ಒನಕೆ ಅಭ್ಯರ್ಥಿ!

ಗುರುವಾರ , ಏಪ್ರಿಲ್ 25, 2019
31 °C

ಒನಕೆ ಅಭ್ಯರ್ಥಿ!

Published:
Updated:
Prajavani

‘ಹಲೋ... ಬ್ರೇಕಿಂಗ್ ನ್ಯೂಸ್ ಟೀವಿ ರಿಪೋಟ್ರು ತೆಪರೇಸಿಯವರಾ? ನಾನ್ರಿ, ಒನಕೆ ಓಬವ್ವ ಮಹಿಳಾ ಸಂಘದ ಅಧ್ಯಕ್ಷೆ ಶಾಂತವ್ವ ಮೂಲಿಮನಿ ಮಾತಾಡ್ತಿರೋದು. ನಮ್ ಚಿತ್ರದುರ್ಗದಾಗೆ ಎಂ.ಪಿ. ಎಲೆಕ್ಷನ್‍ಗೆ ಯಾರ್ ನಿಂತಾರ್‍ರೀ?’

‘ಯಾಕೆ ನಿಮಗೆ ಗೊತ್ತಿಲ್ಲೇನ್ರಿ?’

‘ನಮಗೆಂಗೆ ಗೊತ್ತಾಗಬೇಕ್ರಿ, ಯಾರೂ ಇಲ್ಲೀ
ತಂಕ ರೊಕ್ಕ, ಸೀರಿ ಹಂಚಾಕೆ ಬಂದಿಲ್ಲ, ಅದ್ಕೆ ಕೇಳಿದೆ. ನಮ್ಮ ಯಡ್ಯೂರಪ್ಪೋರು ಎಲೆಕ್ಷನ್‍ಗೆ ನಿಂತಾರೇನ್ರಿ?’

‘ಇಲ್ರಿ, ಅವರ ಮಗ ನಿಂತಾರಲ್ಲ ಶಿವಮೊಗ್ಗದಾಗ... ಗೊತ್ತಿಲ್ಲೇನು?’

‘ಗೊತ್ತಿಲ್ರಿ, ನಮ್ಮ ಖರ್ಗೆ ಸಾಹೇಬ್ರ ವಿರುದ್ಧ ಯಾರು ನಿಂತಿರೋದು?’

‘ಹೆಸರು ಬಾಯಾಗೇ ಐತಿ ಬರವಲ್ದು...’

‘ಹೋಗ್ಲಿ ದಾವಣಗೆರ್‍ಯಾಗೆ ಶಾಮನೂರು ಅಜ್ಜಾರಿಗೆ ಟಿಕೆಟ್ ಕೊಟ್ರೋ ಇಲ್ಲ ಅವರ ಮಗನಿಗೆ ಕೊಟ್ರೋ?’

‘ಅಲ್ರಿ ಶಾಂತವ್ವಾರ, ಎಲ್ಲ ವಿಷಯ ನನಗಾ ಕೇಳಾಕತ್ತೀರಲ್ಲ, ನಿಮ್ಮನೇಲಿ ಟೀವಿ ನೋಡ್ರಿ ಅಲ್ಲೆ ಗೊತ್ತಾಗ್ತತಿ...’

‘ಏನ್ ಗೊತ್ತಾಗ್ತತಿ ಮಣ್ಣು. ಯಾವ ಟೀವಿ ಹಚ್ಚಿದ್ರೂ ಬರೀ ಮಂಡ್ಯ ತೋರ್ಸಾಕತ್ತೀರಿ. ನಮ್ಮ ರಾಜ್ಯದಾಗೆ ಅದೊಂದೇ ಏನಪ ಇರೋದು. ಬೆಳಿಗ್ಗೆ ಮಂಡ್ಯ, ರಾತ್ರಿ ಮಂಡ್ಯ. ನಿಮಗೆ ಬೇರೆ ಏನು ಕಾಣಂಗಿಲ್ಲೇನು?’

‘ಅಯ್ಯೋ, ಅದು ನಮಗೆ ಸಂಬಂಧ ಇಲ್ರೀ...ನಮ್ಮ ಮ್ಯಾಲಿನೋರಿಗೆ ಕೇಳಬೇಕು ಅಷ್ಟೆ’

‘ಕೇಳ್ರಿ ಮತ್ತ, ಇಂಡಿಯಾದಾಗೆ ಮಂಡ್ಯ ಒಂದೇ ಏನು ಕಾಣ್ಸೋದು ನಿಮಗೆ. ನಮ್ಮೂರಾಗೆ ಏನ್ ನಡೀತತಿ ಯಾರಿಗೂ ಬ್ಯಾಡೇನು? ನಾನು ಇಂಡಿಪೆಂಡೆಂಟ್ ಆಗಿ ನಿಂತೇನಿ. ನಿಮ್ ಟೀವೀಲಿ ಒಂದು ಸರ್ತಿನಾದ್ರು ತೋರ್ಸಿದೀರೇನು ನನ್ನ? ಇಂಟ್ರೂ ಮಾಡೀರೇನು?’

‘ಹೌದಾ? ನನಗೆ ಗೊತ್ತೇ ಇರಲಿಲ್ಲ...’

‘ಹೆಂಗ್ ಗೊತ್ತಾಗ್ತತಿ? ನಾನೂ ಡೆಪಾಜಿಟ್ ಕಟ್ಟೇ ಎಲೆಕ್ಷನ್‍ಗೆ ನಿಂತಿರೋದು. ಒಬ್ರಿಗೊಂದ್ ಒಬ್ರಿಗೊಂದ್ ಮಾಡ್ತೀರೇನು?’

‘ಅದೂ... ಹಂಗಲ್ಲ ಶಾಂತವ್ವಾರ...’

‘ಹಂಗೂ ಇಲ್ಲ, ಹಿಂಗೂ ಇಲ್ಲ. ಒಂದ್ಸಲ ನನ್ ಕೈಯಾಗ ಸಿಗ್ರಿ, ಹೆಂಗೆ ಅಂತ ತೋರಿಸ್ತೀನಿ.... ನನ್ನ ಚಿಹ್ನೆ ಏನು ಗೊತ್ತಾ? ಒನಕೆ!’

ತೆಪರೇಸಿ ಬೆವರೊರೆಸಿಕೊಂಡ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !