ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಗೊಬ್ಬರಕ್ಕೂ ಸಿಗಲಿ ಗೌರವ

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಸ ಋಷಿ ಕುವೆಂಪುರವರು ನಮ್ಮ ಸುತ್ತಲೂ ಇರುವ ಸುಂದರ ಪ್ರಕೃತಿಯ ಕುರಿತು ಅದ್ಭುತ ಕವಿತೆಗಳನ್ನು ರಚಿಸಿದ್ದಾರೆ. ಉದಯ ರವಿಯ ಚೆಲುವು, ಮುತ್ತಿನ ಮಣಿಗಳಂತೆ ಗೋಚರಿಸುವ ಇಬ್ಬನಿಯ ಬೆರಗು, ಎದೆಯಲಿ ನಲುಮೆಯ ಚಿಲುಮೆಯನ್ನು ಚಿಮ್ಮಿಸುವ ಹೂವು, ಇವುಗಳು ಕವಿಯ ಕವಿತಾ ವಸ್ತುಗಳಾಗಿರುವಂತೆಯೇ, ಈ ಜಗತ್ತಿನಲ್ಲಿ ಯಾರೂ ಮುಖ್ಯರಲ್ಲ ಯಾರು ಅಮುಖ್ಯರಲ್ಲ ಎಂದು ನಂಬಿರುವ ಕವಿಯಿಂದ ಗೊಬ್ಬರ ಕೂಡ ಕಾವ್ಯವಾಗಿ ಹೊರಹೊಮ್ಮಿರುವುದು ವಿಶೇಷ. ಕುವೆಂಪುರವರ ‘ಕೋಗಿಲೆ ಮತ್ತು ಸೋವಿಯತ್ ರಷ್ಯಾ’ ಕವನ ಸಂಕಲನದಲ್ಲಿರುವ ‘ಗೊಬ್ಬರ’ ಎನ್ನುವ  ದೀರ್ಘ ಕವಿತೆ, ಸೃಜನಶೀಲನಾದ ಹಾಗೂ ಅಷ್ಟೇ ಸಂವೇದನಾಶೀಲನಾದ ವ್ಯಕ್ತಿ ಒಬ್ಬ ಹೇಗೆ ಚಿಂತಿಸಬಹುದು ಎನ್ನುವುದಕ್ಕೆ ಹಿಡಿದ ಕನ್ನಡಿ.  

ನಮಗೆ ಮರದ ತುದಿಯಲ್ಲಿ  ಅರಳಿ ನಿಂತು, ತಂಗಾಳಿಗೊಲೆವ ಸುಂದರ ಹೂವು ಕಾಣಿಸುತ್ತದೆ. ಅದರ ಚೆಲುವು, ಪರಿಮಳ ನಮ್ಮ ಕಣ್ಮನ ಸೆಳೆಯುತ್ತದೆ. ಆದರೆ ಈ ಮರವನ್ನು ಹಿಡಿದೆತ್ತಿ ನಿಲ್ಲಿಸಿದ ಮರದ ಒಳ ಆಳದ ಬೇರಿನ, ನಿಸ್ವಾರ್ಥ ಕಾಯಕ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಹೂವಿನ ಸೌಂದರ್ಯ ವಿಶೇಷ ಪದಗಳಿಂದ ವರ್ಣಿಸಲ್ಪಡುತ್ತದೆ, ಹಣ್ಣಿನ ಸವಿ ಪ್ರಶಂಸೆಗೆ ಪಾತ್ರವಾಗುತ್ತದೆ. ಆದರೆ ಈ ಸೌಂದರ್ಯಕ್ಕೆ, ಸವಿಗೆ ಜೀವವನ್ನಿತ್ತ ಗೊಬ್ಬರದ ನಿಸ್ಪೃಹ ಸೇವೆ ಕಣ್ಣಿಗೆ ಕಾಣಿಸುವುದೇ ಇಲ್ಲ. ಆದರೆ ಸೂಕ್ಷ್ಮ ಗ್ರಹಿಕೆಯ,  ಜೀವನ ಪ್ರೀತಿಯುಳ್ಳ ಕವಿಗೆ, ಇಲ್ಲಿ ‘ಗೊಬ್ಬರ’  ಕೂಡಾ ಕವಿತಾ ವಸ್ತುವಾಗುತ್ತದೆ. 

‘ಗೊಬ್ಬರವನಲ್ಲಗಳೆಯುವೆ ಏಕೆ ಮರದ ತುದಿ ನಲ್ಗಂಪುವೆತ್ತು ತಂಗಾಳಿಗೊಲೆವ ಹೂವೆ? ಬೇರುಗಳಿಗಿಲ್ಲದಿರೆ ಗೊಬ್ಬರಂ ಹೇಳೆನಗೆ ವೃಕ್ಷಕೆಲ್ಲಿಯದು ಹೂವಿನ ಹಬ್ಬ? ಗೊಬ್ಬರದ ಜೀವವನೆ ಹೀರಿ ಕೊಬ್ಬಿಹ ಹೂವೆ, ಕಬ್ಬಕ್ಕೆ ನೀ ಮಾತ್ರ ವಸ್ತುವೇಂ? ನಿನ್ನಂತೆ ಗೊಬ್ಬರಂ ಕಬ್ಬಕ್ಕೆ ಸಾಮಗ್ರಿಯಾಗಬಾರದೆ ಹೇಳು? ಗೊಬ್ಬರದ ಸತ್ವವನ್ನು ಹೀರಿ ತನ್ನ ಸೌಂದರ್ಯದಿಂದ ಕೊಬ್ಬುತ್ತಿರುವ ಹೂವನ್ನು ಕವಿ, ಬೇರುಗಳಿಗೆ ಗೊಬ್ಬರವಿಲ್ಲದಿದ್ದರೆ ವೃಕ್ಷಕ್ಕೆ ಎಲ್ಲಿಯ ಹೂವಿನ ಹಬ್ಬ?’ ಎಂಬುದಾಗಿ ಕುವೆಂಪು ಪ್ರಶ್ನಿಸುತ್ತಾರೆ. ಜೊತೆಗೆ ಇಂದು ನಗುತ್ತಿರುವ ಹೂವು ನಾಳೆ ಬಾಡಿ ನೆಲಕ್ಕೆ ಬಿದ್ದು ಗೊಬ್ಬರವಾಗಲೇಬೇಕು. ಇದು ಪ್ರಕೃತಿಯ ನಿಯಮ. ಹೂವಿನ ಭೋಗದ ಪರಿಮಳದ ಹಿಂದೆ, ಗೊಬ್ಬರದ ಮಣ್ಣಿನ ವಾಸನೆಯ ಪುಷ್ಟಿ ಇದೆ. ಅಂತೆಯೇ  ನಾವು ಬಾಯಿ ಚಪ್ಪರಿಸುತ್ತಾ ಸವಿಯುವ ಫಲದ ಸಿಹಿಯಲ್ಲಿ, ವಾಸನೆ ಎಂದು ಮೂಗು ಮುರಿವ ಗೊಬ್ಬರದ ಪಾಲು ಬಹಳ ದೊಡ್ಡದು. 

ಇದೇ ರೀತಿ ನಮ್ಮ ಬದುಕನ್ನು ಹಿರಿದಾಗಿಸಿ, ನಮಗೆ ಗೊಬ್ಬರದಂತೆ ಸತ್ವವನ್ನು, ಪುಷ್ಟಿಯನ್ನು ಕೊಟ್ಟು ಮರೆಯಾದವರೆಷ್ಟೋ? ಆದರೆ ಈ ಜಗತ್ತಿನ ಕಣ್ಣಿಗೆ ಬೀಳುವುದು ಹೊರಗಿನ ಥಳಕು ಮಾತ್ರ. ಉತ್ತಮ ಫಲಕ್ಕೆ ಕಾರಣವಾಗುವ ಗೊಬ್ಬರಕ್ಕೆ ನಿಜವಾದ ಬೆಲೆ ಸಿಕ್ಕಲೇಬೇಕು. ಅದರೆಡೆಗೆ ತಿರಸ್ಕಾರದ ನೋಟ ಸಲ್ಲ. ಅಂತೆಯೇ ನಮ್ಮ ಬದುಕನ್ನು ಹಸನಾಗಿಸಲು  ತೆರೆ ಮರೆಯಲ್ಲಿ ನಿಂತು ಶ್ರಮಿಸಿದವರ ನಿಸ್ವಾರ್ಥ ಸೇವೆಗೂ ಸೂಕ್ತ ಮನ್ನಣೆ ಸದಾ ದೊರಕಬೇಕು. ಆ ಕೃತಜ್ಞತಾ ಭಾವ ಸದಾ ನಮ್ಮಲ್ಲಿರಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT