ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ವಯಸ್ಸೆಂಬುದು ಬರಿಯ ಸಂಖ್ಯೆಯಷ್ಟೇ

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ನಿಮ್ಮ ವಯಸ್ಸೆಷ್ಟು ಎಂದು ಇಂಗ್ಲಿಷ್‌ನಲ್ಲಿ ಕೇಳುವುದಕ್ಕೆ ‘How old are you?’ ಎಂದು ಪ್ರಶ್ನಿಸುತ್ತಾರೆ. ನಮ್ಮ ಕರ್ನಾಟಕದ ಶ್ರೇಷ್ಠ ಶಿಕ್ಷಣ ತಜ್ಞ ಎಚ್. ನರಸಿಂಹಯ್ಯನವರನ್ನು ಈ ರೀತಿ ಪ್ರಶ್ನಿಸಿದಾಗ ‘I am 75 years young’ ಎಂದು ಉತ್ತರಿಸುತ್ತಿದ್ದರಂತೆ. ಅದೇ ರೀತಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತರು ತಮ್ಮ 90ನೆಯ ವಯಸ್ಸಿನಲ್ಲೂ ಗೆಜ್ಜೆ ಕಟ್ಟಿ ಯಕ್ಷಗಾನ ಮಾಡುತ್ತಿದ್ದರು. ಆದರೆ ಇಂದಿನ ಬಹುಪಾಲು ಯುವಕರು 35 ವರ್ಷಕ್ಕೆ ‘ಓಲ್ಡ್’ ಆಗಿಬಿಟ್ಟಿರುತ್ತಾರೆ.

ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ. ಅದು ದೇಹಕ್ಕಾಗುತ್ತದೆಯೇ ವಿನಃ ಮನಸ್ಸಿಗಲ್ಲ. ಎಷ್ಟೇ ವಯಸ್ಸಾದರೂ ನಮ್ಮಲ್ಲಿ ಜೀವನೋತ್ಸಾಹವಿದ್ದರೆ ಸದಾ ಯುವಕರಾಗಿರಲು ಸಾಧ್ಯ. ಇದನ್ನು ಮಾಡಿ ತೋರಿಸಿದ ಹಲವಾರು ಸಾಧಕರ ಉದಾಹರಣೆಗಳು ನಮ್ಮ ನಡುವೆ ಇವೆ. ಅದರಲ್ಲಿ ತೀರಾ ಇತ್ತೀಚಿನದು ಎಂದರೆ ನಮ್ಮ ನಾಡಿನ ಹೆಮ್ಮೆಯ ಟೆನ್ನಿಸ್ ಪಟು, ಕೊಡಗಿನ ಕಲಿ ರೋಹನ್ ಬೋಪಣ್ಣ ಅವರದ್ದು.

ಈ ವರ್ಷದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಡಬಲ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತರಾದ 43 ವರ್ಷ ವಯಸ್ಸಿನ ಕನ್ನಡಿಗ ರೋಹನ್ ಬೋಪಣ್ಣ, ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ವರ್ಷ ಏಷ್ಯನ್ ಕ್ರೀಡಾಕೂಟದ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ನಮ್ಮ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಬೋಪಣ್ಣ, 2017ರಲ್ಲಿ ಅಮೆರಿಕನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಜಯಸಿದ್ದರು.

ಪಾಕಿಸ್ತಾನದ ಅಸೀಂ ಅಲ್ ಖುರೇಶಿ ಜೊತೆಗೆ 2013ರಲ್ಲಿ ಹಾಗೂ 2023ರಲ್ಲಿ ಅಮೆರಿಕನ್ ಓಪನ್ ಟೆನ್ನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಫೈನಲ್ಸ್ ತಲುಪಿದ್ದರು. ಈ ಜೋಡಿ ‘ಇಂಡೋ- ಪಾಕ್ ಎಕ್ಸ್ ಪ್ರೆಸ್’ ಎಂದೇ ಪ್ರಸಿದ್ಧವಾಗಿ, ವಿಷಮ ಸಂಬಂಧ ಹೊಂದಿರುವ ಈ ಎರಡು ದೇಶಗಳ ಕ್ರೀಡಾ ಬಾಂಧವ್ಯವನ್ನು ಬೆಸೆಯುವ ಕೆಲಸವನ್ನು ಕೂಡಾ ಮಾಡಿತ್ತು. ಐದು ತಿಂಗಳು ಒಂದೂ ಪಂದ್ಯ ಗೆಲ್ಲದೇ ತನಗೆ ವಯಸ್ಸಾಗಿದೆ ಇನ್ನು ಆಟ ಸಾಕು ಎಂದು ನಿವೃತ್ತಿಯ ಆಲೋಚನೆ ಮಾಡಿದ್ದ ಬೋಪಣ್ಣ, ತನ್ನ ವೃತ್ತಿ ಜೀವನದಲ್ಲಿ ಪುರುಷರ ಡಬಲ್ಸ್‌ನಲ್ಲಿ ಒಂದಾದರೂ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಲೇ ಬೇಕು ಎನ್ನುವ ಕನಸಿನೊಂದಿಗೆ ನಿವೃತ್ತಿಯ ವಿಚಾರ ಬಿಟ್ಟು, ತನ್ನ ವಯಸ್ಸಿಗೇ ಸವಾಲು ಹಾಕಿಕೊಂಡು ನಿರಂತರ ಅಭ್ಯಾಸದಲ್ಲಿ ತೊಡಗಿದರು.

ಬಹಳ ಹೆಚ್ಚಿನ ದೈಹಿಕ ಶ್ರಮದ ಬೇಡುವ ಟೆನ್ನಿಸ್‌ನಂತಹ ಕ್ರೀಡೆಯಲ್ಲಿ ವಯಸ್ಸು 35 ದಾಟಿದ ನಂತರ ಸಕ್ರಿಯವಾಗಿ ಆಟವಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ದೈಹಿಕ ಕ್ಷಮತೆಯ ಜೊತೆಗೆ ಮಾನಸಿಕ ಸದೃಢತೆಯೂ ಬೇಕು. ದೃಢವಾದ ಮಾನಸಿಕ ಹಾಗೂ ದೈಹಿಕ ಸಂತುಲತೆಯೊಂದಿಗೆ ನಿರಂತರ ಅಭ್ಯಾಸ ಮಾಡಿದ ರೋಹನ್ ಬೋಪಣ್ಣ ತಮ್ಮ ನಲವತ್ತಮೂರನೇ ವಯಸ್ಸಿನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಡಬಲ್ಸ್ ಟೆನ್ನಿಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ ಹಾಗೂ ಮಾಡಲೇಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿದ್ದಾರೆ. ‘ನಾನು ನನ್ನ ಆಟದ 43ನೇ ಹಂತದಲ್ಲಿದ್ದೇನೆ, 43ನೇ ವಯಸ್ಸಿನಲ್ಲಲ್ಲ’ ಎಂದು ನುಡಿದಿರುವ ಅವರು, ನಮ್ಮನ್ನು ನಾವು ನಂಬುವ ಆತ್ಮವಿಶ್ವಾಸವೇ ಯಶಸ್ಸೆಂಬ ರೈಲಿನ ಎಂಜಿನ್ನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಯ್ಯೋ ನನಗೆ ವಯಸ್ಸಾಯಿತು ಇನ್ನೇನು ಮಾಡಲು ಸಾಧ್ಯವಿಲ್ಲ ಎಂದುಕೊಂಡು ಮೂಲೆ ಸೇರುವವರಿಗೆ, ಸಾಧಿಸುವ ಛಲವಿದ್ದರೆ, ವಯಸ್ಸು ಎಂದಿಗೂ ತಡೆಗೋಡೆಯಾಗದು ಎಂಬುದನ್ನು ಮಾಡಿ ತೋರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT