‘ಸಹಿಷ್ಣು’ ಚಿತ್ರಕ್ಕೆ ಸೂಪರ್‌ಸ್ಟಾರ್ ಮೆಚ್ಚುಗೆ

7

‘ಸಹಿಷ್ಣು’ ಚಿತ್ರಕ್ಕೆ ಸೂಪರ್‌ಸ್ಟಾರ್ ಮೆಚ್ಚುಗೆ

Published:
Updated:
Prajavani

‘ಸಹಿಷ್ಣು’ ವಿಶ್ವದಲ್ಲಿ ಮೊದಲ ಬಾರಿಗೆ ಐ-ಫೋನ್‍ ಬಳಸಿ ಚಿತ್ರೀಕರಿಸಿದ ಸಿನಿಮಾ. ಇದರ ಅವಧಿ 2.01 ಗಂಟೆ. ಈ ಸಿಂಗಲ್ ಶಾಟ್ ಚಿತ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ಗೂ ಭಾಜನವಾಗಿದೆ.

‘ಮನುಜಮತ ವಿಶ್ವಪಥ’ ಎಂಬ ಕಲ್ಪನೆಯೇ ಇದರ ಜೀವಾಳ. ಡಾ. ಸಂಪತ್‌ ಇದರ ನಿರ್ದೇಶಕರು. ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಅವರು ಬಂಡವಾಳವನ್ನೂ ಹೂಡಿದ್ದಾರೆ. ಜೊತೆಗೆ ಅವರೇ ನಾಯಕ ನಟನಾಗಿ ನಟಿಸಿದ್ದಾರೆ.

ಕಥೆಯಲ್ಲಿ ನಕಾರಾತ್ಮಕ ಗುಣ ಹೊಂದಿದ ವಿಚಾರವಾದಿಯೊಬ್ಬನ ಅಪಹರಣವಾಗುತ್ತದೆ. ಪೆನ್ನು ಸರ್ವಶ್ರೇಷ್ಠ, ಗನ್ನು ನಾಶ ಮಾಡುತ್ತದೆ ಎಂಬ ಸಂದೇಶ ಹೇಳಿದಾಗ ಅಪಹರಣಕಾರರು ಮನಸ್ಸು ಬದಲಾಯಿಸಿ ಆತನನ್ನು ಬಿಟ್ಟು ಹೋಗುತ್ತಾರಂತೆ.

ಅಂದಹಾಗೆ ‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ಅವರಿಗೂ ಈ ಚಿತ್ರ ತೋರಿಸಿದ್ದಾರಂತೆ ಸಂಪತ್. ಮಾಧ್ಯಮದವರ ಮುಂದೆ ಅವರ

ಚಿತ್ರದ ಬಗೆಗಿನ ಸಾಹಸಯಾತ್ರೆಯನ್ನು ಹೇಳಿದ್ದು ಹೀಗೆ

‘ಚಿತ್ರಕ್ಕೆ ಲಭಿಸಿದ ಪ್ರಮಾಣಪತ್ರವನ್ನು ಸಾಧಕರಿಂದ ಸ್ವೀಕರಿಸುವ ಆಸೆ ಮೊಳೆಯಿತು. ಆಗ ನನಗೆ ತಕ್ಷಣಕ್ಕೆ ಹೊಳೆದ ಹೆಸರು ರಜನಿಕಾಂತ್. ಅವರ ಭೇಟಿ ಕಷ್ಟಸಾಧ್ಯವಾಗಿತ್ತು. ಅವರು ವರ್ಷಕ್ಕೊಮ್ಮೆ ಮನಃಶಾಂತಿಗಾಗಿ ಹಿಮಾಲಯಕ್ಕೆ ಹೋಗುತ್ತಾರೆ. ನಾನು ವಿಮಾನದ ಮೂಲಕ ಹೃಷಿಕೇಶಕ್ಕೆ ಹೋದೆ. ರಜನಿ ಸರ್‌ ದೇಶದ ಮಿಲಿಟರಿ ಕ್ಯಾಂಪಸ್‌ನ ಕೇಂದ್ರಸ್ಥಾನವಾದ ರಾಣಿಕೇತು ಎಂಬಲ್ಲಿ ಧ್ಯಾನದಲ್ಲಿ ಇದ್ದರು. ಕೊನೆಗೂ ಕಷ್ಟಪಟ್ಟು ಆ ಸ್ಥಳಕ್ಕೆ ಹೋದೆ. ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಿನಿಮಾದ ವಿಷಯ ತಿಳಿಸಿದೆ. ಐದು ನಿಮಿಷ ಚಿತ್ರದ ತುಣುಕುಗಳನ್ನು ವೀಕ್ಷಿಸಿದರು’

ವಿದೇಶದಿಂದ ಬಂದ ಪ್ರಮಾಣ ಪತ್ರದ ಕವರ್‌ ಅನ್ನು ತಾವೇ ತೆರೆದು ಅದರಲ್ಲಿದ್ದ ಪ್ರಮಾಣಪತ್ರವನ್ನು ನನಗೆ ನೀಡಿದರು. ಫಲಕವನ್ನು ಕುತ್ತಿಗೆಗೆ ಹಾಕಿ ಸಹಾಯಕನಿಗೆ ಚೆನ್ನಾಗಿ ಫೋಟೊ ತೆಗೆಯಲು ಹೇಳಿದರು ಎಂದು ಸಂತಸ ಹಂಚಿಕೊಂಡರು.

ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಎರಡು ಸೂಕ್ಷ್ಮ ಅಂಶಗಳಿಗೆ ಕತ್ತರಿ ಹಾಕಿ ‘ಯು’ ಪ್ರಮಾಣ ಪತ್ರ ನೀಡಿದೆ. ಚಿತ್ರದ ಉಳಿದ ಪಾತ್ರದಲ್ಲಿ ಹಿರಿಯ ನಟ ವಿಶ್ವನಾಥ್, ಮೂವರು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಜನರಿಗೂ ಶೀಘ್ರದಲ್ಲೇ ಸಿನಿಮಾ ತೋರಿಸುವ ಆಸೆ ಅವರದು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !