ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kashmir Files: ಸತ್ಯವನ್ನು ಒಪ್ಪಿಕೊಳ್ಳಲಾಗದ ನೈತಿಕ ಅಧಃಪತನವೇ?

Last Updated 20 ಮಾರ್ಚ್ 2022, 2:30 IST
ಅಕ್ಷರ ಗಾತ್ರ

ಇದೇ ಮಾರ್ಚ್ ಹನ್ನೊಂದರಂದು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರ ತೆರೆಕಂಡಿತು. ಮೂವತ್ತೆರಡು ವರ್ಷಗಳ ಹಿಂದೆ ಭಯೋತ್ಪಾದಕರ ಅಟ್ಟಹಾಸಕ್ಕೆ ಬೆದರಿ ಕಾಶ್ಮೀರವನ್ನು ತೊರೆದ ಕಾಶ್ಮೀರಿ ಹಿಂದೂ ಸಮುದಾಯದ ಬವಣೆಗಳನ್ನು ಆಧರಿಸಿದ ಚಿತ್ರ ಇದು. ಚಿತ್ರದಲ್ಲಿ ತೋರಿಸಿರುವುದೆಲ್ಲವೂ ನೈಜ ಘಟನೆಗಳೇ.

ಕಲಾ ಮಾಧ್ಯಮವಾದ ಚಲನಚಿತ್ರದಲ್ಲಿ ಕಲ್ಪನೆಗೆ ಕೊಂಚವೂ ಆಸ್ಪದವಿರದೆ ಸತ್ಯವೇ ಬೃಹದಾಕಾರವಾಗಿ ಮೈತಳೆದಾಗ ಅದು ಇಷ್ಟು ಯಾತನಾಮಯವೂ, ಭೀಕರವೂ ಆಗಬಹುದೆಂಬುದನ್ನು ಬಹುಶಃ ಯಾರೂ ಎಣಿಸಿರಲಿಕ್ಕಿಲ್ಲ.

ಆದರೆ, ಆ ನೋವನ್ನು ಉಂಡ ಪ್ರತೀ ಕುಟುಂಬಕ್ಕೂ ಈ ಚಿತ್ರದಲ್ಲಿರುವುದೆಲ್ಲವೂ ತಿಳಿದಿರುವ ಸಂಗತಿಗಳೇ. ತಮ್ಮ ಬದುಕಿನ ಆ ಕರಾಳ ಅಧ್ಯಾಯವನ್ನು ಈಗ ಮತ್ತೆ ನೆನೆದು ಕಣ್ಣೀರಾಗುತ್ತಿದ್ದಾರೆ. ಅಂದು ಕಾಶ್ಮೀರದಿಂದ ಹೊರಟ ಎಷ್ಟೋ ಕುಟುಂಬಗಳ ಹಿರಿಯರು ಈಗ ಬದುಕುಳಿದಿಲ್ಲ. ಅವರ ನಂತರದ ಪೀಳಿಗೆ ದೇಶ-ವಿದೇಶಗಳಲ್ಲಿ ಹಂಚಿಹೋಗಿದೆಯಾದರೂ ತಮ್ಮ ಮೂಲ ನೆಲೆಗೆ ಮರಳಲಾಗಿಲ್ಲ.

ಹಾಗೆ ನೋಡಿದರೆ ವಿವೇಕ್ ಅಗ್ನಿಹೋತ್ರಿ ಆ ಬರ್ಬರತೆಯನ್ನು ಯಥಾವತ್ತಾಗಿ ಚಿತ್ರಿಸಿಲ್ಲ. 1990ನೇ ಇಸವಿಯ ಜನವರಿ 19ರ ರಾತ್ರಿ ಉಗ್ರರೊಡಗೂಡಿದ ಕಾಶ್ಮೀರದ ಮುಸ್ಲಿಮರು ‘ಕಾಶ್ಮೀರಿ ಪಂಡಿತರೇ, ನಿಮ್ಮ ಹೆಂಡತಿಯರು-ಹೆಣ್ಣುಮಕ್ಕಳನ್ನು ಮಾತ್ರ ಇಲ್ಲಿಬಿಟ್ಟು ನೀವು ಇಲ್ಲಿಂದ ಹೊರಡಿ’ ಎಂದು ಬೊಬ್ಬಿರಿದರು. ಆ ಬೆದರಿಕೆಗೆ ಮಣಿದ ಹಲವರು ರಾತ್ರೋರಾತ್ರಿ ಅಲ್ಲಿಂದ ಓಡಿದರು. ತಮ್ಮ ನೆರೆಹೊರೆಯ ಮುಸ್ಲಿಮರ ಬಗ್ಗೆ ಅತೀವ ವಿಶ್ವಾಸವಿದ್ದ ಹಲವರು ಅಲ್ಲೇ ಉಳಿದರು. ಹಾಗೆ ಉಳಿದವರ ಬಗ್ಗೆ ಆ ನೆರೆಹೊರೆಯವರೇ ಉಗ್ರವಾದಿಗಳಿಗೆ ಸುಳಿವು ನೀಡಿ ಅವರ ಹತ್ಯೆಗೆ ಕಾರಣರಾದ ಅಸಂಖ್ಯ ಘಟನೆಗಳಿವೆ.

ತಾವು ಪಾಠ ಕಲಿಸಿದ ಮುಸ್ಲಿಂ ವಿದ್ಯಾರ್ಥಿ ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದುದನ್ನು ಕಂಡ ತಂದೆಯ, ಸಹೋದರಿಯ ಕಚೇರಿಯಲ್ಲಿ ಕೆಲಸ ಮಾಡುವ ಮುಸ್ಲಿಂ ಸಹೋದ್ಯೋಗಿಯೇ ತನ್ನ ಇತರ ಬಾಂಧವರೊಡನೆ ಸೇರಿ ಅವಳ ಶೀಲಭಂಗ ಮಾಡಿ ಹತ್ಯೆಗೈದುದನ್ನು ನೋಡಿದ ಸಹೋದರರ ಉದಾಹರಣೆಗಳಿವೆ. ಹೀಗೆ ತಾವು ನಂಬಿದ ಮುಸ್ಲಿಂ ಬಾಂಧವರೇ ದ್ರೋಹವೆಸಗಿದಾಗ ಕಂಗಾಲಾದ ಇತರ ಹಿಂದೂ ಕುಟುಂಬಗಳು ವಿಧಿಯಿಲ್ಲದೆ ಅಲ್ಲಿಂದ ಹೊರಟವು.

ಅಲ್ಲಿಯವರೆಗೂ ಕವಿ, ಬುದ್ಧಿಜೀವಿಗಳ ಬಾಯಿಯಲ್ಲಿ ನಲಿಯುತ್ತಿದ್ದ ‘ಕಾಶ್ಮೀರಿಯತ್’ ಎಂಬ ಕಾಲ್ಪನಿಕ ಹಿಂದೂ-ಮುಸ್ಲಿಂ ಭಾವೈಕ್ಯ ತನ್ನ ಮುಖವಾಡವನ್ನು ಕಳಚಿತು. ಹಿಂದೂಗಳನ್ನು ಬಲಿಕೊಡುತ್ತಲೇ ಹಿಂದೂ-ಮುಸ್ಲಿಮರ ಸಾಮರಸ್ಯವನ್ನು ಸಾಧಿಸುವ ಸೆಕ್ಯುಲರಿಸಂನ ರಣಹದ್ದು ರೆಕ್ಕೆಪುಕ್ಕಗಳೊಂದಿಗೆ ಇನ್ನಷ್ಟು ಬಲಿಯಿತು.

ಇಷ್ಟೆಲ್ಲ ನಡೆದರೂ ಜಮ್ಮುವಿನ ಶಿಬಿರಗಳಲ್ಲಿ ನಿರಾಶ್ರಿತರಾಗಿ ದಿನದೂಡುತ್ತಿದ್ದ ಕಾಶ್ಮೀರಿ ಹಿಂದೂಗಳು ಭಯೋತ್ಪಾದನೆಗಿಳಿಯಲಿಲ್ಲ. ಅಕ್ಷರಶಃ ಅಲ್ಪಸಂಖ್ಯಾತರಾದರೂ ಮೀಸಲಾತಿಗಾಗಿ ಹೋರಾಡಲಿಲ್ಲ. ಆ ಶಿಬಿರಗಳಲ್ಲೇ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು. ಇಂದಲ್ಲ ನಾಳೆ ದೊರಕಬಹುದಾದ ನ್ಯಾಯದ ನಿರೀಕ್ಷೆಯಲ್ಲಿದ್ದರು. ಈ ನಡುವೆ ತಮ್ಮ ಮೂಲಸ್ಥಾನಕ್ಕೆ ತೆರಳಿ ತಾವು ಬಿಟ್ಟುಬಂದ ಮನೆ, ಹೊಲಗಳನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆಯನ್ನು ನಿಯಂತ್ರಿಸಿಕೊಂಡರು. ಏಕೆಂದರೆ ಅವರು ಅಲ್ಲಿಗೆ ಕಾಲಿಟ್ಟರೆ, ‘ನೀವು ಈಗೇಕೆ ಬಂದಿರಿ? ಇಲ್ಲೇನು ಕೆಲಸವಿದೆ?’ ಎಂದು ಬೆದರಿಸಿ ಕಳುಹಿಸುವ ಮನಃಸ್ಥಿತಿಯನ್ನು ಕಾಶ್ಮೀರದ ಮುಸ್ಲಿಮರು ಅದಾಗಲೇ ರೂಢಿಸಿಕೊಂಡಿದ್ದರು.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ಅನುಚ್ಛೇದ 370 ಅನ್ನು ತೆಗೆದುಹಾಕಿದಾಗ ಕಾಶ್ಮೀರಿ ಹಿಂದೂಗಳಿಗೆ ನ್ಯಾಯದ ಒಂದಂಶ ಸಂದಾಯವಾಯಿತು ಎನ್ನಬಹುದು. ಈಗ ವಿವೇಕ್ ಅಗ್ನಿಹೋತ್ರಿಯವರ ಚಿತ್ರದಿಂದಾಗಿ ಭಾರತೀಯರಲ್ಲಿ ಜಾಗೃತಿ ಮೂಡಿದೆ. ಕಾಶ್ಮೀರಿ ಹಿಂದೂಗಳನ್ನು ತಮ್ಮ ನೆಲೆಗೆ ಕಳುಹಿಸುವ ಕೆಲಸ ಸುಗಮವಾಗುವುದೆಂಬ ಭರವಸೆ ಉಂಟಾಗುತ್ತಿದೆ. ಈ ನಡುವೆ, ‘ಕಾಶ್ಮೀರದಲ್ಲಿ ನಡೆದದ್ದು ನರಮೇಧವಲ್ಲ, ಅಲ್ಲಿಯ ಪಂಡಿತರು ತಾವಾಗಿಯೇ ಹೊರಟು ಬಂದರು, ಆಗ ರಾಜ್ಯಪಾಲರಾಗಿದ್ದ ಜಗಮೋಹನ್ ಮಲ್ಹೋತ್ರಾ ಎಲ್ಲರನ್ನೂ ಓಡಿಸಿದರು, ವಿವೇಕರ ಚಿತ್ರ ಬರೀ ಪ್ರಚಾರಕ್ಕಾಗಿ’ ಎಂಬ ಮಿಥ್ಯಾಕಂತೆ ಹರಿದಾಡುತ್ತಿದೆ.

ಇಂಥ ವಾದವನ್ನು ಮಂಡಿಸುತ್ತಿರುವ ಎಲ್ಲರನ್ನೂ ಒಟ್ಟುಗೂಡಿಸಿ ಒಂದು ವಿಮಾನದಲ್ಲಿ ಹತ್ತಿಸಿಕೊಂಡು ನೇರವಾಗಿ ಕಾಶ್ಮೀರದಲ್ಲಿ ಇಳಿಸಿ ಬರಬೇಕು ಎನಿಸುತ್ತಿದೆ.

ಐಡಿಯಾಲಜಿಯ ಹೆಸರಿನಲ್ಲಿ ಇಲ್ಲೆಲ್ಲೋ ಕುಳಿತು ಸುಳ್ಳು ಲೇಖನಗಳನ್ನು ಸೃಷ್ಟಿಸುವ, ಸತ್ಯವನ್ನು ತಿರುಚಲು ಯತ್ನಿಸುವ ಎಷ್ಟು ಮಂದಿ ರಕ್ತದೋಕುಳಿ ನಡೆದ ಆ ನೆಲದಲ್ಲಿ ನಡೆದಾಡಿದ್ದಾರೋ ತಿಳಿಯದು. ತಮ್ಮ ವಾರಸುದಾರರಿಲ್ಲದೆ ಮುರಿದು ಬಿದ್ದಿರುವ ಮನೆಗಳು, ಗೆದ್ದಲು ಹಿಡಿದು ಪುಡಿಯಾಗಿರುವ ಬಾಗಿಲುವಾಡಗಳು, ಭಗ್ನವಾಗಿರುವ ಆಲಯಗಳು - ನಡೆದ ಕರಾಳ ಘಟನೆಗಳಿಗೆ ಸಾಕ್ಷಿಗಳಾಗಿ ಇಂದಿಗೂ ಲಭ್ಯವಿವೆ. ‘ಈಗ ನೀವು ಹೊರಡಿ.

ನಿಮ್ಮ ಮನೆಯನ್ನು ನಾವು ನೋಡಿಕೊಳ್ಳುತ್ತೇವೆ. ನೀವು ಬಂದೊಡನೆ ಹಿಂತಿರುಗಿಸುತ್ತೇವೆ’ ಎಂದಿದ್ದ ಮುಸ್ಲಿಂ ಸಹೋದರರನೇಕರು ಆ ಮನೆಗಳನ್ನು ತಮ್ಮ ಅಂಗಡಿ, ಗೋದಾಮುಗಳನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಇಡೀ ಮನೆಯನ್ನೇ ಕೆಡವಿ ನೆಲಸಮಗೊಳಿಸಿದ್ದಾರೆ. ಸಿದ್ಧಾಂತ ಯಾವುದೇ ಇರಲಿ, ಒಂದು ಸಮುದಾಯವನ್ನು ತಮ್ಮ ಮೂಲನೆಲೆಗೆ ಮರಳಿ ಕಳುಹಿಸಿಕೊಡಲಾಗದ ನೈತಿಕ ಅಧಃಪತನವೇಕೆ ಒಂದು ವರ್ಗಕ್ಕೆ? ಅಥವಾ ಸತ್ಯದ ಅರಿವಿದ್ದೂ ಹೀಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೋ?.

–ಸಹನಾ ವಿಜಯಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT