ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಧರಣಿ

7
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಜತೆಗೆ ಕುಳಿತಿದ್ದಕ್ಕೆ ಬಿಜೆಪಿ ಸದಸ್ಯರ ಖಂಡನೆ

ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಧರಣಿ

Published:
Updated:
ಕೊಳ್ಳೇಗಾಲದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು

ಕೊಳ್ಳೇಗಾಲ: ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮ್ಮದ್ ಅವರು ಅಧ್ಯಕ್ಷರ ಜತೆಗೆ ಕುಳಿತಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರು ಮಂಗಳವಾರ ಧರಣಿ ನಡೆಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ವೇದಿಕೆ ಮೇಲೆ ಜವಾದ್‌ ಅಹಮ್ಮದ್‌ ಕುಳಿತಿದ್ದರು. ಇದನ್ನು ಪ್ರಶ್ನಿಸಿದ ಬಿಜೆಪಿ ಸದಸ್ಯರಾದ ಸಣ್ಣಕಾಳಶೆಟ್ಟಿ. ಸುರೇಶ್, ಹರಳೆ ಕಷ್ಣನಾಯಕ, ಕುಣಗಳ್ಳಿ ಮರಿಸ್ವಾಮಿ, ಹಲಗ ತಂಬಡಿ ಸೇರಿದಂತೆ ಹಲವು ಸದಸ್ಯರು, ‘ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆ ಮೇಲೆ ಕೊರುವಂತಿಲ್ಲ’ ಆಕ್ಷೇಪ ವ್ಯಕ್ತಪಡಿಸಿದರು.

‘ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆ ಮೇಲೆ ಕುಳಿತುಕೊಳ್ಳಬಹುದು. ಈ ನಿಯಮವನ್ನು ನೀವೇ ರೂಪಿಸಿ, ಈಗ ಗದ್ದಲ ಉಂಟು ಮಾಡುತ್ತಿದ್ದೀರಿ’ ಎಂದು ಕೆಲ ಸದಸ್ಯರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ‘ಕೆಡಿಪಿ ಸಭೆಯಲ್ಲಿ ಅಧ್ಯಕ್ಷರ ಸಮ ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಕೂರಬಹುದೇ’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ತಡವರಿಸಿದ ಉಮೇಶ್‌, ‘ಒಂದು ವಾರ ಸಮಯ ಕೊಡಿ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದರು. ಆದರೆ, ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು, ‘ಇಒ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು. ಹೀಗಾಗಿ, ಪ್ರತಿಕ್ರಿಯಿದ ಉಮೇಸ್‌, ‘ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹೊರತುಪಡಿಸಿ ಯಾರೂ ಕೂರುವಂತಿಲ್ಲ’ ಎಂದರು. ಬಳಿಕ, ಬಿಜೆಪಿ ಸದಸ್ಯರು ಧರಣಿಯನ್ನು ಕೈಬಿಟ್ಟರು.

ಅನುಪಾಲನಾ ವರದಿ ಮಂಡನೆಗೆ ಆಗ್ರಹ: ಇದಕ್ಕೂ ಮೊದಲು, ಕೃಷಿ ಇಲಾಖೆ ಅಧಿಕಾರಿ ವರದಿ ಮಂಡಿಸುವ ವೇಳೆಗೆ ಬಿಜೆಪಿ ಸದಸ್ಯರು ಸಭೆಗೆ ಹಾಜರಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಧನಗೆರೆ ಕ್ಷೇತ್ರದ ಸದಸ್ಯ ಸುರೇಶ್, ‘ಕಳೆದ ಸಭೆಯಲ್ಲಿ ಚರ್ಚೆ ನಡೆಸಿದ ಎಷ್ಟು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ, ಎಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೀರಿ ಎಂಬುದನ್ನು ಚರ್ಚಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಜು, ‘ಅನುಪಾಲನಾ ವರದಿ ಆಧಾರದ ಮೇಲೆ ಚರ್ಚಿಸಬೇಕಿತ್ತು. ಆದರೆ, ಇದುವರೆಗೂ ಯಾವ ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿ ನೀಡಿಲ್ಲ. ಆದ್ದರಿಂದ ಎಷ್ಟು ಇಲಾಖೆಯ ಅಧಿಕಾರಿಗಳು ವರದಿ ಕೊಟ್ಟಿಲ್ಲ, ಯಾಕೆ ಕೊಟ್ಟಿಲ್ಲ ಎಂಬ ಕುರಿತು ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದ್ದೇನೆ. ಇದುವರೆಗೆ ಕಾಯಂ ಇ.ಒ ನೇಮಕವಾಗಿಲ್ಲ. ಹೀಗಾಗಿ ಅಭಿವೃದ್ಧಿಗೆ ಅಡೆ-ತಡೆಗಳಾಗಿವೆ ಎಂದು ಒಪ್ಪಿಕೊಳ್ಳುತ್ತೇನೆ’ ಎಂದರು.

ಈ ವೇಳೆ ಜವಾದ್ ಅಹಮ್ಮದ್ ಅವರು ಮಧ್ಯ ಪ್ರವೇಶಿಸಿದರು. ಇದರಿಂದ ಕೂಪಿತಗೊಂಡ ಸದಸ್ಯ ಸುರೇಶ್, ‘ನಾನು ಸಭಾಧ್ಯಕ್ಷ ಜೊತೆ ಮಾತನಾಡುತ್ತಿದ್ದೇನೆ. ಅವರು ಉತ್ತರ ನೀಡುತ್ತಿದ್ದಾರೆ. ಉತ್ತರ ನೀಡಲು ನೀವ್ಯಾರು? ಸಭಾ ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಕುಳಿತುಕೊಳ್ಳಲು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಅವಕಾಶವಿದೆಯೇ’ ಎಂದು ಪ್ರಶ್ನಿಸಿದರು. ಆಗ ಗದ್ದಲ ಉಂಟಾಗಿ ಮಾತಿನ ಚಕಮಕಿ ನಡೆಯಿತು. ಈ ವೇಳೆ, ರಾಜು ಮೇಜು ಕುಟ್ಟಿ ಗರಂ ಆದರು.

ಸಭೆಯಲ್ಲಿ ಉಪಾಧ್ಯಕ್ಷೆ ಲತಾ ರಾಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮ್ಮದ್, ಇಓ ಉಮೇಶ್ ಸೇರಿದಂತೆ ಬಹುತೇಕ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !