ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಯೋಗ್ಯರಾಗಿರಲಿ ಶಿಕ್ಷಕರ ಜನಪ್ರತಿನಿಧಿ

Published 17 ಮೇ 2024, 20:33 IST
Last Updated 17 ಮೇ 2024, 20:33 IST
ಅಕ್ಷರ ಗಾತ್ರ

ಯೋಗ್ಯರಾಗಿರಲಿ ಶಿಕ್ಷಕರ ಜನಪ್ರತಿನಿಧಿ

ಶಾಸಕ ಮತ್ತು ಸಂಸದ ಸ್ಥಾನಕ್ಕೆ ಇತ್ತೀಚೆಗೆ ಬಹುಕೋಟಿ ಒಡೆಯರು ಆಯ್ಕೆಯಾಗುತ್ತಿರುವುದು ವಾಡಿಕೆಯಾಗಿದೆ. ಆದರೆ ಮೇಲ್ಮನೆ ಎನಿಸಿಕೊಂಡಿರುವ, ವಿವಿಧ ಕ್ಷೇತ್ರಗಳ ಪರಿಣತರು, ಗಣ್ಯರಿಂದ ಕೂಡಿರಬೇಕಾಗಿದ್ದ ವಿಧಾನ
ಪರಿಷತ್ತಿಗೂ ಬಹುಕೋಟಿ ಒಡೆಯರೇ ಲಗ್ಗೆ ಇಡುತ್ತಿರುವುದು ದುರದೃಷ್ಟಕರ. ಶಾಸಕ ಮತ್ತು ಸಂಸದರಿಗೆ ಮತ ಚಲಾಯಿಸುವವರ ಪೈಕಿ ಗಣನೀಯ ಸಂಖ್ಯೆಯ ಮತದಾರರನ್ನು ಹಣ, ಆಮಿಷಗಳಿಗೆ ಬಲಿಯಾಗುವಂತೆ ಮಾಡಲಾಗಿದೆ. ಈ ಮತದಾರರ ಮನಃಸ್ಥಿತಿ ಹೇಗಿದೆ ಎಂದರೆ, ಹಣ ಅಥವಾ ಆಮಿಷ ಒಡ್ಡಿದ ವಸ್ತು ಹಂಚಿಕೆಯಾಗದಿದ್ದಲ್ಲಿ ಮತ ಚಲಾಯಿಸಲು ಬಾರದೇ ಇರುವಂಥ ವಾತಾವರಣ ಸೃಷ್ಟಿಯಾಗಿದೆ. ಇದು ಬಹುಕೋಟಿ ಒಡೆಯರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸಮಾಜದಲ್ಲಿ ವಿದ್ಯಾವಂತ ನಾಗರಿಕರನ್ನು ಸೃಷ್ಟಿ ಮಾಡುವ ಶಿಕ್ಷಕರೇ ಆಯ್ಕೆ ಮಾಡುವ ಜನಪ್ರತಿನಿಧಿ ಕೂಡ ಇಂತಹದೇ ಲಕ್ಷಣಗಳನ್ನು ಹೊಂದಿದ್ದಾರೆ ಎಂಬುದು ಆತಂಕಕ್ಕೆ ಎಡೆ ಮಾಡುತ್ತದೆ. ಹೀಗೆ ಆಯ್ಕೆಯಾಗುವವರಿಗೆ ಸಾಮಾನ್ಯ ಶಿಕ್ಷಕರ ಸಮಸ್ಯೆಗಳ ಅರಿವು ಹೇಗೆ ತಾನೇ ಆಗುತ್ತದೆ? 

ತಿಮ್ಮೇಶ ಮುಸ್ಟೂರು, ಜಗಳೂರು

ಮುಖಂಡರ ಹೇಳಿಕೆ: ಬೇಕು ಔಚಿತ್ಯಪ್ರಜ್ಞೆ

‘ಬಿಜೆಪಿ ನಾಯಕರು ಇದುವರೆಗೂ ಹಾಸನದ ಸಂತ್ರಸ್ತೆಯರ ಮನೆಗಳಿಗೆ ಭೇಟಿ ನೀಡಿಲ್ಲ, ಒಂದು ವೇಳೆ ಅಮಿತ್‌ ಶಾ, ಜೆ.ಪಿ. ನಡ್ಡಾ ಅವರು ಹಾಸನಕ್ಕೆ ಭೇಟಿ ನೀಡಿದ್ದೇ ಆದಲ್ಲಿ, ಪ್ರಜ್ವಲ್‌ ಪ್ರಕರಣದ ನಂತರವೂ ಜೆಡಿಎಸ್‌ ಜತೆ ಮೈತ್ರಿ ಮುಂದುವರಿಸಿದ್ದಕ್ಕಾಗಿ ಜನ ಅವರ ಮೇಲೆ ಕಲ್ಲು ಎಸೆಯುತ್ತಾರೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿರುವುದು ಸರಿಯಲ್ಲ. ಪ್ರಿಯಾಂಕ್‌ ಅವರ ಈ ಹೇಳಿಯಲ್ಲಿ ಎರಡು ಅಪಾಯಗಳಿವೆ. ಒಂದು, ಕಲ್ಲೇಟು ನೀಡುವ ಕ್ರಿಯೆಗೆ ಪರೋಕ್ಷವಾಗಿ ಜನರನ್ನು ಪ್ರೇರೇಪಿಸುವ ಸಾಧ್ಯತೆ. ಎರಡು, ಶಾ ಮತ್ತು ನಡ್ಡಾ ಅವರ ಸಾಂತ್ವನದ ಭೇಟಿಯಿಂದ ಸಂತ್ರಸ್ತೆಯರು ಇವರೇ ಎನ್ನುವುದು ಸಾರ್ವಜನಿಕವಾಗಿ ಪ್ರಚಾರವಾಗುವ ಸಂಭವ. ಇದು, ಸಂತ್ರಸ್ತೆಯರು ಇನ್ನಷ್ಟು ಮುಜುಗರಕ್ಕೆ ಒಳಗಾಗಲು ಕಾರಣವಾಗುತ್ತದೆ.

ಕಾಂಗ್ರೆಸ್‌ ಪಕ್ಷದ ಮುಖಂಡರು ಈವರೆಗೆ ಸಂತ್ರಸ್ತೆಯರನ್ನು ಭೇಟಿ ಮಾಡಿದ್ದಾರೆಯೇ? ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಿಕೆ ನೀಡುವಾಗ ಔಚಿತ್ಯಪ್ರಜ್ಞೆ ಹೊಂದಿರಬೇಕು. ಪ್ರಚೋದನೆ ನೀಡುವ ರೀತಿಯ ಮಾತುಗಳು ಸೂಚ್ಯವಾಗಿ ಸಹ ಯಾವ ಕಾರಣಕ್ಕೂ ಯಾವ ಮುಖಂಡರಿಂದಲೂ ಬರಬಾರದು.

ಸಾಮಗ ದತ್ತಾತ್ರಿ, ಬೆಂಗಳೂರು

ಪರೀಕ್ಷಾ ತಯಾರಿ: ಲೆಕ್ಕಾಚಾರ ಸರಿಯಲ್ಲ

ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 30ರಷ್ಟು ಮಕ್ಕಳು ಅನುತ್ತೀರ್ಣರಾಗಿದ್ದು, ಅವರಿಗೆ ಜೂನ್- ಜುಲೈನಲ್ಲಿ ಪರೀಕ್ಷೆ- 2ಕ್ಕೆ ನೋಂದಾಯಿಸಲು ಅವಕಾಶ ಕಲ್ಪಿಸಿರುವುದು ಸರಿಯಷ್ಟೆ. ಈ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ ಉತ್ತಮಪಡಿಸುವ ದಿಸೆಯಲ್ಲಿ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಂಬಂಧಪಟ್ಟ ಶಾಲೆಯ ಸಂಬಂಧಿಸಿದ ವಿಷಯ ಶಿಕ್ಷಕರಿಗೆ ಇದೇ 15ರಿಂದ ಜೂನ್ 5ರವರೆಗೆ ವಿಶೇಷ ತರಗತಿಗಳನ್ನು
ತೆಗೆದುಕೊಳ್ಳುವಂತೆ ಆದೇಶ ನೀಡಿದೆ. ಆದರೆ ಇವರಲ್ಲಿ ಕೆಲವು ಶಿಕ್ಷಕರು ತಮ್ಮ ಬೇಸಿಗೆ ರಜೆ ಅವಧಿ ಕಡಿತವಾಯಿತು, ಇದು ಸೇವಾ ನಿಯಮಕ್ಕೆ ವಿರುದ್ಧ ಎಂದು ಆಕ್ಷೇಪಿಸುತ್ತಿದ್ದಾರೆ. ಹಾಗಿದ್ದರೆ ಇವರು ವರ್ಷವಿಡೀ ಮಕ್ಕಳ ಫಲಿತಾಂಶದ ಬಗ್ಗೆ ಏಕೆ ಕಾಳಜಿ ವಹಿಸಲಿಲ್ಲ? ಸರ್ಕಾರಿ ಶಾಲೆಗಳನ್ನೇ ನಂಬಿ ಬಂದ ಮಕ್ಕಳಿಗೆ ಅವರು ಸರಿಯಾಗಿ ಪರೀಕ್ಷಾ ತಯಾರಿ ಮಾಡಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ? ಮಕ್ಕಳ ಭವಿಷ್ಯದ ಪ್ರಶ್ನೆ ಎದುರಾದಾಗಲೂ ಶಿಕ್ಷಕರಾದವರು ಇಷ್ಟೊಂದು ಲೆಕ್ಕಾಚಾರ ಹಾಕುವುದು ಸರಿಯೇ?

ಸುರೇಂದ್ರ ಪೈ, ಭಟ್ಕಳ

‘ಒಳಚರಂಡಿ ರಾಕ್ಷಸ’ನಿಂದ ನದಿ ಮಾಲಿನ್ಯ

ಗಂಗಾ ನದಿಯ ಶುದ್ಧೀಕರಣ ಕಾರ್ಯ ಕುಂಟುತ್ತಲೇ ಸಾಗಿರುವ ಕುರಿತ ವರದಿ (ಆಳ–ಅಗಲ, ಪ್ರ.ವಾ., ಮೇ 15) ವಾಸ್ತವ ಸಂಗತಿಯನ್ನು ಎತ್ತಿಹಿಡಿದಿದೆ. ಗಂಗೆ ಸೇರಿದಂತೆ ದೇಶದ ಹಲವಾರು ನದಿಗಳು ‘ಒಳಚರಂಡಿ ರಾಕ್ಷಸ’ನಿಂದ ಮಲಿನವಾಗುತ್ತಿರುವ ಕುರಿತು ಕೇಂದ್ರ ಜಲಶಕ್ತಿ ಸಚಿವಾಲಯ ವರದಿ ನೀಡಿದೆ. ಒಳಚರಂಡಿಯಿಂದ  ಪ್ರತಿದಿನ ಗಂಗಾ ನದಿಗೆ ಕೋಟ್ಯಂತರ ಜನರ ಮಲ, ಮೂತ್ರವಲ್ಲದೆ ಕಾರ್ಖಾನೆ ತ್ಯಾಜ್ಯವೂ ಸೇರುತ್ತಿರುವುದು ದೇಶದ ಬುದ್ಧಿಜೀವಿಗಳು, ವಿಜ್ಞಾನಿಗಳಿಗೆ ತಿಳಿದಿಲ್ಲವೇ? ಹಾಗಿದ್ದರೂ ಈ ನದಿಯ ಶುದ್ಧೀಕರಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿರುವುದು ಎಷ್ಟು ಸರಿ?

ಮನೆಗೆ ಎರಡು ಗುಂಡಿಗಳ ವ್ಯವಸ್ಥೆ ರೂಪಿಸಿ ‘ಒಳಚರಂಡಿ ರಾಕ್ಷಸ’ನನ್ನು ನಿರ್ನಾಮ ಮಾಡಿದಾಗ ಮಾತ್ರ ನದಿ ಮಾಲಿನ್ಯ ತಪ್ಪಿಸಲು ಸಾಧ್ಯ ಎಂದು ಮಹಾತ್ಮ ಗಾಂಧಿ ಸಲಹೆ ಇತ್ತಿದ್ದರು. ವೃಷಭಾವತಿ ನದಿಯ ಅವಸಾನಕ್ಕೆ ಬೆಂಗಳೂರಿನ ಒಳಚರಂಡಿ ಮಾಲಿನ್ಯವೇ ಕಾರಣ ಎಂಬುದನ್ನು ನಾವು ಮರೆಯಬಾರದು.

ಎಚ್‌.ಆರ್‌.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT