ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸ್ತ್ರೀ ಸಂಕಟ: ತಾತ್ವಿಕ ಹೋರಾಟ

ಸಂತ್ರಸ್ತೆಯರ ಮುಂದಿನ ಬದುಕು ಹೇಗೆ ಎಂಬ ಪ್ರಶ್ನೆಯು ಸರ್ಕಾರ, ಸಮಾಜವನ್ನು ಕಾಡಬೇಕು
Published 27 ಮೇ 2024, 1:23 IST
Last Updated 27 ಮೇ 2024, 1:23 IST
ಅಕ್ಷರ ಗಾತ್ರ

ಹಾಸನದ ಪೆನ್‍ಡ್ರೈವ್ ಪ್ರಕರಣವು ಈಗ ದೇಶದಾದ್ಯಂತ ಹರಡಿದ ಸುದ್ದಿಯಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಈ ಪ್ರಕರಣಕ್ಕೆ ಅಂಟಿಕೊಂಡ ಅನೇಕ ಆಯಾಮಗಳು ಅನಾವರಣಗೊಳ್ಳುತ್ತಿವೆ. ಸರಳತೆಗೆ ಜಟಿಲತೆಯನ್ನು ತರುವ, ಸ್ಪಷ್ಟತೆಗೆ ಅಸ್ಪಷ್ಟತೆಯ ಹುಳ ಬಿಡುವ ಪ್ರಯತ್ನಗಳು ನಡೆಯುತ್ತಿವೆ. ಇವು ಪ್ರಜ್ಞಾಪೂರ್ವಕ ಪ್ರಯತ್ನಗಳು. ಹೀಗಾಗಿ, ಮಹಿಳಾ ದೌರ್ಜನ್ಯದ ಪ್ರಕರಣವು ಪಕ್ಷ ರಾಜಕೀಯ, ವ್ಯಕ್ತಿ ರಾಜಕೀಯ, ಕುಟುಂಬ ರಾಜಕೀಯ ಹಾಗೂ ಜಾತಿ ನಾಯಕತ್ವದ ಆರೋಪ- ಪ್ರತ್ಯಾರೋಪದ ಆಯಾಮಗಳನ್ನು ಪಡೆದುಕೊಂಡಿದೆ.

ಮಹಿಳೆಯರನ್ನು ಬಳಸಿಕೊಂಡು ವಿಡಿಯೊ ಮಾಡಿಕೊಂಡ ಪ್ರಕರಣಕ್ಕಿಂತ ಮಿಗಿಲಾಗಿ ಕೆಲವರ ನಡುವೆ ನಡೆದ ಮಾತುಕತೆಯ ಆಡಿಯೊಗಳು ಸದ್ದು ಮಾಡುತ್ತಿವೆ. ಆಡಿಯೊಗಳಿಗೆ ವಿಡಿಯೊಗಳನ್ನು ಹತ್ತಿಕ್ಕುವ ಶಕ್ತಿ ಬಂದು, ಇಡೀ ಪ್ರಕರಣದ ಕೇಂದ್ರ ಕಾಳಜಿ ಕಳೆದುಹೋಗದಂತೆ ನೋಡಿಕೊಳ್ಳುವುದು ಈಗ ಮುಖ್ಯವಾಗಿದೆ.

ತನಿಖೆಯ ಕುರಿತು ಕೂಡ ರಾಜಕೀಯ ವರಸೆಯೇ ವ್ಯಕ್ತವಾಗುತ್ತಿದೆ. ನಮ್ಮ ‘ವಿಶೇಷ ತನಿಖಾ ತಂಡ’ವೇ ಸಮರ್ಥವಾಗಿದೆ ಎಂದು ಆಡಳಿತ ಪಕ್ಷವು ಸಮರ್ಥಿಸಿ ಕೊಂಡರೆ, ವಿರೋಧ ಪಕ್ಷಗಳು ಸಿಬಿಐಗೆ ಒಪ್ಪಿಸಿ ಎಂದು ಒತ್ತಾಯಿಸುತ್ತಿವೆ. ರಾಜ್ಯ ಸರ್ಕಾರಕ್ಕೆ ವಿಶೇಷ ತನಿಖಾ ತಂಡದ ಮೂಲಕ ಕೆಲವರನ್ನು ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರವಿದೆಯೆಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸಿಬಿಐಗೆ ವಹಿಸಿದರೆ ಕೇಂದ್ರ ಸರ್ಕಾರದ ನೆರವಿನಿಂದ ಪ್ರಕರಣವನ್ನು ಮುಚ್ಚಿಹಾಕುವಂತೆ ಮಾಡಲಾಗುತ್ತದೆ ಎಂಬ ಆರೋಪವು ಆಡಳಿತ ಪಕ್ಷ ಹಾಗೂ ಸರ್ಕಾರದ್ದಾಗಿದೆ.

ಈ ಆರೋಪ- ಪ್ರತ್ಯಾರೋಪಗಳಲ್ಲಿ ಯಾರು ಪೆನ್‍ಡ್ರೈವ್ ಮಾಡಿಸಿದರು ಮತ್ತು ಹಂಚಿಸಿದರು ಎಂಬ ವಿಷಯವು ಮುಖ್ಯವಾಗುತ್ತಿದೆ. ಹೀಗೆ ಜಿದ್ದಿನ ಜಗಳಕ್ಕೆ ಬಿದ್ದವರ ಮಾತುಗಳಲ್ಲಿ ಮೂಲತಃ ಮುಖ್ಯವಾದ ಮಹಿಳಾ ದೌರ್ಜನ್ಯದ ವಿಷಯ ಅನಿವಾರ್ಯವಾಗಿ ಅಲ್ಲಲ್ಲೇ ಪ್ರಸ್ತಾಪವಾಗುತ್ತದೆಯಾದರೂ ಸರಳ ಗುರಿಯನ್ನು ಪಡೆಯಬೇಕಾಗಿದ್ದ ಪ್ರಕರಣವು ಜಟಿಲ ಜೇಡರ ಬಲೆಯಾಗಿ ಕಾಣುತ್ತಿದೆ. ನೇರ ಗುರಿಯ ಹಾದಿಯಲ್ಲಿ ಕಲ್ಲು ಮುಳ್ಳುಗಳು ಕೆಣಕುತ್ತಿವೆ.

ಹಾಗಾದರೆ ಪೆನ್‍ಡ್ರೈವ್ ಮಾಡಿಸಿದವರು ಮತ್ತು ಹಂಚಿದವರು ಯಾರೆಂದು ಪತ್ತೆ ಹಚ್ಚಬಾರದೇ ಎಂದು ಕೆಲವರು ಪ್ರಶ್ನಿಸಬಹುದು. ನಿಜ, ಮಹಿಳೆಯರ ಮುಖಗಳನ್ನು ಬಯಲು ಮಾಡಿದವರನ್ನು ಪತ್ತೆ ಹಚ್ಚುವುದೂ ತನಿಖೆಯ ಒಂದು ಭಾಗವಾಗಲಿ. ಆದರೆ ಈಗ ಒಂದು ಆದ್ಯತೆಯಾಗಬೇಕಾದದ್ದು ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ದೂರುಗಳನ್ನು ಆಧರಿಸಿದ ತನಿಖೆ. ಈ ತನಿಖೆಯು ತನಗೆ
ಎದುರಾಗುತ್ತಿರುವ ಅನ್ಯ ವಿವಾದಗಳನ್ನು ಮೀರಿ ತಾರ್ಕಿಕ ಅಂತ್ಯ ಕಾಣಬೇಕಾಗಿದೆ.

ಹಾಸನದ ಈ ಪ್ರಕರಣದ ಮೂಲಕ ನಾವು ಒಂದು ತಾತ್ವಿಕ ಆಯಾಮವನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ.
ದೌರ್ಜನ್ಯವೆಸಗಿ ಚಿತ್ರೀಕರಿಸಿಕೊಂಡ ವ್ಯಕ್ತಿಯೂ ಪುರುಷ, ಪೆನ್‌ಡ್ರೈವ್ ರೂವಾರಿಗಳೂ ಪುರುಷರು. ಪೆನ್‌ಡ್ರೈವ್‌ ಕುರಿತು ಆಡಿಯೊ ಹೊರಬಿಟ್ಟು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದವರೂ ಪುರುಷರು. ಹೀಗಾಗಿ ‘ಪೆನ್‍ಡ್ರೈವ್’ ಎನ್ನುವುದು ಪುರುಷಾಧಿಕಾರದ ಒಂದು ಪ್ರತೀಕವಾಗಿದೆ. ನಮ್ಮ ಸಾಮಾಜಿಕ ಸಂರಚನೆಯಲ್ಲಿ ಆರ್ಥಿಕ ನಿಯಂತ್ರಣ ಸಾಧಿಸಿದ ‘ಪುರುಷ’ನು ಮಹಿಳೆಯರನ್ನು ಅಧೀನ ಆಟಿಕೆಯಾಗಿ ಬಳಸಿಕೊಳ್ಳುವ ಅಧಿಕಾರ ಮತ್ತು ಅಹಂಕಾರವನ್ನು ಪಡೆಯುತ್ತಾ ಬಂದಿದ್ದಾನೆ. ಮಹಿಳಾ ವಿಮೋಚನೆಗಾಗಿ ನಡೆದ ಚಳವಳಿಗಳು ಮತ್ತು ಸುಧಾರಣೆಗಳ ಫಲವಾಗಿ ಪುರುಷಾಧಿಕಾರ ಒಂದಷ್ಟು ಕಡಿಮೆಯಾಗಿದ್ದರೂ ಪೂರ್ಣ ಬದಲಾವಣೆಯಾಗಿಲ್ಲ. ಜೊತೆಗೆ ಆಸ್ತಿ, ಅಂತಸ್ತು, ಅಧಿಕಾರವನ್ನು ಪಡೆದಿದ್ದ ಫ್ಯೂಡಲ್ ಪದ್ಧತಿ ಸಡಿಲ
ಗೊಂಡಿದ್ದರೂ ಪೂರ್ಣ ನಾಶವಾಗಿಲ್ಲ. ನಮ್ಮ ಪ್ರಜಾಪ್ರಭುತ್ವ ಪದ್ಧತಿಯ ಒಳಗೇ ಫ್ಯೂಡಲ್ ಪ್ರವೃತ್ತಿಗಳು ಜಾಗೃತವಾಗಿವೆ. ಹೀಗಾಗಿ, ಪೆನ್‍ಡ್ರೈವ್ ಪ್ರಕರಣವು ವಿಕೃತ ಕಾಮತೃಷೆ ಮಾತ್ರವಾದುದಲ್ಲ. ಬೇಕಾಬಿಟ್ಟಿ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾದ ಮನೋಭೂಮಿಕೆಯಲ್ಲಿ ಗಂಡಾಳಿಕೆಯ ಪುರುಷಪ್ರಧಾನ ಅಹಂಕಾರ ಮತ್ತು ಪಳೆಯುಳಿಕೆಯ ಫ್ಯೂಡಲ್ ಅಧಿಕಾರದ ಅಂಶಗಳು ಅಂತರ್ಗತವಾಗಿವೆ. ಇಡೀ ಪ್ರಕರಣವು ಪುರುಷ ಪ್ರಾಧಾನ್ಯ ದೌರ್ಜನ್ಯವಾಗಿದ್ದು, ಅದರ ಪ್ರತೀಕವಾಗಿ ವಿಡಿಯೊ, ಆಡಿಯೊ, ಆರೋಪ- ಪ್ರತ್ಯಾರೋಪಗಳೆಲ್ಲವನ್ನೂ ಮನಗಾಣಬಹುದಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟದ ಗುರಿಗೊಂದು ಸ್ಪಷ್ಟತೆ ಮತ್ತು ತಾತ್ವಿಕತೆ ಅಗತ್ಯ. ಈ ಪೆನ್‍ಡ್ರೈವ್ ಪ್ರಕರಣದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಒಡ್ಡುವ ಪ್ರತಿರೋಧಕ್ಕೆ ಹಾಸನ ಪ್ರಕರಣವೇ ಈಗಿನ ಮುಖ್ಯ ಗುರಿಯೆನ್ನುವುದು ನಿಜ. ಆದರೆ ಇದು ಒಬ್ಬ ವ್ಯಕ್ತಿಗೆ ಒಡ್ಡುವ ಪ್ರತಿರೋಧ ಮಾತ್ರವಲ್ಲ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಮತ್ತು ಫ್ಯೂಡಲಿಸಂ (ಊಳಿಗಮಾನ್ಯ ಪದ್ಧತಿ) ವಿರುದ್ಧದ ಪ್ರಜಾಸತ್ತಾತ್ಮಕ ತಾತ್ವಿಕ ಹೋರಾಟವೂ ಹೌದು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಇತರ ಕೆಲವು ಪ್ರಕರಣಗಳಲ್ಲಾದ ಬೆಳವಣಿಗೆಯನ್ನು
ಗಮನಿಸಬಹುದು. ಹುಬ್ಬಳ್ಳಿಯ ನೇಹಾ ಎಂಬ ಹೆಣ್ಣುಮಗಳನ್ನು ಅಮಾನುಷವಾಗಿ ಹತ್ಯೆ ಮಾಡಿದಾಗ ಆಕೆ ಕೊಲೆಗಾರನ ಜೊತೆಗಿದ್ದ ಫೋಟೊಗಳನ್ನು ಬಹಿರಂಗಗೊಳಿಸುವ ‘ರಾಜಕೀಯ’ ಮಾಡಲಾಯಿತು. ನೇಹಾ ಮನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸ್ಪರ್ಧೆಗೆ ಬಿದ್ದವರಂತೆ ಭೇಟಿ ಕೊಡುವುದೂ ಒಂದು ರಾಜಕೀಯವೆಂಬ ಅನುಮಾನ ಬಂತು. ಯಾಕೆಂದರೆ ಚುನಾವಣೆ ಸಂದರ್ಭದಲ್ಲಿ ಈ ಹತ್ಯೆ ನಡೆದಿತ್ತು. ಇಲ್ಲಿ ಕೊಲೆಗಾರನ ಜಾತಿ-ಧರ್ಮವನ್ನು ಲೆಕ್ಕಿಸದೆ ಅತ್ಯಂತ ಶೀಘ್ರವಾಗಿ ಶಿಕ್ಷೆ ಕೊಡುವಂತೆ ಮಾಡುವುದು ಆದ್ಯತೆ
ಆಗಬೇಕಿತ್ತು. ಇದೇ ಸಂದರ್ಭದ ಆಸುಪಾಸಿನಲ್ಲಿ ರುಕ್ಸಾನ ಎಂಬ ಹೆಣ್ಣುಮಗಳ ಹತ್ಯೆಯಾದದ್ದು ಮುನ್ನೆಲೆಗೆ ಬರದೆ ಮಸುಕಾಯಿತು. ಇದು ನಮ್ಮ ಕಾಲದ ರಾಜಕೀಯವಿಪರ್ಯಾಸಕ್ಕೊಂದು ಉದಾಹರಣೆ. ಆನಂತರ ಹುಬ್ಬಳ್ಳಿ ಯಲ್ಲಿ ಅಂಜಲಿ ಎಂಬ ಹೆಣ್ಣುಮಗಳ ಕೊಲೆಯಾಯಿತು. ಈ ಕುರಿತು ಮೌಖಿಕವಾಗಿ ದೂರು ನೀಡಿದ್ದರೂ ಪೊಲೀಸರು ಎಚ್ಚರ ವಹಿಸಲಿಲ್ಲ. ಅದಕ್ಕಾಗಿ ಕೆಲವರನ್ನು ಅಮಾನತು ಮಾಡಲಾಯಿತು. ಇಬ್ಬರ ಹತ್ಯೆ ಸಂಬಂಧವಾಗಿ ಆರೋಪಿ ಗಳನ್ನು ಶೀಘ್ರವಾಗಿ ಬಂಧಿಸಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಬುಧ್ಯಾ ಎಂಬ ಯುವತಿಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.ಇದೆಲ್ಲವನ್ನು ಮೆಚ್ಚೋಣ. ಆದರೆ, ತನಿಖೆಯೂ ಬೇಗ ಮುಗಿಯಬೇಕಲ್ಲವೆ? ಶೀಘ್ರ ಶಿಕ್ಷೆಯಾಗಬೇಕಲ್ಲವೆ? ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೊನೆಯಿಲ್ಲವೆ? ಇಂಥ ಸತ್ಯಮೂಲ ಪ್ರಶ್ನೆಗಳನ್ನು ಹಾಸನದ ಪೆನ್‍ಡ್ರೈವ್ ಪ್ರಕರಣದಲ್ಲೂ ಕೇಳಬೇಕಾಗಿದೆ.

ಈ ಪ್ರಕರಣದಲ್ಲಿ ಅತ್ಯಂತ ಸಂಕಟಕರವಾದ ಒಂದು ಪ್ರಮುಖ ಆಯಾಮವಿದ್ದು, ಅದು ಲೈಂಗಿಕ ದೌರ್ಜನ್ಯ ಕ್ಕೊಳಗಾಗಿ ಗಾಸಿಗೊಂಡ ಮಹಿಳೆಯರ ಸ್ಥಿತಿಗತಿಗೆ ಸಂಬಂಧಿಸಿದೆ. ಈ ಪೆನ್‍ಡ್ರೈವ್‌ನಲ್ಲಿ ಅನೇಕ ಮಹಿಳೆಯರನ್ನು ಬಯಲಿಗೆ ತರಲಾಗಿದೆ. ಅಂಥವರು ಎದುರಿಸುತ್ತಿರುವ ಮಾನಸಿಕ ಸಂಕಷ್ಟಗಳು ಅಕ್ಷರಕ್ಕೆ ನಿಲುಕದ ನೋವುಗಳಾಗಿವೆ. ಈ ಮಹಿಳೆಯರು ಸಂತ್ರಸ್ತೆ ಯರಾಗುವುದಕ್ಕೆ ಪ್ರೇರಣೆಗಳು, ಕಾರಣಗಳು ಏನೇ ಇರಲಿ, ಅವರು ಅವಮಾನ, ಪಾಪಪ್ರಜ್ಞೆ, ಪರಕೀಯ ಪ್ರಜ್ಞೆಯ ಸಂಕಟಕ್ಕೆ ಈಡಾಗಿದ್ದಾರೆ. ಗಂಡಸು ಆರೋಪ ಎದುರಿಸುವುದಕ್ಕೂ ಹೆಣ್ಣು ಅವಮಾನಿತವಾಗುವುದಕ್ಕೂ ವ್ಯತ್ಯಾಸವಿದೆ. ಆದ್ದರಿಂದ ಈ ಮಹಿಳೆಯರ ಮುಂದಿನ ಬದುಕು ಹೇಗೆ ಎಂಬ ಪ್ರಶ್ನೆ ಸರ್ಕಾರವನ್ನೂ ಕಾಡಬೇಕು, ಸಮಾಜವನ್ನೂ ಕಾಡಬೇಕು.

ಲೈಂಗಿಕ ದೌರ್ಜನ್ಯದ ವಿರುದ್ಧ ನಡೆಸುವ ನಮ್ಮ ಹೋರಾಟವು ಈ ಮಹಿಳೆಯರ ಸಮಸ್ಯೆಗೆ ಪರಿಹಾರ ಹುಡುಕುವ ಒಂದು ಜವಾಬ್ದಾರಿಯೂ ಆಗಬೇಕು. ಸೂಕ್ತ ಚಿಂತನೆಯ ಮೂಲಕ ಸರ್ಕಾರಕ್ಕೆ ಸಲಹೆಯನ್ನು ಕೊಡಬೇಕು. ಯಾಕೆಂದರೆ ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟವು ಪ್ರಧಾನವಾಗಿ ಗಾಸಿಗೊಂಡ ಮಹಿಳೆಯರ ಪರವಾದ ಹೋರಾಟವೇ ಆಗಿದೆ. ತನ್ಮೂಲಕ ಎಲ್ಲ ದಮನಿತ ಮಹಿಳೆಯರ ಪರವಾದ ದನಿಯೂ ಆಗಿರುತ್ತದೆ. ಪುರುಷ ಪ್ರಣೀತ ಫ್ಯೂಡಲ್ ಪಳೆಯುಳಿಕೆಗೂ ಪ್ರತಿರೋಧ ಒಡ್ಡುತ್ತದೆ. ಇಂಥ ತಾತ್ವಿಕತೆಯನ್ನು ಒಳಗೊಂಡ ಹೋರಾಟ ಸದಾ ಅರ್ಥಪೂರ್ಣವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT