ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಭೂಮಿಯ ಆರೋಗ್ಯ ಕೆಡಿಸುವ ‘ವಸ್ತ್ರ’

ಗುರುರಾಜ್‌ ಎಸ್‌. ದಾವಣಗೆರೆ
Published 2 ಮೇ 2024, 0:30 IST
Last Updated 2 ಮೇ 2024, 0:30 IST
ಅಕ್ಷರ ಗಾತ್ರ

ತ್ಯಾಜ್ಯ ಎಂದಾಕ್ಷಣ ಮನೆ, ಕಚೇರಿ, ಹೋಟೆಲ್, ಆಸ್ಪತ್ರೆ, ಮಾಲ್, ಅಂಗಡಿ, ಕಾರ್ಖಾನೆಗಳಿಂದ ಹೊಮ್ಮುವ ವಿವಿಧ ಬಗೆಯ ಕಸ ಕಣ್ಣಮುಂದೆ ಬರುತ್ತದೆ. ಹಸಿ– ಒಣ ಕಸ, ಪ್ಯಾಕಿಂಗ್‌ ಮೆಟೀರಿಯಲ್ ಮತ್ತು ಪ್ಲಾಸ್ಟಿಕ್‌ನ ಅವಾಂತರಗಳು ಕಣ್ಣ ಮುಂದೆ ಸುಳಿಯುತ್ತವೆ. ಆದರೆ ನಾವು ಸದಾ ತೊಡುವ ಬಟ್ಟೆಯು ತಯಾರಿಕೆಗೆ ಮುನ್ನ ಮತ್ತು ತೊಟ್ಟ ನಂತರ ದೊಡ್ಡ ಕಸವಾಗಿ ಹೊಮ್ಮುತ್ತಾ ಭೂಮಿಯ ಆರೋಗ್ಯವನ್ನು ಕೆಡಿಸುತ್ತಿದೆ ಎಂಬುದನ್ನು ಮರೆತುಬಿಡುತ್ತೇವೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ 220 ಟನ್ ವಸ್ತ್ರ ಕಸ ಉತ್ಪತ್ತಿಯಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಒಟ್ಟು ಕಸದ ಶೇಕಡ 4ರಷ್ಟು ಬಟ್ಟೆಯ ಕಸವೇ ಇರುತ್ತದೆ. ಇದರಲ್ಲಿ ಸ್ವಲ್ಪ ಭಾಗ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಸೇರಿ ಮರುಬಳಕೆಯಾಗುತ್ತದೆ. ಇನ್ನು ಸ್ವಲ್ಪ ಭಾಗ ದಹಿಸಲ್ಪಡುತ್ತದೆ. ಉಳಿದದ್ದು ಮರು
ಬಳಕೆಯಾಗದೆ, ರೀಸೈಕಲ್ ಆಗದೆ, ಭೂಭರ್ತಿ ತಾಣ ಸೇರುತ್ತದೆ. ಇದನ್ನು ವಿನೂತನ ರೀತಿಯಲ್ಲಿ ಪರಿವರ್ತಿಸಿ ಮರುಬಳಕೆ ಮಾಡುವಲ್ಲಿ ಬೆಂಗಳೂರಿನ ಎರಡು ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿವೆ.

ಕಳೆದ ತಿಂಗಳು ‘ಭಾರತ ಟೆಕ್ಸ್‌’ ಆಯೋಜಿಸಿದ್ದ ವಸ್ತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಹಳೆಯ ಬಟ್ಟೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹೇಗೆ ಸಮರ್ಪಕವಾಗಿ ಮೃದುವಾದ ಮಕ್ಮಲ್ ಬಟ್ಟೆಯನ್ನಾಗಿ ಪರಿವರ್ತಿಸಿ ಮರುಬಳಕೆ ಮಾಡಬಹುದು ಎಂಬುದನ್ನು ಬೆಂಗಳೂರಿನ ‘ಹಸಿರು ದಳ’ ಸಂಘಟನೆಯ ‘ಹಸಿರು ಬಟ್ಟೆ’ ಮತ್ತು ನೆದರ್ಲೆಂಡ್ಸ್ ಮೂಲದ ‘ಎನ್ವಿ ಯು’ ಸಂಸ್ಥೆಯ ‘ದ ಗುಡ್ ಫೆಲ್ಟ್’ (ಟಿಜಿಎಫ್‌) ಜಂಟಿಯಾಗಿ ಪ್ರದರ್ಶಿಸಿ ತಜ್ಞರ ಮೆಚ್ಚುಗೆ ಗಳಿಸಿದವು. ಬೆಂಗಳೂರಿನ ಜೆ.ಪಿ.ನಗರ ಮತ್ತು ದೊಮ್ಮಲೂರು ಭಾಗದ ಜನರಿಂದ ಸಂಗ್ರಹಿಸಲಾಗಿದ್ದ 220 ಕೆ.ಜಿ.ಯಷ್ಟು ಬಳಸಿದ ಬಟ್ಟೆಗಳನ್ನು ನೆದರ್ಲೆಂಡ್ಸ್‌ಗೆ ತಲುಪಿಸಿ ಅಲ್ಲಿನ ಫ್ಯಾಕ್ಟರಿಯಲ್ಲಿ ಮಕ್ಮಲ್ ಬಟ್ಟೆಯ ನ್ನಾಗಿಸಿ ಬೆಂಗಳೂರಿಗೆ ವಾಪಸ್ ತರಿಸಿಕೊಳ್ಳಲಾಯಿತು. ಪ್ರಾರಂಭಿಕ ಪ್ರಯೋಗ ರೂಪದ ಈ ಕೆಲಸದಲ್ಲಿ ಕೇವಲ ಬಿಳಿಯ ಬಟ್ಟೆಗಳನ್ನು ಬಳಸಲಾಗಿತ್ತು. ಇದರಿಂದ ಉತ್ತೇಜಿತಗೊಂಡ ನೆದರ್ಲೆಂಡ್ಸ್ ಸರ್ಕಾರವು ಈ ಕೆಲಸವನ್ನು ದೊಡ್ಡ ರೀತಿಯಲ್ಲಿ ಮಾಡೋಣ ಎಂದು ನಮ್ಮ ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಬೃಹತ್ ಮಾರುಕಟ್ಟೆ ಎನಿಸಿರುವ ಹರಿಯಾಣದ ಪಾಣಿಪತ್ ನಗರದ ಹಲವು ಬಟ್ಟೆ ಸಂಗ್ರಹಣ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಮಕ್ಮಲ್ ಬಟ್ಟೆಯೇ ಏಕೆ ಎಂದು ಪ್ರಶ್ನಿಸಿದರೆ ಟಿಜಿಎಫ್‌ನ ಸಿಇಒ ಅನುರಾಗ್‌ ಜೈನ್ ‘ಹಳೆಯ ಬಟ್ಟೆಗಳನ್ನು ಮಕ್ಮಲ್ ಬಟ್ಟೆಯನ್ನಾಗಿ ಪರಿವರ್ತಿಸುವುದು ತುಂಬಾ ಸುಲಭ, ಅದಕ್ಕೆ ಯಾವುದೇ ನೇಯ್ಗೆಯೂ ಬೇಕಾಗುವುದಿಲ್ಲ ಮತ್ತು ಸುಲಭವಾಗಿ ರೀಸೈಕಲ್ ಆಗುತ್ತದೆ’ ಎನ್ನುತ್ತಾರೆ. ದ ಗುಡ್ ಫೆಲ್ಟ್ ಕಂಪನಿಯವರು ಪಾಣಿಪತ್‌ನಲ್ಲಿ ಕಾರ್ಯಾರಂಭ ಮಾಡಿರುವುದು ವರದಾನದಂತಿದೆ ಎನ್ನುವ ಹಸಿರು ದಳದ ರೀಸೈಕ್ಲಿಂಗ್ ವಿಭಾಗದಲ್ಲಿ ಮ್ಯಾನೇಜರ್ ಆಗಿರುವ ಇನಾ ಬಹುಗುಣ, ‘ಪಾಣಿಪತ್‌ನಲ್ಲಿ ಟಿಜಿಎಫ್‌ ಸ್ಥಾಪಿಸಿರುವ ಫ್ಯಾಕ್ಟರಿಗೆ ಬೆಂಗಳೂರಿನ ಮನೆಗಳಿಂದ ಸಂಗ್ರಹಿಸಲಾಗಿರುವ ಬಿಳಿಯ ಬಟ್ಟೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಿಸುವ ಜವಾಬ್ದಾರಿ ನಮ್ಮ ಮುಂದಿದೆ’ ಎನ್ನುತ್ತಾರೆ. ಫ್ಯಾಕ್ಟರಿ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ ಸುಮಾರು 2,200 ಟನ್ ಹಳೆಯ ಬಟ್ಟೆಯು ಪಾಣಿಪತ್ ತಲುಪಿದೆ. ಸಾವಿರಾರು ಟನ್ ಬಟ್ಟೆ ಮತ್ತು ಇತರ ಜವಳಿ ಉತ್ಪನ್ನಗಳು ಭೂಭರ್ತಿಯಾಗುವುದನ್ನು ತಡೆದರೆ ಜನ ಬಳಸುವ ಟೋಪಿ, ಜರ್ಕಿನ್, ಕೋಟು, ತಲೆದಿಂಬಿನ ಕವರ್, ಕೈಚೀಲ, ವ್ಯಾನಿಟಿ ಬ್ಯಾಗ್, ಮಕ್ಕಳಾಟಿಕೆ, ನೆಲಹಾಸು, ದೂಳು ತೆಗೆಯುವ ಬ್ರಷ್ ಹೀಗೆ ಹತ್ತು ಹಲವು ಮಕ್ಮಲ್ ಉತ್ಪನ್ನಗಳನ್ನು ಹಳೆಯ ವಿವಿಧ ಬಣ್ಣದ ಬಟ್ಟೆಗಳಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸುವ ವಿಪುಲ ಅವಕಾಶಗಳಿವೆ. 

ಒಂದೆಡೆ ಪ್ಲಾಸ್ಟಿಕ್ ತ್ಯಾಜ್ಯವು ಭೂಮಿಯ ಆರೋಗ್ಯವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮನುಷ್ಯನ ಸೌಂದರ್ಯ ವೃದ್ಧಿಸುವ ಬಟ್ಟೆಯು ಭೂಮಿಯ ಅಂದ ಕೆಡಿಸುತ್ತಿದೆ. ಲಭ್ಯ ಅಂಕಿ ಅಂಶಗಳ ಪ್ರಕಾರ ಒಟ್ಟು ಜವಳಿ ಉತ್ಪನ್ನಗಳಲ್ಲಿ ಶೇಕಡ 10ರಷ್ಟು ಮಾತ್ರ ಮರುಬಳಕೆಆಗುತ್ತವೆ ಇಲ್ಲವೇ ರೀಸೈಕಲ್ ಆಗುತ್ತವೆ. ನಮ್ಮ ದೇಶದ ಪ್ರಜೆ ಒಬ್ಬ ವರ್ಷಕ್ಕೆ 12 ಕೆ.ಜಿ. ತೂಕದಷ್ಟು ಬಟ್ಟೆಗಳನ್ನು ಬಳಸುತ್ತಾನೆ. ಒಂದು ಕೆ.ಜಿ. ಹತ್ತಿ ಬೆಳೆಯಲು 22,000 ಲೀಟರ್‌ಗೂ ಹೆಚ್ಚು ನೀರು ಬೇಕಾಗುತ್ತದೆ. ಒಂದು ಕಾಟನ್ ಶರ್ಟ್ ತಯಾರಿಸಲು 700 ಗ್ಯಾಲನ್ ನೀರು ಬೇಕಾಗುತ್ತದೆ. ವಿಶ್ವದಲ್ಲಿ ಪ್ರತಿ ಸೆಕೆಂಡಿಗೆ 20 ಟನ್ ಬಟ್ಟೆ ಕಸದ ಗುಂಡಿ ಸೇರುತ್ತದೆ. ಒಂದು ಕೆ.ಜಿ. ಬಟ್ಟೆ ತಯಾರಾಗುವಾಗ 23 ಕೆ.ಜಿ. ಶಾಖವರ್ಧಕ ಅನಿಲಗಳು ಭೂಮಿಯ ವಾತಾವರಣ ಸೇರುತ್ತವೆ. ಬಟ್ಟೆ ತಯಾರಿಕಾ ಕಾರ್ಖಾನೆಗಳಿಂದ ವಾರ್ಷಿಕ 4.2 ಕೋಟಿ ಟನ್ ಪ್ಲಾಸ್ಟಿಕ್ ಕಸವೂ ಹೊಮ್ಮುತ್ತದೆ.

ಸಮೀಕ್ಷೆಯೊಂದರ ಪ್ರಕಾರ ಜನರು ಅಗತ್ಯವಿರುವುದಕ್ಕಿಂತ ಶೇಕಡ 40ರಷ್ಟು ಬಟ್ಟೆಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ ಎಂಬ ಲೆಕ್ಕ ಸಿಕ್ಕಿದೆ. ಕುಡಿಯುವ ಮತ್ತು ಬಳಸುವ ನೀರಿಗಾಗಿ ಈಗಾಗಲೇ ಪರದಾಡುತ್ತಿರುವ ನಾವು ಬಟ್ಟೆಯ ಉತ್ಪಾದನೆ, ಖರೀದಿ ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಿಶ್ವದಲ್ಲಿ ವಾರ್ಷಿಕ 130 ಕೋಟಿ ಟನ್ ಜವಳಿ ತ್ಯಾಜ್ಯ ಉತ್ಪಾದನೆ
ಆಗುತ್ತದೆ. ಇದರ ಮುಕ್ಕಾಲು ಭಾಗ ಯಾವುದೇ ಬಗೆಯ ಸಂಸ್ಕರಣೆ, ರೀಸೈಕ್ಲಿಂಗ್‌ಗೆ ಒಳಗಾಗದೆ ನೀರಿನ ಮೂಲ, ಭೂಮಿಯ ಆಳ ಸೇರುತ್ತದೆ ಇಲ್ಲವೇ ದಹಿಸಲ್ಪಡುತ್ತದೆ. ಇದರ ಕಾಲು ಭಾಗವನ್ನು ಸರಿಯಾಗಿ ಬಳಸಿಕೊಂಡಲ್ಲಿ ಬಹುದೊಡ್ಡ ಆರ್ಥಿಕ ಆದಾಯ ಗಳಿಸುವುದರ ಜೊತೆಗೆ ತ್ಯಾಜ್ಯ ವಸ್ತ್ರಗಳನ್ನು ಆಯ್ದು ತರುವವರ ಬದುಕನ್ನು ಮತ್ತಷ್ಟು ಹಸನಾಗಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT