ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ ಮಾಫಿಯಾ ಬಗ್ಗುಬಡಿಯಲು ಇಚ್ಛಾಶಕ್ತಿ ಪ್ರದರ್ಶಿಸಿ

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮರಳು ಮಾಫಿಯಾದ ಕ್ರೌರ್ಯಕ್ಕೆ ಗ್ರಾಮ ಲೆಕ್ಕಿಗ ಬಲಿಯಾಗಿದ್ದು ಅತ್ಯಂತ ದುರದೃಷ್ಟಕರ. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗೆ ತಡೆಯೊಡ್ಡಲು ಯತ್ನಿಸಿದ ಸಾಹೇಬ್‌ ಪಾಟೀಲ ಅವರನ್ನೇ ಹತ್ಯೆ ಮಾಡಿರುವುದು ರಾಕ್ಷಸ ಪ್ರವೃತ್ತಿಯ ಅನಾವರಣವಲ್ಲದೆ ಮತ್ತೇನಲ್ಲ. ಮರಳೂ ಸೇರಿದಂತೆ ಎಲ್ಲ ರೀತಿಯ ನೈಸರ್ಗಿಕ ಸಂಪತ್ತನ್ನು ಅಡೆತಡೆ ಇಲ್ಲದೆ ಲೂಟಿ ಮಾಡುತ್ತಿರುವ ಗಣಿ ಮಾಫಿಯಾ ತನ್ನ ದಾರಿಗೆ ಅಡ್ಡ ಬಂದವರ ಮೇಲೆ ದಾಳಿ ಮಾಡಿರುವುದು ಇದೇ ಮೊದಲಲ್ಲ. ಹಿಂದೆಯೂ ಅನೇಕ ಘಟನೆಗಳು ನಡೆದಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ಮಾಡಿದ್ದ ಉಡುಪಿ ಜಿಲ್ಲಾಧಿಕಾರಿ, ಅಸಿಸ್ಟೆಂಟ್‌ ಕಮಿಷನರ್‌ ಮೇಲೂ ಹಲ್ಲೆಯಾಗಿತ್ತು. ಅವರ ಜೊತೆಗಿದ್ದ ಗ್ರಾಮ ಲೆಕ್ಕಿಗನನ್ನು ತೀವ್ರವಾಗಿ ಥಳಿಸಲಾಗಿತ್ತು. ಅಕ್ರಮ ಮರಳು ದಂಧೆ ವಿರುದ್ಧ ಹೋರಾಡುತ್ತಿರುವ ರಾಯಚೂರಿನ ಸಾಮಾಜಿಕ ಕಾರ್ಯಕರ್ತ ಹನುಮಂತ ಭಾಂಗಿ ಅವರನ್ನು ಥಳಿಸಿ, ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲ್ಲಲು ಸಂಚು ನಡೆದಿತ್ತು. ಇಷ್ಟಾದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ. ಮರಳು ಮಾಫಿಯಾ ತನ್ನ ಕರಾಳ ಮುಖವನ್ನು ಯಾವುದೇ ಎಗ್ಗಿಲ್ಲದೆ ಪ್ರದರ್ಶಿಸುತ್ತಿದ್ದರೂ ಪ್ರಭುತ್ವ ತಟಸ್ಥವಾಗಿರುವುದನ್ನು ನೋಡಿದರೆ ಇಲ್ಲಿ ಕಾನೂನು, ಸುವ್ಯವಸ್ಥೆ ಇದೆಯೇ ಎಂಬ ಅನುಮಾನ ಸಹಜವಾಗಿ ಬರುತ್ತದೆ. ಅಧಿಕಾರಶಾಹಿಯ ಕೈಗಳನ್ನು ಕಟ್ಟಿ ಹಾಕುವಷ್ಟು ಮರಳು ಮಾಫಿಯಾ ಪ್ರಬಲವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಸರ್ಕಾರಕ್ಕೆ ನಿಜವಾಗಿ ಇಚ್ಛಾಶಕ್ತಿ ಇದ್ದರೆ ಈ ಮಾಫಿಯಾವನ್ನು ಬಗ್ಗುಬಡಿಯುವುದು ದೊಡ್ಡ ವಿಷಯವಲ್ಲ. ಆದರೆ, ತೆರೆಮರೆಯಲ್ಲಿ ಕೆಲಸ ಮಾಡುವ ಲಾಬಿಗಳು ಸರ್ಕಾರವನ್ನು ನಿಯಂತ್ರಿಸುತ್ತಿರುವುದು ಕಟು ವಾಸ್ತವ.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಕ್ರಮವಾಗಿ ಮರಳು ತೆಗೆದು, ಸಾಗಣೆ ಮಾಡಿದ 21 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 10 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಿ, ದಂಡ ವಸೂಲು ಮಾಡಲಾಗಿದೆ. ಆದರೂ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುವುದನ್ನು ತೋರಿಕೆಯ ಪ್ರಕ್ರಿಯೆ ಎಂದೇ ಭಾವಿಸಬೇಕಾಗುತ್ತದೆ. ನದಿ ಮರಳಿಗೆ ವಿಪರೀತ ಬೇಡಿಕೆ ಇರುವುದರಿಂದ ಎಲ್ಲ ನದಿಗಳ ಒಡಲನ್ನು ಬರಿದು ಮಾಡಲಾಗುತ್ತಿದೆ. ಇದರಿಂದ ಜಲ ಮೂಲ ಬತ್ತುವುದಲ್ಲದೆ, ಪರಿಸರದ ಮೇಲೂ ದುಷ್ಪರಿಣಾಮ ಆಗುತ್ತಿದೆ. ರಾಜ್ಯದಲ್ಲಿ ನಿರ್ಮಾಣ ಕಾಮಗಾರಿಗೆ ವಾರ್ಷಿಕ ನಾಲ್ಕು ಕೋಟಿ ಟನ್‌ ಮರಳು ಅಗತ್ಯವಿದೆ. ನದಿ, ಪಟ್ಟಾ ಜಮೀನಿನಲ್ಲಿ ತೆಗೆಯುತ್ತಿರುವ ಮರಳು, ಉತ್ಪಾದಕ ಮರಳು (ಎಂ– ಸ್ಯಾಂಡ್), ಮಲೇಷ್ಯಾ ಮರಳು ಸೇರಿದಂತೆ ಎಲ್ಲ ಮೂಲಗಳಿಂದ 3.70 ಕೋಟಿ ಟನ್‌ ಮರಳು ಲಭ್ಯವಿದೆ. ಪೂರೈಕೆ– ಬೇಡಿಕೆ ಮಧ್ಯೆ ಅಂತರ ಇರುವುದರಿಂದ ತಮಗೆ ತೋಚಿದ ಬೆಲೆಗೆ ಮರಳನ್ನು ಮಾರಲಾಗುತ್ತಿದೆ. ರಫೀಕ್‌ ಅಹಮದ್‌ ನೇತೃತ್ವದ ಸದನ ಸಮಿತಿಯು 2016ರಲ್ಲಿ ಮರಳಿನ ಸಮಸ್ಯೆ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಿದೆ. ಮರಳಿನ ಇ– ಟೆಂಡರ್‌, ಏಕಗವಾಕ್ಷಿ ವ್ಯವಸ್ಥೆ ಸೇರಿದಂತೆ ಅನೇಕ ಶಿಫಾರಸುಗಳನ್ನು ಮಾಡಿದೆ. ಸಮಿತಿ ಶಿಫಾರಸುಗಳು ಇನ್ನೂ ಜಾರಿಯಾಗಿಲ್ಲ. ಮರಳು ಮಾಫಿಯಾಗೆ ಕಡಿವಾಣ ಹಾಕುವ ಮಾತುಗಳನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಡಿದ್ದಾರೆ. ಅವರ ಮಾತು ಬರೀ ಭರವಸೆಯಾಗಿ ಉಳಿಯದೆ, ಕೃತಿಗೆ ಇಳಿದರೆ ಮರಳು ಮಾಫಿಯಾದ ದೌರ್ಜನ್ಯಕ್ಕೆ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುವುದನ್ನು ತಪ್ಪಿಸಬಹುದು. ಅಕ್ರಮವಾಗಿ ಮರಳು ತೆಗೆದು, ಸಾಗಣೆ ಮಾಡುವ ಅಪರಾಧಕ್ಕೆ ಒಂದು ವರ್ಷ ಜೈಲು, ₹ 5 ಲಕ್ಷ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸರ್ಕಾರ ತಾನು ಯಾರ ಕೈಗೊಂಬೆಯೂ ಅಲ್ಲ ಎಂದು ನಿರೂಪಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT