ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹಿಂದೂ ಬೆಳವಣಿಗೆ ದರದ ಉದಯ!

ಎರಡಂಕಿ ಬೆಳವಣಿಗೆ ದರದ ಕನಸು ಸದ್ಯದಲ್ಲಿ ಈಡೇರಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಹೊಸ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆ ರವಾನಿಸಿದೆ
Last Updated 20 ನವೆಂಬರ್ 2018, 20:13 IST
ಅಕ್ಷರ ಗಾತ್ರ

ಪ್ರತಿವರ್ಷ ಬಜೆಟ್‌ಗೂ ಮುನ್ನ ಮಂಡನೆಯಾಗುವ ಕೇಂದ್ರ ಮತ್ತು ರಾಜ್ಯಗಳ ಆರ್ಥಿಕ ಸಮೀಕ್ಷೆಗಳಲ್ಲಿ ಸ್ಥಾನ ಪಡೆಯುವ ವಾರ್ಷಿಕ ಆರ್ಥಿಕ ಬೆಳವಣಿಗೆ ದರವನ್ನು ನಿರ್ದಿಷ್ಟ ಸೂತ್ರದನ್ವಯ ಶೇಕಡಾವಾರು ಲೆಕ್ಕ ಹಾಕಲಾಗುತ್ತದೆ. ರಾಷ್ಟ್ರ ಅಥವಾ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಆದ ಬದಲಾವಣೆಯ ದರವನ್ನು ತೋರಿಸುವ ಜನಪ್ರಿಯ ಪರಿಕಲ್ಪನೆ ಇದು. ಬೆಳವಣಿಗೆ ದರವು ನಿರಂತರವಾಗಿ ಏರಿಕೆಯಾಗುತ್ತಿದ್ದರೆ ಮಾತ್ರ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಬಡತನ ನಿರ್ಮೂಲನೆ ಸಾಧ್ಯವೆನ್ನುವ ವಾದ ಈಗಲೂ ಇದೆ.

ಪಂಚವಾರ್ಷಿಕ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದ, 1950—1980ರ ಅವಧಿಯಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ 3.5ರ ಮಿತಿಯಲ್ಲೇ ಇತ್ತು. ಕೆಲವೊಮ್ಮೆ ಅಪವಾದಕ್ಕೋ ಎನ್ನುವಂತೆ ಶೇ 4ಕ್ಕೆ ಏರಿದ್ದುಂಟು. ಇದೇ ಅವಧಿಯಲ್ಲಿ ತಲಾ ಆದಾಯದ ಬೆಳವಣಿಗೆ ದರ ಶೇ 1.3ಕ್ಕೆ ಸೀಮಿತಗೊಂಡಿತ್ತು. 1978ರಲ್ಲಿ ಈ ವಿಶಿಷ್ಟ, ನಿರಾಶಾದಾಯಕ ಅನುಭವವನ್ನು ಯೋಜನಾ ಆಯೋಗದ ಸದಸ್ಯರಾಗಿದ್ದ ಆರ್ಥಿಕ ತಜ್ಞ ರಾಜ ಕೃಷ್ಣ, ‘ಹಿಂದೂ ಬೆಳವಣಿಗೆ ದರ’ ಎಂದು ಕರೆದರು. ಬಡತನ ನಿವಾರಣೆಗೆ ಬೆಳವಣಿಗೆ ದರ ಹೆಚ್ಚಲೇಬೇಕೆಂದು ವಾದಿಸುತ್ತಿದ್ದ ಅವರು, ಕೇವಲ ವಿನೋದಕ್ಕಾಗಿ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆಯನ್ನು ಹರಿಬಿಟ್ಟಿದ್ದು ವಿವಾದಕ್ಕೆ ದಾರಿಯಾಯಿತು.

ಹಿಂದೂ ಬೆಳವಣಿಗೆ ದರ ಕುರಿತಂತೆ ರಾಜ ಕೃಷ್ಣ ಹೆಚ್ಚಿನ ವಿವರಣೆಯನ್ನೇನೂ ನೀಡಿರಲಿಲ್ಲ. ಅವರ ಚಿಂತನೆಯ ದಿಕ್ಕನ್ನು ಬಲ್ಲ, 1968-81ರ ಅವಧಿಯಲ್ಲಿ ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿದ್ದ ರಾಬರ್ಟ್ ಮೆಕ್ನಮಾರಾ ಅದಕ್ಕೆ ವಿವರಣೆ ನೀಡಿದರು. ಕರ್ಮ, ಪುನರ್ಜನ್ಮ ಸಿದ್ಧಾಂತವನ್ನು ನೆಚ್ಚಿಕೊಂಡ, ಅಲ್ಪ ತೃಪ್ತಿಯುಳ್ಳ ಮತ್ತು ದೈವ ಶಕ್ತಿಯಲ್ಲಿ ಅತಿಯಾದ ನಂಬಿಕೆಯುಳ್ಳ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿದ್ದ ದೇಶದಲ್ಲಿ ಕೇವಲ ಶೇ 3.5ರಷ್ಟು ಬೆಳವಣಿಗೆ ಸಾಧ್ಯವಾಯಿತೆಂದು ಹೇಳಿದರು. ಈ ಕಾರಣದೊಂದಿಗೆ ಜಸಂಖ್ಯೆಯ ಹೆಚ್ಚಳದಿಂದಲೂ ತಲಾ ಆದಾಯ ಸ್ಥಗಿತಗೊಳ್ಳುವಂತಾಯಿತೆಂದು ಮೆಕ್ನಮಾರಾ ತಿಳಿಸಿದ್ದು ವಿಶೇಷವಾಯಿತು. ನಂತರ ರಾಜ ಕೃಷ್ಣ ನೀಡಿದ ವಿಚಾರದ ಪರ– ವಿರೋಧಿ ಅಲೆಗಳು ಮೂಡಲು ಪ್ರಾರಂಭಿಸಿದ್ದರಿಂದ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆ ಜ್ವಲಂತವಾಗಿ ಉಳಿಯಿತು.

ವಿರೋಧದ ಅಲೆ ಜೋರಾಗಿ ಬಂದದ್ದು 1991ರಲ್ಲಿ. ಆರ್ಥಿಕ ಸುಧಾರಣೆಗಳು ಪ್ರಾರಂಭವಾಗಿ ಬೆಳವಣಿಗೆ ದರ 2006-07ರಲ್ಲಿ ಶೇ 9.7ಕ್ಕೆ ನೆಗೆದಾಗ. ಅರುಣ ಶೌರಿ ಮತ್ತು ಎಸ್. ಗುರುಮೂರ್ತಿ ಅವರು, ‘ಮೂರು ದಶಕಗಳ ಅವಧಿಯಲ್ಲಿ ಬೆಳವಣಿಗೆ ದರ ಶೇ 3.5ರಿಂದ 4ಕ್ಕೆ ಸೀಮಿತಗೊಳ್ಳಲು ಹಿಂದೂ ಧರ್ಮ ಕಾರಣವಲ್ಲ. ಬದಲಿಗೆ, ಸಮಾಜವಾದಿ ನೀತಿಯ ಪ್ರಭಾವದಿಂದ ಬೆಳೆದ ನಿಯಂತ್ರಿತ ಅರ್ಥವ್ಯವಸ್ಥೆ ಕಾರಣ’ ಎಂದು ವಾದಿಸಿದರು. ರಾಜ ಕೃಷ್ಣ ಗಮನಿಸಿದ ಅವಧಿಯಲ್ಲಿ ಸೀಮಿತಗೊಂಡ ಬೆಳವಣಿಗೆ ದರಕ್ಕೆ ‘ಸಮಾಜವಾದಿ ಬೆಳವಣಿಗೆ ದರ’ ಎಂಬ ಹೊಸ ಹೆಸರು ಪ್ರಾಪ್ತಿ. ಬಹುಶಃ ಬೇರೆಲ್ಲಾ ಹೇಳಿ ‘ಹಿಂದೂ’ ಎನ್ನುವ ವಿಶೇಷಣ ಮಾತ್ರ ಬಳಸದಿದ್ದರೆ ಭಾರತದಲ್ಲಿ ಬೆಳವಣಿಗೆ ದರದ ರಾಜಕಾರಣ ಹೀಗೆ ಬೆಳೆಯುತ್ತಿರಲಿಲ್ಲವೋ ಏನೋ!

ಯುಪಿಎ ಅವಧಿಯ ಅಂತ್ಯದಲ್ಲಿ ಶೇ 4.7ಕ್ಕೆ ಕುಸಿದ ಬೆಳವಣಿಗೆ ದರ, 2014-15ನೇ ಸಾಲಿನಲ್ಲಿ ಸಂಖ್ಯಾಶಾಸ್ತ್ರದ ಸೂತ್ರದಲ್ಲಾದ ಬದಲಾವಣೆಯಿಂದಲೂ, ಅಸಂಘಟಿತ ವಲಯದ ಭಾಗಶಃ ಸೇರ್ಪಡೆಯಿಂದಲೂ ಶೇ 8.2ಕ್ಕೆ ಜಿಗಿಯಿತು’. ಆದರೆ ಸರ್ಕಾರವೇ
ಒಪ್ಪಿಕೊಂಡಂತೆ ನೋಟು ರದ್ದತಿಯಿಂದ ಅದು 2017-18ನೇ ಸಾಲಿನಲ್ಲಿ 6.5ಕ್ಕೆ ಕುಸಿಯಿತು. ನ.10ರಂದು ಕ್ಯಾಲಿಫೋರ್ನಿಯಾ ವಿ.ವಿ.ಯಲ್ಲಿ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ‘ಭವಿಷ್ಯದ ಭಾರತ’ ವಿಷಯದ ಕುರಿತು ನೀಡಿದ ವಿಶೇಷ ಉಪನ್ಯಾಸದಲ್ಲಿ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆಯನ್ನು ಇನ್ನಷ್ಟು ಜ್ವಲಂತಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ 25 ವರ್ಷಗಳ ಅವಧಿಯಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ 7ಕ್ಕೆ ಸೀಮಿತವಾಗಿದ್ದು ‘ಹೊಸ ಹಿಂದೂ ಬೆಳವಣಿಗೆ ದರ’ ಎಂದು ರಾಜನ್ ವ್ಯಾಖ್ಯಾನಿಸಿದ್ದಕ್ಕೆ ಮಹತ್ವವಿದೆ. ಹೊಸ ಹಿಂದೂ ಬೆಳವಣಿಗೆ ದರ ಹಳೆಯ ದರದ ದುಪ್ಪಟ್ಟು ಆಗಿರುವುದು ಯೋಗಾಯೋಗವಾಗಿರಬಹುದಾದರೂ ಸ್ವಾರಸ್ಯಕರವೇ ಸರಿ. ಶೇ 7ರ ಬೆಳವಣಿಗೆ ದರ ಬಹಳ ಶಕ್ತಿಯುತವಾಗಿದೆ ಎಂದು ರಾಜನ್ ಹೇಳಿದ್ದಾರೆ. ಹಳೆಯ ಹಿಂದೂ ಬೆಳವಣಿಗೆ ದರ ನಿರಾಶಾದಾಯಕವಾಗಿದ್ದರೆ, ಹೊಸ ದರ ಆಶಾದಾಯಕವಾಗಿದೆ.

ತಿಂಗಳಿಗೆ ಕನಿಷ್ಠ 10 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ತುರ್ತು ಇರುವಾಗ, ಬೆಳವಣಿಗೆ ದರವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವನ್ನು ರಾಜನ್ ತಿಳಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ ನೋಟು ರದ್ದತಿ, ಜಿಎಸ್‌ಟಿ, ಮೂಲಸೌಕರ್ಯಗಳ ಕೊರತೆ, ಬ್ಯಾಂಕುಗ
ಳಲ್ಲಿ ರಾಶಿಯಾಗಿ ಬಿದ್ದಿರುವ ಎನ್.ಪಿ.ಎ. ಮತ್ತು ಕೇಂದ್ರ ಸರ್ಕಾರದಲ್ಲಿರುವ ಅಧಿಕಾರಗಳ ಕೇಂದ್ರೀಕರಣ ಹೊಸ ಹಿಂದೂ ಬೆಳವಣಿಗೆ ದರದ ಉದಯಕ್ಕೆ ಕಾರಣ.

ನೀತಿ ಆಯೋಗ ತಿಳಿಸಿದಂತೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಬಡತನ ನಿರ್ಮೂಲನೆ ಮಾಡಬೇಕಾದರೆ ಎರಡಂಕಿ ಬೆಳವಣಿಗೆ ದರ ಅವಶ್ಯ. ವಾದ, ವಿವಾದಗಳೇನೇ ಇರಲಿ, ಸದ್ಯದ ಭವಿಷ್ಯದಲ್ಲಿ ಎರಡಂಕಿ ಬೆಳವಣಿಗೆ ದರದ ಕನಸು ಈಡೇರಲು ಸಾಧ್ಯವಿಲ್ಲವೆಂಬ ಸಂದೇಶವನ್ನು ಹೊಸ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆ ರವಾನಿಸಿದೆ.

ಲೇಖಕ: ಮೂಡುಬಿದಿರೆಯ ಆಳ್ವಾಸ್,ಸಂಸ್ಥೆಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT