ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಬೋರ್ಡು, ಬಳಪ!

Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಲೇ ಕೊಟ್ರ, ಸರ್ಕಾರದೋರು ನಿಗಮ, ಮಂಡಳಿ ಹಂಚಿಕಿ ಮಾಡ್ತದಾರಂತೆ, ನೀನು ಪಕ್ಷದ ಕಟ್ಟಾ ಕಾರ್ಯಕರ್ತ ಅಲ್ವ, ನೀನೂ ಹೋಗಿ ಯಾಕೆ ಯಾವುದಾರ ಬೋರ್ಡೋ ಬಳಪಾನೋ ಕೇಳ್ಬಾರ್ದು?’ ದುಬ್ಬೀರ ಕೇಳಿದ.

‘ಅಲ್ಲ, ಅವಕ್ಕೆಲ್ಲ ಎಮ್ಮೆಲ್ಲೆಗಳೇ ಹೊಡೆದಾಡ್ತಾ ಕುಂತಾರೆ, ಇನ್ನು ಈ ಪುಟುಗೋಸಿ ಕೊಟ್ರಂಗೆ ಬೋರ್ಡ್ ಕೊಟ್ಟುಬಿಡ್ತಾರಾ? ನೀನೊಬ್ಬ...’ ಗುಡ್ಡೆ ನಕ್ಕ.

ಕೊಟ್ರನಿಗೆ ಸಿಟ್ಟು ಬಂತು ‘ಲೇ ಗುಡ್ಡೆ, ನೆಟ್ಟಗೆ ಮಾತಾಡು, ಈ ಎಮ್ಮೆಲ್ಲೆಗಳನ್ನ ಗೆಲ್ಲಿಸಿದೋರು ಯಾರಲೆ? ಸರ್ಕಾರ ತಂದೋರ್‍ಯಾರಲೆ? ನಾನು, ನನ್ನಂಥ ಕಾರ್ಯಕರ್ತರು ತಿಳ್ಕಾ. ನ್ಯಾಯವಾಗಿ ನಮಗೇ ಕೊಡ್ಬೇಕು ಅವನ್ನೆಲ್ಲ’ ಎಂದ.

‘ನಿನಗೆ ಕುಡುಕರ ಕುಟುಂಬ ಅಭಿವೃದ್ಧಿ ನಿಗಮ ಅಂತ ಕೊಡಬೋದು ನೋಡಲೆ.
ಎಲೆಕ್ಷನ್‌ನಲ್ಲಿ ರೊಕ್ಕ ಇಸ್ಕಂಡು ಕುಡಿದು
ಮಕ್ಕಂತಿದ್ಯಲ್ಲ’ ತೆಪರೇಸಿ ಕಿಸಕ್ಕೆಂದ.

‘ಅಲ್ಲ, ಕುಡುಕರ ಅಭಿವೃದ್ಧಿ ಓಕೆ, ಕುಟುಂಬದ್ದು ಯಾಕೆ?’ ಮಂಜಮ್ಮನ ಪ್ರಶ್ನೆ.

‘ಯಾಕೆ ಅಂದ್ರೆ ಕುಡುಕರು ಗೊಟಕ್ ಅಂದ್ಮೇಲೆ ಅವರ ಕುಟುಂಬ ನೋಡ್ಕಳಾರು ಯಾರು? ಅವರಿಗೂ ಪರಿಹಾರ, ನೌಕ್ರಿ ಕೊಡ್ಬೇಕು ತಾನೆ? ಜುಜುಬಿ ಆ್ಯಕ್ಸಿಡೆಂಟ್ ಆಗಿ ಸತ್ತೋರಿಗೆಲ್ಲ ಪರಿಹಾರ ಕೊಡ್ತಾರಂತೆ, ಇನ್ನು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟೋ ಕುಡುಕರಿಗೆ ಯಾಕೆ ಪರಿಹಾರ ಕೊಡ್ಬಾರ್ದು?’ ದುಬ್ಬೀರನ ಉತ್ತರ.

‘ಈಗ ಸಿಎಂ, ಡಿಸಿಎಂ ಸೇರಿ ‘ಏಟಿಗೆ ಎದುರೇಟು ಮಂಡಳಿ, ಲೋಕಸಭೆ ಟಾರ್ಗೆಟ್ ನಿಗಮ’ ಅಂತ ಎರಡು ಹೊಸಾವು ಮಾಡಿದಾರಂತೆ, ನಿಂಗ್ಯಾವುದು ಬೇಕಲೆ? ಹೆಂಗೂ ಎಮ್ಮೆಲ್ಲೆಗಳನ್ನ ಗೆಲ್ಸಿದೀಯ, ಈಗ ಎಂಪಿಗಳನ್ನೂ ಗೆಲ್ಸು’ ಗುಡ್ಡೆ ಕೊಟ್ರನ್ನ ಕೇಳಿದ.

‘ನಂಗ್ಯಾವುದೂ ಬ್ಯಾಡ, ನಿಂಗೆ ‘ಗುಮಾನಿ’ ಅನ್ನೋ ಬೋರ್ಡ್ ಕೊಡ್ಸಾಣಾಂತಿದೀನಿ,  ತಗಂತೀಯ?’

‘ಗುಮಾನಿನಾ? ಅಂದ್ರೆ?’

‘ನೀನು ಮೊದ್ಲು ಗುಡ್ಡೆ ಮಾಂಸ ಮಾರ್ತಿದ್ಯೆಲ್ಲ, ಅದ್ಕೆ ನಿಂಗೆ ‘ಗುಡ್ಡೆ ಮಾಂಸ ನಿಗಮ’ ಕೊಡ್ಸಣಾಂತ’ ಕೊಟ್ರನ ತಿರುಗೇಟಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT