ಮೊಣಕಾಲಿಗೆ ನೋವು ರಹಿತ ಸರ್ಜರಿ

ಶನಿವಾರ, ಮೇ 25, 2019
22 °C

ಮೊಣಕಾಲಿಗೆ ನೋವು ರಹಿತ ಸರ್ಜರಿ

Published:
Updated:
Prajavani

ರಾಯಚೂರಿನ ಸೂಗಮ್ಮನಿಗೆ 60 ವರ್ಷ. ಮೊಣಕಾಲು ನೋವಿನಿಂದ ಬಳಲುತ್ತಿದ್ದ ಸೂಗಮ್ಮ ಅವರಿಗೆ ಇದರ ನಿವಾರಣೆಗೆ ಶಸ್ತ್ರಚಿಕಿತ್ಸೆಯೊಂದೇ ದಾರಿ ಎಂದು ವೈದ್ಯರು ತಿಳಿಸಿದಾಗ ಅಕ್ಷರಶಃ ಕಂಗೆಟ್ಟು ಹೋದರು. ಮೊಣಕಾಲು ನೋವಿಗೆ ಮಾಡುವ ಸರ್ಜರಿ ಈಗ ಮೊದಲಿನಂತೆ ಅಲ್ಲ; ಸ್ವಲ್ಪವೂ ನೋವಿನ ಅನುಭವ ಆಗದಂತೆ ಹಾಗೂ ಸರ್ಜರಿ ಆದ ದಿನವೇ ವಾರ್ಡ್‌ಗೆ ಬಂದು ಸಾಮಾನ್ಯ ರೋಗಿಯಂತೆ ಇರಬಹುದು ಎಂದು ತಿಳಿದ ಮೇಲೆ ಅವರು ಬೆಂಗಳೂರಿಗೆ ಬಂದರು. ಸ್ಪರ್ಶ ಆಸ್ಪತ್ರೆಯಲ್ಲಿ ‘ನೋವಿಲ್ಲದ ಸರ್ಜರಿ’ ಮಾಡಿಸಿಕೊಂಡ ಸೂಗಮ್ಮ ಒಂದೇ ದಿನಕ್ಕೆ ಗೆಲುವಾದರು. ಶಸ್ತ್ರಚಿಕಿತ್ಸಾ ಕೊಠಡಿಗೆ ಸಹಾಯಕರ ನೆರವಿನಿಂದ ಹೋದ ಇವರು ಸರ್ಜರಿ ಬಳಿಕ ನಡೆದುಕೊಂಡೇ ವಾರ್ಡ್‌ಗೆ ಬಂದರು. ಈಗ ಸೂಗಮ್ಮ ಮೊದಲಿನಂತೆ ಆರಾಮವಾಗಿ ಓಡಾಡುವಂತಾಗಿದೆ.

***

ಕೇರಳದಿಂದ ಬಂದ ವಿಜಯಕುಮಾರ್‌ಗೆ 62 ವರ್ಷ. ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಇವರಿಗೆ 10 ವರ್ಷ ಹಿಂದಿನಿಂದಲೂ ಮೊಣಕಾಲಿನಲ್ಲಿ ವಿಪರೀತ ನೋವು ಬರುತ್ತಿತ್ತು. ಸ್ಥಳೀಯವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಪರಿಚಿತರೊಬ್ಬರ ಶಿಫಾರಸ್ಸಿನ ಮೇರೆಗೆ ವಿಜಯಕುಮಾರ್‌ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಬಂದು ವೈದ್ಯರ ಬಳಿ ತಪಾಸಣೆಗೊಳಪಡಿಸಿದಾಗ ‘ಮಂಡಿ ಚಿಪ್ಪು ಬದಲಾವಣೆ’ ಅನಿವಾರ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ನುರಿತ ವೈದ್ಯರ ತಂಡ ನಡೆಸಿ ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ವಿಜಯಕುಮಾರ್‌ ಸಂಪೂರ್ಣ ಗುಣಮುಖರಾದರು. ಕಿಂಚಿತ್ತೂ ನೋವು ಅನುಭವಿಸದೆ ಶಸ್ತ್ರಚಿಕಿತ್ಸೆಗೆ ಒಳಗಾದರು.

‘ಆಪರೇಷನ್‌ ಥಿಯೇಟರ್‌ಗೆ ಹೋಗುವಾಗಲೂ ನಡೆದುಕೊಂಡೇ ಹೋದೆ. ಸರ್ಜರಿ ಆದದ್ದೇ ಗೊತ್ತಾಗಲಿಲ್ಲ. ಮತ್ತೆ ವಾರ್ಡ್‌ಗೆ ಕೂಡ ನಡೆದುಕೊಂಡೇ ಬಂದೆ. ಇದೊಂದು ಪವಾಡವೇ ಸರಿ. ನನ್ನ ಜೀವನದಲ್ಲಿ ಇದೊಂದು ಮಹತ್ವದ ತಿರುವು’ ಎಂಬ ಮೆಚ್ಚುಗೆ ಮಾತುಗಳನ್ನಾಡುತ್ತಾರೆ ವಿಜಯಕುಮಾರ್‌.

***

‘ಹಿಂದೆಲ್ಲ ಆರ್ಥೊಪಿಡಿಕ್‌ ಸರ್ಜರಿ ಮಾಡಿದಾಗ ಜನ ವಿಪರೀತ ನೋವು ಅನುಭವಿಸೋರು. ವರ್ಷಕ್ಕೆ ಒಂದು ಸಾವಿರದಷ್ಟು ಮಂದಿಗೆ ಜಾಯಿಂಟ್‌ ರಿಪ್ಲೇಸ್‌ಮೆಂಟ್‌ ಸರ್ಜರಿ ಮಾಡುತ್ತಿದ್ದೆವು. ಸರ್ಜರಿ ಆದ ಮೇಲೆ ಕನಿಷ್ಠ ಐದು ದಿನ ಇನ್ನಿಲ್ಲವಾದಷ್ಟು ನೋವಿನಿಂದ ಕಂಗೆಟ್ಟು ಹೋಗುತ್ತಿದ್ದರು. ಹೇಗಾದರೂ ಮಾಡಿ ನೋವನ್ನು ನಿಯಂತ್ರಣದಲ್ಲಿಡುವ ಶಸ್ತ್ರಚಿಕಿತ್ಸಾ ಕ್ರಮ ಕಂಡು ಹಿಡಿಯಬೇಕು ಎಂಬ ಬಗ್ಗೆ ನಾವು ವೈದ್ಯರೆಲ್ಲ ಸೇರಿ ಚಿಂತನೆ ನಡೆಸಿದೆವು. ಅಮೆರಿಕದಲ್ಲಿ ಈಗಾಗಲೇ ಪ್ರಚಲಿತದಲ್ಲಿರುವ ‘ಪೈನ್‌ಲೆಸ್‌ ಸರ್ಜರಿ’ಯನ್ನು ಇಲ್ಲೂ ನಡೆಸಿದರೆ ಹೇಗೆ? ಎಂದು ಯೋಚಿಸಿದೆವು. ನೋವು ನಿವಾರಣೆ ಸಲುವಾಗಿ ಆಳವಾದ ಅಧ್ಯಯನ ಮಾಡಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ನೋವುರಹಿತ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳುತ್ತಾರೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶರಣ್‌ ಎಸ್‌. ಪಾಟೀಲ್‌.

ಮೊಣಕಾಲು ಸರ್ಜರಿ ಮಾಡಿದಾಗ ನೋವಿನ ಅನುಭವವೇ ಆಗದಂತೆ ನೋಡಿಕೊಂಡಿದ್ದೀವಿ. ಈಗ ರೋಗಿ ನಡ್ಕೊಂಡೇ ಆಪರೇಷನ್‌ ಥಿಯೇಟರ್‌ ಒಳಗೆ ಹೋಗಿ ಸರ್ಜರಿ ಮುಗಿಸಿಕೊಂಡು ನಡ್ಕೊಂಡೇ ವಾರ್ಡ್‌ಗೆ ಬರುವಂತಾಗಿದೆ. ಜತೆಗೆ ಎರಡೇ ದಿನಗಳಲ್ಲಿ ಮನೆಗೆ ವಾಪಸ್‌ ‌ಹೋಗುವಂತಹ ಅನುಕೂಲವೂ ಇದರಿಂದ ಆಗುತ್ತಿದೆ. ರೋಗಿಗಳಿಗೆ ಇದೊಂದು ವೈದ್ಯಲೋಕದ ವರದಾನ. ಒಂದು ಕಾಲದಲ್ಲಿ ಕಲ್ಪನೆಯೂ ಮಾಡಲಾಗದಂಥ ವಿಚಾರ ಇದು’ ಎಂದು ಹೇಳುತ್ತಾರೆ ಡಾ. ಶರಣ್‌ ಪಾಟೀಲ್‌.

‘ಶಸ್ತ್ರಚಿಕಿತ್ಸೆ ಮಾಡುವ ಮುನ್ನ ಮೊಣಕಾಲಿನ ಸುತ್ತಲಿನ ನರಗಳನ್ನು ಬ್ಲಾಕ್‌ ಮಾಡಿ ಇಂಜೆಕ್ಷನ್‌ ಮೂಲಕ ನೋವು ಕಂಟ್ರೋಲ್‌ ಆಗುವಂತೆ ಮಾಡ್ತೀವಿ. ಅರಿವಳಿಕೆ ಚುಚ್ಚುಮದ್ದು ನೀಡಿ ಒಂದು ಗಂಟೆಯೊಳಗೆ ಸರ್ಜರಿಯ ಎಲ್ಲ ಹಂತಗಳೂ ಮುಗಿಯುತ್ತವೆ. ಮೊಣಕಾಲಿನ ಚಿಪ್ಪನ್ನು ಬದಲಾಯಿಸಿ ಪ್ರೋತೆಸಿಸ್‌ ಎಂಬ ಕೃತಕ ಸಾಧನವನ್ನು ಅಳವಡಿಸಲಾಗುತ್ತದೆ.
ಸುಮಾರು ಒಂದು ಗಂಟೆ ಅವಧಿಯ ಸರ್ಜರಿಯಲ್ಲಿ ರೋಗಿಗೆ ನೋವಿನ ಅನುಭವವೇ ಆಗುವುದಿಲ್ಲ.

ಕಳೆದ ತಿಂಗಳು ಆರಂಭಿಸಿದ ಈ ಶಸ್ತ್ರಚಿಕಿತ್ಸೆಯನ್ನು ಈಗಾಗಲೇ 20 ರೋಗಿಗಳಿಗೆ ಮಾಡಿದ್ದೀವಿ’ ಎಂದು ವಿವರ ನೀಡುತ್ತಾರೆ ಈ ವೈದ್ಯರು.

‘ಅಮರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಬಹುತೇಕ ಎಲ್ಲ ಸರ್ಜರಿಗಳನ್ನೂ ನೋವುರಹಿತ ವಿಧಾನದ ಮೂಲಕವೇ ಮಾಡಲಾಗುತ್ತಿದೆ. ಅಲ್ಲದೆ ಇದು ‘ಎಪಿಡ್ಯುರೆಲ್‌’ (ನೋವುರಹಿತ ಹೆರಿಗೆ) ತರದ್ದು. ಇಲ್ಲಿ ಚುಚ್ಚುಮದ್ದು ನೀಡಿ ಹೆರಿಗೆ ನೋವಿನ ಅನುಭವವೇ ಆಗದ ಹಾಗೆ ಮಾಡಲಾಗುತ್ತದೆ. ಇದೀಗ ಮೊಣಕಾಲಿನ ಸರ್ಜರಿಗೂ ಈ ವಿಧಾನ ಅಳವಡಿಸಿಕೊಳ್ಳಲಾಗಿದೆ’ ದನ್ನು ನಾವು ಅಳವಡಿಸಿಕೊಂಡಿದ್ದೀವಿ’ ಎನ್ನುತ್ತಾರೆ ಡಾ. ಪಾಟೀಲ್‌.

ಯಶಸ್ಸಿನ ಮಟ್ಟ ಶೇ.99ರಷ್ಟು
‘ನೋವುರಹಿತ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸಿನ ಮಟ್ಟ ಶೇ.99ರಷ್ಟು. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಹುತೇಕ ಎಲ್ಲ ಸರ್ಜರಿಗಳೂ ಒಂದು ದಿನದ ಮಟ್ಟಿಗೆ ಆಸ್ಪತ್ರೆ ವಾಸ (ಡೇ ಕೇರ್‌ ಸರ್ಜರಿ) ದಲ್ಲೇ ಪೂರ್ಣಗೊಳ್ಳುತ್ತದೆ. ಅಮರಿಕದಿಂದ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಅಧ್ಯಯನ ಮಾಡಿ, ಅದನ್ನು ನಮ್ಮ ವ್ಯವಸ್ಥೆಗೆ ಅಳವಡಿಸಿಕೊಂಡು ಈ ನೋವು ರಹಿತ ಸರ್ಜರಿ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ ಸ್ಪರ್ಶ ಆಸ್ಪತ್ರೆಯ ಕನ್ಸಲ್‌ಟೆಂಟ್‌ ಆರ್ಥೊಪಿಡಿಕ್‌ ಸರ್ಜನ್‌ ಡಾ. ರವಿಕುಮಾರ್‌.

ಕರ್ನಾಟಕದಲ್ಲಿ ಮೊಣಕಾಲಿನ ಸರ್ಜರಿ ಸ್ಪರ್ಶ ಆಸ್ಪತ್ರೆ ಒಂದರಲ್ಲೇ ಒಟ್ಟು 1200 ಸರ್ಜರಿಗಳು ಕಳೆದ ವರ್ಷ ನಡೆದಿದೆ. ಪ್ರತಿ ತಿಂಗಳು 150 ಸರ್ಜರಿ ಇದೊಂದೇ ಆಸ್ಪತ್ರೆಯಲ್ಲಿ ನಡೆಯುತ್ತದೆ. ದೇಶದಲ್ಲಿ ಬೆಂಗಳೂರು, ಅಹಮದಾಬಾದ್‌, ಹೈದರಾಬಾದ್‌, ಚೆನ್ನೈ, ದೆಹಲಿ ಸೇರಿದಂತೆ ಒಟ್ಟು 5–6 ಮಹಾನಗರಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿದೆ.
‘ಜಾಯ್‌’ ಕಾರ್ಯಕ್ರಮದಡಿಯಲ್ಲಿ ಈ ನೋವು ರಹಿತ ಸರ್ಜರಿಯನ್ನು ಮಾಡಲಾಗುತ್ತಿದೆ. ಬೆನ್ನುಮೂಳೆಗೆ ಕೊಡುವ ಅನಸ್ತೇಷಿಯ ಇಂಜೆಕ್ಷನ್‌ ಸರ್ಜರಿ ಮಾಡಬೇಕಾದ ಭಾಗವನ್ನು ಮಾತ್ರ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಶಸ್ತ್ರಚಿಕಿತ್ಸೆಗೆ ತಗಲುವ ಅವಧಿ ಒಂದು ಗಂಟೆ.

ಸಾಮಾನ್ಯವಾಗಿ ಆರ್ಥರೈಟಿಸ್‌ 60 ವರ್ಷ ದಾಟಿದ ಮಹಿಳೆಯರಲ್ಲಿ ಹಾಗೂ 65 ವರ್ಷ ದಾಟಿದ ಪುರುಷರಲ್ಲಿ ಕಂಡುಬರುವ ಸಮಸ್ಯೆ. ಮೊಣಕಾಲಿನ ಸರ್ಜರಿ ಮಾಡುವಾಗ ಹೆರಿಗೆ ನೋವಿನ 10 ಪಟ್ಟು ಹೆಚ್ಚು ನೋವನ್ನು ರೋಗಿ ಅನುಭವಿಸಬೇಕಾಗುತ್ತಿತ್ತು. ಶಸ್ತ್ರಚಿಕಿತ್ಸೆಯ ನಂತರ ಐದು ದಿನ ವಿಪರೀತ ಹಾಗೂ ತಿಂಗಳಾನುಗಟ್ಟಲೆ ನೋವು ಅನುಭವಿಸುತ್ತಾ ನಡೆದಾಡಲೂ ಕಷ್ಟವಾಗುವ ಪರಿಸ್ಥಿತಿ ಒದಗಿ ಬರುತ್ತಿತ್ತು.

‘ಮೊಣಕಾಲಿನ ಕೀಲು ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಫಿಸಿಯೋಥೆರಪಿ ಮಾಡಲೇಬೇಕು. ಇದರಿಂದ ಕಾಲುಗಳು ಮತ್ತೆ ಸದೃಢವಾಗಲು ಸಹಕಾರಿಯಾಗುತ್ತದೆ. ಸರ್ಜರಿಯಾದ 15 ದಿನಗಳ ಬಳಿಕ ತಜ್ಞರ ಉಸ್ತುವಾರಿ ಮೇರೆಗೆ ಫಿಸಿಯೊಥೆರಪಿ ಮಾಡಬೇಕು’ ಎಂದು ಹೇಳುತ್ತಾರೆ ಸ್ಪರ್ಶ ಆಸ್ಪತ್ರೆಯಲ್ಲಿ ಅನಸ್ತೇಷಿಯ ತಜ್ಞರಾಗಿರುವ ಡಾ. ಜಯಂತ್‌.

ಗುರು ನಮನ, ಸ್ಪರ್ಶ ವಚನ

ಬಡವರಿಗೆ ಸ್ಪರ್ಶ ಆಸ್ಪತ್ರೆ ವಿವಿಧ ಯೋಜನೆಗಳನ್ನು ರೂಪಿಸಿದೆ. ‘ಗುರು ನಮನ’ ಯೋಜನೆಯಲ್ಲಿ ನಿವೃತ್ತ ಶಿಕ್ಷಕ/ಶಿಕ್ಷಕಿಯರಿಗೆ ಉಚಿತವಾಗಿ ಮೊಣಕಾಲಿನ ಸರ್ಜರಿ ಮಾಡಲಾಗುತ್ತದೆ. 2010ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ವರ್ಷಕ್ಕೆ 100 ಮಂದಿಗೆ ಸರ್ಜರಿ ಮಾಡಲಾಗುತ್ತದೆ.

‘ಸ್ಪರ್ಶ ವಚನ’ ಯೋಜನೆ ಮಕ್ಕಳಿಗಾಗಿಯೇ ರೂಪಿಸಿದ್ದು. ಇದರಲ್ಲಿ ಸುಮಾರು 200 ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ. ಇದನ್ನು 2009ರಲ್ಲಿ ಪ್ರಾರಂಭ ಮಾಡಿದ್ದು, ಕಡು ಬಡವ ಹಾಗೂ ಅಶಕ್ತ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !