ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಬ್ಯಾಡ್ಮಿಂಟನ್– ಭಾರತದ ಕಿರೀಟಕ್ಕೆ ಮತ್ತೊಂದು ಗರಿ

ಸಂಪಾದಕೀಯ
Published 19 ಫೆಬ್ರುವರಿ 2024, 19:31 IST
Last Updated 19 ಫೆಬ್ರುವರಿ 2024, 19:31 IST
ಅಕ್ಷರ ಗಾತ್ರ

ಭಾರತದ ಬ್ಯಾಡ್ಮಿಂಟನ್ ಅಂಕಣದಲ್ಲಿ ಈಗ ಸಂಭ್ರಮದ ಹೊನಲು ಹರಿಯುತ್ತಿದೆ. ಮಲೇಷ್ಯಾದ ಶಾ ಆಲಂನಲ್ಲಿ ನಡೆದ ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಹಿಳಾ ತಂಡವು ಚಾರಿತ್ರಿಕ ಸಾಧನೆ ಮಾಡಿದೆ. ಇದು, ಒಲಿಂಪಿಯನ್ ಪಿ.ವಿ. ಸಿಂಧು ನಾಯಕತ್ವದ ತಂಡದ ಅಭೂತಪೂರ್ವ ಸಾಧನೆಯಾಗಿದೆ. ಆರು ದಶಕಗಳಿಗೂ ಹೆಚ್ಚಿನ ಇತಿಹಾಸ ಇರುವ ಈ ಟೂರ್ನಿಯಲ್ಲಿ ಭಾರತದ ಪುರುಷ ತಂಡಗಳು ಈವರೆಗೆ ಎರಡು ಬಾರಿ ಕಂಚಿನ ಪದಕ ಗೆದ್ದಿದ್ದವು.

ಆದರೆ ಈಗ ಮಹಿಳೆಯರ ಬಳಗವು ಪುರುಷ ತಂಡಗಳಿಗಿಂತ ಎರಡು ಹೆಜ್ಜೆ ಮುಂದೆ ಸಾಗಿದೆ. ವನಿತೆಯರ ಈ ಗೆಲುವು ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ಹೊಸ ಹುರುಪು ತುಂಬಿದೆ. ಇದೇ ಏಪ್ರಿಲ್‌ನಲ್ಲಿ ನಡೆಯಲಿರುವ ಊಬರ್ ಕಪ್‌ನಲ್ಲಿಯೂ ಭಾರತ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಬ್ಯಾಡ್ಮಿಂಟನ್ ಕ್ರೀಡೆಯ ‘ವಿಶ್ವಕಪ್’ ಎಂದೇ ಊಬರ್ ಕಪ್ ಪ್ರಖ್ಯಾತವಾಗಿದೆ. ಏಷ್ಯಾ ಚಾಂಪಿಯನ್‌ಷಿಪ್‌ ಗೆಲುವಿನಲ್ಲಿ ಉದಯೋನ್ಮುಖ ಆಟಗಾರ್ತಿಯರು ಮಹತ್ವದ ಕಾಣಿಕೆ ನೀಡಿದರು.

ಟೂರ್ನಿಯ ಗುಂಪು ಹಂತದಲ್ಲಿ ಚೀನಾ, ಕ್ವಾರ್ಟರ್‌ ಫೈನಲ್‌ನಲ್ಲಿ ಹಾಂಗ್‌ಕಾಂಗ್, ಸೆಮಿಫೈನಲ್‌ನಲ್ಲಿ ಜಪಾನ್ ಮತ್ತು ಫೈನಲ್‌ನಲ್ಲಿ ಥಾಯ್ಲೆಂಡ್ ತಂಡಗಳ ಎದುರು ಜಯಿಸಿದ್ದು ಸಣ್ಣ ಸಾಧನೆಯೇನಲ್ಲ. ಈ ಬಳಗದಲ್ಲಿ ಸಿಂಧು ಮತ್ತು ಅಶ್ವಿನಿ ಪೊನ್ನಪ್ಪ ಅವರನ್ನು ಬಿಟ್ಟರೆ ಉಳಿದವರೆಲ್ಲರೂ ಹೊಸ ಪ್ರತಿಭೆಗಳೇ. ಅಷ್ಮಿತಾ ಚಲಿಹಾ, ತನಿಷಾ ಕ್ರಾಸ್ಟೊ, ಟ್ರಿಸಾ ಜೊಲಿ, ಅನ್ಮೋಲ್ ಖರ್ಬ್, ಪ್ರಿಯಾ ಕೊಂಜೆಂಗ್‌ಬಾಮ್, ಶ್ರುತಿ ಮಿಶ್ರಾ, ಗಾಯತ್ರಿ ಗೋಪಿಚಂದ್ ಹಾಗೂ ತನ್ವಿ ಶರ್ಮಾ ಅವರು ಈಗ ಗಮನ ಸೆಳೆದಿರುವ ಆಟಗಾರ್ತಿಯರು. ಅದರಲ್ಲೂ ಥಾಯ್ಲೆಂಡ್ ವಿರುದ್ಧದ ಫೈನಲ್‌ ಸುತ್ತಿನ ನಿರ್ಣಾಯಕ ಸಿಂಗಲ್ಸ್‌ ಪಂದ್ಯದಲ್ಲಿ 17 ವರ್ಷದ ಅನ್ಮೋಲ್ ಆಡಿದ ರೀತಿ ಅಮೋಘವಾಗಿತ್ತು. ಆ ಹಣಾಹಣಿಯಲ್ಲಿ ಅವರು ಗೆದ್ದಿದ್ದರಿಂದ ಭಾರತ ಚಾಂಪಿಯನ್ ಆಗಲು ಸಾಧ್ಯವಾಯಿತು.

ಈ ವಿಜಯವು ಭಾರತದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸೈನಾ ನೆಹ್ವಾಲ್ ಅವರು ವೃತ್ತಿಪರ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಈಗ ಹೆಚ್ಚಿಗೆ ಆಡುತ್ತಿಲ್ಲ. ವಿದಾಯದತ್ತ ಅವರು ಮುಖ ಮಾಡಿದ್ದಾರೆ ಎಂಬ ಮಾತು ಕ್ರೀಡಾವಲಯದಲ್ಲಿ ಕೇಳಿಬರುತ್ತಿದೆ. ಎರಡು ಒಲಿಂಪಿಕ್ ಪದಕ ವಿಜೇತೆ ಮತ್ತು ಮಾಜಿ ವಿಶ್ವ ಚಾಂಪಿಯನ್ ಆಗಿರುವ ಪಿ.ವಿ. ಸಿಂಧು ಅವರೊಬ್ಬರೇ ಈಗ ಮಹಿಳೆಯರ ಸಿಂಗಲ್ಸ್‌ನಲ್ಲಿ ದೇಶದ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. 28 ವರ್ಷದ ಸಿಂಧು ಈಚೆಗೆ ಗಾಯದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳು ಆಟದಿಂದ ದೂರ ಉಳಿದಿದ್ದರು. ಈ ಟೂರ್ನಿಯಲ್ಲಿ ಅವರು ಲಯಕ್ಕೆ ಮರಳಿದ್ದು ಸಮಾಧಾನ ತಂದಿದೆ.

ಇದೇ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸಿಂಧು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಸೈನಾ ಮತ್ತು ಸಿಂಧು ಅವರ ಸಾಧನೆಯ ಪರಂಪರೆಯನ್ನು ಮುಂದುವರಿಸುವ ಭರವಸೆಯನ್ನು ಅನ್ಮೋಲ್ ಅವರಂತಹ ಆಟಗಾರ್ತಿಯರು ಮೂಡಿಸಿದ್ದಾರೆ. ಡಬಲ್ಸ್‌ನಲ್ಲಿ ಟ್ರಿಸಾ ಜೋಲಿ, ಗಾಯತ್ರಿ ಗೋಪಿಚಂದ್ ಅವರು ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಿರಂತರವಾಗಿ ಪ್ರಗತಿ ತೋರಿಸುತ್ತಿದ್ದಾರೆ. ಈ ಸಾಧನೆಗಳ ಹಿಂದೆ ತಂಡದ ಮುಖ್ಯ ಕೋಚ್ ಪಿ. ಗೋಪಿಚಂದ್‌ ಹಾಗೂ ನೆರವು ಸಿಬ್ಬಂದಿಯ ಶ್ರಮವೂ ಅಡಗಿದೆ. ವಿದೇಶಿ ಕೋಚ್‌ಗಳು ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಆಟಗಾರರ ಪ್ರದರ್ಶನದಲ್ಲಿ ಸುಧಾರಣೆ ಕಂಡುಬರುತ್ತಿದೆ. ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹೆಚ್ಚು ಹೆಚ್ಚು ಆಡುತ್ತಿರುವುದರಿಂದ ಆಟಗಾರರ ಸಾಧನೆ ಹುರಿಗಟ್ಟುತ್ತಿದೆ. ಸಾಧಕರ ಸಂಖ್ಯೆ ಹೆಚ್ಚಿದಷ್ಟೂ ಆ ಕ್ರೀಡೆಗಳೂ ಬೆಳೆಯುತ್ತವೆ. ಕ್ರಿಕೆಟ್‌ ಆರಾಧಕರೇ ತುಂಬಿರುವ ಭಾರತದಲ್ಲಿಯೂ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಪ್ರತಿಭೆಗಳ ಸೆಲೆ ನಿರಂತರವಾಗಿ ಉಕ್ಕುತ್ತಿರುವುದು ಆಶಾದಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT