ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಉಪರಾಷ್ಟ್ರಪತಿ ಧನಕರ್ ಮಾತು ಅನಗತ್ಯ ಹಾಗೂ ಅಪಾಯಕಾರಿ

Last Updated 12 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಈಚೆಗೆ ಕೆಲವು ಸಮಯದಿಂದ ಕಟು ಟೀಕೆಗಳನ್ನು ಮಾಡುತ್ತ ಬಂದಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈಗ ರಿಜಿಜು ಅವರ ಟೀಕೆಗಳನ್ನು ಮೇಲ್ಮಟ್ಟಕ್ಕೆ ಒಯ್ದಿದ್ದಾರೆ. ನ್ಯಾಯಮೂರ್ತಿಗಳ ನೇಮಕಕ್ಕೆ ಈಗ ಚಾಲ್ತಿಯಲ್ಲಿ ಇರುವ ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸಲು ಅಧಿಕಾರದಲ್ಲಿ ಇರುವ ವ್ಯಕ್ತಿಗಳಿಂದ ನಡೆದಿರುವ ಸಾಮೂಹಿಕ ಯತ್ನವೊಂದರ ಭಾಗ ಈ ಟೀಕೆಗಳು ಎಂಬ ಆರೋಪಗಳಿಗೆ ಪೂರಕವಾಗುವಂತೆ ಇವೆ ಉಪರಾಷ್ಟ್ರಪತಿಯವರ ಮಾತುಗಳು. ಇದುವರೆಗೆ ಇಂತಹ ಮಾತುಗಳನ್ನು ಸಚಿವರು ಆಡುತ್ತಿದ್ದರು. ಈಗ, ಇಂತಹ ಮಾತುಗಳ ಪರವಾಗಿ ತಾವೂ ಇದ್ದೇವೆ ಎಂಬಂತೆ ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ತೋರಿಸಿಕೊಳ್ಳಬಾರದಿತ್ತು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದ ಕ್ರಮವನ್ನು ಧನಕರ್ ಅವರು ಈಚೆಗೆ ಟೀಕಿಸಿದ್ದಾರೆ. ಕಾಯ್ದೆಯನ್ನು ಅಸಿಂಧುಗೊಳಿಸಿದ್ದು ಸಂಸದೀಯ ಸಾರ್ವಭೌಮತ್ವವನ್ನು ದೊಡ್ಡಮಟ್ಟದಲ್ಲಿ ಬಿಟ್ಟುಕೊಟ್ಟ ಹಾಗೂ ಜನರ ಆದೇಶವನ್ನು ಉಪೇಕ್ಷೆ ಮಾಡಿದ ಕಣ್ಣಿಗೆ ರಾಚುವಂತಹ ನಿದರ್ಶನ ಎಂದು ಧನಕರ್ ಈಚೆಗೆ ಹೇಳಿದ್ದಾರೆ. ರಾಜ್ಯಸಭೆಯ ಸಭಾಪತಿಯಾಗಿ ಮಾಡಿದ ಮೊದಲ ಭಾಷಣದಲ್ಲಿಯೇ ಅವರು ಈ ಮಾತುಗಳನ್ನು ಆಡಿದ್ದಾರೆ. ಇಂತಹ ಟೀಕೆಗಳನ್ನು ಅವರು ಈ ಮೊದಲೂ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಸಮ್ಮುಖದಲ್ಲಿಯೇ ಅವರು ಇಂತಹ ಮಾತನ್ನು ಒಮ್ಮೆ ಆಡಿದ್ದಾರೆ.

ಉನ್ನತ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯಾಗಿ ಧನಕರ್ ಅವರು ಇಂತಹ ಹೇಳಿಕೆ ನೀಡಿದ್ದು ತಪ್ಪು. ಸಂಸತ್ತು ಅನುಮೋದನೆ ನೀಡಿದ ಒಂದು ಕಾನೂನನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿತು, ‘ಇಂಥ ನಿದರ್ಶನ ಬೇರೆ ಎಲ್ಲಿಯೂ ಇಲ್ಲ’ ಎಂದು ಅವರು ಹೇಳಿದ್ದಾರೆ. ಈ ಮಾತು ಸತ್ಯವಲ್ಲ. ಸಂಸತ್ತು ಅನುಮೋದನೆ ನೀಡಿದ ಯಾವುದೇ ಕಾನೂನನ್ನು ಪರಿಶೀಲಿಸುವ ಜವಾಬ್ದಾರಿ ಹಾಗೂ ಸಾಂವಿಧಾನಿಕ ಅಧಿಕಾರವು ಕೋರ್ಟ್‌ಗೆ ಇದೆ. ಆ ಕಾನೂನು ಎಷ್ಟರಮಟ್ಟಿಗೆ ಸಿಂಧು ಎಂಬುದನ್ನು ನಿಕಷಕ್ಕೆ ಒಳಪಡಿಸುವ ಅಧಿಕಾರವು ನ್ಯಾಯಾಲಯಕ್ಕೆ ಇದೆ. ಸಂಸತ್ತು ಅನುಮೋದನೆ ನೀಡುವ ಕಾನೂನುಗಳನ್ನು ನ್ಯಾಯಾಲಯಗಳು ಅಸಿಂಧುಗೊಳಿಸಬಾರದು, ಏಕೆಂದರೆ ಆ ಕಾನೂನು ಗಳು ಜನರ ಇಚ್ಛೆಯನ್ನು ಬಿಂಬಿಸುತ್ತಿರುತ್ತವೆ ಎಂದು ಧನಕರ್ ಅವರು ಹೇಳುತ್ತಿರುವಂತಿದೆ. ಇಂತಹ ಮಾತುಗಳ ಹಿಂದಿರುವ ಚಿಂತನೆಯು ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದ ಅಧಿಕಾರದ ಗಡಿಗಳನ್ನು ಗುರುತಿಸಿರುವ ವ್ಯವಸ್ಥೆಗೆ ಪೂರಕವಾಗಿ ಇಲ್ಲ. ಕಾರ್ಯಾಂಗ ಕೈಗೊಂಡ ತೀರ್ಮಾನಗಳನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಶಾಸಕಾಂಗ ರೂಪಿಸುವ ಕಾನೂನುಗಳನ್ನು ಪರಾಮರ್ಶಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಶಾಸಕಾಂಗದ ವ್ಯಾಪ್ತಿಗೆ ಸುಪ್ರೀಂ ಕೋರ್ಟ್‌ ಪ್ರವೇಶಿಸಿದೆ ಎಂದು ಧನಕರ್ ಭಾವಿಸಿದ್ದಾರೆ. ಅದರ ಬಗ್ಗೆ ಗಮನಹರಿಸಬೇಕಾದ ಹೊಣೆ ಸಂಸತ್ತಿನ ಮೇಲಿದೆ ಎಂದು ಧನಕರ್ ಅವರು ಹೇಳಿದ್ದಾರೆ. ಬಹಳ ಸೂಕ್ಷ್ಮ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಧನಕರ್ ಅವರು ತೀವ್ರವಾದ ನಿಲುವನ್ನು ತಾಳಿದ್ದಾರೆ. ಎನ್‌ಜೆಎಸಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದಾಗ ಸಂಸತ್ತು ಸಣ್ಣದಾಗಿಯೂ ದನಿ ಎತ್ತಲಿಲ್ಲ ಎನ್ನುವ ಮೂಲಕ ಅವರು ಸಂಸತ್ತಿನ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಂತಿದೆ. ಧನಕರ್ ಅವರ ಹೊಣೆ ಸದನದ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು. ಆದರೆ ಅವರು ಆಡುತ್ತಿರುವ ಮಾತುಗಳನ್ನು ಗಮನಿಸಿದರೆ, ಅವರು ಈಗ ಅಲ್ಲಿನ ಅಜೆಂಡಾ ಏನಿರಬೇಕು ಎಂಬುದನ್ನು ತೀರ್ಮಾನಿಸುತ್ತಿರುವಂತಿದೆ.

ಸರ್ಕಾರದ ಕಡೆಯಿಂದ ನಡೆಯುತ್ತಿರುವ ವಾಗ್ದಾಳಿಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿದೆ. ಮಾತನಾಡುವವರು ಸಂಯಮ ಪ್ರದರ್ಶಿಸಬೇಕೆಂಬ ಸಲಹೆ ನೀಡುವಂತೆ ಅಟಾರ್ನಿ ಜನರಲ್ ಅವರಿಗೆ ಹೇಳಿದೆ. ನ್ಯಾಯಾಂಗದ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನು ರೂಪಿಸುವುದನ್ನು ತಾನು ತಡೆದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಆದರೆ ಹೊಸ ಕಾನೂನು ಜಾರಿಗೆ ಬರುವವರೆಗೂ ಈಗಿರುವ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ. ಯಾವುದೇ ವಿಚಾರದ ಸಾಂವಿಧಾನಿಕ ಮಾನ್ಯತೆಯ ವಿಚಾರದಲ್ಲಿ ಅಂತಿಮ ತೀರ್ಮಾನ ಹೇಳುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ. ಇದು ನಮ್ಮ ವ್ಯವಸ್ಥೆ. ಈ ವ್ಯವಸ್ಥೆಯನ್ನು ಅಲ್ಲಗಳೆವ ರೀತಿಯಲ್ಲಿ ಮಾತನಾಡುವುದು ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT