ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬರದ ಬವಣೆ ಮರೆಸುವ ಭ್ರಮೆ

ಈ ವರ್ಷದ ಬರ ಸಂಕೀರ್ಣ ಸ್ವರೂಪದ್ದಾಗಿದ್ದು, ಗ್ರಾಮೀಣ ಬದುಕು ಗಂಭೀರ ಅಪಾಯಗಳಿಗೆ ಸಿಲುಕುತ್ತಿದೆ
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಸಂಕ್ರಾಂತಿ ಸಮಯದಲ್ಲಿ ಉತ್ತರ ಕರ್ನಾಟಕದ ಮುಂಡಗೋಡು ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಪ್ರದೇಶದ ಹಳ್ಳಿಗಳಲ್ಲಿ ಸ್ಥಳಾಧ್ಯಯನ ಕೈಗೊಳ್ಳುವ ಸಂದರ್ಭ ಬಂದಿತ್ತು. ಸಹ್ಯಾದ್ರಿಯ ತೋಟಗಾರಿಕೆ ಹಾಗೂ ಬಯಲುನಾಡಿನ ಕಾಳು-ಬೇಳೆ ಬೇಸಾಯ ಇವೆರಡೂ ಬೆಸೆದ ಸಮೃದ್ಧ ಮಲೆನಾಡ ಸೆರಗಿನ ಪ್ರದೇಶವಿದು. ಆದರೆ, ಮುಂಗಾರಿನ ವೈಫಲ್ಯದಿಂದಾಗಿ ಅರ್ಧಬೆಳೆಯೂ ಕೈಸೇರದೆ ರೈತರು ಸೋತಿದ್ದರು. ಬೇಸಿಗೆ ಕಾಲಿಡುವ ಮುನ್ನವೇ ತಾಪಮಾನ ಹೆಚ್ಚಾಗಿ, ಮೇಲ್ಮಣ್ಣಿನ ತೇವಾಂಶ ಕುಗ್ಗಿ, ಬಹುತೇಕ ಪ್ರದೇಶದಲ್ಲಿ ಹಿಂಗಾರು ಬಿತ್ತನೆಯೂ ಆಗಿರಲಿಲ್ಲ. ಕೆರೆ ತೊರೆಗಳೆಲ್ಲ ಒಣಗಿ, ಎಲ್ಲೆಡೆಯೂ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಕಾಣುತ್ತಿತ್ತು. ಕಂಗೆಟ್ಟ ಸಣ್ಣರೈತರು ಹಾಗೂ ಕೂಲಿವರ್ಗ ಗುಳೆ ಹೋಗುತ್ತಿದ್ದುದನ್ನು ಹಳ್ಳಿಗಳ ಬಸ್ ನಿಲ್ದಾಣಗಳು ಸಾರಿ ಹೇಳುತ್ತಿದ್ದವು. ರಾಜ್ಯದ 223 ತಾಲ್ಲೂಕುಗಳು ಬರಪೀಡಿತ ಎಂದೀಗ ರಾಜ್ಯ ಸರ್ಕಾರವೇ ಘೋಷಿಸಿದ್ದು, ಎಲ್ಲೆಡೆಯೂ ಇದೇ ವೇದನೆಯಿರಬೇಕು!

‘ಬರ’ ಆಗಾಗ ಮರುಕಳಿಸುವ ಸಹಜ ವಿದ್ಯಮಾನವೆಂಬ ಗ್ರಹಿಕೆ ಈವರೆಗಿತ್ತು. ಮಳೆಯ ಏರಿಳಿತದಿಂದಾಗಿ, ನೆರೆ-ಬರಗಳು ದಶಕದಲ್ಲೊಮ್ಮೆ ಆವರ್ತನೆಯಾಗುತ್ತಿದ್ದುದೂ ಹೌದು.  ಆದರೆ ಈ ಬರ ಅಂತಹ ಸರಳ ಪರಿಸ್ಥಿತಿಯಲ್ಲ ಹಾಗೂ ಮಾನವ ನಿರ್ಮಿತ ಗಂಭೀರ ಅವಘಡ ಎಂಬುದನ್ನೀಗ ಅಧ್ಯಯನಗಳು ತೆರೆದಿಡುತ್ತಿವೆ. ಇದಕ್ಕೆ ಕಾರಣಗಳೂ ಸಂಕೀರ್ಣ, ಪರಿಹಾರಗಳೂ ಜಟಿಲ. ಇದನ್ನು ಗಮನಿಸದೆ, ಅನುದಾನ ಹಂಚಿಕೆಯೊಂದೇ ಸಮಸ್ಯೆಗಳಿಗೆಲ್ಲ ಪರಿಹಾರ ಎಂಬಂತೆ ಸರ್ಕಾರಗಳು ವರ್ತಿಸುತ್ತಿವೆ. ಬಹುಪಾಲು ಮಾಧ್ಯಮಗಳು ಹಾಗೂ ನಾಗರಿಕ ಸಮಾಜವೂ ಈ ‘ವಾದವಿಲಾಸ’ಕ್ಕೆ ಮರುಳಾಗುತ್ತಿವೆ!

ಈ ಬರದ ಹಿಂದೆ ಎರಡು ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಮೊದಲಿನದು, ಕೃಷಿ ಹಾಗೂ ಗ್ರಾಮೀಣ ಬದುಕನ್ನು ಪೋಷಿಸುವ ‘ನೈಸರ್ಗಿಕ ನೆಲಗಟ್ಟು’ ಕುಸಿದಿರುವುದು. ಹಿಂದಿನ ಮೂರ್ನಾಲ್ಕು ದಶಕಗಳಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಅವೈಜ್ಞಾನಿಕವಾಗಿ ನಿರ್ವಹಿಸಿದ್ದರ ಫಲವಿದು. ಕೆರೆ-ನದಿಗಳ ತಪ್ಪಲಿನ ಕಾಡು, ಗೋಮಾಳಗಳು ಅರಣ್ಯನಾಶ ಹಾಗೂ ಭೂಕಬಳಿಕೆಗೆ ಒಳಗಾದಂತೆಲ್ಲ, ಮಳೆನೀರು ಹಿಡಿದಿಡುವ ಮಣ್ಣಿನ ಸಾಮರ್ಥ್ಯ ಕಡಿಮೆಯಾಗಿ, ಜಲಮೂಲಗಳು ಮರುಪೂರಣವಾಗುತ್ತಿಲ್ಲ. ಮಣ್ಣಿನ ಸವೆತ ಹಾಗೂ ಕೃತಕ ರಾಸಾಯನಿಕಗಳಿಂದಾಗಿ, ಮೇಲ್ಮಣ್ಣು ಸಾರವಿಲ್ಲದೆ ನೈಸರ್ಗಿಕ ಸ್ಥಿತಿಸ್ಥಾಪಕತ್ವ ಗುಣವನ್ನೇ ಕಳೆದುಕೊಳ್ಳುತ್ತಿದೆ.

ಮಲೆನಾಡು ಹಾಗೂ ಕರಾವಳಿಯಲ್ಲಿ ಮಣ್ಣು ಅತಿಯಾಗಿ ಹುಳಿಯಾಗುತ್ತಿದ್ದರೆ, ಬಯಲುನಾಡಿನಲ್ಲಿ ಕ್ಷಾರ
ಗುಣ ಹೆಚ್ಚುತ್ತಿದೆ. ಬೆಳೆಗಳಿಗೆ ಅಗತ್ಯವಿರುವ ಸಾವಯವ ಇಂಗಾಲ, ಸಾರಜನಕ, ರಂಜಕ, ಪೊಟ್ಯಾಷಿಯಂ, ಬೋರಾನ್, ಜಿಂಕ್‌ನಂತಹ ಪೋಷಕಾಂಶಗಳನ್ನು ಕನಿಷ್ಠ ಪ್ರಮಾಣದಲ್ಲಿ ಪೂರೈಸಲೂ ಮೇಲ್ಮಣ್ಣಿಗೆ ಸಾಧ್ಯವಾಗುತ್ತಿಲ್ಲ.ಇದರಿಂದಾಗಿ, ಗೊಬ್ಬರವೆಂದರೆ ಕೃತಕ ರಾಸಾಯನಿಕ ಸುರಿಯುವುದು ಹಾಗೂ ನೀರಾವರಿ ಎಂದರೆ ಕೊಳವೆಬಾವಿ ಆಶ್ರಯಿಸುವುದು ಎಂಬ ಅಪಾಯಕಾರಿ ಸಿದ್ಧಸೂತ್ರಕ್ಕೆ ಸಮಗ್ರ ಕೃಷಿ ಕ್ಷೇತ್ರವೇ ಮುಖಮಾಡುತ್ತಿದೆ. ಹೀಗಾಗಿ, ಕೃಷಿಭೂಮಿ ಒಂದು ವರ್ಷದ ಬರವನ್ನೂ ಸಹಿಸಿಕೊಳ್ಳಲಾರದಷ್ಟು ರೀತಿಯಲ್ಲಿ ತನ್ನ ಸಹಜ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.

ಈ ಬರದ ಹಿಂದಿನ ಇನ್ನೊಂದು ಕಾರಣವೆಂದರೆ, ಜಾಗತಿಕ ಹವಾಮಾನ ಬದಲಾವಣೆ. ಇದಕ್ಕೆ ಯಾರೆಲ್ಲ ಹೇಗೆ ಕಾರಣ ಎಂಬ ಚರ್ಚೆ ಏನೇ ಇರಲಿ, ಅದರ ದುಷ್ಪರಿಣಾಮವನ್ನು ಮಾತ್ರ ಎಲ್ಲರೂ ಎದುರಿಸಲೇ
ಬೇಕಿದೆ. ಹೋದ ವರ್ಷದ ಜೂನ್-ಜುಲೈ ತಿಂಗಳುಗಳು ಹಿಂದಿನ ನೂರು ವರ್ಷಗಳಲ್ಲೇ ಅತಿ ತಾಪಮಾನ ಹೊಂದಿದ್ದವು ಎಂಬುದನ್ನು ಗಮನಿಸಿದರೆ, ಈ ಬರದ ಆರಂಭ ಆಗಲೇ ಆಗಿತ್ತು ಎಂಬುದನ್ನು ಗುರುತಿಸಬಹುದು. ತಾಪಮಾನ ಹೆಚ್ಚಿದಂತೆ ಕಾಡಿನ ಹಸಿರುಹೊದಿಕೆ ಕಡಿಮೆಯಾಗಿ, ಜೀವವೈವಿಧ್ಯ ಕುಸಿದು, ಮಳೆಚಕ್ರದಂತಹ ಪರಿಸರದ ಪ್ರಕ್ರಿಯೆಗಳೇ ಪಲ್ಲಟಗೊಳ್ಳುತ್ತಿವೆ. ಮೇಲ್ಮಣ್ಣಿನ ಸಂರಚನೆ ಧ್ವಂಸಗೊಂಡು, ಪರೋಪಕಾರಿ ಸೂಕ್ಷ್ಮಾಣುಜೀವಿಗಳೆಲ್ಲ ನಾಶವಾಗಿ, ಪ್ರಕೃತಿಯಲ್ಲಿ ಹುದುಗಿದ್ದ ರೋಗಕಾರಕ ಸೂಕ್ಷ್ಮಾಣುಜೀವಿಗಳು ಮುನ್ನೆಲೆಗೆ ಬರುತ್ತಿವೆ. ಪರಾಗಸ್ಪರ್ಶ, ಬೀಜಪ್ರಸರಣದಂತಹ ಪಾರಿಸರಿಕ ಸೇವೆಗಳು ಕುಸಿದು, ಕೃಷಿ ಸಸ್ಯಗಳ ಬೆಳವಣಿಗೆ ಹಾಗೂ ಇಳುವರಿ ಕುಸಿಯುತ್ತಿದೆ. ಹವಾಮಾನ ಬದಲಾವಣೆಗೆ ಕೃಷಿ ಕ್ಷೇತ್ರ ಬಲಿಯಾಗುತ್ತಿರುವ ಪರಿಯಿದು.

ಅಂದರೆ, ಬರ ಎಂಬುದು ಮಳೆ ಕೊರತೆಯಷ್ಟೇ ಅಲ್ಲ; ಸ್ಥಳೀಯ ಪ್ರಕೃತಿನಾಶ ಹಾಗೂ ಜಾಗತಿಕ ಹವಾಮಾನ ಬದಲಾವಣೆಗಳೆರಡೂ ಜೊತೆಯಾಗಿ ಸೃಷ್ಟಿಸಿರುವ ಗಂಭೀರ ಪರಿಸ್ಥಿತಿ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದನ್ನು ಸಂಶೋಧನೆಗಳು ನಿರೂಪಿಸುತ್ತಿವೆ. ದೇಶದ ಆರ್ಥಿಕತೆಯ ಮೇಲೆ ಇದು ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಕುರಿತು, ಕೇಂದ್ರ ಸರ್ಕಾರ ಪ್ರತಿವರ್ಷ ಪ್ರಕಟಿಸುವ ‘ಆರ್ಥಿಕ ಸಮೀಕ್ಷೆ ವರದಿ’ಗಳು ಎಚ್ಚರಿಸುತ್ತಲೂ ಇವೆ. ಭಾರತದ ರಿಸರ್ವ್ ಬ್ಯಾಂಕ್ ಅಂತೂ, ಹದಗೆಡುತ್ತಿರುವ ಪರಿಸರ ಪರಿಸ್ಥಿತಿಯು ಕೃಷಿಯ ಉತ್ಪಾದನೆಯನ್ನು ಶೇ 25ರಷ್ಟು ಕುಂಠಿತಗೊಳಿಸುತ್ತಿರುವುದು ಹಾಗೂ ದೇಶದ ಜಿಡಿಪಿಯ ಶೇ 3ರಿಂದ 4ರಷ್ಟು ಭಾಗವನ್ನೇ ಕಸಿದುಕೊಳ್ಳುತ್ತಿರುವುದನ್ನು ಇತ್ತೀಚಿನ ವರದಿಯಲ್ಲಿ ತಿಳಿಸಿದೆ!

ಇವೆಲ್ಲವುಗಳಿಂದಾಗಿ, ಕೃಷಿ ಉತ್ಪಾದನೆಯು ದೇಶದ ಒಟ್ಟು ಜಿಡಿಪಿಯ ಶೇ 15ಕ್ಕೆ ಈಗಾಗಲೇ ಕುಸಿದಿರುವುದನ್ನು, ಮೊನ್ನೆಯ ಸಂಸತ್ ಅಧಿವೇಶನದಲ್ಲಿ ಕೇಂದ್ರ ಕೃಷಿ ಸಚಿವರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ ಬರದ ಬವಣೆಯೂ ಜೊತೆಯಾದರೆ, ಕೃಷಿ ಉತ್ಪಾದನೆ ಇನ್ನೆಷ್ಟು ಆಳಕ್ಕೆ ಕುಸಿಯಬಹುದು? ದೇಶದ ಶೇ 60ರಿಂದ 65ರಷ್ಟು ಜನತೆ ಈಗಲೂ ಕೃಷಿ ಆರ್ಥಿಕತೆಯನ್ನೇ ಆಧರಿಸಿರುವಾಗ, ಇದು ಎಷ್ಟು ಆತಂಕಕಾರಿ ಬೆಳವಣಿಗೆಯಲ್ಲವೇ?

ಸರ್ಕಾರಕ್ಕೆ ಈ ಸಮಸ್ಯೆಯ ಆಳ–ಅಗಲ ಅರ್ಥವಾದರೆ ಮಾತ್ರ ಸೂಕ್ತ ಪರಿಹಾರಗಳು ಕಾಣಬಲ್ಲವು. ತಕ್ಷಣದ ಅಗತ್ಯವಿರುವ ನೀರು, ಮೇವು, ಆಹಾರ ಸಾಮಗ್ರಿಯಂತಹವುಗಳನ್ನು ಪೂರೈಸುವಂತೆ ಸ್ಥಳೀಯ ಸರ್ಕಾರಗಳನ್ನು ಚುರುಕುಗೊಳಿಸಬೇಕು. ಚುನಾಯಿತ ಪ್ರತಿನಿಧಿಗಳಿಲ್ಲದೆ ಸೊರಗಿರುವ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯ ಅಧಿಕಾರಿಶಾಹಿಯನ್ನು ಎಚ್ಚರಿಸಬೇಕಿದೆ. ಪ್ರೋತ್ಸಾಹಧನ ಯೋಜನೆಗಳಲ್ಲೇ ಕಳೆದುಹೋಗಿರುವ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ರೈತರ ನೆರವಿಗೆ ಧಾವಿಸುವಂತೆ ಚುರುಕು ಮುಟ್ಟಿಸಬೇಕಿದೆ. ಇನ್ನು, ಕೆರೆ ಹೂಳೆತ್ತುವುದು, ಮೇವಿನಬೆಳೆ ಬೆಳೆಸುವುದು, ಜಲಾನಯನ ಅಭಿವೃದ್ಧಿ, ಹನಿ ನೀರಾವರಿ ವಿಸ್ತರಣೆ, ಗುಣಮಟ್ಟದ ಸಾವಯವ ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ, ನದಿಪಾತ್ರ ಸಂರಕ್ಷಣೆ
ಯಂತಹ ದೀರ್ಘಕಾಲೀನ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಭವಿಷ್ಯದ ಹಿತ ಕಾಯಬೇಕು. ಈ ಎರಡೂ ಆಯಾಮಗಳ ಕೆಲಸಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಪೂರಕವಾಗಿ ಸ್ಪಂದಿಸಿದರೆ ಮಾತ್ರ ಇದು ಸಾಧ್ಯ.

ನಾಲ್ಕು ದಶಕಗಳ ಹಿಂದೆ ನಾಡು ಇದೇ ತೆರನ ಬರಕ್ಕೆ ತುತ್ತಾಗಿದ್ದಾಗ, ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್ ಮಾಡಿದ ಪ್ರಯತ್ನಗಳನ್ನು ಈಗ ನೆನೆಯಲೇಬೇಕು. ಒಂದೆಡೆ, ಬರ ಪ್ರದೇಶಗಳಲ್ಲಿ ದಿನಂಪ್ರತಿ ನೀರು ಪೂರೈಸುವಂಥ ತುರ್ತು ಜವಾಬ್ದಾರಿ ನಿರ್ವಹಿಸುತ್ತಲೇ, ಬರಕ್ಕೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಪಂಚಾಯತ್‌ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ದೂರದರ್ಶಿತ್ವದ ಕ್ರಮಗಳನ್ನೂ ಅವರು ಕೈಗೊಂಡಿದ್ದರು. ನಜೀರ್ ಸಾಬ್ ಮಾದರಿ ನಮಗೆ ಆದರ್ಶವಾಗಬೇಕಿದೆ.

ಆದರೆ, ಜಾತಿ, ಧರ್ಮದಂತಹ ಭಾವನಾತ್ಮಕ ವಿಷಯಗಳು ಅಥವಾ ಆರ್ಥಿಕತೆ, ಅನುದಾನ, ಜಿಡಿಪಿಯಂತಹ ತಾಂತ್ರಿಕ ಸಂಗತಿಗಳು ಅಥವಾ ಉಚಿತ ಕೊಡುಗೆಯಂತಹ ಜನಪ್ರಿಯ ಸಂಗತಿಗಳು ಮಾತ್ರ ಇಂದಿನ ಸಾರ್ವಜನಿಕ ಚರ್ಚೆಯ ವಸ್ತುಗಳಾಗುತ್ತಿವೆ. ಆ ಮೂಲಕ ‘ಹುಸಿ ಸಂತಸ’ದ ಭ್ರಮೆ ಸೃಷ್ಟಿಸುವಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲ್ಲೀನವಾಗುತ್ತಿವೆ. ಅದರಿಂದ ಹೊರಬಂದು ಬರದ ಬವಣೆಗೆ ವಾಸ್ತವಿಕ ಪರಿಹಾರ ಕಂಡುಕೊಳ್ಳುವತ್ತ ಸರ್ಕಾರಗಳು ಸಾಗಲೆಂದು ಆಶಿಸೋಣ.

ಬರದ ಬಿಸಿಲಿಗೆ ಮುಖವೊಡ್ಡಿ ನಿಂತಿರುವ ಗ್ರಾಮೀಣ ಜನತೆಯನ್ನು ನೋಡುವಾಗ, ಮತ್ತೊಬ್ಬ ನಜೀರ್‌ ಸಾಬರಿಗಾಗಿ ಅವರು ಪ್ರಾರ್ಥಿಸುತ್ತಿದ್ದಾರೆ ಎಂಬಂತೆ ತೋರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT