ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಗಾಂಧಿ- ಮುಂದೆ ಇದೆ ದೊಡ್ಡ ಸವಾಲು

Published 27 ಜೂನ್ 2024, 19:07 IST
Last Updated 27 ಜೂನ್ 2024, 19:07 IST
ಅಕ್ಷರ ಗಾತ್ರ

ಹದಿನೆಂಟನೇ ಲೋಕಸಭೆಯ ವಿರೋಧ ಪಕ್ಷದ ನಾಯಕನ ಹೊಣೆಗಾರಿಕೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವಹಿಸಿಕೊಂಡಿದ್ದಾರೆ. ಇದು ಅವರಿಗೆ ಮತ್ತು ಅವರ ಪಕ್ಷಕ್ಕೆ ದೊಡ್ಡ ಸವಾಲು ಮತ್ತು ಅವಕಾಶ. ರಾಹುಲ್‌ ಅವರ ಎರಡು ದಶಕಗಳ ರಾಜಕೀಯ ಜೀವನದಲ್ಲಿ ಅವರು ವಹಿಸಿಕೊಂಡ ಮೊದಲ ಸಾಂವಿಧಾನಿಕ ಹುದ್ದೆ ಇದು. ಜೊತೆಗೆ, ಕಳೆದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕ ಮೊದಲ ಅವಕಾಶವೂ ಹೌದು. ರಾಹುಲ್‌ ಅವರ ಕುಟುಂಬ ಮತ್ತು ಅದರೊಂದಿಗೆ ಇರುವ ಅವಕಾಶದ ಕಾರಣಕ್ಕೆ ನಾಯಕತ್ವವು ಅವರಿಗೆ ಸಹಜವಾಗಿಯೇ ದಕ್ಕಿದೆ. ಆದರೆ, ಅವರು ಈಗ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಈಗಿನ ರಾಜಕಾರಣವು ಹೆಚ್ಚು ಕಠಿಣವಾಗಿದೆ, ಹೆಚ್ಚು ಶ್ರಮ ಬೇಡುತ್ತಿದೆ ಮತ್ತು ಸಾರ್ವಜನಿಕರ ಸೂಕ್ಷ್ಮ ಪರಿಶೀಲನೆಗೂ ಒಳಪಡುತ್ತಿದೆ. ಹಾಗಾಗಿ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಅವರ ಅಭ್ಯಾಸವು ಇಲ್ಲಿ ಉಪಯೋಗಕ್ಕೆ ಬಾರದು. ಅವರು ಗಂಭೀರವಾದ ರಾಜಕಾರಣಿ ಅಲ್ಲ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು ಮತ್ತು ಸಂಸತ್ತಿನಲ್ಲಿ ಪರಿಣಾಮಕಾರಿ ನಾಯಕ ಎಂಬುದನ್ನು ಸಾಬೀತು ಮಾಡಬೇಕು. ವಿರೋಧ ಪಕ್ಷದ ನಾಯಕನ ಸ್ಥಾನವು ಅವರಿಗೆ ಅಂತಹ ಅವಕಾಶವನ್ನು ಒದಗಿಸಿಕೊಟ್ಟಿದೆ. ರಾಹುಲ್‌ ಅವರು ಸಂಸತ್ತಿನಲ್ಲಿ ಬುಧವಾರ ಭಾಷಣ ಮಾಡಿ, ‘ಭಾರತದ ಜನರ ಧ್ವನಿ’ಯು ಸಂಸತ್ತಿನಲ್ಲಿ ಪ್ರತಿಧ್ವನಿಸಬೇಕು ಎಂದು ಹೇಳಿದ್ದಾರೆ. ಅವರ ಈ ಮಾತು ಇದೊಂದು ಉತ್ತಮ ಆರಂಭ ಎಂಬ ಭರವಸೆ ಮೂಡಿಸಿದೆ. 

ಸಿ.ಎಂ. ಸ್ಟೀಫನ್‌, ಅಟಲ್‌ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್‌ ಅಂಥವರು ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಸ್ಥಾನದ ಗೌರವವನ್ನು ಹೆಚ್ಚಿಸಿದ್ದಾರೆ. ಈ ಸ್ಥಾನದ ಗೌರವ ಇನ್ನಷ್ಟು ಹೆಚ್ಚುವ ರೀತಿಯಲ್ಲಿ ರಾಹುಲ್‌ ಅವರು ಕೆಲಸ ಮಾಡಬೇಕಿದೆ. ಇತ್ತೀಚಿನ ಕೆಲವು ವರ್ಷಗಳನ್ನು ಬಿಟ್ಟರೆ ಪ್ರಬಲವಾದ ವಿರೋಧ ಪಕ್ಷವನ್ನು ಭಾರತದ ಸಂಸತ್ತು ಕಂಡಿದೆ. 2019ಕ್ಕೆ ಹೋಲಿಸಿದರೆ, ಸಂಸತ್ತಿನಲ್ಲಿ ವಿರೋಧ ಪಕ್ಷ ಪ್ರಬಲವಾಗಿದೆ ಮತ್ತು ಸಂಖ್ಯಾಬಲದಲ್ಲಿ ಆಡಳಿತ ಪಕ್ಷದ ಸನಿಹದಲ್ಲಿಯೇ ಇದೆ. ಸಂಸತ್ತಿನ ನಿಯಮಗಳು ಮತ್ತು ಇತರ ಅವಕಾಶ
ಗಳನ್ನು ಬಳಸಿಕೊಂಡು ನೀತಿಗಳು ಮತ್ತು ನಿರ್ಧಾರದ ವಿಚಾರದಲ್ಲಿ ಸರ್ಕಾರವನ್ನು ಉತ್ತರದಾಯಿ
ಯನ್ನಾಗಿ ಮಾಡಬಹುದು. ಈ ಎಲ್ಲದರ ನೇತೃತ್ವವನ್ನು ರಾಹುಲ್‌ ಅವರು ವಹಿಸಿಕೊಳ್ಳಬೇಕಿದೆ. ಅದಕ್ಕಾಗಿ ಅವರು ಸೂಕ್ಷ್ಮ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.

ನಿಯಮಗಳು ಮತ್ತು ಪ್ರಕ್ರಿಯೆಗಳ ಆಳವಾದ ಜ್ಞಾನವನ್ನು ರೂಢಿಸಿಕೊಳ್ಳಬೇಕು. ಸಮಯಸ್ಫೂರ್ತಿಯಿಂದ ವರ್ತಿಸಬೇಕು. ರಾಹುಲ್‌ ಅವರು ಸ್ಥಾನದ ಕಾರಣದಿಂದ ಹಲವು ಸಮಿತಿಗಳ ಸದಸ್ಯತ್ವವನ್ನು ಪಡೆಯುತ್ತಾರೆ. ಮುಖ್ಯ ಚುನಾವಣಾ ಆಯುಕ್ತ, ಚುನಾವಣಾ ಆಯುಕ್ತರು, ಮುಖ್ಯ ಜಾಗೃತ ಆಯುಕ್ತ, ಸಿಬಿಐ ನಿರ್ದೇಶಕ ಮುಂತಾದ ಸಾಂವಿಧಾನಿಕ ಹುದ್ದೆಗಳ ನೇಮಕಾತಿ ಸಮಿತಿಯಲ್ಲಿಯೂ ಅವರು ಇರುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಇವೆಲ್ಲವೂ ಪರಿಣಾಮ ಬೀರಬಲ್ಲ ಸ್ಥಾನಗಳಾಗಿವೆ. ಈ ಅವಕಾಶಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳಬೇಕು. ಸರ್ಕಾರವು ಸರಿದಾರಿಯಲ್ಲಿ ನ್ಯಾಯಯುತವಾಗಿ ಸಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲೆ ಇದೆ. 

ಕಳೆದ ಕೆಲವು ವರ್ಷಗಳಲ್ಲಿ ಸಂಸತ್‌ ಸದನವು ಸಂಘರ್ಷಾತ್ಮಕವಾಗಿಯೇ ಇತ್ತು. ಆಡಳಿತ ಪಕ್ಷವು ಬಲಾಢ್ಯ
ವಾಗಿದ್ದದ್ದು ಮತ್ತು ವಿರೋಧ ಪಕ್ಷವನ್ನು ಗಣನೆಗೇ ತೆಗೆದುಕೊಳ್ಳದಿದ್ದುದು ಮುಖ್ಯವಾಗಿ ಇದಕ್ಕೆ ಕಾರಣಗಳು. ಈ ಬಾರಿಯ ಲೋಕಸಭೆಯಲ್ಲಿಯೂ ವಿರೋಧ ಪಕ್ಷಗಳನ್ನು ಗೌರವದಿಂದ ನಡೆಸಿಕೊಳ್ಳುವ ಯಾವ ಸುಳಿವನ್ನೂ ಸರ್ಕಾರ ನೀಡಿಲ್ಲ. ಸರ್ಕಾರವು ಹಲವು ಕಾರ್ಯಸೂಚಿಗಳನ್ನು ಹೊಂದಿದೆ. ‘ಒಂದು ದೇಶ, ಒಂದು ಚುನಾವಣೆ’, ಕ್ಷೇತ್ರ ಪುನರ್‌ ವಿಂಗಡಣೆಯಂತಹ ಕಾರ್ಯಸೂಚಿಗಳು ಇವುಗಳಲ್ಲಿ ಸೇರಿವೆ. ಇವು ವಿವಾದಾತ್ಮಕ ವಿಚಾರಗಳು. ಈ ವಿಚಾರಗಳಿಗೆ ಸಂಬಂಧಿಸಿದ ಚರ್ಚೆಯು ಸರಿದಿಕ್ಕಿನಲ್ಲಿ ಸಾಗುವಂತೆ ಮಾಡಿ, ಸಕಾರಾತ್ಮಕ ಫಲಿತಾಂಶ ಬರುವಂತೆ ಮಾಡುವಲ್ಲಿ ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಪಾತ್ರವು ನಿರ್ಣಾಯಕವಾದುದು. ಸರ್ಕಾರ ಮತ್ತು ದೇಶವು ವಿರೋಧ ಪಕ್ಷದ ಮಾತನ್ನು ಆಲಿಸುವಂತೆ ಮಾಡುವುದಕ್ಕೆ ಬೊಬ್ಬೆ ಮತ್ತು ಆಕ್ರೋಶಕ್ಕಿಂತ ನಿಯಮಗಳು ಹಾಗೂ ತರ್ಕಬದ್ಧತೆಯೇ ಮುಖ್ಯ ಎಂಬುದನ್ನೂ ಅವರು ತೋರಿಸಿಕೊಡಬಹುದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT