ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯಿಸುತ್ತಿವೆ ವನ್ಯಜೀವಿಗಳ ಸಂತತಿ

ಅಕ್ಷರ ಗಾತ್ರ

ಇತ್ತೀಚೆಗೆ ಪ್ರಕಟವಾದ ಆಘಾತಕಾರಿ ಸುದ್ದಿ­ಯೊಂದರ ಪ್ರಕಾರ ಹಿಂದೆಂದೂ ಕಂಡಿರದ ಮತ್ತು  ಭಾವಿಸಿದ್ದಕ್ಕಿಂತ ವೇಗವಾಗಿ ವನ್ಯಜೀವಿ ಸಂತತಿ­­­ಗಳು ಕ್ಷಯಿಸುತ್ತಿವೆ! ‘ವರ್ಲ್ಡ್ ವೈಲ್ಡ್ ಲೈಫ್‌ ಫಂಡ್‌’ (ಡಬ್ಲ್ಯು.ಡಬ್ಲ್ಯು.ಎಫ್‌.) ಅಧ್ಯ­ಯನ ವರದಿ­ಯೊಂದರ ಪ್ರಕಾರ 1970 –  2010ರ  ಅವಧಿ­ಯಲ್ಲಿ ವನ್ಯ ಜೀವಿಗಳ ಸಂಖ್ಯೆ­ಯಲ್ಲಿ ಶೇಕಡಾ 52 ರಷ್ಟು ಇಳಿಕೆ­ಯಾಗಿದೆ.

ಇದೇನೂ ಅನಿವಾರ್ಯದ ಇಳಿಕೆಯಲ್ಲ. ಮತಿ­ವಂತ ಮಾನವನ ಬದಲಾದ ಜೀವನ ಶೈಲಿ­ಯಿಂದಾಗಿ ಪ್ರಕೃತಿಯ ಮೇಲೆ ಅವನು ಹಾಕುತ್ತಿ­ರುವ ಒತ್ತಡ ಅದು ತಡೆಯಬಹುದಾದ ಒತ್ತಡ­ಕ್ಕಿಂತ ಶೇಕಡಾ 50 ರಷ್ಟು ಅಧಿಕ. ಸಿಹಿ ನೀರು ಜೀವಿ ಪ್ರಭೇದಗಳು ಶೇಕಡಾ 76 ರಷ್ಟು  ಕಡಿಮೆ­ಯಾಗಿದ್ದರೆ, ಸಾಗರ ಮತ್ತು ಭೂವಾಸಿ ಪ್ರಭೇದ­ಗಳು ಶೇಕಡಾ 39 ರಷ್ಟು ಕ್ಷೀಣಿಸಿವೆ. ಸುಮಾರು 3000 ವನ್ಯಜೀವಿ ಪ್ರಭೇದಗಳು ಅಪಾಯಕಾರೀ ಸಂಖ್ಯೆಗೆ ತಲುಪಿವೆ.

ಇದು ಕೇವಲ ಅಂಕಿ ಸಂಖ್ಯೆಗಳ ಅಂತೆ ಕಂತೆಯ ಸುದ್ದಿಯಲ್ಲ. ಏಕೆಂದರೆ ಈ ವನ್ಯ ಜೀವಿಗಳ ಹಾಗೂ ಅವುಗಳ ಆವಾಸಗಳ ಸಂರಕ್ಷಣೆ­ಯಾಗ­ಬೇಕಿ­ರುವುದು ಅವುಗಳಿಗಾಗಿ ಅಲ್ಪ ಮನುಕುಲದ ಉಳಿವಿಗಾಗಿ! ಯಾವುದೇ ರೀತಿಯ ಸಾಕಾಣಿಕೆಗೆ ಒಳಪಡದ, ಪಳಗಿಸದ ಜೀವಿ­ಗಳು ವನ್ಯಜೀವಿಗಳು. ಅದು ಸಸ್ಯಪ್ರಭೇದವೇ ಆಗಿರ­ಬಹುದು. ಇಲ್ಲವೇ ಪ್ರಾಣಿಪ್ರಭೇದವೇ ಆಗಿರ­ಬಹುದು. ನಮ್ಮ ಕೆರೆಗಳಲ್ಲಿ, ಹಿತ್ತಲ ಮರಗಳಲ್ಲಿ ಇಲ್ಲವೇ ಮನೆಯಲ್ಲೂ ಹಾರುತ್ತಿರುವ ಗುಬ್ಬಿ­ಯಂತೆ ಇರಬಹುದು (ಆದರೆ ಈಗ ಮನೆಗಳಲ್ಲಿ ಗುಬ್ಬಿ ಇಲ್ಲ). ಅವುಗಳ ಸಂಖ್ಯೆಯ ಕ್ಷೀಣಿಸುವಿಕೆ ಎಂದರೆ ಆ ಪ್ರಭೇದಗಳು ಅಳಿವಿನಂಚಿನತ್ತ ಸರಿ­ಯುತ್ತಿವೆ ಎನ್ನುವುದರ ಅಪಾಯದ ಸೂಚನೆ. ಹಾರಲಾಗದ, ದಾಳಿ ಮಾಡಲಾಗದ ಡೋಡೋ ಹಕ್ಕಿ ಮನುಷ್ಯನಿಗೆ ಆಹಾರವಾದದ್ದು, ಲಕ್ಷಗಟ್ಟಲೆ­ಯಾಗಿ ಆಕಾಶದ ತುಂಬ ಹಾರುತ್ತಿದ್ದ ಪ್ಯಾಸೆಂ­ಜರ್‌ ಪಿಜನ್‌, ಭಾರತದಿಂದ ನಿರ್ನಾಮವಾದ ವೇಗದ ಓಟಗಾರ ಚೀತಾ ಎಲ್ಲವೂ ನಾಶವಾ­ದದ್ದು ಮಾನವನ ಅನಿವಾರ್ಯವಲ್ಲದ ಅವ­ಶ್ಯಕತೆ­ಗಳಿಗಾಗಿ.

ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರಕಟ­ವಾಗುವ ಡಬ್ಲ್ಯು.ಡಬ್ಲ್ಯು.ಎಫ್‌.ನ ಅಧ್ಯಯನದ ವರದಿಯ ಪ್ರಕಾರ, ಈ ರೀತಿಯ ವನ್ಯಜೀವಿ ಸಂತತಿಗಳ ಆಘಾತಕಾರಿಯಾಗಿ ಇಳಿಯುವುದಕ್ಕೆ ಕಾರಣ, ವನ್ಯಜೀವಿಗಳ ನೆಲೆಗಳು ನಷ್ಟವಾಗುತ್ತಿ­ರು­ವುದು, ಬೇಟೆ ಮತ್ತು ಮೀನುಗಾರಿಕೆಯ ಮಿತಿ­ಮೀ­ರು­ವಿಕೆ ಹಾಗೂ ಬದಲಾಗುತ್ತಿರುವ ಹವಾ­ಮಾನ. ವನ್ಯಜೀವಿಗಳು ಬದುಕಿ ಸಂತಾನಾ­ಭಿ­ವೃದ್ಧಿಯನ್ನು ಮಾಡಬೇಕೆಂದರೆ ಅವುಗಳಿಗೆ ಸೂಕ್ತ­ವಾದ  ಆವಾಸದ ಅವಶ್ಯಕತೆ ಇದೆ. ಉದಾ: ಘೇಂಡಾಮೃಗಕ್ಕೆ ಹುಲ್ಲುಗಾವಲು, ಮೊಸ­ಳೆಗೆ  ಜೌಗು ನೆಲದ ನೀರಿನ ಮಡು  ಕೆಲವು ಪ್ರಾಣಿಗಳಂತೂ ಕೆಲವು ರೀತಿಯ ಆವಾಸಗಳಲ್ಲಿ ಮಾತ್ರ ಬದುಕಬಲ್ಲವು.

ಹೀಗಾಗಿ ವನ್ಯಜೀವಿಗಳನ್ನು ನಾವು ಮೃಗಾ­ಲಯ­ದಲ್ಲಿಟ್ಟು ಇಲ್ಲವೇ ಫಾರ್ಮ್‌ನಲ್ಲಿ ವೃದ್ಧಿಸಿ ಬೆಳೆಸುತ್ತೇವೆ ಎಂದರೆ ಅದು ಅವುಗಳ ಸೂಕ್ತ ಸಂರಕ್ಷಣೆ ಆಗಲಾರದು. ಅವುಗಳ ವಾಸಸ್ಥಾನ­ಗಳನ್ನು ಇಡಿಯಾಗಿ ಸಂರಕ್ಷಿಸಿದರೆ ಮಾತ್ರ ಅವು­ಗಳ ಸಂರಕ್ಷಣೆ ಸಾಧ್ಯ.

ಈಗ ಏಟು ಬಿದ್ದಿರುವುದು ವನ್ಯ ಜೀವಿಗಳ ಆವಾಸಗಳಿಗೆ, ಹೆಚ್ಚುತ್ತಿರುವ ಜನಸಂಖ್ಯೆಯ ನಿಸರ್ಗ ವಿರೋಧಿ ಜೀವನ ಶೈಲಿಯ ಬೇಡಿಕೆ­ಗಳನ್ನು ಈಡೇರಿಸಲು ಪ್ರಕೃತಿ ಹೆಣಗಾಡುತ್ತಿದೆ ಎಂದರೆ ತಪ್ಪಾಗ­ಲಾರದು.ಇದನ್ನು ಅಳೆಯಲು ಮಾನ­­ವನ ‘ಪರಿಸರದ ಹೆಜ್ಜೆ ಗುರುತ’ ನ್ನು  (ಎಕಲಾಜಿಕಲ್‌ ಪುಟ್‌ ಪ್ರಿಂಟ್‌) ಲೆಕ್ಕ ಹಾಕಿದಾಗ  ಕುವೈತ್‌ನ ಜನರ ‘ಪರಿಸರದ ಹೆಜ್ಜೆ ಗುರುತು’ ಎಂದರೆ ಅವರು ಬಳಸುವ ಸಂಪನ್ಮೂಲಗಳ ಪ್ರಮಾಣ ಅತೀ ಹೆಚ್ಚು ಎಂದು ತಿಳಿದು ಬಂದಿದೆ. ಅವರ ನಂತರದ ಸರದಿಯಲ್ಲಿ ಕತಾರ್‌, ಯುನೈ­ಟೆಡ್‌ ಅರಬ್‌ ಎಮಿರೇಟ್ಸ್‌  ಹಾಗೂ ಅಮೆ­ರಿಕಾ// ದೇಶ­ಗಳು ಬರುತ್ತಿವೆ. ಕತಾರ್‌ನ ಪ್ರಜೆ ಬದುಕು­ತ್ತಿರುವ ಜೀವನ ಶೈಲಿಯನ್ನು ಪ್ರಪಂಚದ ಎಲ್ಲರೂ ಅಳ­ವಡಿಸಿಕೊಂಡರೆ ನಾವಿರುವ ಭೂಮಿ­ಯಂತಹ 4.8 ಗ್ರಹಗಳು ನಮಗೆ ಬೇಕಾಗುತ್ತವೆ! ಅಮೆ­ರಿಕಾದ ಪ್ರಜೆಯಂತಹ ಜೀವನ ಶೈಲಿ ಯನ್ನು ಭೂಮಿಯ ಮೇಲಿರುವ ಎಲ್ಲರೂ ಅಳ­ವಡಿಸಿ­ಕೊಂ­ಡಲ್ಲಿ 3.9 ಗ್ರಹ ಗಳು ಬೇಕಾ­ಗುತ್ತವೆ. ‘ನೆನ­ಪಿ­ರಲಿ ನಮಗಿರುವುದು ಒಂದೇ ಭೂಮಿ’. ಆದ್ದ­ರಿಂದ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.

ದೂರದ ದೇಶಗಳನ್ನು ಬಿಟ್ಟು ಭಾರತದತ್ತ ಗಮನ ಹರಿಸಿದರೆ, ಇಲ್ಲಿಯ ಪರಿಸ್ಥಿತಿಯೂ ಅಪಾಯ­­ಕಾರಿಯಾಗಿದೆ. ಬೇಟೆಗೆ, ಮೌಢ್ಯಕ್ಕೆ, ಕೃಷಿ ವಿಸ್ತರಣೆಗೆ, ‘ಅಭಿವೃದ್ಧಿ ಪರ’ ಚಟುವಟಿಕೆ­ಗಳಿಗೆ ವನ್ಯಜೀವಿಗಳು ಬಲಿಯಾಗುತ್ತಿವೆ.

ಜಗತ್ತಿನ ಶೇಕಡಾ 2.4 ರಷ್ಟು ಭೂ ಪ್ರದೇಶವನ್ನುಳ್ಳ  ಭಾರತದಲ್ಲಿ, ಪ್ರಪಂಚದ ಶೇಕಡಾ 8 ರಷ್ಟು ಜೈವಿಕ ವೈವಿಧ್ಯವಿದೆ. ಪ್ರಪಂಚದ ಒಟ್ಟು ಹುಲಿ­ಗಳಲ್ಲಿ ಅರ್ಧದಷ್ಟು ಭಾರತದಲ್ಲಿವೆ. ಏಷ್ಯಾಟಿಕ್‌ ಸಿಂಹಗಳ ಏಕೈಕ ತಾಣ ಭಾರತ. ಚಿರತೆ ಹಾಗೂ ಹಿಮಚಿರತೆಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.

ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತೀರಾ ಇತ್ತೀಚಿನವರೆಗೂ ಹೊಸ ಪ್ರಭೇ­ದದ ಉಭಯವಾಸಿಗಳು, ಮರ ಪ್ರಭೇದ­ಗಳು ಪತ್ತೆಯಾಗುತ್ತಿವೆ. ಈ ಶ್ರೀಮಂತ ನಿಧಿ­ಯನ್ನು ನಾವು ರಕ್ಷಿಸಿಕೊಳ್ಳದಿದ್ದರೆ, ಭೂಮಿಯ ಬೇರೆಡೆಯಲ್ಲಿ ಕಾಣಸಿಗದ ಕೆಲವು ಪ್ರಭೇದಗಳು ಈ ಭೂಗ್ರಹದಿಂದಲೇ ಮಾಯ ವಾಗಬಹುದು. ಆಗುಂಬೆಯ ಕಾಳಿಂಗ ಸರ್ಪಗಳು, ಕಾವೇರಿಯ ಮಶೀರ್‌ ಮೀನುಗಳು, ದಾಂಡೇಲಿಯ ಓಂಗಲೆ ಅಥವಾ ಮಂಗಟ್ರೆಗಳು, ಶಿರಾಲಿಯ ಕಡಲಾಮೆ­ಗಳು ಕೇವಲ ಅಲ್ಲಿರುವ ಜೀವಿಗಳು ಮಾತ್ರವಲ್ಲ ಅವೆಲ್ಲ ಅಲ್ಲಿರುವ ನೆಲೆ ಗಳ ಪ್ರತಿನಿಧಿಗಳು. ಅಷ್ಟಕ್ಕೂ ಇಷ್ಟು ವರ್ಷಗಳು ಅವು ಅಲ್ಲಿಯೇ ಇವೆ­ಯಲ್ಲ. ಇನ್ನು   ಮುಂದೆಯೂ ಅಲ್ಲಿರುತ್ತವೆ ಅದ­ನ್ನೇಕೆ ರಕ್ಷಿಸಬೇಕು? ಎನ್ನುವ­ವರೂ ಉಂಟು. ಆದರೆ ಮನುಷ್ಯನ ಹಸ್ತಕ್ಷೇಪದಿಂದ ಅವು­­­­­­­ಗಳ ವಾಸಸ್ಥಾನಗಳು ಹಾಳಾಗುತ್ತಿರುವು­­­­ದ­ರಿಂದ, ಅವುಗಳ ಸಂರಕ್ಷಣೆಗೂ ಮನು­ಷ್ಯನ ಸಹಕಾರದ ಅವಶ್ಯಕತೆ ಇದೆ.

ವಿಜ್ಞಾನಿಗಳ ಪ್ರಕಾರ ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ವನ್ಯಜೀವಿ ಪ್ರಭೇದಗಳ ವಿನಾಶ ಹಾಗೂ ಕ್ಷೀಣಿಸುವಿಕೆ ನಾವೆಂದು ಕೊಂಡ­ದ್ದಕ್ಕಿಂತ ವೇಗವಾಗಿ ನಡೆಯಲಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.  ಅಕ್ರಮ ಗಣಿಗಾರಿಕೆ, ಮರಳು ಸಾಗಣೆ, ಕೃಷಿ ವಿಸ್ತರಣೆಗಾಗಿ ಅರಣ್ಯಗಳ ಅತಿ­ಕ್ರಮಣ ಪರಿಸರ ಪ್ರವಾಸದ ಹೆಸರಲ್ಲಿ ನಡೆ­ಯುವ ಕಾಡಿನ ನಡುವಿನ  ರೆಸಾರ್ಟ್‌ಗಳ ನಿರ್ಮಾಣ, ಕಾಡಿನಲ್ಲಿ ರಸ್ತೆಗಳ ನಿರ್ಮಾಣ, ಮುಂತಾ­ದವು­ಗಳಿಂದ ವನ್ಯ ಜೀವಿಗಳ ಆವಾಸ­ಗಳು ಕಿರಿದಾಗುತ್ತಿವೆ. ವಲಸೆ ಹೋಗುವ ವನ್ಯ­ಜೀವಿಗಳ  ಮಾರ್ಗಗಳು ಛಿದ್ರೀಕರಣ­ಗೊಳ್ಳು­ತ್ತವೆ. ಅಭಿ­ವೃದ್ಧಿಯ ಹೆಸರಿನಲ್ಲಿ ನಡೆಯುವ ಬೃಹತ್‌ ಯೋಜನೆ­ಗಳಿಗಾಗಿ ಕಾಡು ನಾಶವಾಗು­ತ್ತಿದೆ. ಕಾಡಿನ ನಾಶದೊಂದಿಗೆ ಮರಗಳು ನಾಶ­ವಾ­ಗುವುದರಿಂದ ನೀರಿನ ಸೆಲೆಗಳು ಬತ್ತಿ ಹೋಗು­ತ್ತಿವೆ. ಆದುದರಿಂದಲೇ ಬ್ರಹ್ಮಗಿರಿಯಲ್ಲಿ ಹುಲಿ­ಯಿದ್ದರೆ ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರೆಯುತ್ತದೆ ಎಂದು ಪರಿಸರವಾದಿ­ಗಳು, ವಿಜ್ಞಾನಿಗಳು ಹೇಳುವುದು.

ವಿಕಾಸದ ಹಾದಿಯಲ್ಲಿ ಮಾನವನಿಗಿಂತ ಮೊದಲು ಈ ಭೂಮಿಯ ಮೇಲೆ ಬಂದ ಈ ಜೀವಿ­ಗಳು ಅವನ ವಿಕಾಸದ ಏಣಿಯ ಮೆಟ್ಟಿಲು­ಗಳು. ವಿಕಾಸದುದ್ದಕ್ಕೂ ಅವು ನಿರ್ಮಿಸಿದ ಪರಿಸರ ಮಾನವನಿಗೆ ಅನುಕೂಲಕರವಾಯಿತು.  ಅವು­ಗಳು ಒಂದೊಂದಾಗಿ ಮರೆಯಾಗುತ್ತಾ
ಬಂದಲ್ಲಿ ಅದರ ಕೊನೆಯ ಕೊಂಡಿಯಾದ ಮನುಷ್ಯನೂ ನಾಶ­ವಾಗಲು ಬಹಳ ಕಾಲವೇನೂ ಹಿಡಿಯು­ವುದಿಲ್ಲ.

ಕೇವಲ ಕಾನೂನು ನಿಯಮಗಳಿಂದ ಮಾತ್ರ ಯಾವುದೇ ಸಂರಕ್ಷಣೆ ಸಾಧ್ಯವಿಲ್ಲ. ಸಂರಕ್ಷಣೆಯ ತಿಳುವಳಿಕೆಯನ್ನು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಇದು ಶಿಕ್ಷಣದಲ್ಲಿ ಒಂದು ಭಾಗವಾಗಿ, ಪಠ್ಯ ಕ್ರಮ­ದಲ್ಲಿ ಸೇರ್ಪಡೆಯಾಗಬೇಕು. ಅನಿವಾರ್ಯ ಸಂದರ್ಭ­ದಲ್ಲಿ ಅರಣ್ಯ ಇಲಾಖೆಯ ಜತೆ  ಕೈಜೋಡಿಸಲು ಅರಣ್ಯ­ದಂಚಿನ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು.

ಮಾನವ – ವನ್ಯಜೀವಿ ಸಂಘರ್ಷವನ್ನು ತಡೆ­ಯುವ ಗಂಭೀರ ಪ್ರಯತ್ನಗಳು ಆಗಬೇಕು. ಆನೆ­ಗಳು ರೈತರ ಬೆಳೆಗಳನ್ನು ನಾಶ ಮಾಡಿದಾಗ ಸಹಜ­ವಾಗಿಯೇ ರೈತರಿಗೆ ಅವುಗಳ ಮೇಲೆ ಆಕ್ರೋಶ ಉಂಟಾಗುತ್ತದೆ. ಅಂತಹ ಸಂದರ್ಭ­ದಲ್ಲಿ ಅವರಿಗೆ ಸೂಕ್ತವಾದ ಪರಿಹಾರ ದೊರೆಯ­ಬೇಕು. ಆನೆಗಳು ಬಯಸಿದಂತಹ ಬೆಳೆ ಬೆಳೆ­ಯಲು ಪ್ರೋತ್ಸಾಹಿಸಬೇಕು. ಮೊಲ, ನಾಯಿ­ಯಿಂದ ಹಿಡಿದು ಕುರಿ, ದನ– ಕರುಗಳವರೆಗೆ ಎಲ್ಲ­ವನ್ನೂ ಬೇಟೆಯಾಡುವ ಚಿರತೆಗಳು ಜನವಸತಿ­ಯನ್ನು ಪ್ರವೇಶಿಸುವುದು ಸಾಮಾನ್ಯವಾಗಿದೆ. ಸುಲಭ­ವಾಗಿ ದೊರೆಯುವ ಬೇಟೆ ಇದಕ್ಕೊಂದು  ಕಾರಣವಾಗಿದೆ. ಇದರಿಂದ ಮಾನವ ವನ್ಯಜೀವಿ­ಗಳ ಸಂಘರ್ಷ ಮತ್ತಷ್ಟು ಅಧಿಕವಾಗುತ್ತದೆ.

ಇವೆಲ್ಲಕ್ಕೆ ಸೂಕ್ತವಾದ ಪರಿಹಾರವನ್ನು ಕಂಡು­ಕೊಂಡು ವನ್ಯ ಜೀವಿಗಳ ಸಂರಕ್ಷಣೆಗೆ ಮುಂದಾಗ­ಬೇಕಾದ ಕ್ಷಣ ಇದಾಗಿದೆ. ‘ಪರಿಸರದ ಹೆಜ್ಜೆ’ ಯಾರದ್ದೇ ಆಗಿದ್ದರೂ ಅದು ಬೀರುವ ಪರಿ­ಣಾ­ಮ­­ವನ್ನು ಮಾತ್ರ ಸಂಪೂರ್ಣ ಮನುಕುಲ ಅನು­ಭವಿಸಬೇಕಾಗುತ್ತದೆ. ಆದುದರಿಂದ ನಾವಿ­ರುವ ಪ್ರದೇಶಗಳ ವನ್ಯಜೀವಿಗನ್ನು ಉಳಿಸಲು ನಾವು ಪ್ರಯತ್ನ ಮಾಡಬೇಕು ಎನ್ನುವ ಎಚ್ಚರಿಕೆಯ ಗಂಟೆ ಮೊಳಗಿಯಾಗಿದೆ. ಪ್ರಯತ್ನ ನಮ್ಮ ಕೈಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT