ಶನಿವಾರ, ಡಿಸೆಂಬರ್ 7, 2019
21 °C
ಮೆಚ್ಚುಗೆಗೆ ಪಾತ್ರವಾದ ಗುಂಬಳ್ಳಿ ಸರ್ಕಾರಿ ಪ್ರೌಢಶಾಲಾ ಮಕ್ಕಳ ಪ್ರದರ್ಶನ

‘ಮಧ್ಯಮ ವ್ಯಾಯೋಗ’ದಲ್ಲಿ ಅರಳಿದ ಭೀಮ ಪರಾಕ್ರಮ!

ನಾ. ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Deccan Herald

ಯಳಂದೂರು: ‘ಕಾವ್ಯೇಷು ನಾಟಕಂ ರಮ್ಯಂ’ ಎಂಬುದು ಸಂಸ್ಕೃತದಲ್ಲಿ ಜನಪ್ರಿಯ ಮಾತು. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಮಹಾ ಭಾರತವನ್ನು ಕೇಂದ್ರವಾಗಿ ಇಟ್ಟುಕೊಂಡು ಸಂಸ್ಕೃತದಿಂದ ಕನ್ನಡಕ್ಕೆ ನೂರಾರು ನಾಟಕಗಳು ಅನುವಾದಗೊಂಡಿವೆ. ಅವುಗಳಲ್ಲಿ ಭಾಸ ಮಹಾಕವಿಯ ‘ಮಧ್ಯಮ ವ್ಯಾಯೋಗ’, ರಂಗಾಸಕ್ತರ ನೆಚ್ಚಿನ ನಾಟಕವಾಗಿ ಗಮನ ಸೆಳೆದಿದೆ.

ಶುದ್ಧ ಕಂಪನಿ ಶೈಲಿಯಲ್ಲಿ ಪೌರಾಣಿಕ ಪ್ರಸಂಗಗಳನ್ನು ಕಟ್ಟಿಕೊಡಲು ತಿಣುಕಬೇಕಾದ ಈಗಿನ ಸಂದರ್ಭದಲ್ಲಿ, ಗುಂಬಳ್ಳಿ ಸರ್ಕಾರಿ ಪ್ರೌಢಶಾಲಾ ಮಕ್ಕಳು ಪ್ರದರ್ಶಿಸಿದ ಭಾಸನ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಇತ್ತೀಚೆಗೆ ನಡೆದ  6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶಾಲಾ ಮಕ್ಕಳು ಮಹಾಭಾರತದ ಈ ಕಥಾ ಪ್ರಸಂಗವನ್ನು ಸಂಗೀತ ಮತ್ತು ಗಾಯನದ ಮೂಲಕ ಪ್ರಸ್ತುತ ಪಡಿಸಿದರು.

ಕುಂತಿಗೆ ಜನಿಸಿದ ಮಕ್ಕಳಲ್ಲಿ ಭೀಮ ಮಧ್ಯಮ ಪಾಂಡವನಾಗಿ ಭಾಸ ಕವಿಯ ಪಾತ್ರದಲ್ಲಿ ಅರಳಿದ್ದಾನೆ. ಬ್ರಾಹ್ಮಣರಿಗೆ ಕಂಟಕನಾಗಿದ್ದ ಘಟೋತ್ಕಚನ ಆಗಮನದಿಂದ ನಾಟಕ ಬಿಚ್ಚಿಕೊಳ್ಳುತ್ತದೆ. ಅಂತಿಮವಾಗಿ ಹಿಡಿಂಬೆ ಮತ್ತು ಕುಟುಂಬ ಸಮಾಗಮವಾಗುತ್ತದೆ. ಇದನ್ನೇ ರಂಗರೂಪದಲ್ಲಿ ಅಪ್ಯಾಯಮಯವಾಗಿ ಪ್ರಸ್ತುತಪಡಿಸಿದ್ದಾರೆ ರಂಗ ಶಿಕ್ಷಕ ಮಧುಕರ್ ಮಳವಳ್ಳಿ.

ಅಂದಿನ ಕಾಲಘಟ್ಟದ ದಬ್ಬಾಳಿಕೆಯ ವ್ಯವಸ್ಥೆ ತಿಳಿಸುವ ಘಟೋತ್ಕಚ, ಆನೆ ಇಟ್ಟಲ್ಲಿ ಹೆಜ್ಜೆ ಎಂಬುದನ್ನು ಪ್ರತಿನಿಧಿಸುವ ಭೀಮ, ಮಗನ ವಿರುದ್ಧ ಹೋರಾಡಬೇಕಾದರೂ ಮಾತು ಕೊಟ್ಟವರ ಪರವಾಗಿ ನಿಲ್ಲುವ ತಂದೆ, ಅಂತಿಮವಾಗಿ ಹಿಡಿಂಬೆಯಿಂದ ತಿಳಿಯುವ ಕುಟುಂಬದ ಇತಿಹಾಸ... ಇವೆಲ್ಲವನ್ನು ವಿದ್ಯಾರ್ಥಿಗಳು ಶ್ಲಾಘನೀಯವಾಗಿ ಪ್ರದರ್ಶಿಸಿದರು.

ಸರಳ ರಂಗ ಸಜ್ಜಿಕೆಯಿಂದ ನಾಟಕ ಗಮನ ಸೆಳೆಯಿತು. ಮಕ್ಕಳೇ ರಾಗಗಳಿಗೆ ಮಟ್ಟುಹಾಕಿ ನುಡಿಸಿದರು. ಇಲ್ಲಿನ ಸಾಂಪ್ರದಾಯಿಕ ತಮಟೆ ಮತ್ತು ಕಂಸಾಳೆಯನ್ನು ಹಿನ್ನೆಲೆಯಲ್ಲಿ ನುಡಿಸುತ್ತಲೇ ಯುದ್ಧದ ಸನ್ನಿವೇಶಗಳನ್ನು ಸೃಜನಾತ್ಮಕವಾಗಿ ಬಿಂಬಿಸಿದರು. ಪ್ರಸಾಧನ ಮತ್ತು ಉಡುಪುಗಳ ಸಂಯೋಜಿಸುವಲ್ಲಿ ನಿರ್ದೇಶಕರ ಶ್ರಮ ಪ್ರತಿ ದೃಶ್ಯದಲ್ಲೂ ಎದ್ದು ಕಂಡು ಬರುತ್ತಿತ್ತು. 

ಘಟೋತ್ಕಚನ ಪಾತ್ರಧಾರಿ ಜಿ.ಎಸ್. ಸುಮಂತ ಮತ್ತು ಭೀಮನಾಗಿ ಎಸ್‌. ಸಂದೇಶ್ ಕಾಳಗದ ಪ್ರಸ್ತುತಿಯೂ ನೂತನ ಪ್ರಯೋಗಶೀಲತೆಯಲ್ಲಿ ಒಡಮೂಡಿತು. ಆರಂಭ ಮತ್ತು ಅಂತ್ಯದಲ್ಲಿ ಯಕ್ಷಗಾನವನ್ನೇ ಹೋಲುವ ಸ್ಥಳೀಯ ನೃತ್ಯ ನೋಡುಗರ ಚಪ್ಪಾಳೆಗಿಟ್ಟಿಸಿತು. ಮಕ್ಕಳ ಇತಿಮಿತಿ ಮತ್ತು ಗ್ರಾಮೀಣ ಹಿನ್ನೆಲೆಯ ಭಾಷೆಯನ್ನು ರಂಗಕ್ಕೆ ಒಗ್ಗಿಸುವಲ್ಲಿಯೂ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಅಲ್ಲಲ್ಲಿ ಹಳೆಗನ್ನಡ ಹಾಗೂ ಹೊಸಗನ್ನಡದ ಶಬ್ಧ ಪ್ರಯೋಗಗಳ ಸಾಧ್ಯತೆಗಳನ್ನು ಸರ್ಕಾರಿ ಶಾಲಾ ಮಕ್ಕಳ ಮೂಲಕ ನಿಭಾಯಿಸುವ ಚಾಕಚಕ್ಯತೆಯನ್ನು ಶಿಕ್ಷಕರು ಪ್ರದರ್ಶಿಸಿದ್ದಾರೆ.

ಹಿಡಿಂಬಿ ಪಾತ್ರದಲ್ಲಿ ಕೆ.ಚಿತ್ರಾ, ಪಾತ್ರಧಾರಿಗಳಾಗಿ ಆರ್. ಶ್ರೀನಿವಾಸ್‌. ಸತೀಶ್, ಪೂಜಾ, ಪರಶಿವ, ರಾಗಗಳನ್ನು ಆಲಾಪನೆ ಮಾಡುತ್ತಲೇ, ಕೆಲವೊಮ್ಮೆ ಸಗೀತ ನುಡಿಸುತ್ತಲೇ, ಪಾತ್ರ ಪೋಷಣೆ ಮಾಡುವ ಕಸುಬುಧಾರಿಕೆ ನುರಿತ ರಂಗ ನಟರನ್ನು ಜ್ಞಾಪಿಸುವಂತೆ ಮೂಡಿಬಂದಿತು.

‘ಇತರರಿಗೂ ಮಾದರಿಯಾಗಲಿ’
‘ಮಕ್ಕಳ ಸೃಜನಶೀಲ ಕಲಿಕೆ ಮತ್ತು ರಂಗ ಕಲೆಯ ಮೂಲಕ ತರಗತಿ ಬೋಧನೆಯನ್ನು ಮೇಳೈಸಿ ಕಲಿಸುವ ಹೊಸ ಪರಂಪರೆ ಶಿಕ್ಷಣ ಕ್ಷೇತ್ರದಲ್ಲಿ ಮನ್ನಣೆ ಪಡೆಯುತ್ತದೆ. ಗುಂಬಳ್ಳಿ ಪ್ರೌಢಶಾಲೆ ಇಂತಹ ಹತ್ತಾರು ನಾಟಕ ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ರಂಗವೇದಿಕೆಯಲ್ಲಿ ಈಗಾಗಲೇ ಪ್ರಶಸ್ತಿ ಪಡೆದಿದೆ. ಇದು ಇತರ ಕಲಿಕಾರ್ಥಿಗಳಿಗೂ ಮಾದರಿಯಾಗಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ. ಅವರು ‘ಪ್ರಜಾವಾಣಿ’ಗೆ  ತಿಳಿಸಿದರು.

‘ಈಗಾಗಲೇ ನಮ್ಮ ತಂಡ ರಾಜ್ಯದಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿದೆ. ಈಗ ಕಂಪನಿ ಶೈಲಿಯ ಹಾಗೂ ಹಳೆಗನ್ನಡ ನಾಟಕಗಳನ್ನು ಪರಿಚಯಿಸಿ ನಾಡು–ನುಡಿ ಸಂಸ್ಕೃತಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ’ ಎಂದು  ರಂಗ ಶಿಕ್ಷಕ ಮಧುಕರ ಮಳವಳ್ಳಿ ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು