ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಶಿಕ್ಷಕರ ಮಕ್ಕಳಿಗೇಕೆ ಸರ್ಕಾರಿ ಶಾಲೆ ವರ್ಜ್ಯ?

Published 15 ಮೇ 2024, 19:35 IST
Last Updated 15 ಮೇ 2024, 19:35 IST
ಅಕ್ಷರ ಗಾತ್ರ

ಶಿಕ್ಷಕರ ಮಕ್ಕಳಿಗೇಕೆ ಸರ್ಕಾರಿ ಶಾಲೆ ವರ್ಜ್ಯ?

ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಸಿತ ಆಗಿರುವುದರ ಕುರಿತು ವಿಭಿನ್ನ ರೀತಿಯ ವಿಶ್ಲೇಷಣೆಗಳು ನಡೆಯುತ್ತಿವೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಪ್ರಯತ್ನಗಳು ಆಗೊಮ್ಮೆ ಈಗೊಮ್ಮೆ ಆಗುತ್ತವೆ. ಇದರಲ್ಲಿ ಶಿಕ್ಷಕರು ಕೂಡ ತೊಡಗಿಸಿಕೊಳ್ಳುತ್ತಾರೆ. ಪರಿಚಿತ ಎಸ್‌ಡಿಎಂಸಿ ಅಧ್ಯಕ್ಷರೊಬ್ಬರು ಈ ದಿಸೆಯಲ್ಲಿ ನನ್ನೊಡನೆ ಹಂಚಿಕೊಂಡ ಅನುಭವ ಹೀಗಿದೆ: ಶಿಕ್ಷಣ ಇಲಾಖೆಯ ತಾಲ್ಲೂಕು ಘಟಕದ ವತಿಯಿಂದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಸಭೆ ಕರೆಯಲಾಗಿತ್ತು. ಸರ್ಕಾರವು ಮಕ್ಕಳಿಗೆ ಕೊಡುವ ಸೌಲಭ್ಯಗಳ ಕುರಿತು ಪಾಲಕರ ಮನವೊಲಿಸುವಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರ ಮಹತ್ವದ್ದು ಎಂದು ಸಭೆಯಲ್ಲಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಯಿತು. ಬಳಿಕ ಈ ಸಂಬಂಧ ತಮ್ಮ ಅನಿಸಿಕೆ ವ್ಯಕ್ತಪಡಿಸಲು ಸೂಚಿಸಿದಾಗ ಎಸ್‌ಡಿಎಂಸಿ ಅಧ್ಯಕ್ಷರು ‘ಇಷ್ಟೆಲ್ಲ ಸೌಲಭ್ಯಗಳು ದೊರೆಯುತ್ತಿದ್ದಾಗ್ಯೂ ಶಿಕ್ಷಕರೇಕೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿಲ್ಲ?’ ಎಂದು ಕೇಳಿದರಂತೆ! ಆಗ ಸಭೆಯಲ್ಲಿದ್ದ ಅಧಿಕಾರಿಗಳಿಗೂ ಶಿಕ್ಷಕರಿಗೂ ಉತ್ತರ ಕೊಡಲು ಸಾಧ್ಯವಾಗಲಿಲ್ಲವಂತೆ.

ಫಲಿತಾಂಶದಲ್ಲಿನ ಕುಸಿತಕ್ಕೂ ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೇ ಇರುವುದಕ್ಕೂ ಏನೂ ಸಂಬಂಧವಿಲ್ಲವೇ? ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡದಿರುವುದು ತಮಗೆ ಗೊತ್ತಿರುವ ಕಾರಣಕ್ಕೇ ಶಿಕ್ಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುವುದಿಲ್ಲ ಎಂದು ಪಾಲಕರು ಭಾವಿಸಿದರೆ, ಅದನ್ನು ತಪ್ಪೆಂದು ಹೇಗೆ ಹೇಳುವುದು? ತಮಗೆ ಮಾತ್ರ ಸರ್ಕಾರಿ ನೌಕರಿ ಬೇಕು, ಆದರೆ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬೇಕು ಎಂಬ ನಿಲುವು ಶಿಕ್ಷಕರದು. ಇದು ವಿಪರ್ಯಾಸವಲ್ಲವೇ?

ಶಿವಕುಮಾರ ಬಂಡೋಳಿ, ಹುಣಸಗಿ, ಯಾದಗಿರಿ

ಪ್ರತ್ಯೇಕ ಸನ್ಮಾನ: ತಪ್ಪು ಸಂದೇಶಕ್ಕೆ ದಾರಿ

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತ್ಯೇಕವಾಗಿ ಸನ್ಮಾನಿಸಿ ನಗದು ಬಹುಮಾನ ಘೋಷಿಸಿರುವುದು ಸರಿಯಷ್ಟೆ. ಆದರೆ ಪ್ರತ್ಯೇಕವಾಗಿ ಸನ್ಮಾನಿಸಿರುವುದು ಜನರಿಗೆ ತಪ್ಪುಸಂದೇಶವನ್ನು ನೀಡುತ್ತದೆ. ಇದೇ ಮಾದರಿಯನ್ನು ಅನುಸರಿಸಿ ಶಿಕ್ಷಣ ಸಚಿವರು,  ಉಸ್ತುವಾರಿ ಸಚಿವರು, ಶಾಸಕರು ಪ್ರತ್ಯೇಕವಾಗಿ ಸನ್ಮಾನಿಸುತ್ತಾ ಹೋದರೆ, ಇವರ ನಡುವೆ ಒಮ್ಮತವಿಲ್ಲ ಎಂದು ಜನ ತಿಳಿಯಲು ಆಸ್ಪದವಾಗುತ್ತದೆ ಹಾಗೂ ಜನಪ್ರಿಯತೆ ಗಳಿಸಲು ಅನಗತ್ಯವಾಗಿ ಪೈಪೋಟಿಗೆ ಇಳಿದಿರುವಂತೆ ಕಾಣುತ್ತದೆ.

ಇದರ ಬದಲು, ಸರ್ಕಾರದ ವತಿಯಿಂದ ಅಧಿಕೃತವಾಗಿ ಸಮಾರಂಭ ಆಯೋಜಿಸಿ, ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿರೋಧ ಪಕ್ಷಗಳ ನಾಯಕರನ್ನು ಸಹ ಕರೆಸಿ ಒಟ್ಟುಗೂಡಿ ಸನ್ಮಾನಿಸಿದರೆ ಅರ್ಥಪೂರ್ಣವಾಗಿರುತ್ತದೆ. 

ಪುಟ್ಟದಾಸು, ಮಂಡ್ಯ

ಜಾಮೀನು ನೀಡಿಕೆ: ಸಂಭ್ರಮ ಹಾಸ್ಯಾಸ್ಪದ

ಮಹಿಳೆ ಅಪಹರಣ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಎಚ್‌.ಡಿ.ರೇವಣ್ಣ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ತೆರಳಿದಾಗ,  ಕುಟುಂಬಸ್ಥರು ಆರತಿ ಬೆಳಗಿ ಸ್ವಾಗತಿಸಿದ್ದಲ್ಲದೆ, ಸ್ಥಳದಲ್ಲಿದ್ದ 
ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮಿಸಿದ್ದು ವರದಿಯಾಗಿದೆ. ಇಂತಹ ನಡೆ ಹಾಸ್ಯಾಸ್ಪದವಲ್ಲವೇ? ನಮ್ಮದು ಅಪಾರ ಗೌರವಾನ್ವಿತವಾದ ಸಂಸ್ಕೃತಿ. ಇಂತಹ ನಾಡಿನಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ, ಅನಾಚಾರ ನಡೆಯುತ್ತಿರುವುದನ್ನು ಸುದ್ದಿಮಾಧ್ಯಮಗಳಲ್ಲಿ ಪ್ರತಿನಿತ್ಯ ನೋಡುತ್ತಿರುತ್ತೇವೆ. ಇಂತಹ ಕೃತ್ಯ ಎಸಗುವ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಆದರೆ ಎಷ್ಟೋ ಜನರಿಗೆ ನ್ಯಾಯಾಂಗದ ಬಗ್ಗೆ ಭಯ ಇಲ್ಲದಂತಾಗಿದೆ. ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿ ಪೋಕ್ಸೊ ಕಾಯ್ದೆಯಡಿ ಬಂಧಿತರಾಗಿ ವರ್ಷಗಟ್ಟಲೆ ಜೈಲಿನಲ್ಲಿ ಕಳೆಯಬೇಕಾಗಿ ಬಂದದ್ದು ನ್ಯಾಯಾಂಗಕ್ಕೆ ಸಂದ ಗೌರವವೇ ಸರಿ. ಇಂತಹ ಕ್ರಮಗಳು ಜನರಲ್ಲಿ ಎಚ್ಚರ ಮೂಡಿಸುತ್ತವೆ.

ರೇವಣ್ಣ ಪ್ರಕರಣದಲ್ಲಿ ಅಪಹರಣ ನಡೆದಿರುವುದು ಸಾಬೀತಾದರೆ ಅದೊಂದು ಅಪರಾಧವೇ ಸರಿ. ಹೀಗಾಗಿ, ಆರೋಪ ಹೊತ್ತವರಿಗೆ ಪರಾಕ್ ಹಾಕುವ ಸಂಸ್ಕೃತಿಯನ್ನು ಜನ ಬಿಡಬೇಕು. ಅವರು ನಿರಪರಾಧಿ ಎಂದು ಘೋಷಣೆಯಾದರೆ ಮನೆ ಮನೆಗೆ ಸಿಹಿ ಹಂಚಿ ಸಂಭ್ರಮಿಸಲಿ. ಅದುಬಿಟ್ಟು, ನ್ಯಾಯಾಲಯ ಜಾಮೀನು ನೀಡಿದ್ದಕ್ಕೇ ಆರತಿ ಬೆಳಗಿ ಸ್ವಾಗತಿಸುವುದು ನಗೆಪಾಟಲು.

ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ

ನಿವೃತ್ತರ ಸೇವೆ ಸದ್ಬಳಕೆಯಾಗಲಿ 

ಸರ್ಕಾರದ ವಿವಿಧ ಇಲಾಖೆಗಳು, ನಿಗಮ– ಮಂಡಳಿಗಳಿಗೆ ನಿವೃತ್ತರನ್ನು ನೇಮಕ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂದು ವಿಶೇಷ ವರದಿ (ಪ್ರ.ವಾ., ಮೇ 15) ಪ್ರತಿಪಾದಿಸಿದೆ. ಸರ್ಕಾರದ ಯಾವುದೇ ಕಾರ್ಯಕ್ರಮ ಸದ್ಬಳಕೆಯಾಗದಿದ್ದಲ್ಲಿ ಅದು ಸರ್ಕಾರಕ್ಕೆ ಹೊರೆಯೇ ಸರಿ. ಆದರೆ ಕಾಲಕಾಲಕ್ಕೆ ನೇಮಕಾತಿ ಮಾಡಿಕೊಳ್ಳದಿದ್ದಾಗ ಸರ್ಕಾರದ ಕೆಲಸ ಸುಸೂತ್ರವಾಗಿ ನಡೆಯಬೇಕಾದಲ್ಲಿ ನಿವೃತ್ತರ ಬಳಕೆ ಅನಿವಾರ್ಯ. ಇದರಿಂದ ಖಂಡಿತ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಏಕೆಂದರೆ ಅದೇ ಹುದ್ದೆಗೆ ಹೊಸದಾಗಿ ಅಧಿಕಾರಿ ಅಥವಾ ನೌಕರನನ್ನು ನೇಮಿಸಿಕೊಂಡಲ್ಲಿ ಸರ್ಕಾರಿ ನೌಕರನಿಗೆ ನಿಗದಿಪಡಿಸಿದ ವೇತನದ ಜೊತೆಗೆ ಇತರ ಭತ್ಯೆಗಳು, ರಜೆಗಳು, ವೈದ್ಯಕೀಯ ಸೌಲಭ್ಯ, ರಜೆ ನಗದೀಕರಣದಂತಹ ಸೌಲಭ್ಯಗಳನ್ನೆಲ್ಲಾ ಪರಿಗಣಿಸಬೇಕಾಗುತ್ತದೆ. ಆಗ ಗುತ್ತಿಗೆ ಆಧಾರದಲ್ಲಿ ನೀಡುವ ಮೊತ್ತ ಏನೇನೂ ಅಲ್ಲ ಎಂಬುದು ತಿಳಿಯುತ್ತದೆ. ಆದರೆ ಇದರಿಂದ ಸಮಾಜದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿ, ಸಮಾಜದ ಸ್ವಾಸ್ಥ್ಯ ಕೆಡುತ್ತದೆ.

ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಇರುವ ಅವಕಾಶವನ್ನು ಉಪಯೋಗ ಪಡಿಸಿಕೊಳ್ಳುವುದಕ್ಕಿಂತ ದುರುಪಯೋಗ ಮಾಡಿಕೊಳ್ಳುತ್ತಿರುವುದೇ ಹೆಚ್ಚು. ಈ ರೀತಿ  ನೇಮಕ ಮಾಡಿಕೊಳ್ಳುವ ಅವಶ್ಯಕತೆ ಇದೆಯೇ ಎಂಬುದನ್ನು ತನಿಖಾ ತಂಡದ ಮೂಲಕ ಪರಿಶೀಲನೆಗೆ ಒಳಪಡಿಸುವುದು ಒಳ್ಳೆಯದು. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಆಯಕಟ್ಟಿನ ಜಾಗ ನಿರ್ವಹಣೆಗೆ ನಿವೃತ್ತರ ಸೇವೆಯನ್ನು ಬಳಸಿಕೊಳ್ಳುವುದು ಹಾಗೂ ನಿವೃತ್ತರ ವೈಯಕ್ತಿಕ ಹಿತಾಸಕ್ತಿಗಾಗಿ ಅವರನ್ನು ನೇಮಕ ಮಾಡಿಕೊಳ್ಳುವುದು ಸರಿಯಲ್ಲ.

ಕೆ.ಎಂ.ನಾಗರಾಜು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT