ಬಂಡೀಪುರ ಕಾಳ್ಗಿಚ್ಚು: ‘ದೊಡ್ಡ’ವರ ರಕ್ಷಿಸಲು ಆರ್‌ಎಫ್‌ಒ ಬಲಿಪಶು?

ಬುಧವಾರ, ಏಪ್ರಿಲ್ 24, 2019
33 °C
ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಏಕಿಲ್ಲ– ಕೆಲವು ಅಧಿಕಾರಿಗಳ ಪ್ರಶ್ನೆ

ಬಂಡೀಪುರ ಕಾಳ್ಗಿಚ್ಚು: ‘ದೊಡ್ಡ’ವರ ರಕ್ಷಿಸಲು ಆರ್‌ಎಫ್‌ಒ ಬಲಿಪಶು?

Published:
Updated:
Prajavani

ಚಾಮರಾಜನಗರ: ಬಂಡೀಪುರ ಕಾಳ್ಗಿಚ್ಚು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ (ಆರ್‌ಎಫ್‌ಒ) ಎಚ್‌.ಪುಟ್ಟಸ್ವಾಮಿ ಅವರನ್ನು ಅಮಾನತು ಮಾಡಿರುವುದಕ್ಕೆ ಅರಣ್ಯ ಇಲಾಖೆಯ ತಳಮಟ್ಟದ ನೌಕರರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾಳ್ಗಿಚ್ಚು ಸಂಭವಿಸಿದಾಗ ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿದ್ದ ಅಂಬಾಡಿ ಮಾಧವ್‌ ಹಾಗೂ ಇತರೆ ಉನ್ನತ ಮಟ್ಟದ ಅಧಿಕಾರಿಗಳ ರಕ್ಷಣೆಗಾಗಿ ಆರ್‌ಎಫ್‌ಒ ಅವರನ್ನು ಬಲಿಪಶು ಮಾಡಲಾಗಿದೆ ಎಂಬ ಆರೋಪವನ್ನು ಕೆಲವು ಅಧಿಕಾರಿಗಳು ಮಾಡಿದ್ದಾರೆ.

ಫೆಬ್ರುವರಿಯಲ್ಲಿ ಬಂಡೀಪುರದಲ್ಲಿ ಕಂಡು ಬಂದ ಬೆಂಕಿಗೆ 15 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಭಸ್ಮವಾಗಿತ್ತು. ಈ ಸಂಬಂಧ ಅಂಬಾಡಿ ಮಾಧವ್‌ ಅವರು ಫೆ.27ರಂದು ಅರಣ್ಯ ಪಡೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್‌ ಅವರಿಗೆ ವರದಿ ಸಲ್ಲಿಸಿದ್ದರು.

ಪುಟ್ಟಸ್ವಾಮಿ ಅವರು ಬೆಂಕಿ ವೀಕ್ಷಕರಿಗೆ ಮಜೂರಿ ಪಾವತಿಸಲು ಕ್ರಮ ಕೈಗೊಂಡಿಲ್ಲ, ಬೆಂಕಿ ನಂದಿಸಲು ನೀಡಿದ್ದ ಪರಿಕರಗಳನ್ನು ಸರಿಯಾಗಿ ನಿರ್ವಹಿಸಲಿಲ್ಲ. ಕಾಡಿಗೆ ಬೆಂಕಿ ಹಚ್ಚಿದ್ದ ಶಂಕಿತ ವ್ಯಕ್ತಿಯ ಬಂಧನಕ್ಕೆ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದಲ್ಲಿ ಆರ್‌ಎಫ್‌ಒ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಹುದ್ದೆ ಖಾಲಿ: ಅಂದಾಜು 8,000 ಹೆಕ್ಟೇರ್‌ ಪ್ರದೇಶದಷ್ಟು ವ್ಯಾಪ್ತಿ ಹೊಂದಿರುವ ಗೋಪಾಲಸ್ವಾಮಿ ಬೆಟ್ಟ ವನ್ಯಜೀವಿ ವಲಯದಲ್ಲಿ 10 ಬೀಟ್‌ಗಳಿವೆ. ಇಲ್ಲಿ ಇಬ್ಬರು ಉಪವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ), 10 ಅರಣ್ಯ ರಕ್ಷಕ (ಫಾರೆಸ್ಟ್‌ ಗಾರ್ಡ್‌) ಹುದ್ದೆಗಳಿವೆ. ಒಂದು ಡಿಆರ್‌ಎಫ್‌ಒ, ಇಬ್ಬರು ಅರಣ್ಯ ರಕ್ಷಕರ ಹುದ್ದೆಗಳು ಖಾಲಿ ಇವೆ.

ಬೇಸಿಗೆಯಲ್ಲಿ ಕಂಡು ಬರುವ ಬೆಂಕಿ ಮೇಲೆ ನಿಗಾ ಇಡುವುದಕ್ಕಾಗಿ ಈ ವಲಯದಲ್ಲಿ ತಾತ್ಕಾಲಿಕವಾಗಿ ಸ್ಥಳೀಯ ಬುಡಕಟ್ಟು ಜನಾಂಗದ 35 ಮಂದಿಯನ್ನು ಬೆಂಕಿ ವೀಕ್ಷಕರಾಗಿ ನೇಮಕ ಮಾಡಲಾಗಿತ್ತು. ಟೆಂಡರ್‌ ಕರೆದು ಇಲ್ಲವೆ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ, ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.

ಇಷ್ಟು ದೊಡ್ಡ ಅವಘಡ ಸಂಭವಿಸಿದಾಗ ಅದಕ್ಕೆ ಆರ್‌ಎಫ್ಒ ಒಬ್ಬರೇ ಕಾರಣರಾಗುತ್ತಾರಾ? ಹುಲಿ ಯೋಜನೆ ನಿರ್ದೇಶಕರು, ಸಂಬಂಧಿಸಿದ ವಲಯದ ಎಸಿಎಫ್‌, ಡಿಆರ್‌ಎಫ್‌ಒಗಳೂ ಹೊಣೆಗಾರರಲ್ಲವೇ ಎಂಬುದು ಕೆಲವು ಅಧಿಕಾರಿಗಳ ಪ್ರಶ್ನೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಂಬಾಡಿ ಮಾಧವ್‌, ‘ಪ್ರತಿಯೊಬ್ಬ ಅಧಿಕಾರಿಗೂ ಒಂದೊಂದು ಜವಾಬ್ದಾರಿ ಇರುತ್ತದೆ. ಅದನ್ನು ಅವರೇ ನಿರ್ವಹಿಸಬೇಕಾಗುತ್ತದೆ. ತನ್ನ ಕಾರ್ಯವ್ಯಾಪ್ತಿಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ. ಇಲ್ಲಿ ಆರ್‌ಎಫ್‌ಒ ಅವರಿಂದ ಕರ್ತವ್ಯ ಲೋಪವಾಗಿದೆ’ ಎಂದು ಹೇಳಿದರು.

ಬೆಂಕಿ ವೀಕ್ಷಕರ ನೇಮಕಾತಿ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘₹ 5 ಲಕ್ಷದವರೆಗಿನ ಯೋಜನೆಗೆ ಟೆಂಡರ್‌ ಅಗತ್ಯವಿಲ್ಲ. ನೇಮಕಾತಿ ನಿಯಮಗಳ ಪ್ರಕಾರವೇ ನಡೆದಿದೆ. ಆದರೆ, ಅಲ್ಲಿ ವೀಕ್ಷಕರಿಗೆ ವೇತನ ಕೊಡುವಲ್ಲಿ ಸಮಸ್ಯೆಯಾಗಿದೆ. ಅವರ ಬ್ಯಾಂಕ್‌ ಖಾತೆಗೆ ಹಣ ಹಾಕಬೇಕಿತ್ತು. ಆದರೆ, ಅದು ಆಗಿಲ್ಲ’ ಎಂದು ಹೇಳಿದರು. 

ಕಾಳ್ಗಿಚ್ಚಿಗೆ ಹುಲಿ ನಂಟು
ಬಂಡೀಪುರದಲ್ಲಿ ಕಾಳ್ಗಿಚ್ಚು ಕಂಡು ಬರುವುದಕ್ಕೂ ಮುನ್ನ, ಫೆಬ್ರುವರಿ ಮೊದಲ ಮೂರು ವಾರಗಳಲ್ಲಿ ಗೋಪಾಲಸ್ವಾಮಿ ಬೆಟ್ಟ ವಲಯಗಳ ವಿವಿಧ ಕಡೆಗಳಲ್ಲಿ ಮೂರು ಹುಲಿಗಳು ಸ್ಥಳೀಯರ ಜಮೀನಿನಲ್ಲಿ ಕಂಡು ಬಂದು, ಆತಂಕ ಸೃಷ್ಟಿಸಿದ್ದವು.

ಮಂಗಲ ಗ್ರಾಮದಲ್ಲಿ ಕಾರ್ಯಾಚರಣೆಗಾಗಿ ತೆರಳಿದ್ದ ಅರಣ್ಯ ಸಿಬ್ಬಂದಿ ಮೇಲೆ ಹುಲಿಯೊಂದು ದಾಳಿ ಮಾಡಿತ್ತು. ಹುಲಿ ಸೆರೆಗೆ ಬೋನು ಇಟ್ಟು, ಆನೆಗಳ ಮೂಲಕ ಕಾರ್ಯಾಚರಣೆ ಮಾಡಿದ್ದರೂ ಪತ್ತೆಯಾಗಿರಲಿಲ್ಲ.

ಹುಲಿಯನ್ನು ಕಂಡು ಆತಂಕ‌ಗೊಂಡ ಜನರು, ಜಮೀನಿಗೆ ಬಾರದಂತೆ ಮಾಡಲು ಕಾಡಿಗೆ ಬೆಂಕಿ ಹಾಕಿದ್ದಾರೆ ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.

ಗೋಪಾಲಸ್ವಾಮಿ ಬೆಟ್ಟ ವಲಯದ 18 ಕಿ.ಮೀ ಪ್ರದೇಶವು ಕಲ್ಲುಬಂಡೆಗಳಿಂದ ಕೂಡಿರುವುದರಿಂದ ಇಲ್ಲಿ ಗಡಿ ರೇಖೆ ನಿರ್ವಹಣೆ ಸರಿಯಾಗಿಲ್ಲ. ಈ ಭಾಗದಿಂದ ಹುಲಿಗಳು ಸ್ಥಳೀಯರ ಜಮೀನಿಗೆ ಬಂದಿವೆ ಎಂದು ಹೇಳುತ್ತಾರೆ ಸಿಬ್ಬಂದಿ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !