ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಅಂಬಾನಿ ಹೊಲೆಸಿದ್ದು

ಆನಂದ
Published 12 ಮಾರ್ಚ್ 2024, 23:47 IST
Last Updated 12 ಮಾರ್ಚ್ 2024, 23:47 IST
ಅಕ್ಷರ ಗಾತ್ರ

‘ಇದೇನ್ರೀ ಹೊಸ ವರಸೆ? ಹೀಗೂ ಉಂಟೆ!’ ಮಡದಿಯ ಉದ್ಗಾರ.

‘ಹೇಗೆ?’ ಎಂದೆ.

‘ಪ್ರೀ ವೆಡ್ಡಿಂಗ್ ಸಮಾರಂಭಕ್ಕೆ ಅತಿಥೀನ ಕರೆದು, ಅವರು ಬಂದ ತಕ್ಷಣ ಅವರನ್ನು ಟೇಲರ್ ಬಳಿ ಕರೆದೊಯ್ಯುವುದು ಅಂದರೆ?’

‘ಪಾಪ, ಆ ಅತಿಥಿ ಬಳಿ ಒಳ್ಳೆಯ ಬಟ್ಟೆ ಇತ್ತೋ ಇಲ್ವೋ ಸಮಾರಂಭಕ್ಕೆ ಧರಿಸಲು’ ಎಂದು ಮಾಮೂಲಿನಂತೆ ನಾನು ಸಮಾಧಾನ ಹೇಳಲು ಹೊರಟೆ.

‘ಅಲ್ರೀ, ಆ ಅತಿಥಿ ಬೇರೆ ಯಾರೂ ಅಲ್ಲ
ಬಿಲ್ ಗೇಟ್ಸ್. ನಮ್ಮ ನಾರಾಯಣಮೂರ್ತಿ
ಅವರಂತೆ ಕೋಟ್ಯಧಿಪತಿ. ಅವರ ಬಳಿ ಒಳ್ಳೆಯ ಬಟ್ಟೆ ಇರೋಲ್ವೆ?’

‘ಯಾರು? ಗೇಟ್ಸೇ...?’ ಎಂದು ಕೇಳಿದೆ. ಅವರು ನನ್ನ ಚಡ್ಡಿ ದೋಸ್ತ್ ಎನ್ನುವಂತೆ.

‘ಹೌದ್ರೀ, ಅವರೇ. ಅಂಬಾನಿ ತಮ್ಮ ಮಗನ ಪ್ರೀ ವೆಡ್ಡಿಂಗ್‌ಗೆ ಬಂದಿದ್ದ ಗೇಟ್ಸ್ ಅವರನ್ನು ಸೀದಾ ಟೇಲರ್ ಬಳಿ ಕರೆದೊಯ್ದರಂತೆ ಭಾರತೀಯ ಡ್ರೆಸ್ ಹೊಲೆಸಲು. ಗೇಟ್ಸ್ ಬಳಿ ಶೇರ್ವಾನಿ, ಜುಬ್ಬ ಎಲ್ಲಿರುತ್ತೆ? ಸೂಟು, ಟೀ ಶರ್ಟ್‌ನಂತಹವು ಇರುತ್ತವೆ. ಏನು ಚೆನ್ನ ಅವನ್ನು ಈ ಸಮಯದಲ್ಲಿ ಹಾಕಿಕೊಳ್ಳುವುದು. ಅವು ಬೋರ್ಡ್ ಮೀಟಿಂಗಿಗೆ ಸರಿ’.

‘ಬಿ ಆ್ಯನ್‌ ಇಂಡಿಯನ್ ವೈಲ್ ಯು ಆರ್ ಇನ್ ಇಂಡಿಯಾ ಎಂಬುದು ಅಂಬಾನಿಗಳ ಮಂತ್ರ ಅಂತ ಕಾಣುತ್ತೆ’.

‘ವ್ಹಾಟ್‌ ಅಂಬಾನಿ ಡಸ್ ಟುಡೆ ಅದರ್ ಕ್ರೋರ್‍ಪತೀಸ್ ಮೆ ಡೂ ಇಟ್ ಟುಮಾರೊ’.

‘ಹೊಸ ಸಂಪ್ರದಾಯ ಹುಟ್ಟುಹಾಕಿದ್ರು ಅಂತ ಕಾಣುತ್ತೆ. ಇನ್ನು ಮುಂದೆ ಲಗ್ನಪತ್ರಿಕೇಲಿ ‘ಆಶೀರ್ವಾದವೇ ಉಡುಗೊರೆ’ ಜತೆಗೆ ‘ಮದುವೆ ಉಡುಪು ನಮ್ಮ ಜವಾಬ್ದಾರಿ’ ಅಂತಲೂ ಪ್ರಿಂಟ್ ಮಾಡಿಸಬಹುದು’.

‘ನಿಮಗೂ ಒಂದು ಇನ್ವಿಟೇಷನ್ ಬಂದಿದ್ರೆ ಚೆನ್ನಾಗಿರ್ತಿತ್ತು ರೀ...’ ಎಂದು ಮಡದಿ ಹೇಳಿದಾಗ ನಾನು ಹೌಹಾರಿದೆ. ನಾನು? ಅಂಬಾನಿ?ಎತ್ತಣಿಂದೆತ್ತ? ತಮಾಷೆಗೂ ಒಂದು ಮಿತಿ ಇರುತ್ತೆ’ ಎಂದೆ.

‘ಹಾಗಾದರೂ ನಿಮಗೆ ಒಂದಿಷ್ಟು ಒಳ್ಳೆ ಬಟ್ಟೆ ಸಿಗ್ತಿತ್ತು, ಅದಕ್ಕೇ ಹೇಳಿದೆ. ಅಂಬಾನಿ ಹೊಲೆಸಿದ್ದು ಅಂತ ಹೇಳಿಕೊಂಡು ನಂತರ ಬೀಗಬಹುದಿತ್ತು’ ಎಂದಳು.

ವ್ಹಾಟ್‌ ಆ್ಯನ್‌ ಐಡಿಯಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT