ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಲೌಡ್ ಸ್ಪೀಕರು!

Published 7 ಡಿಸೆಂಬರ್ 2023, 23:30 IST
Last Updated 7 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ತೆಪರೇಸಿ ಮನೇಲಿ ಬೆಳ್ಳಂಬೆಳಿಗ್ಗೆ ಸಿಬಿಐ ತನಿಖೆ ಶುರುವಾಗಿತ್ತು. ಹೆಂಡ್ತಿ ಪಮ್ಮಿ ಸೌಟು ಹಿಡಿದು ನಿಂತಿದ್ದಳು. ‘ನಿನ್ನಿ ರಾತ್ರಿ ಹನ್ನೊಂದೂವರಿ ಆದ್ರೂ ಮನಿಗೆ ಬಂದಿರ್ಲಿಲ್ಲ... ಹೇಳಿ, ಎಲ್ಲಿದ್ರಿ?’

ತೆಪರೇಸಿ ತಡವರಿಸಿದ ‘ಅದೂ... ಅಸೆಂಬ್ಲೀಲಿ ಯತ್ನಾಳ್ ಸಾಹೇಬ್ರು ಗರಂ ಆಗಿದ್ರಲ್ಲ...’

‘ನೀವು ತಣ್ಣಗೆ ಮಾಡಾಕೆ ಹೋಗಿದ್ರಾ?’

‘ಅದಲ್ಲಲೆ, ನಮ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅದಾರಲ್ಲ’.

‘ಅವ್ರು ಹೆಂಗಾದ್ರು ಇರ್‍ಲಿ, ನೀವೆಲ್ಲಿದ್ರಿ ಹೇಳಿ’.

‘ಥೋ... ನಂಗೆ ಮಾತಾಡಕಾದ್ರು ಬಿಡೆ. ಅಲ್ಲಿ ‘ಇಂಡಿಯ’ ಸಭೆಗೆ ಶಿವಸೇನೆ, ಟಿಎಂಸಿ ಗೈರು
ಹಾಜರಾಗಿದ್ವಂತೆ’.

‘ನೀವು ಹಾಜರಾತಿ ಹಾಕಾಕೆ ಹೋಗಿದ್ರಾ?’

‘ನಾನ್ಯಾಕೆ ಹೋಗ್ಲಿ? ಇಲ್ಲಿ ಜಮೀರ್ ಅಹ್ಮದ್ ಮಿನಿಸ್ಟ್ರೂ ಅಸೆಂಬ್ಲಿಗೆ ಹೋಗಿಲ್ಲಂತೆ, ಹಂಗಂತ ನಾನು ಹೋಗಾಕಾಗುತ್ತಾ?’

‘ಅದ್ನೇ ಕೇಳ್ತಿರೋದು, ಎಲ್ಲಿ ಹೋಗಿದ್ರಿ ಅಂತ’.

‘ಮಿಚಾಂಗ್ ಚಂಡಮಾರುತ ಭಾರೀ ಜೋರೈತಂತೆ, ನಿನ್ ತರ. ತಮಿಳುನಾಡಿಗೀಗ ಕಾವೇರಿ ನೀರೇ ಬ್ಯಾಡಂತೆ’.

‘ಮಾತು ಮರೆಸಬೇಡಿ, ಈ ಕಾಗಕ್ಕ, ಗುಬ್ಬಕ್ಕನ ಕತಿ ಎಲ್ಲ ಬ್ಯಾಡ’ ಪಮ್ಮಿ ರಾಂಗಾದಳು.

‘ಆತುಬಿಡು, ಅಲ್ಲಿ ಲೋಕಸಭೇಲಿ ಕಾಂಗ್ರೆಸ್‌ ನೋರು, ಇಲ್ಲಿ ಬೆಳಗಾವಿ ಅಧಿವೇಶನದಾಗೆ ಬಿಜೆಪಿಯೋರು ಸಭಾತ್ಯಾಗ ಮಾಡಿದ್ರಂತೆ’.

‘ಅವರಿಗೇನ್ ಕೆಲ್ಸ ಇತ್ತೋ ಪಾಪ, ಸಭಾತ್ಯಾಗ ಮಾಡಿರ್ತಾರೆ, ನಿಮಿಗೇನ್ ಕೆಲ್ಸ ಇತ್ತು ಅದನ್ನ ಹೇಳಿ’.

‘ಈ ಎಲ್ಲ ವಿಷ್ಯದ ಬಗ್ಗೆ ನಾವು ಹರಟೆಕಟ್ಟೆ ಫ್ರೆಂಡ್ಸ್ ಬಾರಲ್ಲಿ ಕುಂತು ಓವರ್ ದ ಪೆಗ್ ಚರ್ಚೆ ಮಾಡ್ತಿದ್ವಿ, ಅದ್ಕೆ ಲೇಟಾತು ಏನೀಗ? ನೀನಿಂಗೆ ತೆಲಿ ತಿಂತಿದ್ರೆ ನಾನೂ ಸಭಾತ್ಯಾಗ ಮಾಡ ಬೇಕಾಗ್ತತಿ ನೋಡು’ ತೆಪರೇಸಿಗೆ ಸಿಟ್ಟು ಬಂತು.

‘ನೀವು ಸಭಾತ್ಯಾಗ ಮಾಡಾಕೆ ಇದು ಅಸೆಂಬ್ಲಿ ಅಲ್ಲ, ನಾನು ಸ್ಪೀಕರೂ ಅಲ್ಲ’.

‘ನೀನು ಸ್ಪೀಕರಲ್ಲ ಅನ್ನೋದು ಗೊತ್ತು...’
‘ಮತ್ತೇನು?’

‘ಲೌಡ್ ಸ್ಪೀಕರು...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT