ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಿರಿಧಾನ್ಯ ನಾಡಿನಲ್ಲೇ ಬೀಜಬ್ಯಾಂಕ್‌ ಬರ

ಸಿರಿಧಾನ್ಯಗಳನ್ನು ಮುಖ್ಯವಾಹಿನಿಗೆ ತರಲು ಹರಸಾಹಸಪಡುತ್ತಿದೆ ಭಾರತ
Published 22 ಜೂನ್ 2023, 23:32 IST
Last Updated 22 ಜೂನ್ 2023, 23:32 IST
ಅಕ್ಷರ ಗಾತ್ರ

ಪ್ರಸಕ್ತ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಅದಕ್ಕೆ ಅರ್ಥ ನೀಡಲು ರಾಜ್ಯ, ದೇಶ, ವಿಶ್ವ ಮಟ್ಟದಲ್ಲಿ ಸಮಾವೇಶ, ಪ್ರದರ್ಶನ, ವಿಚಾರ ಸಂಕಿರಣ, ಬೀಜ ಮೇಳಗಳೆಲ್ಲ ನಡೆಯುತ್ತಿವೆ. ಆಚರಣೆಯ ನೇತೃತ್ವ ವಹಿಸಿರುವ ಭಾರತ ತನ್ನ ಸಿರಿಧಾನ್ಯಗಳನ್ನು ಮುಖ್ಯವಾಹಿನಿಗೆ ತರಲು ಹರಸಾಹಸಪಡುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ಕ್ರಿಯಾಶೀಲವಾಗಿದ್ದ ಸಮುದಾಯ ಬೀಜ ಬ್ಯಾಂಕುಗಳು ಈಗ ವಿಳಾಸ ಕಳೆದುಕೊಂಡಿವೆ. ಆಸಕ್ತಿ, ತಾಳ್ಮೆ ಇರುವ ಕೆಲ ಸಂಘ– ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಿರಿಧಾನ್ಯ ಬೀಜಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಒರಟು ಧಾನ್ಯಗಳೆಂಬ ಹಣೆಪಟ್ಟಿಯೊಂದಿಗೆ ಆಹಾರ ಕ್ರಮದ ಮುಖ್ಯವಾಹಿನಿಯಿಂದ ದೂರ ಸರಿದಿದ್ದ ರಾಗಿ, ನವಣೆ, ಸಾವೆ, ಸಜ್ಜೆ ಧಾನ್ಯಗಳೀಗ ಜನರ ಆಹಾರದ ಭಾಗವಾಗುತ್ತಿವೆ. ಕಡಿಮೆ ನೀರು– ಆರೈಕೆ ಬೇಡುವ, ಕೀಟ ಬಾಧೆಗಳಿಂದ ಮುಕ್ತವಾಗಿ ಅಪಾರ ಜೀವಸತ್ವದ ಗಣಿಗಳಂತಿರುವ ಸಿರಿಧಾನ್ಯಗಳು ಮಾನವನ ಆರೋಗ್ಯ ಕಾಪಾಡುವಲ್ಲಿ ಔಷಧಿಯಂತೆ ಕೆಲಸ ಮಾಡುತ್ತವೆ. ರಾಗಿ ಮುದ್ದೆ, ಅಂಬಲಿ, ಗಂಜಿ, ರೊಟ್ಟಿ ತಿಂದರೆ ಶುಗರ್ ಲೆವಲ್‌ ನಿಯಂತ್ರಣಕ್ಕೆ ಬರುತ್ತದೆ, ನವಣೆ ತಿಂದರೆ ಗಾಯ ಬೇಗ ವಾಸಿಯಾಗುತ್ತದೆ, ಸಜ್ಜೆಯಿಂದ ಮೈ ಬೊಜ್ಜು ಕರಗುತ್ತದೆ, ಸಾವೆ ತಿಂದರೆ ಕೀಲು ನೋವು ದೂರವಾಗುತ್ತದೆ ಎಂಬೆಲ್ಲ ಜ್ಞಾನ, ತಿಳಿವಳಿಕೆ ಪ್ರಾರಂಭವಾದಾಗಿನಿಂದ ‘ಅಯ್ಯೋ, ನಾವೆಲ್ಲ ಇವುಗಳನ್ನು ತಿನ್ನುವುದನ್ನು ನಿಲ್ಲಿಸಿ ವರ್ಷಗಳೇ ಆಗಿವೆಯಲ್ಲ, ಇನ್ಮೇಲೆ ಅವನ್ನೇ ತಿಂದುಣ್ಣುತ್ತೇವೆ’ ಎನ್ನುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೋವಿಡ್ ಅಲೆ ಅಪ್ಪಳಿಸಿದ ನಂತರ ರೋಗನಿರೋಧಕ ಶಕ್ತಿ ಸಂಪಾದನೆಗೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗಿದೆ.

ಕೀಟಬಾಧೆಗೆ ತುತ್ತಾಗದೆ ತಕ್ಕಮಟ್ಟಿಗೆ ಇಳುವರಿ ನೀಡುವ ಸಾಮೆ, ಬರಗ, ನವಣೆ, ಸಜ್ಜೆಯು ಒಣಭೂಮಿ ಬೇಸಾಯದ ರೈತರಿಗೆ ವರದಾನವೇ ಸರಿ. ಆದರೆ ಇಂದಿನ ದಿನಮಾನದಲ್ಲಿ ಸಿರಿಧಾನ್ಯ ಬೆಳೆಯುವ ಕೃಷಿ ಪ್ರದೇಶ ದೇಶದಾದ್ಯಂತ ಅರ್ಧಕ್ಕರ್ಧ ಕಡಿಮೆ ಆಗಿರುವುದು ಆತಂಕಕಾರಿಯಾಗಿದೆ. ಹತ್ತಿ, ಕಬ್ಬು, ಎಣ್ಣೆಕಾಳು, ಹಣ್ಣು, ತರಕಾರಿಗಳಂಥ ವಾಣಿಜ್ಯ ಬೆಳೆಗಳು ಸಿರಿಧಾನ್ಯಗಳ ಜಾಗದಲ್ಲಿ ಠಿಕಾಣಿ ಹೂಡಿವೆ. ಜೊತೆಗೆ ಅಕ್ಕಡಿ ಬೆಳೆಯ ಪದ್ಧತಿಯೂ ಕಣ್ಮರೆಯಾಗಿರುವುದು ಕೃಷಿಯ ದುರಂತವೇ ಸರಿ ಎನ್ನುವುದು ಹಲವು ತಜ್ಞರ ಅಭಿಮತ.

ದೇಸಿ ಬೀಜಗಳನ್ನು ಸಾಂಸ್ಥಿಕವಾಗಿ ರಕ್ಷಿಸುವ ಕೆಲಸ ನಿಂತುಹೋಗಿದೆ. ಸಮುದಾಯ ಬೀಜ ಬ್ಯಾಂಕುಗಳು ಮಾಡುತ್ತಿದ್ದ ಕೆಲಸಗಳನ್ನು ಈಗ ರೈತರೇ ಮಾಡುತ್ತಿದ್ದಾರೆ. ಕಿರುಗಾವಲಿನ ಸಯ್ಯದ್ ಘನಿಖಾನ್, ಮಂಡ್ಯದ ಬೋರೆಗೌಡ, ದಾವಣಗೆರೆಯ ಆಂಜನೇಯ, ಬೆಳ್ತಂಗಡಿಯ ದೇವರಾವ್‌, ಗಂಗಾವತಿಯ ಚಿಕ್ಕಜಂತಕಲ್ ಗ್ರಾಮದ ಮಹಾದೇವಿ, ಹಾವೇರಿಯ ಶ್ರೇಣಿತರಾಜು ಮುಂತಾದವರು ಬಿಡಿಬಿಡಿಯಾಗಿ ಬೀಜ ಸಂರಕ್ಷಕ ಕೆಲಸ ಮಾಡುತ್ತಿದ್ದಾರೆ. ರೈತರ ಪ್ರಯತ್ನಗಳನ್ನು ಕೊಂಡಾಡಲಾಗುತ್ತದೆಯಾದರೂ ಉತ್ಪಾದಿಸಿದ ದೇಸಿ ಬೀಜಗಳನ್ನು ಬೀಜ ಮಾರಾಟ ವ್ಯವಸ್ಥೆಯ ವ್ಯಾಪ್ತಿಗೆ ತರುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವುಗಳ ಗುಣಮಟ್ಟದ ಕುರಿತು ಯಾವ ಪ್ರಮಾಣ ಪತ್ರವೂ ಇಲ್ಲ.

‘ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ’ ನಮ್ಮ ರಾಜ್ಯದ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಮೂಲದ ಗ್ರೀನ್ ಫೌಂಡೇಷನ್, ಧಾನ್ಯ ಸಂಸ್ಥೆ, ಕೆ.ಎಚ್‌. ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಸಹಜ ಸಮೃದ್ಧ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಕಾಲೇಜು, ರಾಣೆಬೆನ್ನೂರು ತಾಲ್ಲೂಕಿನ ಕಾಕೋಳಿನ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟೆಯ ಮಿಂಚು ಸಮುದಾಯ ಬೀಜ ಬ್ಯಾಂಕ್‌ ಸಿರಿಧಾನ್ಯಗಳ ತಳಿ ರಕ್ಷಿಸಿ ಮುಖ್ಯವಾಹಿನಿಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದವು. ಧಾರವಾಡದ ತೀರ್ಥದಲ್ಲಿರುವ ಮಹಿಳೆಯರೇ ನಡೆಸುವ ಬೀಜ ಬ್ಯಾಂಕ್‌ ಗ್ರಾಮೀಣ ಪ್ರದೇಶಗಳಲ್ಲಿ ದೇಸಿ ತಳಿಗಳ ಬಗೆಗೆ ಹೆಚ್ಚಿನ ಆಸ್ಥೆ ಮೂಡಿಸಿದೆ. ರಾಜ್ಯದ ಮೂರ್ನಾಲ್ಕು ವಿಶ್ವವಿದ್ಯಾಲಯಗಳು ಈ ಕೆಲಸ ಮುಂದುವರಿಸಿವೆ. ಸಹಜ ಸಮೃದ್ಧ ನೇತೃತ್ವದ ಕೃಷ್ಣ ಪ್ರಸಾದ್ ‘ಸರ್ಕಾರದ ಸರಿಯಾದ ಬೆಂಬಲ ಸಿಕ್ಕರೆ ಸ್ಥಳೀಯ ತಳಿಗಳ ಪುನುರುತ್ಥಾನ ಸಾಧ್ಯ’ ಎನ್ನುತ್ತಾರೆ.

ದೇಸಿ ಬೀಜಗಳನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ಕೆಲಸಗಳೀಗ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸಮುದಾಯ ಬೀಜ ಬ್ಯಾಂಕ್‌ಗಳ ಮೂಲಕ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ತೀರಾ ಇತ್ತೀಚೆಗೆ ಓಡಿಶಾ ರಾಜ್ಯದ ನಯಾಗಢ ಜಿಲ್ಲೆಯಲ್ಲಿ ನಡೆದ ಬಿಹಾನ್ ಮೇಳವೇ ಸಾಕ್ಷಿ. ದಾಸಪಲ್ಲಾ ತಾಲ್ಲೂಕಿನಲ್ಲಿ ಅಲ್ಲಿನ ಬುಡುಕಟ್ಟು ಡೊಂಗ್ರಿಯ ಅಕೊಂಡ್‌ನ ಮಹಿಳೆಯರು ಏರ್ಪಡಿಸಿದ್ದ ಬೀಜ ಮೇಳಕ್ಕೆ ತಾಲ್ಲೂಕಿನ ನಲವತ್ತು ಹಳ್ಳಿಗಳ ರೈತರು ಆಗಮಿಸಿದ್ದು ವಿಶೇಷವಾಗಿತ್ತು. ಬೇಸಿಗೆಯ ಹಂಗಾಮಿನಲ್ಲಿ ಅಪರೂಪದ ದೇಸಿ ಬೀಜಗಳನ್ನು ಹುಷಾರಾಗಿ ಸಂಗ್ರಹಿಸುವ ಹೆಣ್ಣುಮಕ್ಕಳು ಮಣ್ಣಿನ ಗಡಿಗೆಗಳಲ್ಲಿ ಸಂಗ್ರಹಿಸಿಟ್ಟುಕೊ‌ಂಡು ‘ಬೀಜಜಾತ್ರೆ’ಗೆ ಕೊಂಡೊಯ್ದು ಪ್ರದರ್ಶನ ಮತ್ತು ಮಾರಾಟಕ್ಕಿಡುತ್ತಾರೆ. ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷ ಜಾತ್ರೆ ನೆರೆದಿರಲಿಲ್ಲ ಎನ್ನುವ ಬಿಡಪಜು ಗ್ರಾಮದ ನಿರೋಲ ಜಾನಿ, ‘ನಾನು ನಾಲ್ಕು ಬಗೆಯ ದೇಸಿ ಭತ್ತದ ಬೀಜಗಳನ್ನು ತಂದಿದ್ದೇನೆ, ನಮ್ಮ ಅರ್ಧ ಹೆಕ್ಟೇರ್‌ ಪ್ರದೇಶದಲ್ಲಿ ಇವನ್ನು ಬೆಳೆದಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತಾಳೆ.

‘ಬೀಜಜಾತ್ರೆ’ಯನ್ನು ಸಂಘಟಿಸಲು ನೆರವಾದ ಸರ್ಕಾರೇತರ ಸಂಸ್ಥೆ ‘ನಿರ್ಮಾಣ್’ನ ಮುಖ್ಯಸ್ಥ ಕೈಲಾಸ್‌ ಸಾಹೂ ‘ಇಲ್ಲಿನ ಜನ ಮಳೆಯಾಶ್ರಿತ ಬೇಸಾಯದವರು. ಹಸಿರು ಕ್ರಾಂತಿಯ ಫಲವಾಗಿ ದೇಸಿ ತಳಿಗಳಿಂದ ದೂರವಾಗಿದ್ದರು. ಪ್ರತಿವರ್ಷ ಒಂದಲ್ಲ ಒಂದು ಕಾರಣಕ್ಕೆ ಬೆಳೆ ವಿಫಲವಾದದ್ದರಿಂದ ಮರಳಿ ದೇಸಿ ಬೆಳೆಗಳ ಕಡೆ ಮುಖ ಮಾಡಿದ್ದಾರೆ. ಇವರು ದೊಡ್ಡ ಹಿಡುವಳಿದಾರರಲ್ಲ, ಹೆಚ್ಚೆಂದರೆ ಒಬ್ಬೊಬ್ಬರ ಬಳಿ ಒಂದು ಎಕರೆ ಜಮೀನಿರಬಹುದು. ದೇಸಿ ತಳಿಗಳು ವಾಯುಗುಣ ವೈಪರೀತ್ಯಗಳನ್ನು ಮೆಟ್ಟಿ ನಿಲ್ಲುತ್ತವೆ ಎಂದು ಗೊತ್ತಾಗಿದೆ. ಇನ್ನುಮುಂದೆ ನಮ್ಮ ಕೆಲಸ ಸುಲಭ’ ಎನ್ನುತ್ತಾರೆ. ಬೆಟ್ಟದ ಮೇಲೆ ಕೃಷಿ ಮಾಡುವ ಡೊಂಗಾರ್ ಬುಡಕಟ್ಟಿನ ಜನ ಗೋಡಂಬಿ ಬೆಳೆಯಲು ಪ್ರಯತ್ನಿಸಿ ಕೀಟಬಾಧೆಯಿಂದಾಗಿ ಭಾರಿ ವೈಫಲ್ಯ ಅನುಭವಿಸಿದ್ದರು. ಬೀಜ ಹಬ್ಬದಲ್ಲಿ ಪಾಲ್ಗೊಂಡ ನಂತರ ದೇಸಿ ತಳಿಯ ಮಹತ್ವ ಅರಿತ ಅವರೂ ಸಹ ಸಿರಿಧಾನ್ಯ ಬೆಳೆಯಲು ಉತ್ಸುಕರಾಗಿದ್ದಾರೆ. ರಾಯಸಾರ್ ಗ್ರಾಮದ ಬೀಜಬ್ಯಾಂಕ್ ಅಲ್ಲಿನ ರೈತರಿಗೆ ನೆರವಾಗಿದ್ದು ಒಂದು ಕೆ.ಜಿ. ಬೀಜ ತೆಗೆದುಕೊಂಡು ಹೋಗುವ ರೈತರು ಮೊದಲ ವರ್ಷದ ಹಂಗಾಮಿನಲ್ಲೇ ಎರಡು ಪಟ್ಟು ಬೀಜ ಹಿಂದಿರುಗಿಸಬೇಕೆಂಬ ನಿಯಮ ಮಾಡಿದೆ.

ತೆಲಂಗಾಣದ ಮೇದಕ್ ಜಿಲ್ಲೆಯ ಹುಮನಾಪುರ ಗ್ರಾಮದ ಮಹಿಳೆ ಲಕ್ಷ್ಮಮ್ಮ, ನಲವತ್ತೈದು ವರ್ಷಗಳಿಂದ ಕೃಷಿ ಮಾಡುತ್ತಿದ್ದು ತೊಂಬತ್ತಕ್ಕೂ ಹೆಚ್ಚು ಬಗೆಯ ಬೇಳೆ, ಎಣ್ಣೆಕಾಳು ಮತ್ತು ಸಿರಿಧಾನ್ಯಗಳ ಬೀಜಗಳನ್ನು ಸಂರಕ್ಷಿಸಿದ್ದಾರೆ. ಹೊಸ ತಲೆಮಾರಿನವರಿಗೂ ಪಾರಂಪರಿಕ ಬೀಜ– ತಳಿ ಪರಿಚಯ ಮಾಡಿಸಲು ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯವರು ನಡೆಸುತ್ತಿರುವ ಅತ್ತೆ- ಸೊಸೆ ಕಾರ್ಯಕ್ರಮ ಯಶಸ್ಸು ಕಂಡಿದೆ. ಜಿಲ್ಲೆಯ 60 ಹಳ್ಳಿಗಳ ಹಿಂದುಳಿದ ವರ್ಗಗಳ ಮಹಿಳೆಯರನ್ನೇ ಒಳಗೊಂಡ ಬೀಜ ಬ್ಯಾಂಕ್ ಸ್ಥಾಪಿಸಿರುವ ಡಿಡಿಎಸ್ ದೇಸಿ ತಳಿಗಳ ಸಂರಕ್ಷಣೆಗೆ ಪ್ರತಿ ಹಳ್ಳಿಯ 30 ಎಕರೆ ಜಾಗದಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆಯಲು ಪ್ರೇರೇಪಿಸಿ ಪ್ರತಿ ರೈತ ಮಹಿಳೆಗೆ ಬೀಜ, ಗೊಬ್ಬರ, ಉಳುಮೆ ಮತ್ತು ಕಳೆ ನಿವಾರಿಸಲು ₹ 2,500 ಕೊಡುತ್ತದೆ.

ಸಮುದಾಯ ಬೀಜ ಬ್ಯಾಂಕುಗಳು ಇಲ್ಲ ಎನ್ನುವುದಕ್ಕಿಂತ ಬೀಜಗಳನ್ನು ಕಾಪಿಡುವ ಸಮುದಾಯಗಳೆಲ್ಲಿವೆ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ತೃಣಧಾನ್ಯಗಳನ್ನು ಹೆಚ್ಚಿನ ಪ್ರಯಾಣದಲ್ಲಿ ಉತ್ಪಾದಿಸಿದರೆ ತಿನ್ನುವ ಬಾಯಿಗಳೆಲ್ಲಿವೆ? ಕಳೆದ ಎರಡು ದಶಕಗಳಲ್ಲಿ ಜನಿಸಿರುವ ಬಹುಪಾಲು ಮಕ್ಕಳಿಗೆ ಸಿರಿಧಾನ್ಯಗಳ ಪರಿಚಯವೇ ಇಲ್ಲ. ಬೆಳೆದ ಅಪ್ಟಿಷ್ಟು ಬೆಳೆಯೂ ಹಕ್ಕಿಗಳಿಗೆ ಆಹಾರವಾದರೆ ಯಾರಿಗಾಗಿ ಬೆಳೆಯಬೇಕು ಎನ್ನುವುದು ರೈತರ ಪ್ರಶ್ನೆ. ಸಿರಿಧಾನ್ಯಗಳಿಗೆ ಇದ್ದ ಪ್ರಾಮುಖ್ಯವನ್ನು ಮರಳಿ ತರಬೇಕಾದರೆ ಅವುಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದು ಮೊದಲಾಗಬೇಕು. ಅದಕ್ಕೂ ಮುನ್ನ ಅಂಗನವಾಡಿಗಳ ಮೂಲಕ ಅದು ಎಳೆಯ ಮಕ್ಕಳ ಊಟದಲ್ಲಿ ಬೆರೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT