ಬುಧವಾರ, ಅಕ್ಟೋಬರ್ 16, 2019
28 °C

ಪಬ್ಲಿಕ್‌ ಪರೀಕ್ಷೆ ‘ಮಕ್ಕಳಸ್ನೇಹಿ’ಯೇ?

Published:
Updated:
Prajavani

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009 (ಶಿಕ್ಷಣ ಹಕ್ಕು ಕಾಯ್ದೆ) ಜಾರಿಯಾದಾಗ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಹಲವರು, ಕಾಯ್ದೆಯಲ್ಲಿನ ಸಕಾರಾತ್ಮಕ ಅಂಶಗಳನ್ನು ಸ್ವಾಗತಿಸಿದ್ದರು. ಅವುಗಳಲ್ಲಿ ಪ್ರಮುಖವಾದ ದ್ದೆಂದರೆ, ಸೆಕ್ಷನ್ 16ರ ಅನ್ವಯ ಮಗುವನ್ನು ಒಂದೇ ತರಗತಿಯಲ್ಲಿ ಒಂದು ಶೈಕ್ಷಣಿಕ ಅವಧಿಯ ನಂತರ ತಡೆಹಿಡಿಯುವುದು ಅಥವಾ ಶಾಲೆಯಿಂದ ಹೊರ ಹಾಕುವುದನ್ನು ನಿಷೇಧಿಸುವ ಅಂಶ.

ಈ ಅವಕಾಶವನ್ನು ಕಾಯ್ದೆಯ ‘ಹೃದಯ ಭಾಗ’ ಎಂದು ಭಾವಿಸಲಾಗಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊರತಂದ ‘ಅವಕಾಶಗಳ ಸ್ಪಷ್ಟೀಕರಣ’ ಪುಸ್ತಿಕೆಯು ಸೆಕ್ಷನ್ 16ರ ಔಚಿತ್ಯ ಮತ್ತು ಮಹತ್ವವನ್ನು ಸ್ಪಷ್ಟ ಮಾತುಗಳಲ್ಲಿ ವಿವರಿಸಿತ್ತು. ಅದರಂತೆ, ಈ ಅಂಶವನ್ನು ಕಾಯ್ದೆಯಲ್ಲಿ ಸೇರಿಸಲು ಬಲವಾದ ಕಾರಣವೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯು ಹಲವು ಸಂದರ್ಭಗಳಲ್ಲಿ ಮಕ್ಕಳನ್ನು ವ್ಯವಸ್ಥೆಯಿಂದ ಹೊರದೂಡಲು ಪರೀಕ್ಷೆಯನ್ನು ಒಂದು ಸಾಧನವನ್ನಾಗಿ ಬಳಸುತ್ತಿದೆ. ಫೇಲಾದ ಮಕ್ಕಳು ಶಾಲೆ ಬಿಡುವ ಸಾಧ್ಯತೆ ದಟ್ಟವಾಗಿರುತ್ತದೆ. ಅಂತಹ ಕ್ರಮ, ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಜೊತೆಗೆ, ಮಗು ಅದೇ ತರಗತಿಯಲ್ಲಿ ಮತ್ತೊಂದು ವರ್ಷ ಮುಂದುವರಿದರೆ, ಅದಕ್ಕೆ ಯಾವುದೇ ರೀತಿಯ ವಿಶೇಷ ಸಂಪನ್ಮೂಲಗಳಾಗಲೀ, ಪಠ್ಯವಸ್ತುವಿನಲ್ಲಿ ಬದಲಾವಣೆಯಾಗಲೀ ಇರುವುದಿಲ್ಲ. ಅದೇ ಶಿಕ್ಷಕರು, ಪುಸ್ತಕ, ತರಗತಿ ಕೋಣೆ, ಕಲಿಕಾ ವಿಧಾನ ಇತ್ಯಾದಿ. ಮಗು ಅದೇ ಸ್ಥಿತಿಯಲ್ಲಿ ಮತ್ತೊಂದು ಶೈಕ್ಷಣಿಕ ವರ್ಷವನ್ನು ಮುಗಿಸಿದ್ದು ಬಿಟ್ಟರೆ ಕಲಿಕಾ ದೃಷ್ಟಿಯಿಂದ ಅದಕ್ಕೆ ಯಾವುದೇ ಹೊಸತು ದೊರಕುವುದಿಲ್ಲ. ದೊರಕುವುದು– ಪಾಲಕರು ಮತ್ತು ಸಹಪಾಠಿಗಳ ನಿಂದನೆ ಮತ್ತು ‘ಫೇಲಾಗಲು ಅರ್ಹ’ ಎಂಬ ಹಣೆಪಟ್ಟಿ ಮಾತ್ರ.

ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸುವಾಗ ಈ ಮೇಲಿನ ಹಲವು ಅಂಶಗಳನ್ನು ಚರ್ಚಿಸಿ, ಮಕ್ಕಳನ್ನು ಫೇಲ್ ಮಾಡುವ ಬದಲು ಕಲಿಕಾ
ವ್ಯವಸ್ಥೆಯನ್ನು ಮಕ್ಕಳ ಕೇಂದ್ರಿತ ಹಾಗೂ ಮಕ್ಕಳಸ್ನೇಹಿಯಾಗಿ ಬದಲಾಯಿಸಲು ಹಲವು ಅಂಶಗಳನ್ನು ಸೇರಿಸಲಾಯಿತು.

ಇಂತಹ ಮಹತ್ವದ ಕಾಯ್ದೆಯ ಹಿಂದಿರುವ ಸಕಾರಣ ಹಾಗೂ ನ್ಯಾಯಸಮ್ಮತದ ಬಗ್ಗೆ ತಿಳಿಯದೆ ವ್ಯಾಪಕ ವಿರೋಧದ ನಡುವೆ ಕೇಂದ್ರ ಸರ್ಕಾರವು ಜುಲೈ 2018ರಲ್ಲಿ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಿತು. ಇದರ ಅನ್ವಯ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಐದು ಮತ್ತು ಎಂಟನೇ ತರಗತಿಗೆ ನಿಯತವಾಗಿ ಪರೀಕ್ಷೆ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಫೇಲಾದರೆ ಅಂತಹ ಮಗುವಿಗೆ ಹೆಚ್ಚುವರಿ ಬೋಧನೆ ಮೂಲಕ ಮರುಪರೀಕ್ಷೆಗೆ ಎರಡು ತಿಂಗಳ ಒಳಗಾಗಿ ಅವಕಾಶ ಕಲ್ಪಿಸಲಾಗುವುದು. ಮರುಪರೀಕ್ಷೆಯಲ್ಲಿ ಮತ್ತೊಮ್ಮೆ ಫೇಲಾದರೆ ಅಂತಹ ಮಗುವನ್ನು ಐದು ಅಥವಾ ಎಂಟನೇ ತರಗತಿ ಅಥವಾ ಎರಡೂ ತರಗತಿಗಳಲ್ಲಿ ಶಾಲೆಗಳು ತಡೆಹಿಡಿಯಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳನ್ನು ಫೇಲ್ ಮಾಡಲು ಅನುವಾಗಿಸುವ ಮಸೂದೆಯನ್ನು ಅಂಗೀಕರಿಸುವ ಮೂಲಕ ಸಂಸತ್ತು, ವಿಶ್ವಸಂಸ್ಥೆಯ ‘ಮಕ್ಕಳ ಹಕ್ಕುಗಳ ಒಡಂಬಡಿಕೆ’ಯ ವಿಧಿ 28 ಹಾಗೂ ಭಾರತ ಸಂವಿಧಾನದ ವಿಧಿ 39(ಎಫ್) ಅನ್ನು ಉಲ್ಲಂಘಿಸಿ ಮಕ್ಕಳಿಗೆ ಘೋರ ಅನ್ಯಾಯ ಎಸಗಿತ್ತು. ಈಗ ರಾಜ್ಯ ಸರ್ಕಾರವು ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನದ ಮೂಲಕ ಮಕ್ಕಳ ಹಕ್ಕುಗಳ ಒಡಂಬಡಿಕೆ, ಸಂವಿಧಾನ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆಯುಂಟು ಮಾಡಲು ಹೊರಟಿದೆ. ಮಕ್ಕಳನ್ನು ಫೇಲ್ ಮಾಡುವುದರಿಂದ ಗುಣಾತ್ಮಕ ಶಿಕ್ಷಣವನ್ನು ಸಾಧಿಸಬಹುದು ಎನ್ನಲು ಸಂಶೋಧನಾತ್ಮಕವಾಗಿ ಯಾವ ಪುರಾವೆಯೂ ಇಲ್ಲ. ರಾಜ್ಯ ಸರ್ಕಾರದ ಈ ನಿರ್ಧಾರವು ಜ್ಞಾನಮೀಮಾಂಸೆ, ಶಿಕ್ಷಣಶಾಸ್ತ್ರ ಹಾಗೂ ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

ಈ ಅವೈಜ್ಞಾನಿಕ ಚಿಂತನೆಯ ಹೊಡೆತ ನೇರವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಮೇಲೆ ಬೀಳಲಿದೆ. ಈ ವರ್ಗಗಳ ಮಕ್ಕಳು ಶಾಲೆ ತೊರೆಯುವ ಪ್ರಮಾಣ ಹೆಚ್ಚುತ್ತದೆ. ಇದರ ಮತ್ತೊಂದು ಪರೋಕ್ಷ ಪರಿಣಾಮವೆಂದರೆ, ಬಾಲಕಾರ್ಮಿಕ ಹಾಗೂ ಬಾಲ್ಯ ವಿವಾಹ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ. ಅತ್ಯಂತ ಕೆಟ್ಟ ಪರಿಣಾಮಕ್ಕೆ ತುತ್ತಾಗುವವರೆಂದರೆ, ವಿಶೇಷ ಅಗತ್ಯವುಳ್ಳ ಮಕ್ಕಳು. ಈಗಾಗಲೇ ವ್ಯವಸ್ಥೆಯ ಶಾಪಕ್ಕೆ ತುತ್ತಾಗಿರುವ ಈ ಮಕ್ಕಳನ್ನು ವ್ಯವಸ್ಥೆಯಿಂದ ಹೊರಹಾಕಲು ಶಾಲೆ, ಶಿಕ್ಷಕರು ಮತ್ತು ಸಂಸ್ಥೆಗಳಿಗೆ ರಹದಾರಿಯನ್ನು ನೀಡುತ್ತದೆ.

ಮಕ್ಕಳು ನಿಗದಿತ ಕಲಿಕಾ ಸಾಮರ್ಥ್ಯಗಳನ್ನು ಸಾಧಿಸಲು ಸಾಧ್ಯವಾಗದಿದ್ದರೆ ವ್ಯವಸ್ಥೆಯಲ್ಲಿನ ಶೈಕ್ಷಣಿಕ ಬೆಂಬಲ ಸಂಸ್ಥೆಗಳಾದ ಸಿಆರ್‌ಸಿ, ಬಿಆರ್‌ಸಿ, ಡಯಟ್, ಸಿಟಿಸಿ, ಡಿಎಸ್‍ಇಆರ್‌ಟಿ ಹಾಗೂ ಶಾಲಾ ಹಂತದ ಶಿಕ್ಷಕರನ್ನು ಹೊಣೆಗಾರರ ನ್ನಾಗಿ ಮಾಡುವ ಬದಲು, ಮಕ್ಕಳನ್ನು ಬಲಿಪಶು ಮಾಡುವುದು ಎಷ್ಟು ಸರಿ ಎಂಬ ಬಗ್ಗೆ ಚಿಂತಿಸಬೇಕಿದೆ. ಇಂತಹ ನಿರ್ಧಾರದ ವಿರುದ್ಧ ಮಕ್ಕಳ ಪರವಾಗಿ ಶಿಕ್ಷಕರು, ಪಾಲಕರು ಮತ್ತು ನಾಗರಿಕ ಸಮಾಜ ಧ್ವನಿ ಎತ್ತಬೇಕಿದೆ.

Post Comments (+)