ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ!

7

ಇಂಗ್ಲಿಷ್ ಕಲಿಕೆಗೆ ಪ್ರೋತ್ಸಾಹ!

Published:
Updated:

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಲಾಗುವುದು’ ಎಂಬ ಭರವಸೆಯನ್ನು ನೀಡಿರುವುದು ಸ್ವಾಗತಾರ್ಹ. ನಮ್ಮ ಮಕ್ಕಳು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಬೇಕು, ಮುಂದೆ ಬದುಕಿನಲ್ಲಿ ಅದು ಪರಿಣಾಮಕಾರಿ ಸಂವಹನ ಸಾಧನವಾಗುವಂತೆ ಭಾಷಾ ಕೌಶಲಗಳನ್ನು ರೂಢಿಸಿಕೊಳ್ಳುವಂತೆ ಶಾಲಾ ಕಲಿಕೆ– ಬೋಧನೆ ಇರಬೇಕು. ವ್ಯಾವಹಾರಿಕ ಇಂಗ್ಲಿಷ್ ಭಾಷೆಯನ್ನು ಕಲಿಯುವುದೂ ಕನ್ನಡದಷ್ಟೆ ಅನಿವಾರ್ಯ. ಇದು ಅಗತ್ಯವಿರುವ ಸನ್ನಿವೇಶದಲ್ಲಿ ಸ್ವವಿಶ್ವಾಸದಿಂದ ಗೆಲುವನ್ನು ಸಾಧಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಶಿಕ್ಷಕರ ತರಬೇತಿಯ ಕುರಿತು ಮಾತನಾಡುತ್ತ ಮುಖ್ಯಮಂತ್ರಿ, ‘ದೆಹಲಿ ಮಾದರಿಯಲ್ಲಿ ನಮ್ಮ ರಾಜ್ಯದಿಂದಲೂ ಶಿಕ್ಷಕರನ್ನು ತರಬೇತಿಗಾಗಿ ವಿದೇಶಕ್ಕೆ ಕಳಿಸುವ ಚಿಂತನೆ ಇದೆ’ ಎಂದಿರುವುದಾಗಿ ವರದಿಯಾಗಿದೆ. ಇದರ ಅಗತ್ಯವಿಲ್ಲ. ನಮ್ಮಲ್ಲಿಯೇ ಹೈದರಾಬಾದಿನಲ್ಲಿ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ಕೇಂದ್ರ ಸಂಸ್ಥೆ ಇದೆ, ಬೆಂಗಳೂರಿನಲ್ಲಿಯೇ ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ ಇದೆ. ಮೈಸೂರಿನಲ್ಲಿ ಭಾರತೀಯ ಭಾಷಾ ಸಂಸ್ಥೆ ಇದೆ. ಇವೆಲ್ಲವೂ ನಮ್ಮದೇ ದೇಶದಲ್ಲಿ ಉಗಮಗೊಂಡು ಪರಿಣತ ಸೇವೆಯನ್ನು ದಶಕಗಳಿಂದ ಒದಗಿಸುತ್ತಾ ಬಂದ ಸಂಸ್ಥೆಗಳು. ಇವುಗಳಿಗೆ ನಮ್ಮ ಮಕ್ಕಳ ಅಗತ್ಯ, ಸಾಮರ್ಥ್ಯ ಚೆನ್ನಾಗಿ ಗೊತ್ತು. ಸರ್ಕಾರ ಈ ಶಿಕ್ಷಕರ ತರಬೇತಿಯ ಹೊಣೆಯನ್ನು ಈ ಸಂಸ್ಥೆಗಳಿಗೆ ವಹಿಸಿಕೊಡುವುದು ಒಳ್ಳೆಯದು.

ಈ ಸಂಸ್ಥೆಗಳು ಈಗಾಗಲೇ ಸೇವಾನಿರತ ಶಿಕ್ಷಕರಿಗಷ್ಟೇಅಲ್ಲ, ಶಿಕ್ಷಕರಲ್ಲದ ಆಸಕ್ತರಿಗೂ ಇಂಗ್ಲಿಷ್ ಭಾಷಾ ಬೋಧನೆಯ ಕುರಿತು ಸರ್ಟಿಫಿಕೆಟ್, ಡಿಪ್ಲೊಮಾ ತರಬೇತಿಗಳನ್ನು ನಡೆಸಿವೆ. ಶಿಕ್ಷಕರಲ್ಲದ ಸಾವಿರಾರು ಜನ ಇಲ್ಲಿ ತರಬೇತಿ ಹೊಂದಿದ್ದಾರೆ. ಇವರನ್ನು ಪಟ್ಟಿ ಮಾಡಿ, ಯಾವುದಾದರೂ ಒಂದು ವಿಧಾನದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು ಒಳ್ಳೆಯದು. ನಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷಾ ಕೌಶಲಗಳನ್ನು ಕಲಿಸುವುದು ಬ್ರಹ್ಮವಿದ್ಯೆಯೂ ಅಲ್ಲ, ರಾಕೆಟ್ ತಂತ್ರಜ್ಞಾನವೂ ಅಲ್ಲ. ಇದಕ್ಕಾಗಿ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ಅದೇ ಸಂಪನ್ಮೂಲವನ್ನು ಹೆಚ್ಚು ವ್ಯಾಪಕವಾಗಿ ಬಳಸಿ, ಹೆಚ್ಚು ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವವರನ್ನು ನೇಮಿಸುವುದು ಜಾಣತನ.

-ಎಂ.ಅಬ್ದುಲ್ ರೆಹಮಾನ್ ಪಾಷ, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !