ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ರಷ್ಯಾದಲ್ಲಿ ಪುಟಿನ್ ಪುನರಾಯ್ಕೆ: ದೇಶದ ಮೇಲೆ ಪ್ರಬಲ ಹಿಡಿತ

ರಷ್ಯಾದಲ್ಲಿ ಪುಟಿನ್ ಅವರಿಗೆ ಸವಾಲು ಒಡ್ಡುವ ಹೊಸ ನಾಯಕ ಉದಯಿಸದೇ ಇದ್ದರೆ, ಅವರು ದೇಶದ ಮೇಲೆ ಹೊಂದಿರುವ ಬಲಿಷ್ಠ ಹಿಡಿತ ಮುಂದುವರಿಯುತ್ತದೆ
Published 20 ಮಾರ್ಚ್ 2024, 23:20 IST
Last Updated 20 ಮಾರ್ಚ್ 2024, 23:20 IST
ಅಕ್ಷರ ಗಾತ್ರ

‘ಜನರಿಂದ ಆಯ್ಕೆಯಾದವರು’ ಎಂದು ಕರೆಸಿಕೊಳ್ಳುವ ಮೋಹವು ಸರ್ವಾಧಿಕಾರಿಗಳಿಗೆ ಇರುತ್ತದೆ. ಅವರ ಆಯ್ಕೆಗೆ ನಡೆಯುವ ಚುನಾವಣೆಯು ಸಂಶಯಾಸ್ಪದ ರೀತಿಯಲ್ಲಿ ಜರುಗಿದರೂ ಅಂಥದ್ದೊಂದು ಮೋಹದಿಂದ ಅವರು ಅತೀತರಲ್ಲ. ಈ ಕಾರಣಕ್ಕಾಗಿಯೇ ಸದ್ದಾಂ ಹುಸೇನ್ ಅವರು ಅಧಿಕಾರ ಹಿಡಿದ ಎರಡು ದಶಕಗಳ ನಂತರ, 1995ರಲ್ಲಿ ಜನಮತಗಣನೆ ನಡೆಸಿದರು. ಆಗ ಸದ್ದಾಂ ಹುಸೇನ್ ಅವರ ಆಡಳಿತದ ಪರವಾಗಿ ಶೇಕಡ 99.96ರಷ್ಟು ಜನ ಮತ ಚಲಾಯಿಸಿದರು ಎಂದು ಪ್ರಕಟಿಸಲಾಯಿತು. 2002ರಲ್ಲಿ ಸದ್ದಾಂ ಅವರು ಶೇ 100ರಷ್ಟು ಮತಗಳನ್ನು ಪಡೆದು ಆಯ್ಕೆಯಾದರು. ವ್ಲಾದಿಮಿರ್ ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ಐದನೆಯ ಬಾರಿಗೆ ಆಯ್ಕೆಯಾಗಿದ್ದಾರೆ, ಈ ಬಾರಿ ಅವರು ಶೇ 88ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ ರಷ್ಯಾದ ಚುನಾವಣೆಯ ಫಲಿತಾಂಶವು ಮೊದಲೇ ತೀರ್ಮಾನ ಆಗಿತ್ತು ಎಂಬುದು ಸತ್ಯ. ರಷ್ಯಾದಲ್ಲಿ ರಾಜಕೀಯ ವಿರೋಧಿಗಳ ಮೇಲೆ ಹಾಗೂ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರ ಮೇಲೆ ಪುಟಿನ್ ಹೊಂದಿರುವ ಹಿಡಿತವು ಪರಿಪೂರ್ಣ ಅಲ್ಲ. ಆದರೆ ಅಲ್ಲಿನ ಸರ್ಕಾರಿ ಸಂಸ್ಥೆಗಳ ಮೇಲೆ ಅವರು ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಪುಟಿನ್ ಅವರು ಇದುವರೆಗೆ ಕಂಡ ಅತ್ಯಂತ ಪ್ರಬಲ ರಾಜಕೀಯ ವಿರೋಧಿ ಅಲೆಕ್ಸಿ ನವಾಲ್ನಿ ಅವರು ಈಚೆಗೆ ಮೃತಪಟ್ಟಾಗ ಅದು ಸ್ಪಷ್ಟವಾಗಿತ್ತು. ಪುಟಿನ್ ಅವರಿಗೆ ಸವಾಲು ಒಡ್ಡಬಲ್ಲವರಾಗಿದ್ದ ಬೋರಿಸ್ ನೆಮ್ಸೊವ್ ಅವರನ್ನು 2015ರಲ್ಲಿ ಮಾಸ್ಕೊದ ಬೀದಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಹಲವರು ಹಾಗೂ ಪುಟಿನ್ ಅವರಿಗೆ ರಾಜಕೀಯವಾಗಿ ಸವಾಲು ಒಡ್ಡಬಲ್ಲವರಾಗಿದ್ದ ಹಲವರು ಅಕಾಲ ಮೃತ್ಯುವನ್ನು ಕಂಡಿದ್ದಾರೆ. ರಷ್ಯಾದ ಮಾಧ್ಯಮಗಳು ಕಟ್ಟುನಿಟ್ಟಿನ ನಿಯಂತ್ರಣದಲ್ಲಿ ಇವೆ. ದೇಶವು ಪುಟಿನ್ ಅವರ ಬೆನ್ನಿಗೆ ನಿಂತಿದೆ ಎಂದು ಚುನಾವಣೆಯ ಫಲಿತಾಂಶವನ್ನು ಘೋಷಿಸಿದ ಅಲ್ಲಿನ ಚುನಾವಣಾ ಆಯುಕ್ತೆಯು ವಸ್ತುಸ್ಥಿತಿಯನ್ನು ವಾಸ್ತವಕ್ಕಿಂತ ಭಿನ್ನವಾಗಿ, ಅಂದವಾಗಿ ತೋರಿಸುವ ಕೆಲಸವನ್ನಷ್ಟೇ ಮಾಡಿದ್ದಾರೆ.

ಆದರೆ ಪುಟಿನ್ ಅವರಿಗೆ ಜನಪ್ರಿಯತೆ ಇಲ್ಲವೇ ಇಲ್ಲ ಎಂದು ಭಾವಿಸುವುದು ಕೂಡ ತಪ್ಪಾಗುತ್ತದೆ. ತಮ್ಮ ದೇಶಕ್ಕೆ ಅತ್ಯಂತ ಭವ್ಯವಾದ ಇತಿಹಾಸವೊಂದು ಇದೆ ಎಂಬ ಮಾತನ್ನು ಜನರನ್ನು ಸೆಳೆಯುವ ತಂತ್ರವಾಗಿ ಬಳಸಿಕೊಳ್ಳುವ ಎಲ್ಲ ನಾಯಕರ ರೀತಿಯಲ್ಲಿಯೇ ಪುಟಿನ್ ಅವರು ಕೂಡ ಬೆಂಬಲಿಗರ ದೊಡ್ಡ ಸಮೂಹವೊಂದನ್ನು ಹೊಂದಿದ್ದಾರೆ. ರಷ್ಯಾ ತನ್ನ ಭವ್ಯ ದಿನಗಳಿಗೆ ಮರಳುವುದು ಹತ್ತಿರವಾಗುತ್ತಿದೆ ಎಂದು ಇವರು ಭಾವಿಸುತ್ತಾರೆ. ಸೋವಿಯತ್ ಒಕ್ಕೂಟದ ಪತನದ ನಂತರದಲ್ಲಿ ರಷ್ಯಾವನ್ನು ‘ಅವಮಾನದ ದಶಕ’ದಿಂದ ಹೊರಗೆ ತಂದ ನಾಯಕ ಎಂದು ಪುಟಿನ್ ಅವರನ್ನು ಕಾಣಲಾಗುತ್ತದೆ. ಕ್ರಿಮಿಯಾವನ್ನು ವಶಪಡಿಸಿಕೊಂಡ ಅವರ ಕ್ರಮವನ್ನು ರಷ್ಯಾದಲ್ಲಿ ಶ್ಲಾಘಿಸಲಾಯಿತು. ಪಾಶ್ಚಿಮಾತ್ಯ ಮಾಧ್ಯಮಗಳು ಉಕ್ರೇನ್‌ ಯುದ್ಧದ ವಿಚಾರದಲ್ಲಿ ಒಂದು ಚಿತ್ರಣವನ್ನು ಕಟ್ಟಿಕೊಡಲು ಯತ್ನಿಸುತ್ತಿದ್ದರೂ, ಅದರಿಂದ ಪುಟಿನ್ ಅವರ ಜನಪ್ರಿಯತೆಗೆ ಕುತ್ತು ಬಂದಿಲ್ಲ. ಪಶ್ಚಿಮದ ಜಗತ್ತು ಹೇರಿರುವ ಆರ್ಥಿಕ ನಿರ್ಬಂಧಗಳು ರಷ್ಯಾದ ಅರ್ಥ ವ್ಯವಸ್ಥೆಯ ಮೇಲೆ ಅಲ್ಪಾವಧಿಯಲ್ಲಂತೂ ನಿರೀಕ್ಷಿತ ಮಟ್ಟದಲ್ಲಿ ಪರಿಣಾಮ ಉಂಟುಮಾಡಿಲ್ಲ.

ಮತದಾರರು ತಮ್ಮ ಮೇಲೆ ಇರಿಸಿದ ವಿಶ್ವಾಸಕ್ಕೆ, ತಮಗೆ ನೀಡಿದ ಬೆಂಬಲಕ್ಕೆ ಪುಟಿನ್ ಅವರು ಧನ್ಯವಾದ ಸಮರ್ಪಿಸಿದ್ದಾರೆ. ಈವರೆಗೆ ಸರಿಸುಮಾರು 25 ವರ್ಷ ರಷ್ಯಾವನ್ನು ಆಳಿರುವ 71 ವರ್ಷ ವಯಸ್ಸಿನ ಪುಟಿನ್ ಅವರು ಈ ಚುನಾವಣೆಯನ್ನು ಉಕ್ರೇನ್‌ ವಿರುದ್ಧದ ಸಮರದ ವಿಚಾರವಾಗಿ ನಡೆಯುತ್ತಿರುವ ಜನಮತಗಣನೆ ಎಂಬಂತೆಯೂ ಪರಿಗಣಿಸಿದ್ದರು. ದೇಶವು ಕಳೆದುಕೊಂಡ ಪ್ರದೇಶಗಳನ್ನು ಮತ್ತೆ ಗೆದ್ದುಕೊಳ್ಳುವ ತಮ್ಮ ಮಹತ್ವಾಕಾಂಕ್ಷೆಗೆ ಬೆಂಬಲ ನೀಡಬೇಕು ಎಂದು ಕೋರಿದ್ದರು. ಉಕ್ರೇನ್‌ನಲ್ಲಿ ಅಂದುಕೊಂಡಿದ್ದನ್ನು ಮಾಡಲು ಮುಂದಡಿ ಇರಿಸುವ ಆಶ್ವಾಸನೆ ನೀಡುವ ಮೂಲಕ, ರಷ್ಯಾವನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಮಾತಿನೊಂದಿಗೆ ಅವರು ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರವು ಯಾವ ತಾರ್ಕಿಕ ಹಂತವನ್ನೂ ತಲುಪದ ಸ್ಥಿತಿಯಲ್ಲಿದೆ. ಉಕ್ರೇನಿಗೆ ಬೆಂಬಲ ನೀಡುವ ಅಮೆರಿಕದ ನೀತಿಯಲ್ಲಿ ಬದಲಾವಣೆ ಆಗದೇ ಇದ್ದಲ್ಲಿ ಅಥವಾ ತನ್ನ ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಯುರೋಪು ಈ ಯುದ್ಧದಲ್ಲಿ ನಿರಾಸಕ್ತಿ ತಾಳದೇ ಇದ್ದಲ್ಲಿ ಈ ಸಮರವು ಇದೇ ಸ್ಥಿತಿಯಲ್ಲಿ ಉಳಿಯಬಹುದು. ರಷ್ಯಾದಲ್ಲಿ ಪುಟಿನ್ ಅವರಿಗೆ ಸವಾಲು ಒಡ್ಡುವ ಹೊಸ ನಾಯಕ ಉದಯಿಸದೇ ಇದ್ದರೆ, ಅವರು ದೇಶದ ಮೇಲೆ ಹೊಂದಿರುವ ಈ ಬಲಿಷ್ಠ ಹಿಡಿತವು ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT