ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು..

ನುಡಿ ಬೆಳಗು: ಅಲೆಗೆ ಸಿಲುಕಿದ ಹಡಗು
Published 16 ಏಪ್ರಿಲ್ 2024, 18:56 IST
Last Updated 16 ಏಪ್ರಿಲ್ 2024, 18:56 IST
ಅಕ್ಷರ ಗಾತ್ರ

ಒಬ್ಬ ಸೂಫಿ ಸಂತ ದೊಡ್ಡ ಹಡಗಿನಲ್ಲಿ ಪಯಣಕ್ಕೆ ಹೊರಟಿದ್ದ. ಆತನ ಉಡುಪು, ನಗು ಮೊಗ, ಮೌನದ ನಡೆ ಎಲ್ಲವೂ ವಿಶೇಷವಾಗಿದ್ದವು. ಹಡಗಿನೊಳಗಿದ್ದ ಜನ ಆಕರ್ಷಿತರಾಗಿ ಸಂತನಿಗೆ ಗೌರವ ಸೂಚಿಸಲು ಕಾಲಿಗೆ ಬಿದ್ದರು. ಆತ ದಯವಿಟ್ಟು ಇದೆಲ್ಲಾ ಮಾಡಬೇಡಿ ಎಂದರೂ ಅವರು ಕೇಳಲಿಲ್ಲ. ‘ನಮಗೆ ಆಶೀರ್ವಾದ ಮಾಡಿ ಏನಾದರೂ ಉಪದೇಶ ಹೇಳಿ’ ಎಂದು ದುಂಬಾಲು ಬಿದ್ದರು. ಆತ ‘ಎಲ್ಲರಿಗೂ ಸಾವು ನಿಶ್ಚಿತ; ಅದರ ಆಗಮನ ಅನಿಶ್ಚಿತ, ಅದರ ಸಾಮೀಪ್ಯ ಖಚಿತ’ ಎಂಬ ಒಂದು ವಾಕ್ಯವನ್ನು ನುಡಿದು ಧ್ಯಾನಕ್ಕೆ ಕುಳಿತನು.

ಈ ಮಾತು ಕೆಲವರಿಗೆ ಇಷ್ಟವಾಗಲಿಲ್ಲ. ಇವೆಲ್ಲ ನಮಗೆ ಗೊತ್ತಿರುವುದೇ ಅಲ್ಲವೇ? ಈ ಜುಜುಬಿ ಮಾತು ಹೇಳಲು ಈ ದೊಣ್ಣೆನಾಯಕನೇ ಆಗಬೇಕೆ? ಈತನೊಬ್ಬ ಶತದಡ್ಡ ಎಂದು ಮೂಗು ಮುರಿದರು.

ಒಮ್ಮೆಲೇ ನಡು ಸಮುದ್ರದಲ್ಲಿ ಹಡಗು ಭೀಕರ ಸುಂಟರಗಾಳಿಗೆ ಸಿಲುಕಿತು. ಗಾಳಿಯ ಆರ್ಭಟಕ್ಕೆ ಅಲೆಗಳು ಎಲ್ಲೆ ಮೀರಿ ಕುಣಿಯತೊಡಗಿದವು. ಸಾಗರದಲ್ಲಿ ಪ್ರಬಲ ಚಂಡಮಾರುತ ಎದ್ದಿರುವುದು ನಿಶ್ಚಿತವಾಗಿತ್ತು. ಎಲ್ಲರೂ ಆತಂಕದಿಂದ ಕೂಗತೊಡಗಿದರು. ಇನ್ನೇನು ತಮ್ಮ ಪ್ರಾಣ ಹಾರಿ ಹೋಗಲಿದೆ ಎಂದು ಚಡಪಡಿಸಿದರು. ಆಗಸದ ಕಡೆ ಕೈ ಮುಗಿದು ದೇವರಲ್ಲಿ ಕಾಪಾಡು ಓ ತಂದೆ ಎಂದು ಬೇಡಿಕೊಳ್ಳತೊಡಗಿದರು. ನೀರಿನ ಹೊಡೆತಕ್ಕೆ ಅವರೆಲ್ಲಾ ತತ್ತರಿಸಿದರು. ಯಾವುದಾದರೂ ದೊಡ್ಡ ಶಕ್ತಿ ಆವರಿಸಿ ಬಂದು ತಮ್ಮನ್ನು ಕಾಪಾಡುತ್ತದೆ ಎಂದು ದೆಸೆದೆಸೆಗೆ ಕೋರಿಕೊಂಡರು. ತಮ್ಮ ಸಾವು ತಮ್ಮ ಕಣ್ಣ ಮುಂದೆಯೇ ಬಂದು ತಕಪಕ ಕುಣಿಯುತ್ತಿರುವುದನ್ನು ಅವರೆಲ್ಲ ಕಾಣುತ್ತಿದ್ದರು.

ಎಲ್ಲರೂ ಅರಚಾಡುತ್ತಿದ್ದರೂ ಸೂಫಿ ಸಂತ ಮಾತ್ರ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದ. ಮೊಗದ ಮೇಲಿನ ನಗು ಮುದ್ರೆ ತುಸುವೂ ಮಾಯವಾಗಿರಲಿಲ್ಲ. ಆತನ ಮುಖದಲ್ಲಿ ಭಯದ ಯಾವ ಗೆರೆಯೂ ಮೂಡಿರಲಿಲ್ಲ. ಕೆಲ ಕಾಲದ ನಂತರ ಬಂದಿದ್ದ ಚಂಡಮಾರುತ ಹೆಚ್ಚು ಅನಾಹುತಗಳನ್ನು ಮಾಡದೆ ಹೊರಟು ಹೋಯಿತು. ಕೆಲವರಿಗೆ ಗಾಯಗಳಾಗಿದ್ದು ಬಿಟ್ಟರೆ ಯಾರೂ ಸತ್ತಿರಲಿಲ್ಲ. ಆದರೆ ಅವರೆಲ್ಲಾ ಪ್ರೀತಿಯಿಂದ ತಂದಿದ್ದ ಜತನದ ವಸ್ತುಗಳು ಮಾತ್ರ ಸಮುದ್ರದ ಪಾಲಾಗಿದ್ದವು. ಆಕಾಶ ತಿಳಿಯಾಗಿ, ಕಡಲು ಮತ್ತೆ ಮೊದಲಿನಂತೆ ಶಾಂತವಾಯಿತು. ಜೀವಭಯದಿಂದ ನಲುಗಿದ್ದ ಜನರೆಲ್ಲಾ ಶಾಂತಚಿತ್ತ ಸಂತನ ಬಳಿಗೆ ಬಂದು ‘ನೀನೇಕೆ ನಮ್ಮಂತೆ ಹೆದರಲಿಲ್ಲ? ಸಾವು ಕಣ್ಣೆದುರಿಗೆ ಬಂದು ನಿಂತಾಗಲೂ ಅಳುಕಲಿಲ್ಲ? ನಿನಗೆ ಜೀವದ ಮೇಲೆ ಆಸೆಯೇ ಇಲ್ಲವೇ’ ಎಂದು ಕೇಳಿದರು.

ಸಂತ ನಕ್ಕು ‘ಖಂಡಿತಾ ನನಗೂ ಬದುಕಬೇಕೆಂಬ ಆಸೆ ಇದೆ. ಆದರೆ ಸಾವು ನಿಶ್ಚಿತ ಎಂದು ಗೊತ್ತಾದ ಮೇಲೆ ಅದಕ್ಕೆ ಹೆದರುವುದನ್ನು ಬಿಟ್ಟಿದ್ದೇನೆ. ಸಾವಿನ ಆಗಮನ ಅನಿಶ್ಚಿತವಾದ ಕಾರಣ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಮ್ಮೆಲ್ಲರ ಮರಣಗಳು ಎಷ್ಟು ಹತ್ತಿರ ಬಂದು ನಿಂತು ನಮ್ಮನ್ನು ನೋಡಿ ಹೋದವು ಎಂಬುದನ್ನು ನೀವೆಲ್ಲ ಕಂಡಿರಿ. ಸಾವು ಸದಾ ನಮ್ಮ ಸಮೀಪವೇ ಇರುತ್ತದೆ. ಇವತ್ತು ಚಂಡಮಾರುತವಾಗಿ ಬಂದಿತ್ತು ಅಷ್ಟೆ. ನಾವಾಡುವ ಸುಳ್ಳು, ಮಾಡುವ ಮೋಸ, ಕೆಟ್ಟ ಆಲೋಚನೆ, ಕಪಟ ನಾಟಕಗಳೂ ಕೂಡ ಸಾವಿಗೆ ಸಮವಾದವು. ಇವು ದಿನಾ ಸುಳಿದು ಹೋದರೂ ನಾವು ಅಂಜುವುದಿಲ್ಲ. ಇವತ್ತು ಸಾಗರದ ಅಲೆಗಳು ನನ್ನ ಉಳಿಸಿ ಹೊಸಜನ್ಮ ಕೊಟ್ಟಿವೆ. ಹೊಸ ಮನುಷ್ಯನಾಗು ಎಂದು ನನಗೆ ಬುದ್ದಿ ಹೇಳಿ ಹೋದವು’ ಎಂದು ತಣ್ಣಗೆ ಉತ್ತರಿಸಿದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT