ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ಕೃಷಿ: ಬಿಳಿ ನೇರಳೆಬಹಾಗೂ ಕಪ್ಪು ಅರಿಸಿನ! ಕೇಶವ ಕೊರ್ಸೆ ಲೇಖನ

ಹೊಲ ಹಾಗೂ ಕಾಡಿನಲ್ಲಿ ಕಾಣಸಿಗುವ ತಳಿವೈವಿಧ್ಯದ ಸಂರಕ್ಷಣೆಯು ಭವಿಷ್ಯದ ಕೃಷಿಯ ಸುರಕ್ಷತೆಗಾಗಿ ಅಗತ್ಯ
Last Updated 7 ಅಕ್ಟೋಬರ್ 2022, 0:15 IST
ಅಕ್ಷರ ಗಾತ್ರ

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಆಕಸ್ಮಿಕವಾಗಿ ಕಂಡುಬಂದ ನೇರಳೆ ಮರವೊಂದರ ಹಣ್ಣು ಬಿಳಿಬಣ್ಣದ್ದಾಗಿತ್ತು! ನೇರಳೆ ಬಣ್ಣಕ್ಕೆ ಕಾರಣವಾದ ‘ಎಂತೋಸೈನಿನ್’ ಧಾತುವೇ ಇರದೆ, ಹಣ್ಣು ಬಿಳಿಯಾಗುವ ನೈಸರ್ಗಿಕ ವಿದ್ಯಮಾನವದು. ಅದರ ಬೀಜದಿಂದ ಹುಟ್ಟುವ ಸಂತತಿಯ ಹಣ್ಣುಗಳು ಪುನಃ ನೇರಳೆಬಣ್ಣ ಪಡೆಯುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಮಲೆನಾಡಿನ ತಪ್ಪಲಿನ ಶಿರಸಿಯಲ್ಲಿ ವಿನಯ ಮತ್ತು ವಿಂಧ್ಯಾ ಭಂಡಿ ಯುವದಂಪತಿ ಮುನ್ನಡೆಸುತ್ತಿ ರುವ ‘ಸಸ್ಯ ಅಂಗಾಂಶ ಕೃಷಿ ಹಾಗೂ ಸಂರಕ್ಷಣಾ
ಪ್ರಯೋಗಾಲಯ’ವು ಈ ವಿಶಿಷ್ಟ ‘ಬಿಳಿ ನೇರಳೆ’ ತಳಿಯ ತದ್ರೂಪಿಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಇಂಥದ್ದೇ ಇನ್ನೊಂದು ವಿಶಿಷ್ಟ ತಳಿ ಈಶಾನ್ಯಭಾರತ ಮೂಲದ ‘ಕಪ್ಪು ಅರಿಸಿನ’. ಅರಿಸಿನದ್ದೇ ಇನ್ನೊಂದು ಪ್ರಭೇದವದು. ಕಾಂಡವನ್ನು ಒಣಗಿಸಿ ಪುಡಿಯಾಗಿಸಿದಾಗ ಕಪ್ಪುಬಣ್ಣಕ್ಕೆ ತಿರುಗುವುದರಿಂದ ಬಂದ ಹೆಸರದು. ಅರಿಸಿನದ ಔಷಧಿಗುಣಕ್ಕೆ ಕಾರಣವಾದ ‘ಕುರ್ಕುಮಿನ್’ ಅಂಶವು ಈ ‘ಕಪ್ಪು ಅರಿಸಿನ’ದಲ್ಲೇ ಅಧಿಕವಾಗಿರುವು
ದರಿಂದ, ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಮೌಲ್ಯವಿದೆ. ಇದರ ಬೇಸಾಯಕ್ರಮಗಳ ಅಧ್ಯಯನವೂ ಇಲ್ಲಿ ಸಾಗಿದೆ. ಈ ಹೊಸ ತಳಿಗಳೆಲ್ಲ ಕೃಷಿ ಬೆಳೆಯಾಗಿ ಹೊರಹೊಮ್ಮಿದರೆ, ರೈತರ ಆದಾಯವೂ ವೃದ್ಧಿಯಾದೀತೆಂಬುದು ಅವರ ಆಶಯ.

ತೋಟಗಾರಿಕೆಗೆ ಈ ಬಗೆಯ ವನ್ಯತಳಿಗಳ ಪ್ರವೇಶ ನಿಜಕ್ಕೂ ಸ್ವಾಗತಾರ್ಹ. ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮಿರುವ ಅಡಿಕೆಯ ತೋಟಗಳಿಗಂತೂ, ಮಿಶ್ರಕೃಷಿ ಪೋಷಿಸುವ ಈ ತೆರನ ಹೊಸ ಮಾರ್ಗಗಳು ತೀರಾ ಅಗತ್ಯ. ಏಕೆಂದರೆ, ಈವರೆಗೂ ಪೋಷಿಸಿದ ಅಡಿಕೆಯು ಭವಿಷ್ಯದಲ್ಲೂ ಸಲಹಬಹುದೆಂಬ ವಿಶ್ವಾಸವೇ ಕರಾವಳಿ ಹಾಗೂ ಮಲೆನಾಡಿನ ರೈತರಲ್ಲಿ ಇದೀಗ ಮಾಯವಾಗುತ್ತಿದೆ. ಹಳದಿಮುಂಡಿಗೆ, ಎಲೆಚುಕ್ಕೆ, ಕಾಯಿಕೊಳೆಯಂಥ ರೋಗಗಳೆಲ್ಲ ಅಡಿಕೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ಕೃತಕ ಕ್ರಿಮಿನಾಶಕಗಳ ಬಳಕೆ ಮಿತಿಮೀರುತ್ತಿದೆ. ಅಕಾಲಿಕ ಮಳೆಯು ತೋಟಗಳ ಸ್ವರೂಪವನ್ನೇ ನಾಶ ಮಾಡುತ್ತಿದೆ. ಕಾಡುಹಂದಿಯು ಮರದ ಬೇರು ಬಗೆದರೆ, ಮಂಗಗಳು ಎಳೆಮಿಡಿಯನ್ನೇ ತಿನ್ನುತ್ತಿವೆ! ಆಮದಿನ ಅಡಿಕೆಯಿಂದಾಗುವ ಬೆಲೆ ಏರಿಳಿತದ ಭಯ ಬೇರೆ. ತೀವ್ರವಾಗಿ ಕುಗ್ಗುತ್ತಿರುವ ಇಳುವರಿ ಹಾಗೂ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಕ್ಕೆ ಸಣ್ಣ ರೈತರಂತೂ ನಲುಗುತ್ತಿದ್ದಾರೆ.

ತಂಬಾಕು ಸಂಗದ ಅಡಿಕೆ ಉತ್ಪನ್ನಗಳನ್ನು ನಿಷೇಧಿಸುವ ಪ್ರಸ್ತಾಪವಂತೂ ಜಾಗತಿಕವಾಗಿ ದಶಕ ಗಳಿಂದ ಇದ್ದೇ ಇದೆ. ಅಡಿಕೆಯು ಭವಿಷ್ಯದಲ್ಲಿ ಮಾನ ಕಾಪಾಡೀತೇ ಎಂಬ ಪ್ರಶ್ನೆ ರೈತರನ್ನು ಈಗ ಕಾಡುತ್ತಿದೆ!

ವಿಪರ್ಯಾಸವೆಂದರೆ, ಈ ಯಾವ ಅಂಶಗಳನ್ನೂ ಲೆಕ್ಕಿಸದೆ ಅಡಿಕೆ ಬೆಳೆ ರಾಜ್ಯದೆಲ್ಲೆಡೆ ವ್ಯಾಪಿಸುತ್ತಿದೆ. ಬಯಲುನಾಡಿನ ನೀರಾವರಿ ಪ್ರದೇಶವೂ ಸೇರಿದಂತೆ ಭತ್ತ, ರಾಗಿ, ಮೆಣಸು, ಕಾಳು-ಬೇಳೆ ಬೆಳೆಯಬಲ್ಲ ಹೊಲಗಳೆಲ್ಲ ಶೀಘ್ರ ಲಾಭದ ಮೋಹಕ್ಕೆ ಮರುಳಾದವರ ಅಡಿಕೆ ನೆಡುತೋಪಾಗುತ್ತಿವೆ. ಭೂಬಳಕೆ ಹಾಗೂ ಬೆಳೆ ವಿಸ್ತರಣೆ ಕುರಿತಾಗಿ ಕನಿಷ್ಠ ಮಾರ್ಗಸೂತ್ರಗಳೂ ರಾಜ್ಯ ದಲ್ಲಿ ಇರದಿರುವುದರ ಪ್ರತೀಕವಿದು. ಈ ಸಂಕೀರ್ಣ ಸ್ಥಿತಿ ಯಿಂದ ಹೊರಬರಲು, ತೋಟಗಾರಿಕಾ ಕ್ಷೇತ್ರವು ಹಣ್ಣು-ಹಂಪಲು, ಸಾಂಬಾರು ಬೆಳೆ, ಔಷಧಿಮೂಲಿಕೆ ಇತ್ಯಾದಿ ಬೆಳೆ ವೈವಿಧ್ಯದತ್ತ ಹೊರಳಬೇಕಾದ್ದು ಅನಿವಾರ್ಯ. ಸಹ್ಯಾದ್ರಿ ತಪ್ಪಲಿನ ಪಾರಂಪರಿಕ ಅಡಿಕೆ ರೈತರೇನೋ ತಮ್ಮ ತೋಟಗಳಲ್ಲಿ ಬೆಳೆವೈವಿಧ್ಯ ಕಾಪಾಡಿಕೊಳ್ಳಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ. ಬಾಳೆ, ಕಾಳು ಮೆಣಸು, ಕೊಕ್ಕೋ, ಏಲಕ್ಕಿ, ಜಾಯಿಕಾಯಿ, ಅರಿಸಿನ, ಹಲಸು, ಮಾವು, ವೆನಿಲ್ಲಾದಂತಹವೆಲ್ಲ ಅಡಿಕೆ ತೋಟದಲ್ಲಿ ನೆಲೆ ಕಂಡಿದ್ದು ಅವರ ದೀರ್ಘಕಾಲದ
ಪರಿಶ್ರಮದಿಂದಾಗಿಯೇ. ‘ಬಿಳಿ ನೇರಳೆ’ ಹಾಗೂ ‘ಕಪ್ಪು ಅರಿಸಿನ’ ಸಹ ರೈತರ ಕೈಹಿಡಿಯಬಲ್ಲ ಹೊಸಬೆಳೆ ಗಳಾದಾವು.

ಕೃಷಿ ಬೆಳೆಯೊಂದಕ್ಕೆ ಹಲವು ತಳಿಗಳಿರುವುದು ಸಸ್ಯಗಳ ನಿರಂತರ ವಿಕಾಸ ಪ್ರಕ್ರಿಯೆಯಿಂದಾಗಿ. ಇದನ್ನು ಸ್ಥೂಲವಾಗಿ ಎರಡು ವಿಧದಲ್ಲಿ ಗುರುತಿಸಬಹುದು. ಒಂದನೆಯದು, ನೈಸರ್ಗಿಕವಾಗಿ ಸಾವಿರಾರು ವರ್ಷಗಳ ಕಾಲಾವಧಿಯಲ್ಲಿ ಜರುಗುವ ‘ಮ್ಯುಟೇಷನ್’ ವಿಧಾನದಿಂದ ಒದಗುವ ತಳಿಗಳು. ಬರ-ನೆರೆ, ರೋಗ, ಪೋಷಕಾಂಶ-ಬೆಳಕಿಗಾಗಿ ಸ್ಪರ್ಧೆಯಂತಹ ಅನೇಕ ಒತ್ತಡಗಳ ಪರಿಣಾಮವಾಗಿ, ಸಸ್ಯಗಳ ವಂಶವಾಹಿ ಅಥವಾ ವರ್ಣತಂತುಗಳ ರಚನೆಯಲ್ಲಿ ವ್ಯತ್ಯಯವಾಗಿ ಜರುಗುವ ತಳಿ ರೂಪಾಂತರವೇ ‘ಮ್ಯುಟೇಷನ್’. ಮೂಲತಃ ಎಲ್ಲ ಬೆಳೆಗಳೂ ಕಾಡಿನಿಂದಲೇ ಬಂದಿರು ವುದು. ರೈತರ ಕೈಸೇರಿದ ಪ್ರಭೇದಗಳಿಂದ ಬೇರ್ಪಟ್ಟು ಕಾಡಿನಲ್ಲೇ ಉಳಿದ ಗಿಡಗಳು ಕಾಲಾಂತರದಲ್ಲಿ ವಿಶಿಷ್ಟ ಗುಣ ಬೆಳೆಸಿಕೊಂಡು ಭಿನ್ನ ತಳಿಗಳಾಗಿ ವಿಕಾಸವಾಗು
ವುದಕ್ಕೆ ಈ ವಂಶವಾಹಿ ರೂಪಾಂತರವೇ ಕಾರಣ.

ಶರಾವತಿ ನದಿ ಕಣಿವೆಯಲ್ಲಿ ದೊರಕುವ ಉಪ್ಪಿನ ಕಾಯಿ ಮಿಡಿಮಾವಿನ ಕಾಡುತಳಿಗಳು, ಅಘನಾಶಿನಿ ಹಾಗೂ ಕಾಳಿನದಿ ತಪ್ಪಲಿನಲ್ಲಿ ಕಾಣಸಿಗುವ ಉಪ್ಪಾಗೆ- ಜಾರಿಗೆಯಂಥ ಕೋಕಂ ಸಂಬಂಧಿ ಪ್ರಭೇದಗಳು, ನೇತ್ರಾವತಿ ನದಿ ಜಲಾನಯನದಲ್ಲಿರುವ ಜಾಯಿ ಕಾಯಿಯ ಕಾಡುತಳಿ ಎನ್ನಬಹುದಾದ ರಾಮಪತ್ರೆ, ಕೊಡಚಾದ್ರಿ ಮಡಿಲಲ್ಲಿರುವ ಪಾಂಡವರ ಅಡಿಕೆ ಇವೆಲ್ಲ ಈ ತಳಿವಿಕಾಸಕ್ಕೆ ಉದಾಹರಣೆ. ‘ಬಿಳಿ ನೇರಳೆ’ ಹಾಗೂ ‘ಕಪ್ಪು ಅರಿಸಿನ’ ವಿಕಾಸವಾದದ್ದೂ ಹೀಗೇ.

ಹೊಲ-ತೋಟಗಳಲ್ಲೇ ವಿಕಾಸವಾಗುವ ತಳಿಗಳು ಎರಡನೇ ಬಗೆಯವು. ಗಿಡದ ಭಾಗ ಅಥವಾ ಬೀಜವನ್ನು ಬಳಸಿ ರೈತರು ನಿರಂತರವಾಗಿ ಬೆಳೆಸಸ್ಯಗಳ ಪುನರುತ್ಪತ್ತಿ ಮಾಡುತ್ತಿರುತ್ತಾರಷ್ಟೇ. ಅಲ್ಲಿನ ವಾತಾವರಣ, ಮಣ್ಣಿನಗುಣ, ರೋಗಗಳಂತಹ ಪ್ರಾಕೃತಿಕ ಅಂಶಗಳ ಜೊತೆಗೆ ರೈತರ ವಿಶಿಷ್ಟ ಬೇಸಾಯಕ್ರಮಗಳೂ ಬೆಸೆದು, ಕಾಲಾಂತರದಲ್ಲಿ ಬೆಳೆಗಳು ತಮ್ಮ ರೂಪ-ಗುಣಗಳಲ್ಲಿ ಪ್ರತ್ಯೇಕತೆ ತೋರತೊಡಗುತ್ತವೆ. ಹಲವು ತಲೆಮಾರುಗಳ ನಂತರ ಅವು ಹೊಸ ತಳಿಗಳಾಗಿಯೇ ವಿಕಾಸವಾಗುತ್ತವೆ! ತುಂಗಭದ್ರೆಯ ಉಪನದಿ ವರದಾ ನದಿ ಜಲಾನಯನ ಪ್ರದೇಶದಲ್ಲಿ, ಅರವತ್ತಕ್ಕೂ ಹೆಚ್ಚಿನ ಭತ್ತದ ಪಾರಂಪರಿಕ ತಳಿಗಳನ್ನು ರೈತರು ಇಂದಿಗೂ ಬೆಳೆಯುತ್ತಿರುವುದನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ದಾಖಲಿಸಿದೆ.

ಸಣ್ಣಕ್ಕಿ, ಜೀರಿಗೆಸಾಲಿ, ಒಂದುಕಡ್ಡಿ, ಹಳಗಾ, ಆಲೂರುಸಣ್ಣ, ದೊಡ್ಡಗ್ಯಾ, ಬದ್ನಾರಿ... ಹೀಗೆ ಒಂದೊಂದು ಹೆಸರಿನ ಭತ್ತವೂ ವಿಭಿನ್ನವೇ! ಉತ್ತರ ಕನ್ನಡದ ಅಡಿಕೆ ತೋಟಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚಿನ ಕಾಳುಮೆಣಸಿನ ದೇಸಿ ತಳಿಗಳಿರುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ರೈತರ ಪಾರಂಪರಿಕ ಜ್ಞಾನ ಹಾಗೂ ಕೌಶಲಗಳಿಂದ ಸೃಷ್ಟಿಯಾದ ತಳಿವೈವಿಧ್ಯವಿದು.

ಕಾಡಿನ ವನ್ಯತಳಿ ಅಥವಾ ರೈತರ ಹೊಲದತಳಿ- ಯಾವುದೇ ಇರಲಿ, ಈ ಬೆಳೆವೈವಿಧ್ಯದ ಸಂರಕ್ಷಣೆಯ ಜರೂರತ್ತಿದೆ ಈಗ. ಹವಾಮಾನ ಬದಲಾವಣೆಯ ಸವಾಲುಗಳನ್ನೆಲ್ಲ ಮೀರಿ ಭವಿಷ್ಯದ ಕೃಷಿ ಸಾಗಬೇಕಾದರೆ, ನಮ್ಮ ಅಗತ್ಯಗಳನ್ನೆಲ್ಲ ಪೂರೈಸಬಲ್ಲ ಸಶಕ್ತ ತಳಿಗಳು ನಿರಂತರವಾಗಿ ಕೃಷಿಯಂಗಳಕ್ಕೆ ಬರುತ್ತಿರಬೇಕು. ಈ ದಿಸೆಯಲ್ಲಿ ಸರ್ಕಾರಿ ಕೃಷಿ ಸಂಶೋಧನಾ ಸಂಸ್ಥೆಗಳು, ತಳಿ ವೈವಿಧ್ಯ ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಇವೆಲ್ಲ ಕೆಲಸ ಮಾಡುತ್ತಿವೆ. ಆದರೆ, ತಳಿನಾಶದ ವೇಗ ಮಾತ್ರ ಈ ಪ್ರಯತ್ನಗಳನ್ನೆಲ್ಲ ಮೀರಿಸುತ್ತಿದೆ! ಕೃತಕ ರಾಸಾಯನಿಕ ಒಳಸುರಿಗಳ ಅತಿಬಳಕೆ, ಅವೈಜ್ಞಾನಿಕ ಭೂಬಳಕೆ, ಮಿತಿಯಿಲ್ಲದ ನೀರಿನ ಬಳಕೆ, ಹೆಚ್ಚುತ್ತಿರುವ ಏಕಬೆಳೆ ಪದ್ಧತಿ- ಇವೆಲ್ಲ, ರೈತರ ಹೊಲಗಳ ತಳಿವೈವಿಧ್ಯವನ್ನು ಕರಗಿಸುತ್ತಿವೆ. ಇತ್ತ, ಅರಣ್ಯ ಒತ್ತುವರಿ, ಬೃಹತ್ ಅಭಿವೃದ್ಧಿ ಕಾಮಗಾರಿ, ಗಣಿಗಾರಿಕೆ ಇವೆಲ್ಲ ಪಶ್ಚಿಮಘಟ್ಟದಂಥ ಅಪರೂಪದ ಕಾಡನ್ನೂ ಕರಗಿಸುತ್ತಿರುವುದರಿಂದ, ಅಲ್ಲಿನ ವನ್ಯತಳಿಗಳ ಖಜಾನೆಯೂ ಬರಿದಾಗುತ್ತಿದೆ.

ಭವಿಷ್ಯದ ಕೃಷಿಯಾದರೂ ಸುಸ್ಥಿರ ದಾರಿಯಲ್ಲಿ ಸಾಗಬೇಕೆಂದರೆ, ಎರಡು ತೆರನಲ್ಲಿ ಪ್ರಯತ್ನಗಳು ಸಾಗಬೇಕಿದೆ. ಒಂದು, ಈಗಿರುವ ತಳಿವೈವಿಧ್ಯವನ್ನೆಲ್ಲ ಕಾಪಾಡಿಕೊಳ್ಳುವ ಮಿಶ್ರಬೆಳೆ ಬೇಸಾಯವನ್ನು ಪ್ರೋತ್ಸಾಹಿ ಸುವುದು. ಇನ್ನೊಂದು, ಅವಕಾಶ ದೊರಕಿದಲ್ಲೆಲ್ಲ ಹೊಸ ವನ್ಯತಳಿಗಳನ್ನು ಕೃಷಿಗೆ ಅಳವಡಿಸುವುದು. ಬಿಳಿ ನೇರಳೆ ಹಾಗೂ ಕಪ್ಪು ಅರಿಸಿನವು ಈ ಸಾಧ್ಯತೆಗಳ ಪ್ರತೀಕ ಮಾತ್ರ. ಸಾಂಬಾರು ಪದಾರ್ಥ, ಹಣ್ಣುಹಂಪಲು, ಔಷಧಿಮೂಲಿಕೆಗಳಲ್ಲಂತೂ ಅಂಥ ನೂರಾರು ಹೊಸಬೆಳೆಗಳ ಸಾಧ್ಯತೆಗಳಿವೆ. ಅಂತೆಯೇ, ಕೃಷಿಯ ಅಂಗಳವನ್ನು ಹಾಗೆ ಸಮೃದ್ಧವಾಗಿಸಲು, ಕಾಡಿನ ಹಿತ್ತಿಲನ್ನು ಜೋಪಾನ ಮಾಡುವ ಅಗತ್ಯವೂ ಇದೆ!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT