17ಕ್ಕೆ ರೈತರಿಂದಲೇ ವಡ್ಡೆಗೆರೆಯ ಕೆರೆಗೆ ನೀರು: ಘೋಷಣೆ

ಮಂಗಳವಾರ, ಜೂನ್ 25, 2019
28 °C
ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ, ಸಚಿವರ ಮನೆಗೆ ಮುತ್ತಿಗೆ ಹಾಕದ ಪ್ರತಿಭಟನಾಕಾರರು

17ಕ್ಕೆ ರೈತರಿಂದಲೇ ವಡ್ಡೆಗೆರೆಯ ಕೆರೆಗೆ ನೀರು: ಘೋಷಣೆ

Published:
Updated:
Prajavani

ಯಳಂದೂರು:‌ ರಾಜ್ಯ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 209ರ ಬಳಿಯ ಎಸ್‌ಬಿಐ ವೃತ್ತದಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಗುಂಡ್ಲುಪೇಟೆ ತಾಲ್ಲೂಕು ಉತ್ತೂರು ಕೆರೆಯಿಂದ ವಡ್ಡೆಗೆರೆ ಕೆರೆ ಹಾಗೂ ಇತರ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ರೈತರೇ 17ರಂದು ಚಾಲನೆ ನೀಡಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು. 

ಪ್ರತಿಭಟನೆಯ ನೇತೃತ್ವದ ವಹಿಸಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ‘ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರ ಅನುಮತಿ ಅಗತ್ಯ ಇರುವುದಿಲ್ಲ. ಇದು ಕೃಷಿಕರ ಹಿತಾಸಕ್ತಿಗೆ ವಿರುದ್ಧವಾದುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

‘ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಪ್ರತಿಭಟನೆ ಕೈಬಿಡುವಂತೆ ರೈತ ಸಂಘದ ಸದಸ್ಯರಲ್ಲಿ ಈಗಾಗಲೇ ಮನವಿ ಮಾಡಿದ್ದಾರೆ. ಜಿಲ್ಲಾ ಮಟ್ಟದ ಸಭೆ ಕರೆದು ಭೂಸ್ವಾಧೀನ ಕಾಯ್ದೆಯ ಬಗ್ಗೆ ಚರ್ಚಿಸುವುದಾಗಿ ಅಧಿಕಾರಿಗಳ ಮೂಲಕ ಹೇಳಿ ಕಳುಹಿಸಿದ್ದಾರೆ. ಆದರೆ, ಇವರು ಸಚಿವರಾದ ನಂತರ ಒಮ್ಮೆಯೂ ರೈತರ ಸಭೆ ಕರೆದಿಲ್ಲ. ಚರ್ಚೆಗೆ ದಿನಾಂಕ ನಿಗದಿ ಪಡಿಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯುವ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಅವರು ದೂರಿದರು. 

ಶಾಸಕ ಸಾಥ್‌: ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಎನ್. ಮಹೇಶ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

‘ನಾನು ಸದಾ ರೈತ ಪರವಾದ ಚಳವಳಿ ಮತ್ತು ಸಂಕಷ್ಟದ ಸಂದರ್ಭದಲ್ಲಿ ಶ್ರಮಿಕರ ಪರವಾಗಿ ಇದ್ದೇನೆ. ರೈತಾಪಿ ವರ್ಗಕ್ಕೆ ವಿರುದ್ಧವಾದ ಯಾವುದೇ ಕಾನೂನು ಜಾರಿಯಾದರೆ ಸಹಿಸುವುದಿಲ್ಲ. ಈಗಾಗಲೇ ಬರದ ಬೇಗೆಗೆ ಸಿಲುಕಿರುವ ಬೇಸಾಯಗಾರರ ಪರವಾದ ಯೋಜನೆಗಳನ್ನು ಜಾರಿಗೊಳಿಸಲು ನನ್ನ ಸಹಮತವಿದೆ. ರೈತನ ಮಗನಾದ್ದರಿಂದ ಗ್ರಾಮೀಣ ಜನರ ಸಂಕಷ್ಟಗಳ ಅರಿವಿದೆ. ಕೆರೆಗೆ ನೀರು ಹರಿಸಲು ನನ್ನ ಸಹಮತವಿದೆ’ ಎಂದರು.

ಸಚಿವರ ಮನೆ ಮುತ್ತಿಗೆ ಕೈಬಿಟ್ಟರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪ‍್ಪಿನಮೋಳೆಯಲ್ಲಿರುವ ಸಚಿವ ಸಿ.‌ಪುಟ್ಟರಂಗಶೆಟ್ಟಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಪ್ರತಿಭಟನಾಕಾರರು ಕೊನೆಕ್ಷಣದಲ್ಲಿ ಕೈಬಿಟ್ಟರು. 

‘ಸಚಿವರು ಪತ್ರ ಬರೆದು, ರೈತರ ಸಮಸ್ಯೆ ನಿವಾರಿಸಲು ಹಾಗೂ ಕೆರೆಗೆ ನೀರು ತುಂಬಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕರೆದಿದ್ದಾರೆ. ಹಾಗಾಗಿ, ಮುತ್ತಿಗೆ ಹಾಕುವುದನ್ನು ಕೈಬಿಡಬೇಕು’ ಎಂದು ಉಪ ವಿಭಾಗಾಧಿಕಾರಿ ನಿಖಿತ ಎಂ.ಚಿನ್ನಸ್ವಾಮಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಮಾಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು. 

ಕೃಷಿಕ ಸಂಘದ ಮಾಡ್ರಳ್ಳಿ ಮಹಾದೇವಪ್ಪ, ಜಿಲ್ಲಾ ಸಂಚಾಲಕ ಹಾಲಳ್ಳಿ ಮಹೇಶ್‌, ಅಂಬಳೆ ಶಿವಕುಮಾರ್, ಹೊನ್ನೂರು ಬಸವಣ್ಣ, ತಾಲ್ಲೂಕು ಅಧ್ಯಕ್ಷರಾದ ಕಂದೇಗಾಲ ಮಹೇಶ್‌, ಚಾಮಲಾಪುರ ಸಿದ್ದಲಿಂಗಸ್ವಾಮಿ, ಚಂಗಡಿ ಕರಿಯಪ್ಪ, ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಬೂದಂಬಳ್ಳಿ ಮಹದೇವಶೆಟ್ಟಿ, ಯರಗಂಬಳ್ಳಿ ವೃಷಭೇಂದ್ರ, ವೈ,ಕೆ.ಮೋಳೆ ರಂಗಸ್ವಾಮಿ, ಅಣ್ನೂರುಕೇರಿ ಬಲ್ಲಶೆಟ್ಟಿ, ದಡದಳ್ಳಿ ಮಹೇಶ್‌, ಹೊನ್ನೂರು ಬಸವಣ್ಣ ಇತರರು ಇದ್ದರು.

ಬಿಗಿ ಬಂದೋಬಸ್ತ್‌: ಪ್ರತಿಭಟನೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್‌ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಸಿಪಿಐ ಶ್ರೀಕಾಂತ್, ಪಿಎಸ್‌ಐ ಶಿವಮಾದಯ್ಯ ಸೇರಿದಂತೆ ಹಲವರು ಹಾಜರಿದ್ದರು.

ಸಚಿವರಿಗೆ 16ರ ಗಡುವು

‘ಗುಂಡ್ಲುಪೇಟೆ ತಾಲ್ಲೂಕಿನ ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ತಕ್ಷಣವೇ ನೀರು ಹರಿಸಬೇಕು. ಗುಂಡ್ಲುಪೇಟೆಯ 9 ಕೆರೆಗಳಿಗೆ ನೀರು ಹರಿಸುವುದಕ್ಕೆ ಸಮಸ್ಯೆ ಇಲ್ಲ. ಚಾಮರಾಜನಗರದ 2 ಕೆರೆಗಳಿಗೆ ಪೈಪ್‌ ಲೈನ್‌ ಕಾಮಗಾರಿ ಪ್ರಗತಿಯಲ್ಲಿ ಇದೆ. ಆದರೆ, ಬಾಕಿ ₹25.24 ಕೋಟಿ ಹಣ ಇನ್ನೂ ಬರಬೇಕು ಎಂಬ ನೆಪದಿಂದ ಉಳಿದ ಕೆರೆಗಳಿಗೆ ಜಿಲ್ಲಾಡಳಿತ ನೀರು ಹರಿಸಲು ಮುಂದಾಗುತ್ತಿಲ್ಲ. ಹಾಗಾಗಿ, ಸಚಿವರು ಜೂನ್‌ 16ರ ಗಡುವಿನೊಳಗೆ ರೈತರ ಸಭೆ ಕರೆಯಬೇಕು. ಸಭೆಯನ್ನು ಮುಂದೂಡಿದರೆ, ಜೂನ್‌ 17ರಂದು ಉತ್ತೂರು ಏತ ಯೋಜನೆಗೆ ರೈತರೇ ಚಾಲನೆ ನೀಡಲಿದ್ದಾರೆ’ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಗುರುಪ್ರಸಾದ್ ಎಚ್ಚರಿಕೆ ನೀಡಿದರು. 

‘ಸಚಿವ ಸಿ. ಪುಟ್ಟರಂಗಶೆಟ್ಟಿ ಮತ್ತು ಶಾಸಕ ನಿರಂಜನ್‌ಕುಮಾರ್ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಾವೇ ಉದ್ಘಾಟಿಸಬೇಕು ಎಂಬ ವಿಚಾರದಲ್ಲಿ ತಿಕ್ಕಾಟ ನಡೆಸುತ್ತಿದ್ದಾರೆ. ನಿರ್ದಿಷ್ಟವಾಗಿ ಇಂತಹವರೇ ಉದ್ಘಾಟಿಸಬೇಕು ಎಂಬುದು ಸಂವಿಧಾನದಲ್ಲಿ ಬರೆದಿಲ್ಲ. ಇಬ್ಬರೂ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿಲ್ಲ. ಹೀಗೆ ಮುಂದುವರಿದಲ್ಲಿ ರೈತರೇ ತಮ್ಮ ಪಾಲಿನ ನೀರನ್ನು ಹರಿಸಲು ಮುಂದಾಗುತ್ತಾರೆ. 17 ರಂದು ರೈತರು ಬೃಹತ್‌ ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿ ವಡ್ಡಗೆರೆಯ ಕೆರೆ ಹಾಗೂ ಉಳಿದ ಕೆರೆಗಳಿಗೂ ನೀರು ಹರಿಸುತ್ತೇವೆ. ರೈತರಿಗೆ ತೊಂದರೆ ಆದಲ್ಲಿ ಜಿಲ್ಲಾಡಳಿತವೇ ಹೊಣೆ ಹೊರಬೇಕು’ ಎಂದು ಹೊನ್ನೂರು ಪ್ರಕಾಶ್ ತಿಳಿಸಿದರು. 

ರಸ್ತೆಯಲ್ಲಿ ಚೆಲ್ಲಾಡಿದ ಪ್ಲಾಸ್ಟಿಕ್‌ 

ರೈತಸಂಘ ಮತ್ತು ಹಸಿರುಸೇನೆ ಸದಸ್ಯರು ಮಧ್ಯಾಹ್ನ ತನಕ ಪ್ರತಿಭಟನೆ ನಡೆಸಿದರು. ನಂತರ ದಾಹ ನೀಗಿಸಿಕೊಳ್ಳಲು ಎಲ್ಲ ಸದಸ್ಯರಿಗೂ ಮಜ್ಜಿಗೆ ಪ್ಯಾಕೆಟ್ ವಿತರಿಸಲಾಯಿತು. ಇದನ್ನು ಸೇವಿಸಿದ ನಂತರ ಸಂಘದ ಪ್ರತಿಭಟನಾಕಾರರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲ ಮತ್ತು ಕಪ್‌ಗಳನ್ನು ಎಸೆದರು. ಇಡೀ ರಸ್ತೆಯಲ್ಲಿ ಪ್ಲಾಸಿಕ್‌ ಚೆಲ್ಲಾಪಲ್ಲಿಯಾಗಿ ಬಿದ್ದಿತ್ತು. ಪ್ಲಾಸ್ಟಿಕ್ ಕಪ್‌ಗಳು, ಪ್ಯಾಕೆಟ್‌ಗಳು ವಾಹನಗಳ ಚಕ್ರಗಳು ಮತ್ತು ಗಾಳಿಗೆ ಸಿಲುಕಿ ಸಂಚಾರಿಗಳಿಗೆ ಕಿರಿಕಿರಿ ಉಂಟುಮಾಡಿತು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !