ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ತಾಳಿದವನು ಬಾಳಿಯಾನು..

ನುಡಿ ಬೆಳಗು
Published 10 ಜನವರಿ 2024, 19:36 IST
Last Updated 10 ಜನವರಿ 2024, 19:36 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ಟೋಕಿಯೋ ವಿಮಾನ ನಿಲ್ದಾಣದಲ್ಲಿ ಒಂದು ಪ್ರಯಾಣಿಕ ವಿಮಾನವೂ ಮತ್ತೊಂದು ಪುಟ್ಟ ಕೋಸ್ಟ್‌ ಗಾರ್ಡ್‌ ವಿಮಾನವೂ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ದೂರದಿಂದ ನೋಡುವವರಿಗೆ ಭಾರಿ ಪ್ರಮಾಣದ ಸಾವು ನೋವು ಆಗಿದೆ ಎಂದುಕೊಳ್ಳುವಷ್ಟು ಭೀಕರ ದೃಶ್ಯಗಳವು. ದುರದೃಷ್ಟವಶಾತ್‌ ಪುಟ್ಟ ಕೋಸ್ಟ್‌ ಗಾರ್ಡ್‌ ವಿಮಾನದಲ್ಲಿದ್ದ ಆರು ಸಿಬ್ಬಂದಿಯ ಪೈಕಿ ಐವರು ಮೃತಪಟ್ಟರು. ಆದರೆ ಒಟ್ಟು 379 ಜನರಿದ್ದ ಪ್ರಯಾಣಿಕ ವಿಮಾನದಿಂದ ಸಿಬ್ಬಂದಿಗಳ ಸಮೇತ ಎಲ್ಲರೂ ಹದಿನೆಂಟು ನಿಮಿಷದಲ್ಲಿ ಹೊರಬಂದರು.

ಸುರಕ್ಷತೆಯ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದರಿಂದ ಹೇಗೆ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂಬುದಕ್ಕೆ ಇದೊಂದು ಅದ್ಭುತ ಉದಾಹರಣೆ. ಆದರೆ ಜಗತ್ತೇ ನಿಬ್ಬೆರಗಾಗಿದ್ದು ವಿಮಾನದ ಒಳಗಿನ ದೃಶ್ಯವನ್ನು ನೋಡಿ! ಜಪಾನಿನ ಜನರು ತೋರಿಸಿದ ಸಂಯಮಕ್ಕೆ ಅಚ್ಚರಿಗೊಳಗಾಗದವರೇ ಇಲ್ಲ. ತಮ್ಮದೇ ವಿಮಾನಕ್ಕೆ ಬೆಂಕಿ ಬಿದ್ದದ್ದು ಕಿಟಕಿಗಳಿಂದ ಕಾಣುತ್ತಿದ್ದರೂ ಯಾರೂಕಿರುಚಾಡಲಿಲ್ಲ, ಒಬ್ಬರನ್ನೊಬ್ಬರು ಮೆಟ್ಟಿ, ಮತ್ತೊಬ್ಬರನ್ನು ನೂಕಿ ಯಾರೂ ನಿರ್ಗಮನ ದ್ವಾರದೆಡೆಗೆ ಧಾವಿಸಿ ಅಲ್ಲಿ ಗುಂಪುಗೂಡಲಿಲ್ಲ. ತಮ್ಮತಮ್ಮ ಆಸನದಲ್ಲಿ ಕುಳಿತೇ ಇದ್ದರು. ಸಿಬ್ಬಂದಿಯ ಸಲಹೆಯನ್ನು ಪಾಲಿಸುತ್ತ ಉದ್ವೇಗಗೊಳ್ಳದೇ ಶಾಂತಚಿತ್ತರಾಗಿ ತುರ್ತು ನಿರ್ಗಮನಕ್ಕಾಗಿ ಇದ್ದ ಜಾರುದಾರಿಯ ಮೂಲಕ ಎಲ್ಲರೂ ಶಿಸ್ತಿನಿಂದ ಹೊರಬಂದಿದ್ದು ಜಪಾನೀಯರ ಮಾಗಿದ ಮನಃಸ್ಥಿತಿಗೊಂದು ನಿದರ್ಶನದಂತಿತ್ತು. ಈ ಜಾರುದಾರಿಯ ಮೂಲಕ ಹೊರಬರಬೇಕಾದರೆ ಯಾರೂ ತಮ್ಮ ಪುಟ್ಟ ಬ್ಯಾಗುಗಳನ್ನೂ ತರುವಂತಿಲ್ಲ. ಅದಕ್ಕೆ ಯಾರೊಬ್ಬರೂ ಗೊಣಗಲಿಲ್ಲ. ಹಾಗಾಗಿ ಸಮಯ ವ್ಯರ್ಥವಾಗದೇ ಪ್ರತಿಯೊಬ್ಬರೂ ಹೊರಬರುವಂತಾಯಿತು.

ಆ ಪ್ರಯಾಣಿಕರ ಜಾಗದಲ್ಲಿ ನಾವೇ ಇದ್ದರೆ ಏನು ಮಾಡುತ್ತಿದ್ದೆವು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ಜಪಾನೀಯರ ಆ ವರ್ತನೆ ಎಷ್ಟು ಅಪರೂಪದ್ದು ಎಂಬುದು ಅರಿವಾಗುತ್ತದೆ. ಜನರನ್ನು ರಕ್ಷಿಸಿದ ಸಿಬ್ಬಂದಿ ಇರಲಿ, ಸುರಕ್ಷಿತವಾಗಿ ಹೊರಬಂದ ಜನರಿರಲಿ ಅವರೆಲ್ಲರೂ ತೋರಿಸಿದ ಪ್ರಬುದ್ಧತೆ, ನಿಯಮ ಪಾಲನೆ ನಮ್ಮೆಲ್ಲರಿಗೂ ಬಹುದೊಡ್ಡ ಪಾಠ. ಬದುಕಿನಲ್ಲಿ ಆಘಾತಗಳು, ಆಕಸ್ಮಿಕಗಳು ಅನಿರೀಕ್ಷಿತವಾಗಿ ನಡೆದೇ ನಡೆಯುತ್ತವೆ. ಆದರೆ ಅವುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಮುಖ್ಯ. ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ, ಉದ್ವೇಗಗೊಳ್ಳದ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದರಿಂದ ಅದೆಷ್ಟೋ ಅನಾಹುತಗಳನ್ನು ತಡೆಯಬಹುದು.

ತಾಳಿದವನು ಬಾಳಿಯಾನು, ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು ಎಂಬ ಗಾದೆಗಳು ಆ ವಿಮಾನ ಪ್ರಯಾಣಿಕರ ಬದುಕಿನಲ್ಲಿ ಮಾತ್ರವಲ್ಲನಮ್ಮೆಲ್ಲರ ಜೀವನದಲ್ಲೂ ಅರ್ಥಪೂರ್ಣವೇ. ಎಂಥ ಅಸಹನೀಯ ಸಂದರ್ಭವೇ ಬರಲಿ, ಅದೆಂಥ ಕಡುಕಷ್ಟವೇ ಬರಲಿ ದುಡುಕುವಮುನ್ನ ಕ್ಷಣಕಾಲ ಯೋಚಿಸಿ ಪ್ರತಿಕ್ರಿಯಿಸಿದರೆ, ನಿರ್ಧಾರ ಕೈಗೊಂಡರೆ ಎಷ್ಟೋ ಸಮಸ್ಯೆಗಳಿಗೆ ಸರಳ ಪರಿಹಾರ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT