ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಶಕ್ತಿ ಯೋಜನೆ: ಮಹಿಳೆಯರ ಸಬಲೀಕರಣಕ್ಕೆ ತುಂಬಿದೆ ಬಲ

ಸಾವಿರಾರು ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಹರಿಕಾರರಾಗಲು ಈ ಯೋಜನೆಯು ನೆರವಾಗಿದೆ
Published 1 ಜೂನ್ 2024, 0:53 IST
Last Updated 1 ಜೂನ್ 2024, 0:53 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ, ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯು ಒಂದು ವರ್ಷ ಪೂರ್ಣಗೊಳಿಸಿದೆ. ಯೋಜನೆಯ ಕುರಿತು ಇದ್ದ ಕಟು ಟೀಕೆಗಳು ಮತ್ತು ಸಿನಿಕತನದ ಮನೋಭಾವಗಳೆಲ್ಲವೂ ತಪ್ಪು ಎಂಬುದನ್ನು ಯೋಜನೆಯು ಸಾಬೀತುಗೊಳಿಸಿದೆ. ನಮ್ಮಂತಹ ಬಹುಸ್ತರದ ಸಮಾಜದಲ್ಲಿ ಸಮರ್ಪಕವಾದ ಕಲ್ಯಾಣ ಯೋಜನೆಯು ಹಲವು ರೀತಿಯಲ್ಲಿ ಪ್ರಯೋಜನ ಕಾರಿಯಾಗಬಹುದು ಎಂಬುದಕ್ಕೆ ಈ ಯೋಜನೆಯು ನಿದರ್ಶನವಾಗಿದೆ. ಕಳೆದ ವರ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕಾಂಗ್ರೆಸ್ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿತು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಪಕ್ಷವು ಚುನಾವಣೆಗೆ ಮುನ್ನ ಭರವಸೆ ಕೊಟ್ಟಿತ್ತು. ಆಗ ಇದನ್ನು ಒಂದು ರಾಜಕೀಯ ಕಾರ್ಯತಂತ್ರ ಮತ್ತು ಚುನಾವಣಾ ಭರವಸೆ ಎಂದಷ್ಟೇ ಎಲ್ಲರೂ ‍ಪರಿಗಣಿಸಿದ್ದರು. ಆದರೆ, ಜಾರಿಗೆ ಬಂದ ಬಳಿಕ ಈ ಯೋಜನೆಯು ಸಾಮಾಜಿಕ ‍ಪ್ರಯೋಜನದ ಆರ್ಥಿಕ ಯೋಜನೆಯಾಗಿ ಪರಿವರ್ತನೆ ಆಗಿದೆ. ರಾಜ್ಯದ ಆರ್ಥಿಕ ನೀತಿ ಸಂಸ್ಥೆಯು (ಎಫ್‌ಪಿಐ) ಈ ಯೋಜನೆಯ ಕುರಿತು ಅಧ್ಯಯನ ನಡೆಸಿದೆ. ಈ ಯೋಜನೆಯಿಂದಾಗಿ ಮಹಿಳೆಯರ ಆದಾಯ ಮತ್ತು ಉಳಿತಾಯದಲ್ಲಿ ಹೆಚ್ಚಳವಾಗಿದೆ, ಕಾರ್ಮಿಕ ಬಲದಲ್ಲಿ ಅವರ ಭಾಗೀದಾರಿಕೆ ಹೆಚ್ಚಿದೆ ಮತ್ತು ರಾಜ್ಯದ ತೆರಿಗೆ ವರಮಾನ ಏರಿಕೆಯಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗೀದಾರಿಕೆಯು 2022ರ ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಶೇ 25.2ರಷ್ಟಿದ್ದರೆ, 2023ರ ಇದೇ ಅವಧಿಯಲ್ಲಿ ಅದು ಶೇ 30.2ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹವು ₹309 ಕೋಟಿಗಳಷ್ಟು ಹೆಚ್ಚಾಗಿದೆ. 

ಸಾವಿರಾರು ಮಹಿಳೆಯರು ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಹರಿಕಾರರಾಗಲು ಯೋಜನೆಯು ನೆರವಾಗಿದೆ. ಮಹಿಳೆಯರು ಮಾರ್ಚ್‌ವರೆಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದಕ್ಕಾಗಿ ಸರ್ಕಾರ ಭರಿಸಿದ ಟಿಕೆಟ್‌ ಮೊತ್ತ ₹ 4,380 ಕೋಟಿ. ಇದರಿಂದಾಗಿ ದೊಡ್ಡ ಮಟ್ಟದಲ್ಲಿಯೇ ಲಾಭ ಆಗಿದೆ. ಕೆಲವು ಲಾಭಗಳು ನೇರವಾಗಿಯೇ ಆಗಿದ್ದರೆ, ಹಲವು ಪರೋಕ್ಷ ಪ್ರಯೋಜನಗಳು ಆಗಿವೆ. ಯೋಜನೆಯಿಂದ ಆಗಿರುವ ಸಕಾರಾತ್ಮಕ ಪರಿಣಾಮವನ್ನು ಹಲವು ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಮಹಿಳೆಯರು ಉಳಿತಾಯ ಮಾಡಿದ ಹಣವನ್ನು ಆರೋಗ್ಯ, ಶಿಕ್ಷಣ ಮತ್ತು ಕುಟುಂಬದ ಇತರ ಅಗತ್ಯಗಳಿಗಾಗಿ ವ್ಯಯ ಮಾಡಿದ್ದಾರೆ. ಅಗತ್ಯ ವಸ್ತುಗಳು, ಗ್ರಾಹಕ ವಸ್ತುಗಳು ಮತ್ತು ಸೇವೆಗಳ ಮೇಲೆ ಮಾಡಿದ ವೆಚ್ಚವು ಸಂಬಂಧಪಟ್ಟ ಇತರ ವ್ಯಾಪಾರಗಳಿಗೂ ಉತ್ತೇಜನ ನೀಡಿದೆ. ವ್ಯಾಪಾರ ಮಾಡುವವರು ಮತ್ತು ಸರ್ಕಾರಕ್ಕೆ ಇದರಿಂದ ಲಾಭವಾಗಿದೆ. ವ್ಯಾ‍ಪಕವಾದ ಖರೀದಿ ಮತ್ತು ಮಾರಾಟವು ರಾಜ್ಯದಾದ್ಯಂತ ನಡೆದಿದೆ. ಪರಿಣಾಮವಾಗಿ, ಈ ವರ್ಷದ ಜಿಎಸ್‌ಟಿ ಸಂಗ್ರಹದಲ್ಲಿ ₹ 371 ಕೋಟಿ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ. 

ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗೀದಾರಿಕೆಯ ಹೆಚ್ಚಳವು ಯೋಜನೆಯಿಂದ ಆಗಿರುವ ಗಮನಾರ್ಹವಾದ ಇನ್ನೊಂದು ಪ್ರಯೋಜನ. ತಮ್ಮ ಸುತ್ತಲಿನ ಗಡಿರೇಖೆಗಳನ್ನು ಮಹಿಳೆಯರು ದಾಟಿದ್ದಾರೆ. ಕಾಲ್ನಡಿಗೆಯ ದೂರದಲ್ಲಿ ಇರುವ ಸ್ಥಳದಲ್ಲಿ ಮಾತ್ರ ಕೆಲಸ ಎಂಬುದನ್ನು ಮೀರಿ ಬಸ್‌ಗಳಲ್ಲಿ ಪ್ರಯಾಣಿಸಿ ಕೆಲಸ ಮಾಡಲು ಆರಂಭಿಸಿದ್ದಾರೆ. ಮಹಿಳೆಯರ ಭಾಗೀದಾರಿಕೆಯಲ್ಲಿ ಆಗಿರುವ ಶೇ 5ರಷ್ಟರ ಏರಿಕೆಯು ಗಣನೀಯವೇ ಆಗಿದೆ. ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗೀದಾರಿಕೆ ಕಡಿಮೆಯಾಗಿಯೇ ಇರುವುದು ರಾಜ್ಯದ ಸಮಸ್ಯೆ ಮಾತ್ರವಲ್ಲ ದೇಶದ ಅರ್ಥವ್ಯವಸ್ಥೆಯ ಸಮಸ್ಯೆಯೂ ಆಗಿದೆ. ಪ್ರಯಾಣವು ಮಹಿಳೆಯರ ಮುಂದೆ ಹೊಸ ಜಗತ್ತುಗಳನ್ನು, ಹೊಸ ಅನುಭವಗಳನ್ನು ತೆರೆದಿಟ್ಟಿದೆ. ಈ ಯೋಜನೆಯು ಮಹಿಳೆಯರಲ್ಲಿ ಸ್ವಾತಂತ್ರ್ಯದ ಭಾವವನ್ನು ಮೂಡಿಸಿದೆ. ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ ಕೂಡ ಸಶಕ್ತಗೊಳಿಸಿದೆ. ಈ ಯೋಜನೆಯನ್ನು ‘ಉಚಿತ ಕೊಡುಗೆಗಳು’ ಎಂದು ಆರಂಭದಲ್ಲಿ ಹೀಗಳೆಯಲಾಗಿತ್ತು. ಆದರೆ, ಅದರಿಂದ ಆಗಿರುವ ಪ್ರಯೋಜನಗಳು ಅದಕ್ಕೆ ಮಾಡಿದ ವೆಚ್ಚಕ್ಕಿಂತ ಎಷ್ಟೋ ಪಾಲು ಹೆಚ್ಚು ಎಂಬುದು ಈಗ ಅರಿವಿಗೆ ಬಂದಿದೆ. ಇದು ಕೇವಲ ಉಚಿತ ಬಸ್‌ ಪ್ರಯಾಣವಷ್ಟೇ ಅಲ್ಲ, ಬಹಳಷ್ಟು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟ ಪ್ರಯಾಣವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT