲಿ ಅಳವಡಿಸುವುದು. ಆದರೆ ಈ ಎರಡರಿಂದಲೂ ವಾಯುಮಾಲಿನ್ಯದಿಂದ ಸೂರ್ಯ ವಿಕಿರಣ ದುರ್ಬಲವಾಗುವುದು ತಪ್ಪುವುದಿಲ್ಲ.

ಐಐಟಿ ಸಂಶೋಧಕರ ಅಭಿಪ್ರಾಯದಂತೆ, ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಅತ್ಯುತ್ತಮ ಮಾರ್ಗ ವೆಂದರೆ 2019ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ‘ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಮ್’ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದು. ಈ ಯೋಜನೆಯ ಮುಖ್ಯ ಉದ್ದೇಶವು 2024ರ ವೇಳೆಗೆ ದೇಶದ 122 ನಗರಗಳ ವಾಯುಮಂಡಲದಲ್ಲಿ 2.5 ಮೈಕ್ರಾನ್ ಗಾತ್ರದ ಕಣರೂಪದ ಮಾಲಿನ್ಯಕಾರಕಗಳ ದಟ್ಟಣೆಯನ್ನು ಘನ ಮೀಟರ್‌ಗೆ 40 ಮೈಕ್ರೊಗ್ರಾಮ್‍ಗಳಿಗೆ ಇಳಿಸುವುದು.

ಕರ್ನಾಟಕದಲ್ಲಿ ಬೆಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ಈ ಯೋಜನೆಯಲ್ಲಿವೆ. ಉದಾಹರಣೆಗೆ, ಬೆಂಗಳೂರಿನ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕಗಳ ಸಾರ ಪ್ರತೀ ಘನ ಮೀಟರ್‌ಗೆ 54.7 ಮೈಕ್ರೊಗ್ರಾಮ್. ಇಂಧನದ ಗುಣಮಟ್ಟದ ಏರಿಕೆ, ವಿದ್ಯುತ್‌ಚಾಲಿತ ವಾಹನಗಳ ಬಳಕೆ, ಸಂಚಾರ ದಟ್ಟಣೆಯ ನಿಯಂತ್ರಣ, ಸಾರ್ವಜನಿಕ ಸಂಚಾರ ವಾಹನಗಳ ಬಳಕೆಗೆ ಆದ್ಯತೆ, ವಾಹನಗಳು ಮತ್ತು ಕಾರ್ಖಾನೆಗಳ ಉತ್ಸರ್ಜನೆಯ ನಿರ್ವಹಣೆ, ಮನೆಬಳಕೆಗೆ ಸ್ವಚ್ಛ ಇಂಧನದ ಸರಬರಾಜು, ಸಮರ್ಪಕ ತ್ಯಾಜ್ಯ ನಿರ್ವಹಣೆಯಂಥ ಕ್ರಮಗಳ ಮೂಲಕ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆದಿವೆ. ಈ ಗುರಿ ಮುಟ್ಟುವುದು ಸಾಧ್ಯವಾದರೆ, ಈಗಿರುವಷ್ಟೇ ಸ್ಥಾಪಿತ ಸೌರವಿದ್ಯುತ್ ಸಾಮರ್ಥ್ಯದಿಂದ ಪ್ರತಿವರ್ಷ 6ರಿಂದ 28 ಟೆರಾವಾಟ್‍ ಅವರ್‌ಗಳಷ್ಟು ಹೆಚ್ಚಿನ ಸೌರವಿದ್ಯುತ್ ಉತ್ಪಾದಿಸುವುದು ಸಾಧ್ಯವೆಂದು ಸಂಶೋಧಕರು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ, ಅದರಲ್ಲೂ ಉತ್ತರ ಭಾರತದ ಅನೇಕ ನಗರಗಳಲ್ಲಿ ವಾಯುಮಾಲಿನ್ಯದ ತೀವ್ರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ದೆಹಲಿ ಐಐಟಿ ವಿಜ್ಞಾನಿಗಳು ನೀಡಿರುವ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯೋನ್ಮುಖವಾಗಬೇಕಾದ ತುರ್ತು ಈಗ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT