ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನರ್ ನೋಟಿಸ್‌!

Published 17 ಮೇ 2024, 20:39 IST
Last Updated 17 ಮೇ 2024, 20:39 IST
ಅಕ್ಷರ ಗಾತ್ರ

‘ಸಾಮಾನ್ಯವಾಗಿ ವ್ಯವಸ್ಥೇಲಿ ಸಾಮಾನ್ಯರು ಕಾರ್ನರ್ ಆಗ್ತಾರೆ. ಆದ್ರೆ ಇತ್ತೀಚೆಗೆ ದೊಡ್ಡ ಮನುಷ್ಯರೆಲ್ಲಾ ಬ್ಲೂ, ಯೆಲ್ಲೋ ಕಾರ್ನರ್ ನೋಟಿಸ್ ತಗೊಳ್ಳೋ ಮಟ್ಟಕ್ಕೆ ಹೋಗವ್ರೆ’ ಎಂದ ಹರಟೆಕಟ್ಟೇಲಿ ಮಾಲಿಂಗ.

‘ಹಂಗೇನಿಲ್ಲಪ್ಪ, ನಮಗೂ ಅವಾಗವಾಗ ಕಾರ್ನರ್ (ಮೂಲೆಗುಂಪು) ಮಾಡಿರೋ ನೋಟಿಸ್ ಬರ್ತಾನೇ ಇರುತ್ತೆ’ ಎಂದ ಗುದ್ಲಿಂಗ.

‘ನಿನಗೂ ಕಾರ್ನರ್ ನೋಟಿಸ್? ನೀನು ಯಾವ ಪೆನ್‌ಡ್ರೈವ್‌ ಮಾಡಿದ್ಯಲೇ!’ ಎಂದ ಕಲ್ಲೇಶಿ.

‘ಪೆನ್‌ಡ್ರೈವ್‌ ಅಲ್ಲಲೇ, ಮನೇಲಿರೋ ಹೆಂಡ್ತಿ
ಅನ್ನೋ ಗನ್‌ಡ್ರೈವೇ ದಿನಕ್ಕೊಂಥರಾ ಕಾರ್ನರ್ ನೋಟಿಸ್ ಕೊಡ್ತಿರ್ತಾಳೆ. ಈಗ ನೋಡು ಬ್ಲೂ ಕಾರ್ನರ್ ನೋಟಿಸ್ ಅಂದ್ರೆ ನೈರುತ್ಯ ಮೂಲೇಲಿರೋ ವಾಷಿಂಗ್ ಮೆಶೀನ್ಗೆ ಬಟ್ಟೆ ಹಾಕಿ ಒಗೆದು ನೀಲಿ ಹಾಕಿ ಇಡ್ಬೇಕು ಅಂತ’.

‘ಓಹೋ ಇದಾ? ಇದು ನಮ್ಮನೇಲೂ ಜಾರೀಲಿದೆ ಬಿಡು. ಗ್ರೀನ್ ಕಾರ್ನರ್ ನೋಟಿಸ್ ಅಂದ್ರೆ ಉತ್ತರಕ್ಕಿರೋ ಕೈತೋಟಕ್ಕೆ ನೀರು ಬಿಡ್ಬೇಕು. ಆರೆಂಜ್ ಕಾರ್ನರ್ ಅಂದ್ರೆ ಪಶ್ಚಿಮದ ಮೂಲೇಲಿರೋ ಕಸದಬುಟ್ಟೀನ ಖಾಲಿ ಮಾಡಿ ಕಾರ್ಪೊರೇಷನ್ ತೊಟ್ಟಿಗೆ ಹಾಕ್ಬೇಕು ಅಂತ ತಾನೆ?’

‘ಎಕ್ಸಾಕ್ಟ್ಲೀ! ಪರ್ಪಲ್ ಕಾರ್ನರ್ ಅಂದ್ರೆ ವಾಯವ್ಯ ಮೂಲೇಲಿರೋ ಟಾಯ್ಲೆಟ್‌ಗೆ ಪರ್ಪಲ್ ಕಲರ್ ಕ್ಲೀನರ್ ಹಾಕಿ ಲಕ ಲಕ ಅಂತ ಮುಖ ಕಾಣೊ ಹಂಗೆ ಚಕಚಕ ತೊಳೀಬೇಕು ಅಂತ’.

‘ರೆಡ್ ಕಾರ್ನರ್ ನೋಟಿಸ್ ಅಂದ್ರೆ ಏನು?’

‘ಅದು ಕೊಡೋದೇ ಬೇಕಿಲ್ಲ, ನೋಡುದ್ರೆ ಗೊತ್ತಾಗುತ್ತೆ. ಕಿಚನ್ ಆಗ್ನೇಯ ಮೂಲೇಲಿ ಸ್ಟೌಗಿಂತ ಜೋರಾಗಿ ಹೆಂಡ್ತಿ ಮುಖ ಧಗಧಗ ಉರೀತಿದೆ ಅಂದ್ರೆ ರೆಡ್ ಕಾರ್ನರ್ ಜಾರಿಯಾಗಿದೆ ಅಂತ’.

‘ಈ ಯೆಲ್ಲೋ ಕಾರ್ನರ್ ನೋಟಿಸೇ ಸ್ವಲ್ಪ ಡೇಂಜರ್! ಯಾಕಂದ್ರೆ ಹೆಂಡ್ತಿಗೆ ಗಂಡ ಎಲ್ಲೋ ಏನೋ ಎಡವಟ್ಟು ಮಾಡ್ತಾನೆ ಅನ್ನೋ ‘ಯೆಲ್ಲೋ’ ಡೌಟ್ ಇದ್ದೇ ಇರುತ್ತೆ. ಪೂರ್ವದ ಬಾಲ್ಕನಿ ಕಿಟಕಿ ಹತ್ರ ಹೂಕುಂಡ ಬಂತು ಅಂದ್ರೆ ಯೆಲ್ಲೋ ಕಾರ್ನರ್ ನೋಟಿಸ್ ಜಾರಿಯಾಗಿದೆ ಅಂತ ಅರ್ಥ’.

‘ಮೊಬೈಲ್ ಕಿತ್ಕೊಂಡು ನಮ್ಮ ಸೀಕ್ರೆಟ್ ನಂಬರ್ ಎಲ್ಲಾ ಬ್ಲಾಕ್ ಮಾಡಿ, ಹೆಂಡ್ತಿ ವಾರ ಮೂಲೆಗೆ ತಳ್ತಾಳಲ್ಲ ಆ ಬ್ಲಾಕ್ ಕಾರ್ನರ್ ನೋಟಿಸೇ ಎಲ್ಲಕ್ಕಿಂತ ಡೇಂಜರ್‍ರು’ ಎಂದ ಪರ್ಮೇಶಿ.

ಎಲ್ಲಾ ಮುಖ ಹುಳ್ಳಗೆ ಮಾಡಿಕೊಂಡು ಹೌದ್ಹೌದು ಎಂದು ತಲೆಯಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT