ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಭೂತಗಳ ಪಂಚ್

ವಿನೋದ
Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ಬೇ ಜಾರು ಅಂತ ಸೋಮು ಮನೇಲಿದ್ದ ದಿನ ಸಿಂಗ್ ಅವನನ್ನು ಹುಡುಕಿಕೊಂಡು ಬರಬೇಕೇ. ಸೋಮುನ ಯಾರು ಹುಡುಕಿಕೊಂಡು ಬಂದರೂ ಮೊದಲು ವಿಚಾರಿಸೋದು ಸೋಮಿನೇ. ಕೌನ್ ಚಾಹಿಯೇ ಅಂದಳು ಸರದಾರ್ಜಿಯ ಗಡ್ಡ, ಮೀಸೆ, ಶಿಖೆ ನೋಡಿ.

ನೀವು ಪಕ್ಕಾ ಕನ್ನಡತಿ. ಏಕಂದ್ರೆ ನೀವು ಯಾರನ್ನು ನೋಡ್ತೀರೋ ಅವರ ಭಾಷೇಲಿ ಮಾತಾಡ್ತೀರ. ನಾವೂ ಅಷ್ಟೆ ಯಾರನ್ನು ನೋಡ್ತೀವೋ ಅವರ ಭಾಷೇಲೇ ಮಾತಾಡ್ತೀವಿ. ನಮ್ಮ ನಾಯಿ ನಿಮ್ಮನೇಲಿ ಇದ್ಯಾ ಅಂತ ಸರದಾರ್ಜಿ ಕನ್ನಡದಲ್ಲೇ ಕೇಳಿದ.

ನಿಮ್ಮನೆ ನಾಯಿ ನಿಮ್ಮನೇಲಿ ಇರಬೇಕು, ನಮ್ಮನೇಗೆ ಯಾಕೆ ಹುಡುಕ್ಕೊಂಡು ಬಂದ್ರಿ ಸೋಮಿ ಮಾರುತ್ತರ ಒಗೆದಳು.
ನಾಯಿ ಅಂದ್ರೆ ನಾಯಿ ಅಲ್ಲ, ಸೋಮು, ನಿಮ್ಮ ಪತಿರಾಯರು ಅವರನ್ನು ನಾವು ಆಫೀಸಿನಲ್ಲಿ ನಾಯಿ ಅಂತಾನೇ ಕರೆಯೋದು. ಯಾಕ್ರೀ ಸೋಮುನ ನಾಯಿ ಅಂತ ಕರೀತೀರ ಅಂಥಾ ಚೆನ್ನಾಗಿ ಅವರಪ್ಪ ಅಮ್ಮ ಸೋಮು ಅಂತ ಹೆಸರಿಟ್ಟಿರುವಾಗ.

ತಪ್ಪು ತಿಳೀಬೇಡಿ, ಬಾಸ್ ಮೂಡು, ಬೋನಸ್ ಕೊಡೋದು, ಆಡಿಟ್ ಟೀಂ ಬರೋದು, ಹೀಗೆ ಆಫೀಸಿನ ಎಲ್ಲಾ ಸೂಕ್ಷ್ಮಗಳನ್ನೂ ಮೊದಲು ತನ್ನ ಚೂಪು ಮೂಗಿನಿಂದ ಪತ್ತೆ ಮಾಡೋನು ಸೋಮೂನೇ... ಅದಕ್ಕೆ ನಾವೆಲ್ಲ ಅವನನ್ನ ನಾಯಿ ಅನ್ತೀವಿ. ಯೂ ಡೋಂಟ್ ವರಿ.

ಇಷ್ಟು ಮಾತಾಡುವಾಗ ಸೋಮು ಒಳಗಿಂದ ಬಂದ. ಸರದಾರ್ಜಿ ನೋಡಿದ್ರಾ ನಾನು ಬಂದಿರೋ ವಾಸನೆ ಸೋಮುಗೆ ಗೊತ್ತಾಗಿ ಹೋಯ್ತು ಅದಕ್ಕೆ ನೀವು ಕರೆಯೋ ಮುಂಚೆನೇ ಬಂದುಬಿಟ್ಟ ಅಂದ.

ಏನಯ್ಯಾ, ಸಿಂಗು, ಬೆಳಿಗ್ಗೆ ಬೆಳಿಗ್ಗೆ ಸಿಂಗು ಸಾಂಗು ಸಿಂಗು ಅಂತ ಇಲ್ಲಿ ಬಂದು ವಾಲಗ ಊದ್ತಿದೀಯ ಅಂದ ಸೋಮು.
ಏನಿಲ್ಲ, ಹ್ಯಾಪಿ ನ್ಯೂಸ್, ಮೊದಲು ನಿನಗೆ ತಿಳಿಸೋಣ ಅಂತ ಬಂದೆ. ನೆನ್ನೆ ನನ್ನ ಸೈಟ್ ರಿಜಿಸ್ಟ್ರೇಷನ್ ಆಯ್ತು.

ಸೋಮಿ ಹೌಹಾರಿದಳು. ಏನೂ ನೀವು ನೆನ್ನೆ ಮೊನ್ನೆ ಪಂಜಾಬಿಂದ ಬೆಂಗಳೂರಿಗೆ ಬಂದು ಆಗಲೇ ಸೈಟ್ ರಿಜಿಸ್ಟ್ರೇಷನ್ ಮಾಡಿಕೊಂಡ್ರಾ. ನಾವು ಮೂವತ್ತು ವರ್ಷದಿಂದ ಇಲ್ಲೇ ಬಿದ್ದಿದೀವಿ.

ಅದಕ್ಕೆ ಯೋಗ ಇರಬೇಕು ಮೇಡಂ, ಸಂಸ್ಕೃತ ಗಾದೆ ಇದೆಯಲ್ಲ ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಅಂತ.
ಆದರೆ ಅದರಲ್ಲಿ ಸೈಟ್ ಅಂತ ಇಲ್ವಲ್ಲಾ ಅಂದ ಸೋಮು.

ರೀ ಆಲಯ ಅಂತ ಇಲ್ವೇನ್ರೀ. ಸೈಟ್ ಇಲ್ದಿದ್ರೆ ಆಲಯಾನ ಗಾಳೀಲಿ ಕಟ್ತೀರೇನ್ರೀ, ಎಲ್ಲಾ ನನ್ನ ಹಣೆಬರಹ ನಿಮ್ಮನ್ನು ಕಟ್ಕೊಂಡು ಮನೆ ಮಠ ಇಲ್ದೆ ಮರದ ಮೇಲೆ ವಾಸ ಮಾಡಬೇಕೋ ಏನೋ. ಸುಮ್ನಿರು ಸೋಮಿ ಈ ಸಿಂಗು ಮುಂದೆ ನಿನ್ನ ಸಾಂಗು ಶುರುಮಾಡಬೇಡ. ನನಗೆ ಈ ಜನ್ಮದಲ್ಲಿ ಪಂಚಭೂತಗಳ ಪಂಚ್ ತುಸು ಹೆಚ್ಚೇ ಆದ್ರಿಂದ ಸೈಟು ದೂರನೇ ಉಳೀತು, ಷಾರ್ಟ್ ಸೈಟು ಹತ್ತಿರ ಬಂತು ಅಂತ ಕನ್ನಡಕ ಒರೆಸಿ ಹಾಕ್ಕೊಂಡ ಸೋಮು.

ಪಂಚಭೂತಗಳಿಂದ ನಾವು, ಅವು ಸಹಾಯ ಮಾಡುತ್ವೆ, ಪಂಚ್ ಕೊಡೋಲ್ಲ. ಪಂಚಭೂತಗಳಿಲ್ದೆ ನಾವು ಇಲ್ಲ.
ಸಿಂಗು ನೀನು ಹೇಳ್ತಿರೋದು ಪ್ರಪಂಚದ ಪಂಚಭೂತಗಳು, ನಾನು ಹೇಳ್ತಿರೋದು ನನ್ನ ಕುಟುಂಬದ ಪಂಚ ಭೂತಗಳು. ಏನು ನಿನ್ನ ಕುಟುಂಬದಲ್ಲೇ ಪಂಚ ಭೂತಗಳು ಇವೆಯಾ ಸರದಾರ್ಜಿ ಅಚ್ಚರಿಯಿಂದ ಕೇಳಿದ ಸೋಮಿ, ಸಿಂಗುಗೆ ಏಲಕ್ಕಿ, ಶುಂಠಿ ರಂಗು ಬೆರೆಸಿ ಟೀ ಮಾಡ್ತೀಯಾ ಅಂತ ಸೋಮಿನ ಒಳಗಡೆ ಕಳಿಸಿದ ಸೋಮು.

ಪಂಚಭೂತಗಳು ಅಂತ ನಾನು ಹೇಳಿದ್ದು ನನ್ನ ಹೆಂಡ್ತಿ ಕಡೇದು. ನಮ್ಮ ಮಾವ, ದಂಡಪಿಂಡ ಚಿಕ್ಕ ಮಾತ, ನಮ್ಮ ಅತ್ತೆ,  ನನ್ನ ಭಾಮೈದ, ನನ್ನ ನಾದಿನಿ, ಈ ಪಂಚಭೂತಗಳು ನನ್ನ ಜೀವನದಲ್ಲಿ ಆಗಾಗ ಹಣಕಾಸಿನ ಪಂಚ್ ಕೊಡ್ತಾ ಇದ್ದಿದ್ರಿಂದ, ಇನ್ನೂ ಕೊಡ್ತಾನೇ ಇರೋದ್ರಿಂದ ನನ್ನ ಸೈಟು ಕೊಳ್ಳೋ ಪ್ಲಾನು ಲಾಂಗ್ ಸೈಟು ಆಗಿ ಹೋಯ್ತು. ಎಲ್ರೂ ಆಸ್ತಿ ಮಾಡಬೇಕು ಅಂತ ಸೈಟ್ ಸೀಯಿಂಗ್ ಹೋಗ್ತಾರೆ, ಆದ್ರೆ ನಾನು ಸೈಟ್ ಸೀಯಿಂಗ್‌ಗೆ ಹೋಗಲೇ ಇಲ್ಲ. ಹೋಗ್ಲಿ ಬಿಡು, ಈ ಪಂಚ್ ಭೂತಗಳು ನಿನಗೊಬ್ಬನಿಗೇ ಅಲ್ಲ ಎಲ್ರಿಗೂ ಒಂದಲ್ಲ ಒಂದು ತರ ಕಾಡ್ತಾ ಇರುತ್ತೆ. ಇದಕ್ಕೆ ನಮ್ಮ ಸೀಎಮ್ಮೂ ಹೊರತಲ್ಲ ಅಂದ. ಏನೂ ನಮ್ಮ ಸೀಎಂ ಗೂ ಪಂಚ ಭೂತಗಳ ಪಂಚ್ ಕಾಡ್ತಾ ಇದ್ಯಾ.

ಹೇಗೆ ಸಂಪುಟ ವಿಸ್ತರಣೆ, ಉಪಮುಖ್ಯಮಂತ್ರಿ ಸ್ಥಾನ, ಮಂಡಳಿ-ನಿಗಮಗಳಿಗೆ ನೇಮಕ, ಕಸದ ಸಮಸ್ಯೆ ಜೊತೆಗೆ ಹೊಸದಾಗಿ ಮಹಿಳೆಯರ, ಮಕ್ಕಳ ಲೈಂಗಿಕ ಕಿರುಕುಳ ಈ ಪಂಚ ಭೂತಗಳು ಅವರಿಗೆ ಪಂಚ್ ಕೊಡ್ತಿವೆ. ಅದಕ್ಕೆ ಅವರು ಅವಾಗವಾಗ ಎಲ್ಲೆಂದರಲ್ಲಿ ನಿದ್ದೆಗೆ ಜಾರುತ್ತಾರೆ. ಸೋ ಪಂಚ ಭೂತಗಳ ಪಂಚ್ ಸೀಎಂಗೂ ತಪ್ಪಿದ್ದಲ್ಲ ಅಂದ ಮೇಲೆ ನೀನೆಷ್ಟರವನು ಹೇಳು. ಅದಕ್ಕೇ ಹಣೆಬರಹ ಒಪ್ಕೊ, ಬ್ಯಾಂಕ್ ಬ್ಯಾಲೆನ್ಸ್ ನಂಬ್ಕೊ, ದೇವರಲ್ಲಿ ನಂಬ್ಕೆ ಇಟ್ಕೊ, ಸ್ನೇಹಿತರು ಸಿಕ್ಕಾಗ ಹಳೇ ಅನುಭವಗಳನ್ನು ಬಿಚ್ಕೊ, ಆಗಾಗ ಹೆಂಡ್ತೀನ ತಬ್ಕೊ ಈ ಪಂಚ ಭೂತಗಳನ್ನು ಎಂದಿಗೂ ಮರೆಯಬೇಡ ಅಂದು ಸಿಂಗು ಹೊರಟ.

ಸಿಂಗು ಹೊರಟ ಮೇಲೆ ಟೀ ತಂದಳು ಸೋಮಿ. ಯಾಕೆ ಸಿಂಗು ಹೋದ ಮೇಲೆ ಟೀ ತಂದ್ಯಲ್ಲ ಅಂದ್ರೆ, ಸಿಂಗು ಹೋಗ್ಲಿ ಅಂತಾನೇ ಕಾಯ್ತಿದ್ದೆ ಅಂದು ಒಂದು ಲೋಟ ಸೋಮು ಕೈಗಿಟ್ಟು ತಾನೊಂದು ಕೈಗೆ ತಗೊಂಡು ಸಶಬ್ದವಾಗಿ ಟೀ ಹೀರಿದಳು.ಆ ಪಂಚಭೂತಗಳ ಜೊತೆಗೆ ಇದೊಂದು ಪೆಡಂಭೂತ ಅಂತ ಸೋಮು ಟೀ ಕುಡಿದ ಲೋಟ ಕೆಳಗಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT