ಚಾಮರಾಜನಗರ: ಗರ್ಭಿಣಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

7
ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ, ಜಿಲ್ಲಾಸ್ಪತ್ರೆಯ ಎದುರು ಪ್ರತಿಭಟನೆ

ಚಾಮರಾಜನಗರ: ಗರ್ಭಿಣಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

Published:
Updated:
Prajavani

ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಏಳು ತಿಂಗಳ ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬ ಸದಸ್ಯರು ಹಾಗೂ ಬಡಾವಣೆ ಜನರು ನಗರದ ಜಿಲ್ಲಾಸ್ಪತ್ರೆ ಮುಂದೆ ಇಡೀ ದಿನ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಮತ್ತು ತಪ್ಪಿತಸ್ಥ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು. ಮಧ್ಯಾಹ್ನ ಮುಕ್ಕಾಲು ಗಂಟೆ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶವನ್ನೂ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್‌ ಬೀದಿ ನಿವಾಸಿ ಮಹದೇವ ಅವರ ಪತ್ನಿ ನೇತ್ರಾವತಿ (29) ಮೃತಪಟ್ಟ ಗರ್ಭಿಣಿ.

‘ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನೇತ್ರಾವತಿ ಎಂಟು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯ ಸ್ಥಿತಿಯಲ್ಲಿ ಗರ್ಭ ಧರಿಸುವುದು ಸೂಕ್ತವಲ್ಲ; ಅವರು ಗರ್ಭಿಣಿಯಾಗಿದ್ದರು’ ಎಂದು ಜಿಲ್ಲಾ ಮುಖ್ಯ ಸರ್ಜನ್‌ ಡಾ. ರಘುರಾಮ್‌ ಸರ್ವೇಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ವಿವರ: ಹೃದ್ರೋಗಿಯಾಗಿದ್ದ ನೇತ್ರಾವತಿ ಅವರು ಹಲವು ಸಮಯದಿಂದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿ 21 ದಿನಗಳಿಗೊಮ್ಮೆ ಚುಚ್ಚುಮದ್ದು ಪಡೆಯುತ್ತಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಚುಚ್ಚುಮದ್ದು ಹಾಕಿಸಲು ಆಸ್ಪತ್ರೆಗೆ ಬಂದಿದ್ದಾರೆ. ಮೊದಲು ವೈದ್ಯರಲ್ಲಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದ ನಂತರ, ಅವರ ಸಲಹೆಯ ಮೇರೆಗೆ ಚುಚ್ಚುಮದ್ದು ಹಾಕಿಸಿಕೊಳ್ಳಲು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದರು. 

‘ಆರಂಭದಲ್ಲಿ ಅವರಿಗೆ ಪರೀಕ್ಷಾರ್ಥ ಚುಚ್ಚುಮದ್ದು (ಟೆಸ್ಟ್‌ ಡೋಸ್‌) ನೀಡಲಾಗಿತ್ತು. ಆಗ ಏನೂ ಸಮಸ್ಯೆ ಆಗಿಲ್ಲ. ಅರ್ಧ ಗಂಟೆಯ ನಂತರ ಚುಚ್ಚುಮದ್ದು ಕೊಟ್ಟ ತಕ್ಷಣ ನೇತ್ರಾವತಿ ಅಸ್ವಸ್ಥರಾಗಿದ್ದಾರೆ. ಹೃದಯದ ಕಾಯಿಲೆ ಇದ್ದುದರಿಂದ ಹೃದಯಾಘಾತವಾಗಿದೆ. ಅವರನ್ನು ಉಳಿಸಲು ಒಂದು ಗಂಟೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.

ಆಕ್ರೋಶ: ನೇತ್ರಾವತಿ ಅವರು ಅಸ್ವಸ್ಥರಾಗುತ್ತಿದ್ದಂತೆಯೇ ಅವರ ಕುಟುಂಬದವರು, ಸಂಬಂಧಿಕರು ಹಾಗೂ ಬಡಾವಣೆಯ ಜನರು ಆಸ್ಪತ್ರೆಯ ಮುಂದೆ ಜಮಾಯಿಸಲು ಆರಂಭಿಸಿದರು. ‘ಸರಿಯಾಗಿ ಚಿಕಿತ್ಸೆ ನೀಡಿಲ್ಲ’ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡರು.  

ಗರ್ಭಿಣಿ ಮೃತಪಟ್ಟಿದ್ದಾರೆ ಎಂದು ಗೊತ್ತಾಗುತ್ತಲೇ, ಸಂಬಂಧಿಕರು ಹಾಗೂ ಬಡಾವಣೆಯ ಮತ್ತಷ್ಟು ಜನರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ರಾಚಯ್ಯ ಜೋಡಿರಸ್ತೆಯಲ್ಲಿ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆ‌ಸಿದರು.

ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್‌ ಡಾ.ರಾಜೇಂದ್ರ, ಜಿಲ್ಲಾ ಮುಖ್ಯ ಸರ್ಜನ್‌ ಡಾ. ರಘುರಾಮ್‌ ಸರ್ವೇಗಾರ್‌ ಸೇರಿದಂತೆ ಹಲವರು ಪ್ರತಿಭಟನಾಕಾರರನ್ನು ಮನವೊಲಿಸಿ, ರಸ್ತೆ ತಡೆಯನ್ನು ತೆರವುಗೊಳಿಸಿದರು.

ನಂತರ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ಆರಂಭಿಸಿದರು. ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರು ನೀಡಿದರೂ ಕೇಳಲಿಲ್ಲ.

ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಚಿಕಿತ್ಸೆಯಲ್ಲಿ ವಿಳಂಬವಾಗಿಲ್ಲ: ಡಾ. ರಘುರಾಮ್‌

‘ನೇತ್ರಾವತಿ ಅವರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು ಎಂಬುದಕ್ಕೆ ಎಲ್ಲ ದಾಖಲೆಗಳು ಇವೆ. ನಿರಂತರವಾಗಿ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರು. ಈ ಹಿಂದೆ ಅವರು ಶಿಶುವಿಗೆ ಜನ್ಮನೀಡಿದ್ದರು. ಕಡಿಮೆ ತೂಕವಿದ್ದ ಕಾರಣಕ್ಕೆ ಒಂದು ತಿಂಗಳಲ್ಲಿ ಅದು ಮೃತಪಟ್ಟಿತ್ತು. ಗುರುವಾರ ಅಸ್ವಸ್ಥಗೊಂಡಾಗ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗಿತ್ತು. ಯಾವುದೇ ವಿಳಂಬವಾಗಿಲ್ಲ. ಇರುವ ವಾಸ್ತವಾಂಶವನ್ನು ಅವರ ಕುಟುಂಬದವರಿಗೆ ಹಾಗೂ ಸ್ಥಳೀಯ ಮುಖಂಡರಿಗೆ ಮನವರಿಕೆ ಮಾಡಲು ಯತ್ನಿಸಿದ್ದೇವೆ’ ಎಂದು ಡಾ. ರಘುರಾಮ್‌ ಸರ್ವೇಗಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !