ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಅಧಿಕಾರ ಅಹಂ ಅಲ್ಲ 

ಪಿ.ಚಂದ್ರಿಕಾ
Published 28 ಮೇ 2024, 1:07 IST
Last Updated 28 ಮೇ 2024, 1:07 IST
ಅಕ್ಷರ ಗಾತ್ರ

ರಾಜನೊಬ್ಬ ತನ್ನ ಸೈನ್ಯ ಸಮೇತ ಕಾಡಿಗೆ ಬಂದ. ಬೇಸಿಗೆಯ ಮಧ್ಯಾಹ್ನವಾದ್ದರಿಂದ ಇಡೀ ಕಾಡು ಒಣಗಿಹೋಗಿತ್ತು. ಅಲ್ಲೊಬ್ಬ ಸಂನ್ಯಾಸಿ ಮರಗಿಡಗಳ ಬೇರನ್ನು ಬಿಡಿಸುತ್ತಾ ದಣಿಯುತ್ತಿದ್ದ. ಅವನ ಮೈಯ್ಯಿಂದ ಬೆವರು ಬಸಿದು ಹೋಗುತ್ತಿತ್ತು. ಆದರೂ ಬಿಡದೆ ಕೆಲಸ ಮಾಡುತ್ತಿದ್ದ. ರಾಜ ಇದನ್ನು ಗಮನಿಸಿ, ‘ಎಲೈ ಸಂನ್ಯಾಸಿಯೇ ಏನು ಮಾಡುತ್ತಿರುವೆ’ ಎಂದು ಕೇಳಿದ. ‘ಇದು ಬೇಸಿಗೆ ಆದ್ದರಿಂದ ಗಿಡದ ಬೇರುಗಳನ್ನು ಬಿಡಿಸುತ್ತಿರುವೆ. ನಾಳೆ ಮಳೆಗಾಲಕ್ಕೆ ಗಿಡಗಳಿಗೆ ನೀರು ಇಂಗುವುದು ಸುಲಭವಾಗುತ್ತದೆ’ ಎಂದ. ರಾಜ ತಕ್ಷಣ ಕೇಳಿದ, ‘ಗಿಡ ನಿನಗೆ ಇದನ್ನು ಕೇಳಿತೇ?’. ಸಂನ್ಯಾಸಿ ನಕ್ಕು, ‘ಕೇಳಲಿಕ್ಕೆ ಅವುಗಳಿಗೆ ಬಾಯಿಯೆಲ್ಲಿದೆ?’ ರಾಜನಿಗೆ ಚೋದ್ಯ ಅನ್ನಿಸಿ, ‘ಅಲ್ಲಾ ತಪಸ್ಸು, ಧ್ಯಾನ ಅಂತ ಮಾಡಿಕೊಂಡು ಇರದೆ ಕೇಳದ ಕೆಲಸವನ್ನು ಯಾಕೆ ಮಾಡುತ್ತಿರುವೆ’ ಎಂದ. ತಕ್ಷಣವೇ ಅವನನ್ನು ನಿಟ್ಟಿಸಿದ ಸಂನ್ಯಾಸಿ, ‘ನಿಜ ಹೇಳು ನೀನು ರಾಜನೇನಾ?’ ಎಂದ. ಈ ಮಾತನ್ನು ಕೇಳಿ ಕೋಪಗೊಂಡ ರಾಜ, ‘ನನ್ನನ್ನೇ ಅಣಕಿಸುವ ನಿನಗೆಷ್ಟು ಧೈರ್ಯ?’ ಎಂದು ಸೈನಿಕರಿಗೆ ಅವನನ್ನು ಬಂಧಿಸುವಂತೆ ಆಜ್ಞಾಪಿಸಿದ.

ಆದರೂ ಸಂನ್ಯಾಸಿ ಧೃತಿಗೆಡದೆ, ‘ಮತ್ತೆ ನೀನು ರಾಜನಲ್ಲ ಎಂದು ನಿರೂಪಿಸಿಕೊಂಡುಬಿಟ್ಟೆ’ ಎಂದು ನಕ್ಕ ಮತ್ತಷ್ಟು ಗಟ್ಟಿಯಾಗಿ. ಈಗ ರಾಜನ ಸಹನೆಯ ಕಟ್ಟೆಯೊಡೆಯಿತು, ‘ಈ ಸೈನ್ಯ, ಕುದುರೆ, ಪರಿವಾರ, ವೈಭವ ಎಲ್ಲ ನೋಡಿಯೂ ನನ್ನನ್ನು ರಾಜನಲ್ಲ ಎಂದೆಯಲ್ಲಾ, ನನಗೆ ಬರುತ್ತಿರುವ ಕೋಪಕ್ಕೆ ನಿನ್ನ ಗಲ್ಲಿಗೇರಿಸುವೆ’ ಎಂದ. ಸಂನ್ಯಾಸಿ ಮತ್ತಷ್ಟು ಶಾಂತವಾಗಿ, ‘ಏರಿಸು ನಿನ್ನ ಕೈಲಿ ಆಗುವುದು ಇಷ್ಟೇ ತಾನೆ?’ ಎಂದ. 

ರಾಜ ಯೋಚನೆಗೆ ಬಿದ್ದ ಈ ಸಂನ್ಯಾಸಿ ಯಾವುದಕ್ಕೂ ಬಗ್ಗುತ್ತಿಲ್ಲ ಮತ್ತು ಇಷ್ಟು ಪ್ರಶಾಂತ ಮುಖಮುದ್ರೆಯಲ್ಲಿಯೇ ನಾನು ಕೇಳಿದ್ದಕ್ಕೆಲ್ಲಾ ಉತ್ತರಿಸುತ್ತಿದ್ದಾನೆ ಎಂದರೆ ಇದರಲ್ಲಿ ಏನೋ ಮರ್ಮ ಇರಬೇಕು ಎಂದು ಖಾತ್ರಿ ಪಡಿಸಿಕೊಂಡ. ಕುದುರೆಯಿಂದ ಇಳಿದು ಸಂನ್ಯಾಸಿಯ ಹತ್ತಿರ ಬಂದು, ‘ನಿಜವಾಗಲೂ ನೀನು ಸಾಯಲು ಸಿದ್ಧವಿದ್ದೀಯಾ’ ಎಂದು ಮತ್ತೆ ಪ್ರಶ್ನಿಸಿದ. ‘ಅದೇ ಆಗಬೇಕು ಎಂದಿದ್ದರೆ ಯಾರೂ ತಪ್ಪಿಸಲು ಸಾಧ್ಯವಿಲ್ಲ’ ಎಂದ ಸಂನ್ಯಾಸಿ.

ಅಸಹಾಯಕನಾದ ರಾಜ ಕೇಳಿದ, ‘ಸರಿ ಈಗ ಹೇಳು ರಾಜನಾಗಲು ನಾನೇನು ಮಾಡಬೇಕು?’ ಸಂನ್ಯಾಸಿ ಹೀಗಂದ: ‘ನೀನು ನನ್ನ ಏನು ಕೇಳಿದೆ? ಕೇಳದಿದ್ದರೂ ಮರದ ಬುಡವನ್ನು ಯಾಕೆ ಬಿಡಿಸುತ್ತಿರುವೆ ಎಂದಲ್ಲವೇ? ನಾನು ಈ ಕಾಡಲ್ಲಿ ಅಲೆಯುವವನು. ದಿನಾ ನೋಡುವ ನನಗೆ ಯಾವ ಗಿಡಕ್ಕೆ ಏನು ಬೇಕು ಎಂದು ಅರ್ಥವಾಗುತ್ತದೆ. ರಾಜನಾದ ನಿನ್ನ ಬಳಿ ನೀರು, ಆಹಾರ ಇತ್ತು. ನನ್ನನ್ನು ನೋಡಿ ಕೆಲಸ ಮಾಡಿ ದಣಿದಿದ್ದಾನೆ ನೀರು ಆಹಾರ ಕೊಡಬೇಕು ಎಂದು ಅನ್ನಿಸಬೇಕಿತ್ತು. ಅದೂ ಅರ್ಥವಾಗಲಿಲ್ಲ ಎಂದರೆ, ನೀನು ಪ್ರಜೆಗಳ ಬೇಕು ಬೇಡಗಳನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀಯ? ಸ್ಥಾನ ಎನ್ನುವುದು ದಕ್ಕುವುದು ಸರಿಯೇ. ಆದರೆ ಅದನ್ನು ನಿಭಾಯಿಸಲಿಕ್ಕೆ ಅಂತಃಕರಣ ಬೇಕು. ಅಧಿಕಾರಕ್ಕೆ ಅಹಂಕಾರವಲ್ಲ, ನನ್ನ ಮಗುವಿಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳುವ ತಾಯಿಯ ವಾತ್ಸಲ್ಯ ಬೇಕು. ಆಗ ಮಾತ್ರ ನೀನು ರಾಜನಾಗಿ ಉಳಿಯಬಲ್ಲೆ’ ಎನ್ನುತ್ತಾನೆ. 

ನಿಜ, ಅಧಿಕಾರ ಅಹಂಕಾರವಲ್ಲ ಅದೊಂದು ಜವಾಬ್ದಾರಿ ಲಾಲಸೆಯಿಲ್ಲದ ಸ್ಥಿತಿ ಎಂದರ್ಥ ಮಾಡಿಕೊಂಡರೆ ಪ್ರಜಾಸೇವೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT