ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 23 ಫೆಬ್ರುವರಿ 2024, 19:41 IST
Last Updated 23 ಫೆಬ್ರುವರಿ 2024, 19:41 IST
ಅಕ್ಷರ ಗಾತ್ರ

ಮಕ್ಕಳಲ್ಲಿ ದುಶ್ಚಟ: ಕಾನೂನೊಂದೇ ಸಾಲದು

ಸಿಗರೇಟು ನಿಷೇಧದ ವಯೋಮಿತಿಯನ್ನು 18ರಿಂದ 21ಕ್ಕೆ ಹೆಚ್ಚಿಸಿ, ವಿಧಾನಸಭೆಯಲ್ಲಿ ಮಸೂದೆಯನ್ನು
ಅಂಗೀಕರಿಸಲಾಗಿದೆ. ಆದರೆ ಬೀಡಿ, ಸಿಗರೇಟು ಸೇದುವವವರ ವಯಸ್ಸನ್ನು ಯಾವ ಆಧಾರದ ಮೇಲೆ ಅಳತೆಗೋಲಾಗಿ ಪರಿಗಣಿಸಲು ಸಾಧ್ಯ? ನಗರಗಳ ಕೆಲವು ಟೀ ಅಂಗಡಿಗಳ ಹಿಂದೆ, ಹದಿವಯಸ್ಸಿನ ಶಾಲಾ ಹುಡುಗರೇ ಸಿಗರೇಟು ಸೇದುತ್ತಾ ಇರುತ್ತಾರೆ. ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ಬರೀ ಕಾನೂನಿನಿಂದ ತಡೆಗಟ್ಟಲು ಸಾಧ್ಯವಿಲ್ಲ. ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಬುದ್ಧಿ ಹೇಳದೇ ಇಂತಹ ಸಾಮಾಜಿಕ ಪಿಡುಗುಗಳು ನಿಯಂತ್ರಣಕ್ಕೆ ಬರುವುದಿಲ್ಲ. ಅದಿಲ್ಲವಾದರೆ, ಈ ಬಗೆಯ ಕಾನೂನುಗಳು ಸಾರ್ವಜನಿಕರ ಮುಂದೆ ಹಾಸ್ಯಾಸ್ಪದವಾಗಿ ಕಾಣುತ್ತವೆ.

ಬೂಕನಕೆರೆ ವಿಜೇಂದ್ರ, ಮೈಸೂರು

ಮನೆ ನಿರ್ಮಾಣ: ಅನುದಾನ ಹೆಚ್ಚಲಿ

ಕಡುಬಡವರು ಮನೆ ಕಟ್ಟಿಕೊಳ್ಳಲು ಸರ್ಕಾರ ₹ 1.80 ಲಕ್ಷ ಮಂಜೂರು ಮಾಡುತ್ತದೆ. ಆದರೆ ಈ ಹಣ ಅವರಿಗೆ ಏನೇನೂ ಸಾಲದು. ಏಕೆಂದರೆ, ಮನೆ ನಿರ್ಮಾಣಕ್ಕೆ ಬೇಕಾಗುವ ಪ್ರಮುಖ ಸಲಕರಣೆಗಳಾದ ಇಟ್ಟಿಗೆ, ಮರಳು, ಸಿಮೆಂಟ್ ಬೆಲೆ ಬಹಳ ತುಟ್ಟಿಯಾಗಿದೆ. ನಮ್ಮ ಹಿರಿಯರು ಹೇಳಿಕೊಂಡು ಬಂದ ಮಾತು ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬುದು ಕಡು ಬಡವರಿಗಷ್ಟೇ ಅಲ್ಲ, ಕೆಳ ಮಧ್ಯಮ, ಮಧ್ಯಮ ವರ್ಗದವರಿಗೂ
ಅನ್ವಯಿಸುವಂತಾಗಿರುವ ಸಂದರ್ಭ ಇದು. ಹೀಗಿರುವಾಗ, ಕಡು ಬಡವರು ಸರ್ಕಾರ ಕೊಡುವ ಹಣಕ್ಕೆ ತಮ್ಮ ಬಳಿ ಇರುವ ಅಲ್ಪ ಸ್ವಲ್ಪ ಹಣವನ್ನು ಸೇರಿಸಿದರೂ ಮನೆ ನಿರ್ಮಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ.

ಸರ್ಕಾರ ಈಗಿರುವ ಅನುದಾನದ ಮೊತ್ತವನ್ನು ಈ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತೆ ಸೂಕ್ತವಾಗಿ ಪರಿಷ್ಕರಿಸಬೇಕು. ಈ ಮೂಲಕ, ಮನೆ ನಿರ್ಮಾಣಕ್ಕೆ ಬೇಕಾಗುವ ಮೂಲ ಸಲಕರಣೆಗಳನ್ನು ಬಡವರು ಸಹ ಖರೀದಿಸಲು ಸಾಧ್ಯವಾಗುವಂತೆ ಸರ್ಕಾರ ಕಾಳಜಿ ವಹಿಸಬೇಕು. →→ ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

ಕೃಷಿ ಹವಾಮಾನ ಘಟಕ: ಮುಚ್ಚುವುದು ಸಲ್ಲ

ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ (ಪ್ರ.ವಾ., ಫೆ. 23) ರೈತರಿಗೆ ತುಂಬಾ ಹಾನಿಕಾರಕವಾದದ್ದು. ಪ್ರತಿಯೊಂದು ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಈ ಯೋಜನೆ ವಿಸ್ತರಣೆಯಾಗಬೇಕಿತ್ತು.
ಹವಾಮಾನ ಪ್ರತಿ ತಾಲ್ಲೂಕು, ಗ್ರಾಮಗಳಿಗೂ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಕೆಲವು ಜಿಲ್ಲೆಗಳು ಮಲೆನಾಡು ಮತ್ತು ಬಯಲುನಾಡು ತಾಲ್ಲೂಕುಗಳೆರಡನ್ನೂ ಹೊಂದಿರುತ್ತವೆ. ಉದಾಹರಣೆಗೆ, ಚಿಕ್ಕಮಗಳೂರು,
ಶಿವಮೊಗ್ಗದಂತಹ ಜಿಲ್ಲೆಗಳು ಮಲೆನಾಡು, ಬಯಲುಸೀಮೆ ಎರಡೂ ಪ್ರದೇಶಗಳನ್ನು ಒಳಗೊಂಡಿವೆ.
ಈ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಹವಾಮಾನ ಪದ್ಧತಿ ಇರುತ್ತದೆ.

ಜಿಲ್ಲೆಗೆ ಒಂದೇ ರೀತಿಯ ಹವಾಮಾನ ಮುನ್ಸೂಚನೆ ನೀಡುವುದರಿಂದ ರೈತರು ನಿಖರ ಹವಾಮಾನ ಮಾಹಿತಿ
ಗಳಿಂದ ವಂಚಿತರಾಗಿ ತುಂಬಾ ತೊಂದರೆಗೀಡಾಗುತ್ತಾರೆ. ಆದ್ದರಿಂದ ಸರ್ಕಾರ ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚುವ ನಿರ್ಧಾರ ಕೈಬಿಟ್ಟು ಅವುಗಳನ್ನು ಗ್ರಾಮ ಮಟ್ಟಕ್ಕೂ ವಿಸ್ತರಿಸುವಂತಹ ಯೋಜನೆಯನ್ನು ರೂಪಿಸಬೇಕು.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ಮೌಖಿಕ ಸಾಹಿತ್ಯ: ಸಿಗಲಿ ಆದ್ಯತೆ

ಲಿಖಿತ ಭಾಷೆಗೂ ಮೀರಿದ ಸಂವಹನವು ಅಲಿಖಿತ ಅರ್ಥಾತ್ ಮೌಖಿಕ ಭಾಷೆಗಿದೆ ಎನ್ನುವುದು ಸರ್ವರಿಗೂ ಗೊತ್ತಿದೆ. ಕನ್ನಡದ ಸಂದರ್ಭದಲ್ಲಿ ಬಾಯಿಂದ ಬಾಯಿಗೆ ಸಾಗಿ ಬಂದ ಅಪಾರವಾದ ಮೌಖಿಕ ವಾಙ್ಮಯವಿದೆ. ಇಂದಿಗೂ ಅಕ್ಷರದ ಹಂಗಿಲ್ಲದೆ, ದಿನಗಟ್ಟಲೆ ತತ್ವಪದ, ಕಥೆ, ಆಟ, ಹಾಡು, ಒಗಟು, ಗಾದೆಗಳನ್ನು ಸಾದರಪಡಿಸುವ ವಲಯಗಳಿವೆ. ಹಾಗಾಗಿ, ಈ ಬಾರಿ ಮಂಡ್ಯದಲ್ಲಿ ನೆರವೇರಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಮೌಖಿಕ ಕನ್ನಡ ಸಾಹಿತ್ಯ ಪರಿಚಾರಕರೊಬ್ಬರು ಆಯ್ಕೆಯಾಗಲಿ. ಆ ಮೂಲಕ ಲೇಖನಿಯಿಂದ ರಚಿಸಿದ್ದೇ ಸಾಹಿತ್ಯ ಎನ್ನುವ ಭ್ರಮೆಯಿಂದ ಜನಮಾನಸ ಪೂರ್ಣವಾಗಿ ಮುಕ್ತವಾಗಲಿ.

ಬಿಂಡಿಗನವಿಲೆ ಭಗವಾನ್, ಬೆಂಗಳೂರು

ಜಾತಿಗೊಂದು ಹುಂಡಿ ಮೀಸಲಿಡಿ!

‘ಹಿಂದೂ ದೇವಾಲಯಗಳ ಹಣ ಹಿಂದೂಗಳಿಗೇ ಮೀಸಲಾಗಬೇಕು’ ಎಂದು ಪ್ರಬಲವಾಗಿ ವಾದಿಸುವವರ ಮಾತಿನ ಮರ್ಮವೇನು? ದೇವಾಲಯ ಎಂದರೆ ಅರ್ಥವಾಗದೇ? ‘ಹಿಂದೂ’ ದೇವಾಲಯ ಎಂದೇ ಪ್ರತಿ ಬಾರಿ ಒತ್ತಿ ಹೇಳುವುದೇಕೆ? ಅಷ್ಟಕ್ಕೂ ಇಲ್ಲಿ ‘ಹಿಂದೂ’ಗಳು ಎಂಬುದು ವಾಸ್ತವಿಕ ಅರ್ಥದಲ್ಲಿ ಯಾರನ್ನು ಕುರಿತದ್ದಾಗಿದೆ? ಈ ಮರ್ಮವನ್ನು ಅರ್ಥ ಮಾಡಿಕೊಂಡರೆ ‘ಹಿಂದುತ್ವ’ ವಾದಕ್ಕೆ ಇನ್ನಷ್ಟು ಮಹತ್ವ ಬರುತ್ತದೆ.

ರಾಜ್ಯದಲ್ಲಿ 35 ಸಾವಿರ ಮುಜರಾಯಿ ದೇವಾಲಯಗಳಿವೆಯಂತೆ. ಅಂದರೆ, 35 ಸಾವಿರ, ಕೆಲವೆಡೆ ಅದಕ್ಕೂ ಹೆಚ್ಚು ಅರ್ಚಕರು, ಅಂದರೆ ಸುಮಾರು ಒಂದು ಲಕ್ಷ ಅರ್ಚಕರು ಎಂದಾಯಿತು. ಇವರೆಲ್ಲಾ ಬಹುಪಾಲು ಒಂದೇ ‘ಪ್ರಧಾನ’ ಸಮುದಾಯದವರು ಅಥವಾ ಮೇಲ್ವರ್ಗದವರು. ದೇವಸ್ಥಾನದ ಆದಾಯದ-ತಟ್ಟೆಕಾಸು, ವೇತನದಂತಹ ಆದಾಯದ ಹೊರತಾಗಿ- ನೇರ ಫಲಾನುಭವಿಗಳು ಇವರೇ. ಮುಜರಾಯಿ ಕಾಯ್ದೆಯಲ್ಲಿ ‘...ಕೆಲವೆಡೆ ವೇದಪಾಠಶಾಲೆಗಳಿಗೆ, ಹಿಂದೂ ಧಾರ್ಮಿಕ ತರಗತಿ, ವೃದ್ಧಾಶ್ರಮ’ಗಳಿಗೆ ಈ ಆದಾಯ ಬಳಕೆಯಾಗಬಹುದು ಎಂದಿದೆ. ಅಂದರೆ, ಈ ‘ಧಾರ್ಮಿಕ ತರಗತಿ’ಗಳಲ್ಲಿ ಓದುವವರೆಲ್ಲಾ ಅದೇ ಸಮುದಾಯಕ್ಕೆ ಸಂಬಂಧಿಸಿದವರಲ್ಲವೇ? ಅನ್ಯರಿಗೆ ಪ್ರವೇಶವೆಲ್ಲಿದೆ? ಅಂದರೆ, ಆ ಹಣ ಉದಾರವಾಗಿ ಕಾಣಿಕೆ ನೀಡುವ ಅನ್ಯ ಜಾತಿಯವರಿಗೆ ಹೋಗುವ ಅವಕಾಶವೇ ಇಲ್ಲವಲ್ಲ!

‘ಹಿಂದೂ ದೇವಾಲಯದ ಹಣ ಹಿಂದೂಗಳಿಗೇ’ ಮೀಸಲಿನ ನೆವದಲ್ಲಿ ಕೆಲವರೇ ಅದನ್ನು ಪಡೆದುಕೊಳ್ಳುವವ
ರಾದರೆ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೊಂದು ವ್ಯವಸ್ಥೆ ಮಾಡಬಹುದು- ಒಂದೊಂದು ಜಾತಿಯವರಿಗೆ ಒಂದೊಂದು ಪ್ರತ್ಯೇಕ ಹುಂಡಿ ಇಟ್ಟು, ಅವುಗಳಲ್ಲಿ ಸಂಗ್ರಹವಾದ ಹಣವನ್ನು ಆಯಾ ಜಾತಿಯ ಅಭಿವೃದ್ಧಿ ನಿಗಮಗಳಿಗೇ ಕೊಡಬಹುದು. ಆಗ ನಿಜವಾದ ಅರ್ಥದಲ್ಲಿ ‘ಹಿಂದೂಗಳ ಹಣ ಹಿಂದೂಗಳಿಗೇ’ ಎಂಬುದಕ್ಕೆ ಅರ್ಥ ಬರುತ್ತದೆ. ಅದನ್ನು ‘ಹಿಂದುತ್ವ’ವಾದಿಗಳೂ ಮುಕ್ತವಾಗಿ ಒಪ್ಪಬಹುದು, ವಿವಾದ ಬಗೆಹರಿಯಬಹುದು.

ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT