ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಸನಾತನ ಧರ್ಮಕ್ಕೆ ಮೋದಿ ಸವಾಲು?

ವರ್ಣಾಶ್ರಮ ವ್ಯವಸ್ಥೆಯ ನಿಯಮ ಉಲ್ಲಂಘಿಸಿದ ಪ್ರಧಾನಿ
ದಿನೇಶ್ ಅಮಿನ್ ಮಟ್ಟು
Published 26 ಜನವರಿ 2024, 21:37 IST
Last Updated 26 ಜನವರಿ 2024, 21:37 IST
ಅಕ್ಷರ ಗಾತ್ರ

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದು ರಾಮ ಮಂದಿರ ಅಧಿಕೃತವಾಗಿ ಉದ್ಘಾಟನೆ ಗೊಂಡ ನಂತರ, ಐದು ಶತಮಾನಗಳ ವಿವಾದ ಸದ್ಯಕ್ಕೆ ಕೊನೆಗೊಂಡಿದೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ, ವಿವಾದಿತ ನಿವೇಶನದ ಕೆಳಗೆ ಮತ್ತು ಮೇಲೆ ಏನಿತ್ತು, ಆ ಕಟ್ಟಡವನ್ನು ಒಡೆದುಹಾಕಿದ್ದು ಸರಿಯೇ, ತಪ್ಪೇ ಎಂಬಂತಹ ವಿಚಾರಗಳು ಹಿಂದೆಯೇ ಅಪ್ರಸ್ತುತವಾಗಿ ಹೋಗಿದ್ದವು. ಶಂಕರ ಮಠಗಳ ಶಂಕರಾಚಾರ್ಯರು ಎತ್ತಿದ್ದ ಆಕ್ಷೇಪಗಳು ಕೂಡ ಮಂದಿರ ಉದ್ಘಾಟನೆಯ ನಂತರ ರಾಮನಾಮ ಭಜನೆಯಲ್ಲಿ ಲೀನವಾಗಿವೆ. ಆದರೆ, ಸನಾತನ ಧರ್ಮದ ಪ್ರಬಲ ಪ್ರತಿಪಾದಕರಾದ ಸಾಧು ಸಂತರು, ಮಠ ಮಂದಿರಗಳ ಸ್ವಾಮಿಗಳು, ಹಿಂದೂ ಸಮಾಜದ ತಥಾಕಥಿತ ನಾಯಕರೆಲ್ಲರೂ ಉತ್ತರಿಸಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದನ್ನು ಅಯೋಧ್ಯೆಯಲ್ಲಿ ನಡೆದ ಧಾರ್ಮಿಕ ಸಮಾರಂಭ ಹುಟ್ಟುಹಾಕಿದೆ.

ವರ್ಣಾಶ್ರಮ ವ್ಯವಸ್ಥೆಯನ್ನು ಬಲವಾಗಿ ನಂಬಿರುವ ಸನಾತನ ಧರ್ಮದ ಪ್ರಕಾರ, ದೇವಾಲಯಗಳ ಮೂರ್ತಿ ಪ್ರತಿಷ್ಠಾಪನೆಯ ಅಧಿಕಾರ ಇರುವುದು ಬ್ರಾಹ್ಮಣರಿಗೆ ಮಾತ್ರ. ನಾಲ್ಕನೇ ಪಾದದಲ್ಲಿರುವ ಶೂದ್ರರಿಗೆ ಈ ಕಾರ್ಯ ನಿಷಿದ್ಧವಾದುದು ಮಾತ್ರವಲ್ಲ, ಅವರು ದೇವಾಲಯಗಳ ಗರ್ಭಗುಡಿಯನ್ನೂ ಪ್ರವೇಶಿಸುವಂತೆ ಇಲ್ಲ. ಹೊಲಿದ ಬಟ್ಟೆಯನ್ನು ಹಾಕಿಕೊಂಡು ಬಹಳಷ್ಟು ದೇವಾಲಯಗಳಲ್ಲಿ ಒಳಪ್ರವೇಶಿಸುವಂತಿಲ್ಲ. ಸಹಪಂಕ್ತಿ ಭೋಜನಕ್ಕೆ ಕೆಲವೆಡೆ ಅವಕಾಶವೇ ಇಲ್ಲ. ಲಿಖಿತ ಸಂವಿಧಾನವನ್ನು ಒಪ್ಪಿಕೊಂಡ ನಂತರವೂ ಅಲಿಖಿತ ಸಂವಿಧಾನದ ಈ ನಿಯಮಗಳನ್ನು ರೂಢಿಯಲ್ಲಿ ಬ್ರಾಹ್ಮಣರು ಮಾತ್ರವಲ್ಲ, ಬಹುತೇಕ ಬ್ರಾಹ್ಮಣೇತರ ಹಿಂದೂಗಳು ಕೂಡ ಶ್ರದ್ಧಾಭಕ್ತಿಯಿಂದ ಪಾಲಿಸುತ್ತಾ ಬರುತ್ತಿದ್ದಾರೆ.

ದೇಶದ 140 ಕೋಟಿ ಜನರನ್ನು ಸಾಕ್ಷಿಯಾಗಿ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕೈಯಾರೆ ನೆರವೇರಿಸುವ ಮೂಲಕ, ವರ್ಣಾಶ್ರಮ ವ್ಯವಸ್ಥೆಯ ಎಲ್ಲ ನಿಯಮಗಳನ್ನು ಒಂದೇ ಏಟಿಗೆ ಹೊಡೆದು ಹಾಕಿದ್ದಾರೆ. ಹಿಂದುಳಿದ ಗಾಣಿಗ ಜಾತಿಗೆ ಸೇರಿರುವ ನರೇಂದ್ರ ದಾಮೋದರದಾಸ್‌ ಮೋದಿಯವರು ಗರ್ಭಗುಡಿಯನ್ನು ಪ್ರವೇಶಿಸಿದ್ದು ಮಾತ್ರವಲ್ಲ, ತಾವೇ ಯಜಮಾನರಾಗಿ ಪೂಜಾ ಕಾರ್ಯಕ್ರಮದಲ್ಲಿ ಅರ್ಚಕರ ಜೊತೆ ಕೂತು, ಬಾಲರಾಮನ ಮೂರ್ತಿಯನ್ನು ಸ್ಪರ್ಶಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಅರ್ಚಕರ ಸಮ್ಮುಖದಲ್ಲಿ ಅವರಿಗಿಂತ ತುಸು ಎತ್ತರದ ಪೀಠದಲ್ಲಿ ನಿಂತು ಪ್ರತಿಷ್ಠಾಪನೆಯ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ವಿಪರ್ಯಾಸವೆಂದರೆ, ನರೇಂದ್ರ ಮೋದಿ ಅವರು ಯಾವ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿದರೋ ಆ ಶ್ರೀರಾಮಚಂದ್ರನೇ ವರ್ಣಾಶ್ರಮ ವ್ಯವಸ್ಥೆಯ ಪ್ರಬಲ ಪ್ರತಿಪಾದಕ. ಮೋಕ್ಷ ಪ್ರಾಪ್ತಿಗಾಗಿ ಬೇಡರ ಕುಲದ ಶೂದ್ರ ಶಂಬೂಕ ನಡೆಸುತ್ತಿದ್ದ ತಪಸ್ಸಿನಿಂದಾಗಿ ಬ್ರಾಹ್ಮಣ ಕುಟುಂಬವೊಂದರ ಮಗು ಸತ್ತು ಹೋಯಿತು ಎಂಬ ಸಿಟ್ಟಿನಿಂದ ಶಂಬೂಕನ ತಲೆಯನ್ನೇ ಕಡಿದವನು ಶ್ರೀರಾಮಚಂದ್ರ. ನೂರು ವರ್ಷಗಳ ಹಿಂದೆ ಕೇರಳದ ಈಳವ ಸಮುದಾಯದ ನಾರಾಯಣ ಗುರುಗಳು ಶಿವಗಿರಿಯಲ್ಲಿ ಶಿವಲಿಂಗವನ್ನು ಕೈಯಿಂದಲೇ ಪ್ರತಿಷ್ಠಾಪಿಸಿ ವರ್ಣಾಶ್ರಮ ವ್ಯವಸ್ಥೆಗೆ ಸವಾಲು ಹಾಕಿದ್ದರು. ಸನಾತನ ಧರ್ಮದ ಬೆಂಬಲಿಗರು ನಾರಾಯಣ ಗುರುಗಳನ್ನು ವ್ಯಕ್ತಿಯಾಗಿ ತಿರಸ್ಕರಿಸದೇ ಇದ್ದರೂ ಇಂದಿಗೂ ಗುರುಗಳ ಚಿಂತನೆಯನ್ನು ಪುರಸ್ಕರಿಸಿಲ್ಲ.

ದೇವಾಲಯಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಂಪೂರ್ಣವಾಗಿ ತಮ್ಮ ಪರಮಾಧಿಕಾರ ಎಂದು ಬ್ರಾಹ್ಮಣ ಅರ್ಚಕರು ಬಲವಾಗಿ ನಂಬಿದ್ದಾರೆ. ದೇಶದಲ್ಲಿ ನಿತ್ಯ ನಡೆಯುವ ನೂರಾರು ದೇವಾಲಯಗಳ ಗರ್ಭ ಗುಡಿಯ ದೇವ-ದೇವತೆಗಳ ಪ್ರತಿಷ್ಠಾಪನೆಯನ್ನು ಅವರೇ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾತ್ರ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ದೇವಾಲಯಗಳಲ್ಲಿ ಎಲ್ಲ ಜಾತಿಗೆ ಸೇರಿರುವ, ಆಗಮಶಾಸ್ತ್ರದಲ್ಲಿ ತರಬೇತಿ ಪಡೆದಿರುವ ಅರ್ಚಕರನ್ನು ನೇಮಿಸಲಾಗಿದೆ. ಸರ್ಕಾರದ ಈ ನಿರ್ಧಾರ ಕೂಡ ನ್ಯಾಯಾಲಯದ ಅಂಗಳದಲ್ಲಿದೆ. ಕೇರಳದಲ್ಲಿ ನಾರಾಯಣ ಗುರುಗಳು ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸಿ, ಪರ್ಯಾಯವಾಗಿ ಶೂದ್ರರಿ ಗಾಗಿಯೇ ದೇವಾಲಯಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲ ಅಲ್ಲಿ ಶೂದ್ರ ಅರ್ಚಕರನ್ನು ನೇಮಿಸಿದ್ದರು. ಈ ಅರ್ಚಕರ ತರಬೇತಿಗೆ ‘ಬ್ರಹ್ಮಸಂಘ’ವನ್ನು ಪ್ರಾರಂಭಿಸಿದ್ದರು. ಹೀಗಿದ್ದರೂ ಅವರು ಸ್ಥಾಪಿಸಿರುವ ದೇವಾಲಯಗಳಲ್ಲಿಯೂ ಈಗ ಬ್ರಾಹ್ಮಣ ಅರ್ಚಕರ ಪ್ರವೇಶವಾಗಿದೆ.

ಕಾನೂನಿನ ಭಯದಿಂದಾಗಿ ಇಂದು ದೇವಾ ಲಯಗಳಿಗೆ ಶೂದ್ರರು ಮತ್ತು ದಲಿತರ ಪ್ರವೇಶಕ್ಕೆ ಅವ ಕಾಶ ನೀಡಲಾಗಿದ್ದರೂ ಅವರಿಗೆ ಗರ್ಭಗುಡಿಯನ್ನು ಪ್ರವೇಶಿಸುವ ಮತ್ತು ದೇವರಮೂರ್ತಿಯನ್ನು ಸ್ಪರ್ಶಿಸಿ ಪೂಜಿಸುವ ಅಧಿಕಾರ ಇಲ್ಲ. ಈ ದೇವಾಲಯಗಳಲ್ಲಿರುವ ಅರ್ಚಕರು ಇಂದಿಗೂ ಭಕ್ತರ ಕೈಗಳನ್ನು ಮುಟ್ಟದೆ ದೂರದಿಂದಲೇ ಪ್ರಸಾದವನ್ನು ಕೊಡುತ್ತಿರುತ್ತಾರೆ.

ಕುರುಬ ಸಮುದಾಯದ ಕನಕದಾಸನಿಗೆ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ನಿರಾಕರಿಸಿದ್ದ ಉಡುಪಿಯ ಶ್ರೀಕೃಷ್ಣ ಮಠ ಈಗಲೂ ವರ್ಣಾಶ್ರಮ ವ್ಯವಸ್ಥೆಯನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದೆ. ಅಲ್ಲಿ ಈಗಲೂ ಪಂಕ್ತಿಭೇದ ಅನುಸರಿಸಲಾಗುತ್ತಿದೆ. ಇಂತಹ ಧರ್ಮ ಕರ್ಮಠ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು, ಮೋದಿಯವರ ಹೆಗಲಿಗೆ ಹೆಗಲು ತಾಗಿಸಿ ನಿಂತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಂದರೆ ಅವರು, ಶೂದ್ರರು ಕೂಡ ದೇವಾಲಯಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಯನ್ನು ಕೈಯಾರೆ ಮಾಡಬಹುದು ಎಂದು ಒಪ್ಪಿಕೊಂಡಿದ್ದಾರೆಯೇ?

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪುಣ್ಯಕಾರ್ಯಕ್ಕಾಗಿ ತಾವು 11 ದಿನಗಳ ಕಠಿಣ ವ್ರತ ಆಚರಿಸಿ ದ್ದಾಗಿಯೂ ಮೋದಿ ಹೇಳಿಕೊಂಡಿದ್ದರು. ಇದರ ಅರ್ಥ ದೇವಾಲಯಗಳ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೇರ ವಾಗಿ ಪಾಲ್ಗೊಳ್ಳಲು ಜಾತಿ-ವರ್ಣ ಮುಖ್ಯವಲ್ಲ, ವ್ರತ, ನೇಮ, ನಿಷ್ಠೆಗಳಷ್ಟೇ ಮುಖ್ಯ ಎಂದಾಯಿತು. ಅವರ ಈ ನಡೆಯನ್ನೇ ಅನುಸರಿಸಿ ಮುಂದಿನ ದಿನಗಳಲ್ಲಿ, ಶೂದ್ರ ವರ್ಗಕ್ಕೆ ಸೇರಿರುವ ಮುಖ್ಯಮಂತ್ರಿಗಳು, ಸಚಿವರು, ವಿವಿಧ ಸಮುದಾಯಗಳ ನಾಯಕರು ಕೈಯಾರೆ ದೇವಸ್ಥಾನಗಳಲ್ಲಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಸಿದರೆ ಸನಾತನ ಧರ್ಮದ ಪ್ರತಿಪಾದಕರು ಒಪ್ಪಿಕೊಳ್ಳುವರೇ?

ಇವೆಲ್ಲಕ್ಕಿಂತಲೂ ಮುಖ್ಯವಾದುದು, ಇಂದು ದೇಶದ ಸಮಸ್ತ ಹಿಂದೂ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯೆಂದು ಹೇಳಿಕೊಳ್ಳುತ್ತಿರುವ ಆರ್‌ಎಸ್ಎಸ್ ನಿಲುವೇನು ಎಂಬುದು. ಮನುಧರ್ಮವನ್ನು ಈಗಲೂ ಪ್ರಬಲವಾಗಿ ಪ್ರತಿಪಾದಿಸುವ ಮತ್ತು ಗುಪ್ತವಾಗಿ ವರ್ಣಾಶ್ರಮ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬರುತ್ತಿರುವ ಆರ್‌ಎಸ್ಎಸ್, ರಾಜಕೀಯ ಒತ್ತಡ ಮತ್ತು ಅನಿವಾರ್ಯ ಕಾರಣಗಳಿಂದಾಗಿ, ಹಿಂದುಳಿದ ಮತ್ತು ದಲಿತ ನಾಯಕರನ್ನು ಬಿಜೆಪಿಯೊಳಗೆ ಬೆಳೆಸುವುದನ್ನು ವಿರೋಧಿಸಲು ಹೋಗಿಲ್ಲ. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಯಾವುದೇ ಸುಧಾರಣಾ ಕ್ರಮಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿರೋಧಿಸುತ್ತಾ ಬಂದಿದೆ. ‘ಹಿಂದೂಗಳೆಲ್ಲರೂ ಒಂದು’ ಎಂದು ಹಿಂದಿನ ನೂರು ವರ್ಷಗಳಿಂದ ಘೋಷಣೆ ಕೂಗುತ್ತಾ ಬಂದಿರುವ ಆರ್‌ಎಸ್ಎಸ್‌ನಲ್ಲಿ ಇಂದಿಗೂ ಶೂದ್ರ ಸಮುದಾಯದವರು ಸರಸಂಘ ಚಾಲಕರಾಗಿಲ್ಲ, ಸಂಘಟನೆಯ ಯಾವ ಪ್ರಮುಖ ಸ್ಥಾನಗಳಲ್ಲೂ ಶೂದ್ರರಿಗೆ ಅವಕಾಶ ನೀಡಲಾಗಿಲ್ಲ. ಶೂದ್ರರೇನಿದ್ದರೂ ಬಜರಂಗದಳ, ಜಾಗರಣ ವೇದಿಕೆಯಂತಹ ಹೊಡಿಬಡಿ ಸಂಘಟನೆಗಳಿಗೆ ಸೀಮಿತ.

ಈ ರೀತಿ ಹಿಂದೂ ಮೂಲಭೂತವಾದವನ್ನೇ ಉಸಿರಾಡುತ್ತಾ ಬಂದಿರುವ ಆರ್‌ಎಸ್ಎಸ್, ನೂರು ವರ್ಷ ಪೂರ್ಣಗೊಳಿಸುವ ಈ ಸಂದರ್ಭದಲ್ಲಿ ತನ್ನ ವಿಚಾರಧಾರೆಯನ್ನು ಬದಲಿಸಿಕೊಂಡಿದೆಯೇ? ಇಲ್ಲವೇ ಮೋದಿಯವರು ರಾಜಕೀಯ ಲಾಭಕ್ಕಾಗಿ ಹಿಂದುತ್ವದ ಮೂಲ ಸಿದ್ಧಾಂತದ ಜೊತೆಯಲ್ಲಿಯೇ ರಾಜಿ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಲಾಗದಷ್ಟು ದುರ್ಬಲವಾಗಿದೆಯೇ? ಮೋದಿಯವರ ರಾಜಕೀಯ ಪ್ರವೇಶ ನಂತರದ 23 ವರ್ಷಗಳ ಅವಧಿಯನ್ನು ಅವಲೋಕಿಸಿದರೆ, ಎರಡನೇ ಅಭಿಪ್ರಾಯವೇ ನಿಜ ಎಂದು ಅನಿಸುತ್ತಿದೆ. ಒಂದು ಕಾಲದಲ್ಲಿ ಬಿಜೆಪಿಯಿಂದ ಪ್ರಧಾನಿ ಇ‍ಲ್ಲವೇ ಮುಖ್ಯಮಂತ್ರಿ ಯಾರಾಗಬೇಕೆಂದು ಆರ್‌ಎಸ್ಎಸ್ ನಿರ್ಧರಿಸುತ್ತಿತ್ತು. ಇಂದು ಅದರ ಸರಸಂಘ ಚಾಲಕ ಯಾರಾಗಬೇಕೆಂದು ನಿರ್ಧರಿಸುವ ಸ್ಥಿತಿಯಲ್ಲಿ ನರೇಂದ್ರ ಮೋದಿ ಅವರಿದ್ದಾರೆ.

ರಾಮ ಮಂದಿರ ಉದ್ಘಾಟನೆಯಿಂದ ಇಡೀ ದೇಶದಲ್ಲಿ ಹಿಂದುತ್ವದ ಪುನರುತ್ಥಾನವಾಗಲಿದೆ ಎಂದು ಸಂಭ್ರಮಿಸುತ್ತಿರುವವರು, ವರ್ಣಾಶ್ರಮ ವ್ಯವಸ್ಥೆಯನ್ನು ಉಲ್ಲಂಘಿಸುವ ಮೂಲಕ ಸನಾತನ ಧರ್ಮಕ್ಕೆ ಮೋದಿ ಅವರು ಹಾಕಿರುವ ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT