ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ನಾನು ಎಂಬ ಭಾವ ನಾಶವಾಗಲಿ

ನವೀನ ಕುಮಾರ್‌ ಹೊಸದುರ್ಗ
Published 12 ಮೇ 2024, 23:30 IST
Last Updated 12 ಮೇ 2024, 23:30 IST
ಅಕ್ಷರ ಗಾತ್ರ

ಇದು ಎಲ್ಲರಿಗೂ ಗೊತ್ತಿರುವ ಕನಕದಾಸರ ಜನಪ್ರಿಯ ಕಥೆ. ಒಮ್ಮೆ ವೇದಾಂತಿಗಳ ಸಭೆಯಲ್ಲಿ ಕನಕದಾಸರ ಗುರುಗಳಾದ ವ್ಯಾಸತೀರ್ಥರು ‘ಸ್ವರ್ಗಕ್ಕೆ ಯಾರು ಹೋಗಬಹುದು’ ಎಂದು ಪ್ರಶ್ನಿಸಿದರು. ಆಗ ಕನಕರು ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರು. ಮೊದಲೇ ಕನಕದಾಸರ ಮೇಲೆ ಅಸೂಯೆಯಿದ್ದ ಕೆಲವು ವೇದಾಂತಿಗಳು ಕನಕ ಉದ್ಧಟತನದಿಂದ ಉತ್ತರಿಸುತ್ತಿದ್ದಾನೆ ಎಂದು ವ್ಯಾಸತೀರ್ಥರ ಬಳಿ ದೂರನ್ನಿತ್ತಾಗ, ಕನಕದಾಸರನ್ನು ಚೆನ್ನಾಗಿ ಬಲ್ಲ ಗುರುಗಳು ಅದಕ್ಕೇನೋ ಅರ್ಥವಿರಬೇಕೆಂದು ಅವರ ಬಳಿ ‘ಹೀಗೇಕೆ ಹೇಳಿದೆ’ ಎಂದು ಕೇಳಿದರು. ಆಗ ಕನಕದಾಸರು, ‘ನಾನು’ ಎಂಬ ಅಹಂಕಾರದ ಭಾವ ನಮ್ಮಿಂದ ದೂರವಾದರೆ ಯಾರು ಬೇಕಾದರೂ ಮುಕ್ತಿಯನ್ನು ಹೊಂದಿ ಸ್ವರ್ಗಕ್ಕೆ ಹೋಗಬಹುದು ಎಂಬ ಅತ್ಯಂತ ಅರ್ಥಪೂರ್ಣವಾದ ವಿವರಣೆಯನ್ನು ನೀಡಿದರು.

ಕನಕದಾಸರ ಈ ಮಾತು ಸಾರ್ವಕಾಲಿಕ. ಇಂದು ಎಲ್ಲೆಡೆಯಲ್ಲೂ ‘ಎಲ್ಲವನ್ನೂ ನಾನೇ ಮಾಡಿದೆ’, ‘ಎಲ್ಲವೂ ನನ್ನಿಂದಲೇ’ ಎಂಬಿತ್ಯಾದಿಯಾದ ಸ್ವಪ್ರಶಂಸೆಯ ಸೊಲ್ಲೇ ಹೆಚ್ಚಾಗಿ ಕೇಳಿ ಬರುತ್ತಿದೆ. ಕನ್ನಡದ ಹಿರಿಯ ಕವಿ ಎಸ್ ವಿ ಪರಮೇಶ್ವರ ಭಟ್ಟರು ತಮ್ಮ ಜನಪ್ರಿಯ ಭಾವಗೀತೆಯೊಂದರಲ್ಲಿ ‘ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ...  ಸೋತ ಉಲಿ ಏಳಲಿ ದೀಪ ಹಚ್ಚ... ನನ್ನಂತರಂಗದಲ್ಲಿ ನಂದದೆ ನಿಂದಿಪ ನಂದಾದೀಪವಾಗಿರಲಿ ದೀಪ ಹಚ್ಚ...’ ಎಂಬುದಾಗಿ ಹೇಳುತ್ತಾರೆ. ‘ನಾನು’ ಎಂಬ ಅಹಂಕಾರದ ಪತಂಗ ‘ನೀನು’ ಎಂಬ ಜ್ಞಾನದ ಜ್ಯೋತಿಯಲ್ಲಿ ಸುಟ್ಟು ಹೋಗಲಿ, ಅದರ ಸೋಲಿನ ಸೊಲ್ಲು ಕೇಳಿಸಲಿ. ಆ ಜ್ಞಾನದ ಜ್ಯೋತಿ ನನ್ನನ್ನು ಸದಾ ನಿಂದಿಸುತ್ತಾ ಸರಿದಾರಿಗೆ ತರುವ ನಂದಾದೀಪವಾಗಿ ನನ್ನೆದೆಯಲ್ಲಿ ಸದಾ  ಬೆಳಗಲಿ ಎನ್ನುವ ಈ ಪ್ರಾರ್ಥನೆ ಎಷ್ಟು ಅರ್ಥಪೂರ್ಣವಾಗಿದೆಯಲ್ಲವೇ? ಯಾವುದೇ ಯಶಸ್ಸಿರಬಹುದು ಅದು ಎಂದಿಗೂ ಏಕ ವ್ಯಕ್ತಿ ಪ್ರದರ್ಶನವಾಗಲು ಸಾಧ್ಯವಿಲ್ಲ. ತಂಡವಾಗಿ ಪ್ರಯತ್ನ ಪಟ್ಟಾಗ ಮಾತ್ರ ಯಶಸ್ಸು ಸಾಧ್ಯ.

ವೈಯಕ್ತಿಕ ಆಟಗಳಾದ ಟೆನ್ನಿಸ್, ಚೆಸ್ ಮುಂತಾದವುಗಳಲ್ಲಿ ಕೂಡ ಯಶಸ್ವೀ ಕ್ರೀಡಾಪಟುವಿನ ಹಿಂದೆ ಅವನಿಗೆ ಸಹಕರಿಸುವ ತಂಡ ತೆರೆಮರೆಯಲ್ಲಿ ಅವಿರತವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಅದಕ್ಕೇ ಹೇಳುವುದು TEAM ಎನ್ನುವ ಶಬ್ದದಲ್ಲಿ I ಎನ್ನುವ ಅಕ್ಷರವಿಲ್ಲ ಎಂದು. ಗೆಲುವಿಗೆ ನಾನೊಬ್ಬನೇ ಕಾರಣಕರ್ತ, ಸೋಲಿಗೆ ಮಾತ್ರ ಬೇರೆಯವರು ಹೊಣೆಗಾರರು ಎಂಬ ಭಾವ ಎಂದಿಗೂ ಸಲ್ಲ.  ಸೋಲಿಗೆ ಇನ್ನೊಬ್ಬರು ಕಾರಣ ಎಂದು ನಾವು ಬೆರಳು ಮಾಡುವಾಗ ಮಿಕ್ಕ ಮೂರು ಬೆರಳುಗಳು ನಮ್ಮ ಕಡೆಯೇ ಮುಖ ಮಾಡಿರುತ್ತವೆ, ಹಾಗಾಗಿ ಆ ಸೋಲಿನಲ್ಲಿ ನನ್ನ ಪಾತ್ರ ದೊಡ್ಡದಿದೆ ಎಂಬುದನ್ನು ನಾನು ಸದಾ ಅರ್ಥ ಮಾಡಿಕೊಳ್ಳಬೇಕು. ಅಜ್ಞಾನ ಜನ್ಯವಾದ ಅಹಂಕಾರಕ್ಕೆ ಎಡೆ ಮಾಡಿಕೊಡುವ ‘ನಾನು’ ಎಂಬ ಭಾವವನ್ನು ಸಾಧ್ಯವಾದಷ್ಟು ತೊರೆದು, ಜ್ಞಾನಜನ್ಯವಾದ ಆತ್ಮವಿಶ್ವಾಸವನ್ನು ಹೊಂದಲು ‘ನಾವು’ ಎಂಬ ಭಾವನೆ ಅತಿ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT