ಶ್ರೀರಾಮ ನವಮಿಗೆ ಕ್ಷಣಗಣನೆ; ತೊಟ್ಟಿಲೋತ್ಸವ

ಮಂಗಳವಾರ, ಏಪ್ರಿಲ್ 23, 2019
33 °C

ಶ್ರೀರಾಮ ನವಮಿಗೆ ಕ್ಷಣಗಣನೆ; ತೊಟ್ಟಿಲೋತ್ಸವ

Published:
Updated:
Prajavani

ವಿಜಯಪುರ: ಶ್ರೀರಾಮ ನವಮಿಗೆ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದ ಹಲ ದೇಗುಲ ಸಜ್ಜುಗೊಂಡಿವೆ. ಭಕ್ತ ಸಮೂಹ ಸಹ ಕಾತರದಿಂದ ಕಾದಿದೆ.

ಏ.13ರ ಶನಿವಾರ ಶ್ರೀರಾಮ ನವಮಿ. ಅಯೋಧ್ಯೆಯನ್ನು ಕೇಂದ್ರವನ್ನಾಗಿಸಿಕೊಂಡು, ರಾಜ್ಯಭಾರ ನಡೆಸಿದ ಇತಿಹಾಸ ಪುರುಷ ಶ್ರೀರಾಮನ ಜನ್ಮ ದಿನವಿಂದು ಎಂಬ ನಂಬಿಕೆ ರಾಮನ ಭಕ್ತರಲ್ಲಿ ತಲೆ ತಲಾಂತರದಿಂದಲೂ ಇದೆ.

ಚಾಂದ್ರಮಾನ ಯುಗಾದಿ ನಂತರದ ನವಮಿಯಂದು ಪ್ರತಿ ವರ್ಷವೂ ಶ್ರೀರಾಮ ನವಮಿ ತಪ್ಪದೇ ಆಚರಣೆಗೊಳ್ಳುತ್ತದೆ. ರಾಮ ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀರಾಮನ ಜನ್ಮ ದಿನ ಆಚರಿಸುತ್ತಾರೆ. ಶ್ರೀರಾಮನ ದೇಗುಲ ಸೇರಿದಂತೆ ಹನುಮಂತನ ದೇಗುಲಗಳಲ್ಲೂ ಆಚರಣೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಹಲವೆಡೆ ಬಾಲ ಶ್ರೀರಾಮನ ತೊಟ್ಟಿಲೋತ್ಸವ ನಡೆಯುವುದು ವಿಶೇಷ.

ವಿಜಯಪುರದ ರಾಮಮಂದಿರ ರಸ್ತೆ ಹಾಗೂ ಅಯೋಧ್ಯಾ ನಗರದ ಶ್ರೀರಾಮ ದೇಗುಲಗಳಲ್ಲಿ ಶ್ರೀರಾಮ ನವಮಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಯುಗಾದಿ ಹಬ್ಬದಿಂದ ಹಿಡಿದು, ನವಮಿ ದಿನದವರೆಗೂ ದೇಗುಲಗಳಲ್ಲಿ ಬೆಳಿಗ್ಗೆಯೇ ಜಮಾಯಿಸುವ ಭಕ್ತ ಸಮೂಹ, ಮಧ್ಯಾಹ್ನದವರೆಗೂ ರಾಮ ಚರಿತ ಓದಲಿದೆ.

‘ಶ್ರೀರಾಮ ನವಮಿಗೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ನಸುಕಿನಲ್ಲೇ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತಭಿಷೇಕ ನಡೆಯಲಿದೆ. ರಾಮನ ಮೂರ್ತಿಗೆ ವಿಶೇಷ ಅಲಂಕಾರ ಮಾಡಿದ ಬಳಿಕ ಮಧ್ಯಾಹ್ನ 12ಕ್ಕೆ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸುತ್ತೇವೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ಇದೇ ಸಂದರ್ಭ ಬಿಸಿಲ ಝಳದಲ್ಲಿ ಬೆಂದ ಭಕ್ತ ಸಮೂಹಕ್ಕೆ ತಣ್ಣನೆಯ ಶರಬತ್ತು ವಿತರಿಸಲಾಗುವುದು’ ಎಂದು ಅರ್ಚಕ ರಾಜೇಶ ಶರ್ಮಾ ತಿಳಿಸಿದರು.

ಶ್ರೀರಾಮ ನವಮಿ ಅಂಗವಾಗಿ 11 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿಯ ಮೆರವಣಿಗೆ ವಿಜಯಪುರ ನಗರದ ಸಿದ್ಧೇಶ್ವರ ದೇಗುಲದಿಂದ ಆರಂಭಗೊಂಡು, ಗಾಂಧಿಚೌಕ್‌ ಮಾರ್ಗವಾಗಿ, ಶಿವಾಜಿ ಚೌಕ್‌, ಜೋರಾಪುರ ಪೇಟೆಯಲ್ಲಿ ಮಧ್ಯಾಹ್ನ 3ರ ಆಸುಪಾಸಿನಲ್ಲಿ ಸಂಚರಿಸಲಿದೆ.

ನಾಲತವಾಡ ಪಟ್ಟಣದಲ್ಲಿ ಇದೇ ಪ್ರಪ್ರಥಮ ಬಾರಿಗೆ ಶ್ರೀರಾಮ ನವಮಿ ಆಚರಿಸಲು ಕ್ಷತ್ರೀಯ ಸಮಾಜದವರು ಮುಂದಾಗಿದ್ದಾರೆ. ವಿಪ್ರ ಸಮಾಜದಿಂದ ಬಸವನಬಾಗೇವಾಡಿಯ ಮಾರುತಿ ದೇಗುಲದಲ್ಲಿ ಶ್ರೀರಾಮ ನವಮಿ ನಡೆಯಲಿದೆ.

ತೆಲಗಿಯಲ್ಲಿ ಕ್ಷತ್ರೀಯ ಸಮಾಜದವರು, ಯಲಗೂರದಲ್ಲಿ ಬ್ರಾಹ್ಮಣ, ಕ್ಷತ್ರೀಯ, ಮರಾಠಾ ಸಮಾಜದವರು, ಆಲಮಟ್ಟಿ, ಚಿಮ್ಮಲಗಿಯಲ್ಲಿ ಬ್ರಾಹ್ಮಣ ಸಮುದಾಯದವರು ತಮ್ಮ ಪೂರ್ವಿಕರ ಕಾಲದಿಂದಲೂ ಶ್ರೀರಾಮ ನವಮಿ ಆಚರಿಸುತ್ತಿರುವುದು ವಿಶೇಷ.

ಕೋರವಾರ, ಹಲಗಣಿಯಲ್ಲೂ ಶ್ರೀರಾಮ ನವಮಿ ವಿಶೇಷವಾಗಿ ಆಚರಣೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !