ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಲಾಚಿತ್: ಚಿರಸ್ಥಾಯಿ ನೆನಪುಗಳು

ಈ ಸೇನಾ ದಂಡನಾಯಕನ ಜೀವನಗಾಥೆಯು ರಾಷ್ಟ್ರೀಯತೆಯ ಭಾವ ತುಂಬಲು ನೆರವಾಗಲಿದೆ
Last Updated 24 ನವೆಂಬರ್ 2022, 19:31 IST
ಅಕ್ಷರ ಗಾತ್ರ

1982ನೆಯ ಇಸವಿ ನನಗೆ ಸ್ಪಷ್ಟವಾಗಿ ನೆನಪಿದೆ. ನಾನು ಏಳನೆಯ ತರಗತಿಯಲ್ಲಿದ್ದೆ. ಇತಿಹಾಸ ಪಠ್ಯಪುಸ್ತಕ ದಲ್ಲಿ ಇದ್ದ, ಮಹಾವೀರ ಲಾಚಿತ್ ಬರ್ಫುಕನ್ ಕುರಿತ ಅಧ್ಯಾಯವನ್ನು ಆಗ ಓದಿದ್ದೆ. ಲಾಚಿತ್‌ ಅವರ ಮಿಲಿಟರಿ ಶೌರ್ಯದ ಬಗ್ಗೆ ತಿಳಿದುಕೊಂಡಿದ್ದು ನನ್ನ ಮೇಲೆ ಗಾಢ ಪ್ರಭಾವ ಬೀರಿತು. ನಾನು ಆ ಅಧ್ಯಾಯವನ್ನು ಹಲವು ಬಾರಿ ಓದಿದ್ದೆ. ಮತ್ತೆ ಮತ್ತೆ ಓದಿದಂತೆಲ್ಲ ಅವರ ಸಾಹಸದ ಚಿತ್ರಣ ನನ್ನಲ್ಲಿ ಹೆಚ್ಚು ಸ್ಫುಟವಾಯಿತು.

ನಾನು ದೊಡ್ಡವನಾಗಿ, ಇತಿಹಾಸಕ್ಕೆ ಸಂಬಂಧಿಸಿದ ಹೆಚ್ಚಿನ ಪುಸ್ತಕಗಳನ್ನು ಓದಿದಂತೆಲ್ಲ ಕಣ್ಣಿಗೆ ರಾಚುವ ವ್ಯತ್ಯಾಸವೊಂದು ಗೊತ್ತಾಯಿತು. ಮೊಘಲ್ ಸಾಮ್ರಾಜ್ಯ ವನ್ನು ವೈಭವೀಕರಿಸುವ ದೊಡ್ಡ ಅಧ್ಯಾಯಗಳು ಕಾಣುತ್ತಿದ್ದವು. ಆದರೆ, ಮೊಘಲ್ ಸೈನ್ಯವು ಈಶಾನ್ಯ ಭಾರತದ ಕಡೆ ಲಗ್ಗೆ ಇಡುವುದನ್ನು ಯಶಸ್ವಿಯಾಗಿ ತಡೆದ, ಭಾರತದ ಅತ್ಯಂತ ಧೈರ್ಯಶಾಲಿ ದಂಡನಾಯಕರ ಪೈಕಿ ಒಬ್ಬರಾದ ಲಾಚಿತ್‌ ಕುರಿತು ಬಹಳ ಕಡಿಮೆ ಉಲ್ಲೇಖವಿತ್ತು. ಇದು ನನ್ನಲ್ಲಿ ಪ್ರಶ್ನೆಯೊಂದನ್ನು ಮೂಡಿಸಿತು. ನಾವು ಒಂದು ರಾಷ್ಟ್ರವಾಗಿ ಸ್ಟಾಕ್‌ಹೋಮ್‌ ಸಿಂಡ್ರೋಮ್‌ಗೆ ಬಲಿಯಾದೆವೇ? ಆಕ್ರಮಣಕಾರ ರನ್ನು ನಮ್ಮವರು ಎಂದು ಅಪ್ಪಿಕೊಳ್ಳಲಿಕ್ಕಾಗಿ ನಮ್ಮ ಹೀರೊಗಳನ್ನು ನಿರ್ಲಕ್ಷಿಸುವುದನ್ನು ಸಹಜವಾಗಿಸಲು ಸಿದ್ಧರಾದೆವಾ?

ಅಂದು ಇತಿಹಾಸದ ಪುಸ್ತಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ವೈಶಿಷ್ಟ್ಯವೊಂದು ಕಾಣಿಸಿತು. ಅಸ್ಸಾಂ ಕುರಿತ ಉಲ್ಲೇಖವು 200 ವರ್ಷಗಳಿಗಿಂತ ಹಿಂದಕ್ಕೆ ಹೋಗುತ್ತಿರಲಿಲ್ಲ. ಅಂದರೆ, ಬ್ರಿಟಿಷರು ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರವೇ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಉದಯವಾಯಿತು ಎಂಬ ತಪ್ಪು ಭಾವನೆಯನ್ನು ಅದು ಒಂದು ತಲೆಮಾರಿನ ವಿದ್ಯಾರ್ಥಿ ಗಳಿಗೆ ನೀಡುತ್ತಿತ್ತು. ದೇಶದ ಈಶಾನ್ಯ ರಾಜ್ಯಗಳನ್ನು, ಅಲ್ಲಿನ ಜನರನ್ನು ಹಾಗೂ ಅವರ ಸಂಸ್ಕೃತಿಯನ್ನು ದೂರದ ಗಡಿ ಪ್ರದೇಶದ್ದೆಂಬಂತೆ ಮಾತ್ರ ಕಂಡಿದ್ದಿದೆ. ನಮ್ಮ ಇತಿಹಾಸವನ್ನು ಹೇಳಿದ ಬುದ್ಧಿಜೀವಿಗಳು ಹಾಗೆ ಕಾಣುವುದರ ಮುಂದುವರಿದ ಭಾಗ ಎಂದು ನನ್ನಲ್ಲಿದ್ದ ಆತಂಕವನ್ನು ಇದು ಸ್ಪಷ್ಟಪಡಿಸಿತು.

ಲಾಚಿತ್‌ ಜನಿಸಿ 400 ವರ್ಷಗಳು ಆಗಿರುವ ಈ ಸಂದರ್ಭದಲ್ಲಿ ಅವರ ಶೌರ್ಯದ ಬಗ್ಗೆ ಹೇಳಬೇಕು. ಅಸ್ಸಾಂ ಸಾಮ್ರಾಜ್ಯದ ಕೆಲವು ಭಾಗಗಳನ್ನು ಮೊಘಲರು ಆಕ್ರಮಿಸಿಕೊಂಡಿದ್ದ ಹೊತ್ತಿನಲ್ಲಿ ರಾಜ ಚಕ್ರಧ್ವಜ ಸಿಂಘ, ಅಹೋಂ ಸೇನೆಯ ಪ್ರಧಾನ ದಂಡನಾಯಕ ಆಗಿ ಲಾಚಿತ್‌ ಅವರನ್ನು ನೇಮಿಸಿದ. ಮೊಘಲರ ನಿರ್ದೇಶನ
ಗಳನ್ನು ಧಿಕ್ಕರಿಸುವ ತೀರ್ಮಾನ ಮಾಡಿದ್ದ ಚಕ್ರಧ್ವಜ, ಗೌರವಾರ್ಥವಾಗಿ ಔರಂಗಜೇಬ ಕಳುಹಿಸಿದ್ದ ನಿಲುವಂಗಿ ತೊಡಲು ನಿರಾಕರಿಸಿದ್ದ. ಹೊರಗಿನವರಿಗೆ ಅಡಿಯಾಳಾಗಿ ಇರುವುದಕ್ಕಿಂತ ಸಾವು ಉತ್ತಮ ಎಂದು ಹೇಳಿದ್ದ. ಮೊಘಲರನ್ನು ಸಾಮ್ರಾಜ್ಯದಿಂದ ಹೊರಹಾಕುವ ಹೊಣೆ ಲಾಚಿತ್‌ ಮೇಲಿತ್ತು. ಅಧೀರರಾಗಿದ್ದ ಅಹೋಂ ಸೈನಿಕರು ತಮ್ಮಲ್ಲಿ ಸ್ಫೂರ್ತಿ ತುಂಬಬಲ್ಲ ನಾಯಕನಿಗೆ ಹಾತೊರೆಯು ತ್ತಿದ್ದರು. ಸೈನಿಕರಲ್ಲಿ ಶಕ್ತಿ ತುಂಬಿದ ಲಾಚಿತ್‌, ಮೊಘಲ್ ಸೇನೆ ಮಂಡಿಯೂರುವಂತೆ ಮಾಡಿದರು.

ಐತಿಹಾಸಿಕ ಸರೈಘಾಟ್ ಯುದ್ಧದಲ್ಲಿ, ಕಡಿಮೆ ಸಂಪನ್ಮೂಲ ಹಾಗೂ ಕಡಿಮೆ ಸೈನಿಕರು ಇದ್ದರೂ, ತರಬೇತಿ ಪಡೆದ ಪೂರ್ಣಾವಧಿ ಸೈನ್ಯ ಇಲ್ಲದಿದ್ದರೂ ಲಾಚಿತ್‌ ಅವರು ರಾಮ್ ಸಿಂಗ್ ನೇತೃತ್ವದ ಶಕ್ತಿಶಾಲಿ ಮೊಘಲ್ ಸೈನ್ಯವನ್ನು ಸೋಲಿಸಿದರು. ಯುದ್ಧದಲ್ಲಿ ಶಕ್ತಿಯೆಂದರೆ, ಸೈನಿಕರ ಸಂಖ್ಯೆ ಹೆಚ್ಚಿರುವುದು ಮಾತ್ರವೇ ಅಲ್ಲ. ಬದಲಿಗೆ, ಇರುವ ಸಂಪನ್ಮೂಲಗಳನ್ನು ನ್ಯಾಯ ಸಮ್ಮತವಾಗಿ ಬಳಸಿಕೊಂಡು ಅಡ್ಡಿಗಳನ್ನು ಅವಕಾಶ
ಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಶಕ್ತಿ ಎಂದು ತೋರಿಸಿದರು. ತಮ್ಮ ಧೈರ್ಯ, ದೃಢವಾಗಿ ನಿಲ್ಲುವ ಸ್ವಭಾವ ಹಾಗೂ ತಮ್ಮ ನಾಡನ್ನು ಸ್ವತಂತ್ರವಾಗಿಯೇ ಇರಿಸಬೇಕು ಎಂಬ ಹಟದ ನೆರವಿನಿಂದ ಅವರು ಈ ಗೆಲುವನ್ನು ಸಾಧ್ಯವಾಗಿಸಿಕೊಂಡರು.

ಯುದ್ಧತಂತ್ರದ ವಿಚಾರವಾಗಿ ಹೇಳುವುದಾದರೆ, ಯುದ್ಧದ ಸ್ಥಳ ಹಾಗೂ ಸಮಯವನ್ನು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡಿದ್ದು ಲಾಚಿತ್‌ ಅವರ ಅತ್ಯಂತ ಚುರುಕಿನ ತೀರ್ಮಾನವಾಗಿತ್ತು.
ಅತಿಯಾದ ಆತ್ಮವಿಶ್ವಾಸದಲ್ಲಿ ಇದ್ದ ಹಾಗೂ ತಾಳ್ಮೆ ಕಳೆದುಕೊಂಡಿದ್ದ ಔರಂಗಜೇಬ ಹತಾಶೆಗೆ ಒಳಗಾಗಿ, ತನ್ನ ಸೈನ್ಯವನ್ನು ಬಯಲು ಪ್ರದೇಶದಿಂದ ನದಿಯ ಸಮೀಪಕ್ಕೆ ತರುವಂತೆ ಲಾಚಿತ್‌ ಮಾಡಿದರು. ಏಕೆಂದರೆ, ನೌಕಾ ಯುದ್ಧದಲ್ಲಿ ಮೊಘಲರಿಗೆ ನೈಪುಣ್ಯವಿರಲಿಲ್ಲ. ಅಲ್ಲದೆ, ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಸಮುದ್ರ ಪ್ರವೇಶಿಸುವ ಅವಕಾಶ ಇಲ್ಲದಿದ್ದರೂ ಶಕ್ತಿಯುತ ನೌಕಾಪಡೆಯನ್ನು ಕಟ್ಟಿದ ವಿಶ್ವದ ಏಕೈಕ ದಂಡನಾಯಕ ಬಹುಶಃ ಲಾಚಿತ್‌ ಮಾತ್ರ ಇರಬೇಕು. ಬ್ರಹ್ಮಪುತ್ರ ನದಿಯ ಬಲಿಷ್ಠ ಹರಿವಿನಿಂದ ಯುದ್ಧನೌಕೆಗಳನ್ನು ಅಡಗಿಸುವುದಕ್ಕೆ ಗುವಾಹಟಿಯ ದಿಘಲಿಪುಕುರಿ ಪ್ರದೇಶವನ್ನು ಲಾಚಿತ್‌ ಚಾಕಚಕ್ಯತೆಯಿಂದ ಬಳಸಿಕೊಂಡರು. ಮೊಘಲರೊಂದಿಗೆ ಹೋರಾಡಲು ಇಲ್ಲಿ ಯುದ್ಧನೌಕೆಗಳಿಗೆ ಫಿರಂಗಿಗಳನ್ನು ಅಳವಡಿಸಲಾಗುತ್ತಿತ್ತು. ಈ ಒಂದು ಸರಳ ಶೋಧವು ಆಕ್ರಮಣಕಾರರಿಗೆ ಸರೈಘಾಟ್‌ನಲ್ಲಿ ದುಬಾರಿಯಾಗಿ ಪರಿಣಮಿಸಿತು. ಇಲ್ಲಿ ಬಹಳ ಕಿರಿದಾಗಿ ಹರಿಯುವ ಬ್ರಹ್ಮಪುತ್ರ ನದಿ ನೌಕಾದಾಳಿಗೆ ಹೇಳಿಮಾಡಿಸಿದಂತಿದೆ.

ಇದು ಲಾಚಿತ್‌ ಅವರನ್ನು ರಾಷ್ಟ್ರೀಯ ಹೀರೊ ಆಗಿಸುತ್ತದೆ. ಅವರು ನೆನಪುಗಳಲ್ಲಿ ಹಾಗೂ ಭಾರತದ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಸರೈಘಾಟ್ ಯುದ್ಧವು ಮಧ್ಯಯುಗದ ಇನ್ನೊಂದು ಐತಿಹಾಸಿಕ ಯುದ್ಧವಷ್ಟೇ ಅಲ್ಲ. ಇದು ಅಸ್ಸಾಂನ ಮತ್ತು ಈಶಾನ್ಯ ಭಾರತದ ಅಸ್ಮಿತೆ, ನಾಗರಿಕತೆಯು ಮೊಘಲರ ಅಧೀನಕ್ಕೆ ಒಳಗಾಗುವುದನ್ನು ತಡೆದ ವಿಜಯ. ಮಧ್ಯಯುಗದ ಆರಂಭದಿಂದಲೂ ಲೂಟಿ ಮಾಡಲು ಆಕ್ರಮಣ ನಡೆಸಿದವರಿಂದ ನಾಗರಿಕತೆಯ ಮೌಲ್ಯಗಳನ್ನು ರಕ್ಷಿಸಿದ, ಭಾರಿ ಯುದ್ಧಗಳಲ್ಲಿ ಸೆಣಸಿದ ರಾಣಾ ಪ್ರತಾಪ್, ಶಿವಾಜಿ ಅವರಂತಹ ಹೋರಾಟಗಾರರು ಮತ್ತು ಧೈರ್ಯಶಾಲಿಗಳು ಭಾರತದ ಇತಿಹಾಸದಲ್ಲಿ ಬಹಳ ಮಂದಿ ಇದ್ದಾರೆ. ಇಂತಹ ಧೈರ್ಯಶಾಲಿ ಹೋರಾಟಗಾರರ ಇತಿಹಾಸ ಮತ್ತು ನೆನಪುಗಳು ಬ್ರಿಟಿಷರ ಆಡಳಿತದ ವಿರುದ್ಧ ಭಾರತದಲ್ಲಿ ನಡೆದ ದೀರ್ಘಾವಧಿಯ ಹೋರಾಟದಲ್ಲಿ ಭಾರತೀಯರಿಗೆ ಸ್ಫೂರ್ತಿ ನೀಡಿವೆ.

ಸರೈಘಾಟ್ ಯುದ್ಧದ ಮಹತ್ವದ ಹಂತವೊಂದ ರಲ್ಲಿ ಲಾಚಿತ್‌ ಅವರು ಕಾಯಿಲೆಗೆ ತುತ್ತಾದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಆಗ ಅವರಿಗೆ ಯುದ್ಧರಂಗಕ್ಕೆ ತೆರಳದಂತೆ ಸಲಹೆ ನೀಡಲಾಯಿತು. ಆದರೆ, ತಾವು ಅಲ್ಲಿಗೆ ಹೋಗದಿದ್ದರೆ ಸೈನ್ಯದ ಸ್ಫೂರ್ತಿಗೆ ಧಕ್ಕೆ ಬರುತ್ತದೆ ಎಂಬುದನ್ನು ಲಾಚಿತ್‌ ಅರಿತುಕೊಂಡರು. ‘ನನ್ನ ದೇಶವಾಸಿಗಳು ಆಕ್ರಮಣದ ಕಾರಣದಿಂದಾಗಿ ತೊಂದರೆಗೆ ಒಳಗಾಗಿರುವಾಗ, ನನ್ನ ಸೈನ್ಯವು ಹೋರಾಟ ನಡೆಸುತ್ತ ತನ್ನ ಜೀವವನ್ನು ಅರ್ಪಿಸುತ್ತಿರುವಾಗ, ಕೇವಲ ಅನಾರೋಗ್ಯದ ಕಾರಣ ಹೇಳಿ ವಿಶ್ರಾಂತಿ ತೆಗೆದುಕೊಳ್ಳುವ ಬಗ್ಗೆ ನಾನು ಆಲೋಚನೆ ಮಾಡುವುದಾದರೂ ಹೇಗೆ? ನನ್ನ ದೇಶವೇ ತೊಂದರೆಯಲ್ಲಿ ಇರುವಾಗ ನಾನು ನನ್ನ ಪತ್ನಿ, ಮಕ್ಕಳ ಬಳಿ ಹೋಗುವ ಆಲೋಚನೆ ಮಾಡುವುದು ಹೇಗೆ’ ಎಂದು ಹೇಳಿದ್ದರಂತೆ. ಲಾಚಿತ್‌ ಹೀಗಿದ್ದರು.

ಅತ್ಯಂತ ಸವಾಲಿನ ಯುದ್ಧಗಳನ್ನು ಗೆಲ್ಲುವ ಧೈರ್ಯ ಬರುವುದು ಭಾರತ ಮಾತೆಯ ಕುರಿತು ಷರತ್ತುರಹಿತ ಪ್ರೀತಿ ಇದ್ದಾಗ. ಲಾಚಿತ್‌ ಅವರ ಜೀವನದಿಂದ ನಾನು ಪಡೆಯುವ ಅತಿದೊಡ್ಡ ಪ್ರೇರಣೆಗಳಲ್ಲಿ ಇದೂ ಒಂದು. ದೇಶ ಮೊದಲು ಹಾಗೂ ಉಳಿದಿದ್ದೆಲ್ಲವೂ ನಂತರ– ಕುಟುಂಬ ಮತ್ತು ತಾನು ಎಂಬ ಭಾವ ಕೂಡ– ಎನ್ನುವ ತತ್ವಕ್ಕೆ ನಿಜವಾಗಿಯೂ ಬದ್ಧರಾದಾಗ ಯಾವುದೇ ಪ್ರಮಾಣದ ಬೆದರಿಕೆಯನ್ನೂ ತೊಡೆದುಹಾಕುವ ಅದಮ್ಯ ಧೈರ್ಯ ಹುಟ್ಟುತ್ತದೆ.

ಅಸ್ಸಾಂ ಇಂದು ಕವಲುದಾರಿಯಲ್ಲಿ ನಿಂತಿದೆ. ನಮ್ಮ ರಾಜ್ಯ ಭಾರಿ ಬದಲಾವಣೆಯ ಹೊಸ್ತಿಲಲ್ಲಿ ನಿಂತಿದೆ. ಸರೈಘಾಟ್ ಯುದ್ಧಕ್ಕೆ ಹೋಲಿಸಬಹುದಾದ ಹಲವು ಯುದ್ಧಗಳನ್ನು ಸೆಣಸಬೇಕಿದೆ. ಮೂಲಭೂತವಾದ, ಇಸ್ಲಾಮಿಕ್ ಭಯೋತ್ಪಾದನೆ, ಮಾದಕ ಪದಾರ್ಥಗಳ ಸಮಸ್ಯೆ, ಜನಸಂಖ್ಯೆಯ ಸ್ವರೂಪದಲ್ಲಿ ಬದಲಾವಣೆ, ಅಕ್ರಮ ವಲಸೆಯಂತಹ ಸಮಸ್ಯೆಗಳ ಮೇಲೆ ಜಯ ಸಾಧಿಸಬೇಕಿದೆ. ಗೆಲುವು ಸಾಧಿಸಲು ಲಾಚಿತ್‌ ಅವರಂತಹ ಹಲವರು ಬೇಕು. ಅಂತಹ ಹಲವರು ಬರುತ್ತಾರೆ ಎಂಬುದು ನನ್ನಲ್ಲಿನ ವಿಶ್ವಾಸ.

ದೇಶದ ಮಹಾ ದಂಡನಾಯಕರಲ್ಲಿ ಒಬ್ಬರಾದ ಲಾಚಿತ್‌ ಅವರ ಜೀವನಗಾಥೆಯನ್ನು ಜನರ ಆಂದೋಲನ
ವನ್ನಾಗಿ ಆಚರಿಸುವ ನಮ್ಮ ಯತ್ನವು ಮುಂದಿನ ತಲೆಮಾರಿನವರಲ್ಲಿ ರಾಷ್ಟ್ರೀಯತೆಯ ಭಾವ ಹಾಗೂ ಧೈರ್ಯವನ್ನು ತುಂಬುವಲ್ಲಿ ದೊಡ್ಡ ಯಶಸ್ಸು ಕಾಣುತ್ತದೆ.

⇒ಲೇಖಕ: ಅಸ್ಸಾಂ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT