ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಪೇಸ್ಟ್ ಕಲಹ!

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

‘ರೀ ವಿಷಯ ಗೊತ್ತಾಯ್ತಾ? ಗಂಡ ಹೆಂಡತಿ ಇಬ್ರೂ ಹಲ್ಲುಜ್ಜೋ ಪೇಸ್ಟ್ ವಿಷಯಕ್ಕೆ ಜಗಳ ಆಡ್ಕೊಂಡು ಡೈವೋರ್ಸ್‌ಗೆ ಹಾಕಿದ್ರಂತೆ’ ಪದ್ದಮ್ಮ ಪೀಠಿಕೆ ಹಾಕಿದರು.

‘ಅಯ್ಯೋ, ಇದೇನ್ ಮಹಾ ಬಿಡೇ! ಗಂಡ ಹಲ್ಲೇ ಉಜ್ಜಲ್ಲ ಅಂತ ಒಬ್ಬಾಕೆ ವಿಚ್ಛೇದನ ಕೇಳಿದ್ಲಂತೆ’ ಫ್ಲ್ಯಾಷ್‌ಬ್ಯಾಕ್‍ಗೆ ಹೋದ ಪರ್ಮೇಶಿ.

‘ಮತ್ತೆ ಬಿಡ್ತಾರಾ? ಹಲ್ ಇರೋತನಕ, ಹೆಂಡತಿ ಉದುರಿಸೋತನಕ ಉಜ್ಜಲೇಬೇಕು. ಉಜ್ಜಲ್ಲ ಅಂದ್ರೆ ಹೇಗೆ? ಇದು ಹಾಗಲ್ಲ, ಒಂಥರಾ ವಿಚಿತ್ರ ಕೇಸು. ಗಂಡ ಪೇಸ್ಟ್ ಟ್ಯೂಬ್ ಕೆಳಗಿನಿಂದ ಹಿಸುಕ್ತಾನೆ ಅಂತ ಹೆಂಡ್ತಿ, ಹೆಂಡ್ತಿ ಟ್ಯೂಬ್‍ನ ಕುತ್ತಿಗೆ ಹಿಸುಕ್ತಾಳೆ ಅಂತ ಗಂಡ ಒಬ್ರಿಗೊಬ್ರು ಕಿತ್ತಾಡ್ಕೊಂಡು ಕಟಕಟೇಲಿ ಹೋಗಿ ನಿಂತಿದಾರೆ’.

‘ಆದರೆ ಪೇಸ್ಟ್ ಟ್ಯೂಬ್‍ನ ಕೆಳಗಿಂದ ಹಿಸುಕೋದೇ ನ್ಯಾಯ ತಾನೆ?’

‘ಅದು ಹೇಗ್ರೀ ನ್ಯಾಯ ಆಗುತ್ತೆ? ಕೆಳಗಿಂದ ಒತ್ತುದ್ರೆ ಪೇಸ್ಟೆಲ್ಲಾ ಸೊಯ್ ಅಂತ ಈಚೆ ಬಂದು ವೇಸ್ಟ್ ಆಗಲ್ವಾ?’

‘ಹಾಗಂತ, ಮದುವೆ ಆದಾಗಿಂದ ಕುತ್ತಿಗೆ ಹಿಸುಕಿ ಅಭ್ಯಾಸ ಅಂತ ಅದನ್ನೇ ಗಂಡನ ಮೇಲೂ ಹೇರುದ್ರೆ ಹೇಗೆ? ಅದಕ್ಕೆ ಈ ಪೇಸ್ಟಿನ ತಂಟೆನೇ ಬೇಡ ಅಂತ ದೇಸೀ ಪದ್ಧತೀಲಿ ಮಾವಿನ ಕಡ್ಡಿಲೋ ಬೇವಿನ ಕಡ್ಡಿಲೋ ಉಜ್ಜಿಕೊಳ್ಳೋದೇ ಸರಿ’.

‘ರೀ, ನೀವು ವಿಷಯಾಂತರ ಮಾಡಬೇಡಿ. ಕಡ್ಡಿ ಗುಡ್ಡ ಮಾಡೋ ಗಂಡ ಇದ್ರೆ ಯಾವ ಕಡ್ಡೀಲಿ ಉಜ್ಜುದ್ರೂ ಪ್ರಯೋಜನ ಇಲ್ಲ’.

‘ನೋಡೇ, ವ್ಯವಸ್ಥೆನೇ ಒಂದು ಟೂತ್‍ಪೇಸ್ಟ್ ಟ್ಯೂಬ್ ಇದ್ದ ಹಾಗೆ. ಕಾಲ್ ಒತ್ತಿ ಕಿತ್ಕೊಬೇಕು, ಹೊಟ್ಟೆ ಒತ್ತಿ ಕಕ್ಕುಸ್ಬೇಕು. ಸರಿ, ಈ ದಂಪತಿ ಜಗಳಕ್ಕೆ ಏನು ಪರಿಹಾರ ಸಿಕ್ತಂತೆ?’.

‘ಬೇರೆ ಬೇರೆ ಟೂತ್‍ಪೇಸ್ಟ್ ಟ್ಯೂಬ್ ಬಳಸಿ ಅಂತ ಇಬ್ರೂ ನ್ಯಾಯಾಧೀಶರು ಹೇಳಿದಾರಂತೆ’.

‘ಹಾಗೂ ಜಗಳ ಆಡುದ್ರೆ ಇಬ್ರಿಗೂ ಒಂದೊಂದು ಫೆವಿಕಾಲ್ ಟ್ಯೂಬ್ ಬಳಸಿ ಅಂತ ಹೇಳ್ಬೇಕು. ಅವಾಗ ಬಾಯ್ ಮುಚ್ಕೊಂಡಿರ್ತಾರೆ’ ಎಂದು ನಕ್ಕ ಪರ್ಮೇಶಿ. ಪದ್ದಮ್ಮ ಮುಖ ಊದಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT