ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕೃಪಾಂಕ ಮತ್ತು ಶೈಕ್ಷಣಿಕ ಸ್ಥಿತಿಗತಿ

ಶೈಕ್ಷಣಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳದೆ ಕೃಪಾಂಕಗಳ ಬಗ್ಗೆ ಚರ್ಚೆ ನಡೆಸಿದ್ದೇ ಆದರೆ ಮೂಲ ಸಮಸ್ಯೆ ಮರೆಗೆ ಸರಿಯುತ್ತದೆ
ಉದಯ್‌ ಗಾಂವಕರ್‌
Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ  ಬರೆದ ವಿದ್ಯಾರ್ಥಿಗಳನ್ನು ಕೃಪಾಂಕಗಳ ಮೂಲಕ ಉತ್ತೀರ್ಣ ಮಾಡುವ ಪದ್ಧತಿಯನ್ನು ಮುಂದಿನ ಬಾರಿಯಿಂದ ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 1.70 ಲಕ್ಷ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು ನೀಡಲಾಗಿತ್ತು. ಹೀಗೆ ಕೃಪಾಂಕಗಳನ್ನು ನೀಡದೇ ಇದ್ದಿದ್ದರೆ ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಶೇಕಡ 53ರಷ್ಟು ಆಗಿರುತ್ತಿತ್ತು; ಇದು ಹಿಂದಿನ ಬಾರಿಗೆ ಹೋಲಿಸಿದರೆ ಶೇ 30ರಷ್ಟು ಕಡಿಮೆ.

ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಮೂಲಕ ವೆಬ್‌ಕಾಸ್ಟಿಂಗ್‌
ಅಳವಡಿಸಲಾಗಿತ್ತು. ಅದರಂತೆ, ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಪರಿವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ನಕಲು ಮಾಡುವ ಸಾಧ್ಯತೆಗೆ ದೊಡ್ಡ ಪ್ರಮಾಣದಲ್ಲಿ ತಡೆಯೊಡ್ಡಲಾಗಿತ್ತು.

ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿರುವುದರಿಂದ ತೇರ್ಗಡೆಯ ಪ್ರಮಾಣ ಕಡಿಮೆ ಆಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಅಕ್ರಮಗಳಿಗೆ ತಡೆಯೊಡ್ಡಿದರೆ ತೇರ್ಗಡೆ ಪ್ರಮಾಣ ಕುಸಿಯುತ್ತದೆ ಎಂಬುದು ಯಾರಿಗಾದರೂ ಗೊತ್ತಾಗುವಂಥ ಸಂಗತಿ. ಹಾಗಿದ್ದ ಮೇಲೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಫಲಿತಾಂಶದ ಪ್ರಮಾಣವನ್ನು ಹೆಚ್ಚಿಸಿದ್ದೇಕೆ? ಅದರಿಂದ ಏನು ಸಾಧಿಸಿದಂತೆ ಆಯಿತು ಎಂಬುದು ಅನೇಕರು ಕೇಳುವ ಪ್ರಶ್ನೆ. ವಿದ್ಯಾರ್ಥಿಗಳು ಅವರ ಅರ್ಹತೆಯ ಆಧಾರದಲ್ಲಿ ಪ್ರಗತಿ ಸಾಧಿಸಬೇಕೇ ವಿನಾ ಕೃಪಾಂಕಗಳನ್ನು ಪಡೆದು ಉತ್ತೀರ್ಣರಾಗುವುದಲ್ಲ ಎನ್ನುವುದು ಅವರ ವಾದ.

ಈ ವಾದ ಮೇಲ್ನೋಟಕ್ಕೆ ಆದರ್ಶದ್ದು ಎನಿಸುತ್ತದೆ. ಸಮಸ್ಯೆಯ ಆಳಕ್ಕೆ ಇಳಿದು ನೋಡಿದರೆ, ಇದರಿಂದ ಶೈಕ್ಷಣಿಕ ಹಿನ್ನಡೆಯ ಹೊಣೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಿದಂತೆ ಆಗುತ್ತದೆ. ಹಾಗಾದರೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದನ್ನು ಪ್ರೋತ್ಸಾಹಿಸಬೇಕೆ? ಕೃಪಾಂಕ ನೀಡಿ ತೇರ್ಗಡೆ ಮಾಡುವುದಾದರೆ ಕಲಿಕೆಯ ಗುಣಮಟ್ಟ ಕಡಿಮೆ ಆಗುವುದಿಲ್ಲವೇ? ಇಂತಹ ಅನೇಕ ಪ್ರಶ್ನೆಗಳು ಈಗ ಮುನ್ನೆಲೆಗೆ ಬರುತ್ತವೆ. ಈ ಪ್ರಶ್ನೆಗಳನ್ನು ಇನ್ನೊಂದು ನೆಲೆಯಲ್ಲಿ ಅರ್ಥಮಾಡಿಕೊಳ್ಳೋಣ.

ಈ ಬಾರಿ ಇಷ್ಟು ಕೃಪಾಂಕಗಳನ್ನು ನೀಡಿದ ನಂತರವೂ 2.28 ಲಕ್ಷದಷ್ಟು ವಿದ್ಯಾರ್ಥಿಗಳು
ಅನುತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆಯ ಫಲಿತಾಂಶ ಶೇ 94ರಷ್ಟಿದ್ದರೆ ಯಾದಗಿರಿ ಜಿಲ್ಲೆಯ ಫಲಿತಾಂಶ
ಶೇ 50ರಷ್ಟಿದೆ. ಕೃಪಾಂಕ ನೀಡದೇ ಹೋಗಿದ್ದರೆ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳ ಫಲಿತಾಂಶದ ಪ್ರಮಾಣ ತೀರಾ ಕಡಿಮೆಯಾಗುತ್ತಿತ್ತು. ಈ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಮುನ್ನಡೆಯುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಉಂಟಾಗುತ್ತಿತ್ತು. ಇಂತಹ ಅನಾಹುತವನ್ನು ತಾತ್ಕಾಲಿಕವಾಗಿ ತಡೆಯಲು ಮಂಡಳಿಯು ಕೃಪಾಂಕ ನೀಡಿಕೆಗೆ ಮುಂದಾಗಿರಬಹುದು.

ನಾಡಿನ ಒಂದು ಭಾಗದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಿಕೆಯ ಕೊರತೆ ಏಕೆ ಸಂಭವಿಸುತ್ತದೆ ಎಂಬ ದಿಸೆಯಲ್ಲಿ ವಿಶ್ಲೇಷಣೆ ನಡೆದಿದ್ದರೆ, ಆಗ ಕೊರತೆಯ ದೊಡ್ಡ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತಿತ್ತು. ಹಲವು ಬಗೆಯ ಪ್ರಾದೇಶಿಕ ಅಸಮಾನತೆ ಯನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗದೇ ಹೋದಾಗ ವ್ಯವಸ್ಥೆಯು ಈ ದಿಸೆಯಲ್ಲಿ ಒಳದಾರಿಗಳನ್ನು ಹುಡುಕಿಕೊಳ್ಳುತ್ತದೆ. ಪರೀಕ್ಷೆಯಲ್ಲಿ ನಕಲು ಮಾಡಿಸುವುದು ಅನೇಕ ಕಡೆಗಳಲ್ಲಿ ಅನಿವಾರ್ಯ ಎಂಬಂತೆ ಆಗಿತ್ತು. ಶೈಕ್ಷಣಿಕ ಸ್ಥಿತಿಗತಿಗಳ ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಕೃಪಾಂಕಗಳು ಮತ್ತು ನಕಲು ಮಾಡುವುದರ ಬಗ್ಗೆ  ಚರ್ಚೆ ನಡೆಸಿದ್ದೇ ಆದರೆ ಮೂಲ ಸಮಸ್ಯೆ ಮತ್ತೆ ಮರೆಗೆ ಸರಿಯುತ್ತದೆ.

ಕಲಬುರಗಿಯಲ್ಲಿ ನಡೆದ ಒಂದು ಪ್ರಕರಣವನ್ನು ಇಲ್ಲಿ ಉಲ್ಲೇಖಿಸಬೇಕು. ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆ ಎಂಬ ಸಂಘಟನೆಯ ನೆರಳಿನಲ್ಲಿ ಇದೇ ವರ್ಷದ ಜನವರಿ 25ರಂದು ಎರಡು ಸಾವಿರಕ್ಕೂ ಹೆಚ್ಚು ಕೃಷಿ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಯೆದುರು ಅಹೋರಾತ್ರಿ ಧರಣಿ ಕುಳಿತಿದ್ದರು. ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಬೇಕೆಂಬುದು ಅವರ ಆಗ್ರಹ ವಾಗಿತ್ತು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 17,796 ಶಿಕ್ಷಕರ ಕೊರತೆ ಇದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕೊಂದರಲ್ಲೇ ನೂರಕ್ಕೂ ಹೆಚ್ಚು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಏಕೋಪಾಧ್ಯಾಯ ಶಾಲೆಗಳ ಸಂಖ್ಯೆಯಂತೂ ಇದರ ಎರಡು ಪಟ್ಟು ಆಗಬಹುದು.

ಹಿಂದಿನ ಬಾರಿ ವರ್ಗಾವಣೆಯಾದ ನಂತರ ಸುಮಾರು 6,000 ಶಿಕ್ಷಕರು ಕಲ್ಯಾಣ ಕರ್ನಾಟಕ ವನ್ನು ತೊರೆದುಹೋದರು. ಇದು ಸಮಸ್ಯೆಯ ಒಂದು ಪದರು ಮಾತ್ರ. ಅಲ್ಲಿನ ಸಮಾಜೋ ಆರ್ಥಿಕ ಸ್ಥಿತಿಗತಿಗಳು, ಕುಟುಂಬಗಳ ವಲಸೆ, ಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತಹ ಕಾರಣಗಳಿಗಾಗಿ ಶಿಕ್ಷಣವನ್ನು ನಿರಾಕರಿಸಲಾಗುತ್ತದೆ. ಇಂತಹ ಹಲವು ಸಮಸ್ಯೆಗಳು ಅಲ್ಲಿವೆ. ಈ ಬಗೆಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಯದೇ ಇರುವುದರಿಂದ ಶಾಲಾ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಕೃಪಾಂಕ ಅಥವಾ ನಕಲು ಮಾಡುವುದು ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳಾಗಿ ತಾವಾಗಿಯೇ ವಿಕಾಸಗೊಂಡವು.

ಆದರೆ, ತಮ್ಮದಲ್ಲದ ತಪ್ಪಿಗೆ ಬೆಲೆ ತೆರುತ್ತಿರುವ ಮಕ್ಕಳೇ ಈಗ ಈ ಎಲ್ಲ ವೈಫಲ್ಯಗಳ ಹೊಣೆಯನ್ನು ಹೊರಬೇಕಾಗಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT