ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಇಂದು ಸನ್‌ರೈಸರ್ಸ್‌ ಸವಾಲು

ಮೊದಲ ಪಂದ್ಯ ಅಲ್ಪ ಅಂತರದಲ್ಲಿ ಸೋತಿದ್ದ ಇತ್ತಂಡಗಳು
Published 27 ಮಾರ್ಚ್ 2024, 0:47 IST
Last Updated 27 ಮಾರ್ಚ್ 2024, 0:47 IST
ಅಕ್ಷರ ಗಾತ್ರ

ಹೈದರಾಬಾದ್: ಗುಜರಾತ್ ವಿರುದ್ಧ ಮೊದಲ ಪಂದ್ಯದಲ್ಲಿ ಗುರಿಯನ್ನು ಬೆನ್ನತ್ತುವಾಗ ಕೊನೆಯ ಕ್ಷಣದಲ್ಲಿ ಮುಗ್ಗರಿಸಿದ ಮುಂಬೈ ಇಂಡಿಯನ್ಸ್‌ ತಂಡ, ಬುಧವಾರ ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಅಪಾಯಕಾರಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಮುಂಬೈ ರೀತಿ ಪ್ಯಾಟ್‌ ಕಮಿನ್ಸ್‌ ನೇತೃತ್ವದ ಸನ್‌ರೈಸರ್ಸ್ ತಂಡ ಶನಿವಾರ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟರ್‌ ರೈಡರ್ಸ್‌ ಎದುರು ಕೊನೆಯ ಎಸೆತದವರೆಗೆ ಆಡಿ ಕೇವಲ ನಾಲ್ಕು ರನ್‌ಗಳಿಂದ ಸೋತಿತ್ತು.

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಒಳ್ಳೆಯ ಆರಂಭ ಮಾಡುವಂತೆ ಕಂಡಿತ್ತು. ಬೂಮ್ರಾ ಅವರ ಪರಿಣಾಮಕಾರಿ ಸ್ಪೆಲ್‌, ಆರಂಭದಲ್ಲಿ ರೋಹಿತ್ ಶರ್ಮಾ ಅವರ ಬಿರುಸಿನ ಆಟ, ನಂತರ ಡೆವಾಲ್ಡ್‌ ಬ್ರೆವಿಸ್‌ ಅವರ ಭರ್ಜರಿ ಆಟದಿಂದ ತಂಡ ಗೆಲುವಿನತ್ತ ಸಾಗಿತ್ತು. ಆದರೆ 36 ಎಸೆತಗಳಲ್ಲಿ ಏಳು ವಿಕೆಟ್‌ಗಳಿಂದ 48 ರನ್ ಗಳಿಸುವ ಸುಲಭ ಅವಕಾಶದಲ್ಲಿ ಎಡವಿತ್ತು. ಸತತ 12ನೇ ಆವೃತ್ತಿಯಲ್ಲೂ ತನ್ನ ಗೆಲುವಿನೊಡನೆ ಲೀಗ್ ಆರಂಭ ಪಡೆಯಲಾಗಲಿಲ್ಲ. ಆದರೆ, ಈ ಬಾರಿ ಲೀಗ್‌ನಲ್ಲಿ ತಂಡಗಳು ಹಿಂದೆಂದಿಗಿಂತ ಸ್ಪರ್ಧಾತ್ಮಕವಾಗಿದ್ದು, ಮುಂಬೈ ಮುಂದಿನ ಪಂದ್ಯಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಮುಂಬೈ ಹೊಸ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯದಲ್ಲಿ, ಟಿಮ್ ಡೇವಿಡ್‌, ಡೆವಾಲ್ಡ್‌ ಬ್ರೆವಿಸ್ ಅವರಿಗೆ ಅವಕಾಶ ಕಲ್ಪಿಸಲು ಏಳನೇ ಕ್ರಮಾಂಕದಲ್ಲಿ ಆಡಿದ್ದರು. ಗುಜರಾತ್‌ ಟೈಟನ್ಸ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ಅವರು ಈ ಬಾರಿ ಮೇಲಿನ ಕ್ರಮಾಂಕದಲ್ಲಿ ಆಡಬಹುದು.

ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬೇಕಾದರೆ ಇಶಾನ್ ಕಿಶನ್ ಮುಂದಿನೆಲ್ಲಾ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮೊದಲ ಪಂದ್ಯದಲ್ಲಿ ಅವರು ಬೇಗನೇ ನಿರ್ಗಮಿಸಿದ್ದರು. ಮುಂಬೈ ಸ್ಪಿನ್ನರ್‌ಗಳಾದ ಶಮ್ಸ್‌ ಮುಲಾನಿ ಮತ್ತು ಪಿಯೂಷ್ ಚಾವ್ಲಾ ಅವರೂ ಪ್ರಭಾವಿ ಎನಿಸಿರಲಿಲ್ಲ.

ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತದಲ್ಲಿ ಆಡಿದ್ದ ಪ್ಯಾಟ್‌ ಕಮಿನ್ಸ್ ಬಳಗ ಈಗ ತವರಿನಲ್ಲಿ ಆಡಲಿದೆ. ಭರ್ಜರಿ ಹೊಡೆತಗಳ ಆಟಗಾರ, ದಕ್ಷಿಣ ಆಫ್ರಿಕದ ಹೆನ್ರಿಚ್‌ ಕ್ಲಾಸೆನ್‌ ಅವರ ‘ಕ್ಲಾಸ್‌’ ಬ್ಯಾಟಿಂಗ್ ತಂಡವನ್ನು ಗೆಲುನಿನಂಚಿಗೆ ತಂದುನಿಲ್ಲಿಸಿತ್ತು. ಕೆಲಹೊತ್ತು ಶಾಬಾಜ್ ಅಹ್ಮದ್‌ ಬಿಟ್ಟರೆ ಉಳಿದವರಿಂದ ಬೆಂಬಲ ಸಿಕ್ಕಿರಲಿಲ್ಲ.

ಆರಂಭ ಆಟಗಾರರಾದ ಮಯಂಕ್ ಅಗರವಾಲ್ ಮತ್ತು ಅಭಿಷೇಕ್ ಶರ್ಮಾ ಅವರು ತಂಡಕ್ಕೆ ಬಿರುಸಿನ ಆರಂಭ ಒದಗಿದ್ದರು. ತಂಡ ಅವರಿಂದ ಇದೇ ರೀತಿಯ ಸ್ಥಿರ ಪ್ರದರ್ಶನ ನಿರೀಕ್ಷಿಸುತ್ತಿದೆ. ಪಿಂಚ್‌ ಹಿಟ್ಟರ್ ಅಬ್ದುಲ್ ಸಮದ್ ತಂಡ ತಮ್ಮ ಮೇಲಿಟ್ಟಿರುವ ಭರವಸೆಗೆ ತಕ್ಕಂತೆ ಆಡಬೇಕಾಗಿದೆ.  ಈ ಹಿಂದಿನ ಪಂದ್ಯದಲ್ಲಿ ಆಂಡ್ರೆ ರಸೆಲ್ ಆಕ್ರಮಣದ ಆಟಕ್ಕೆ ತತ್ತರಿಸಿದ್ದ ಬೌಲರ್ ಭುವನೇಶ್ವರ ಕುಮಾರ್‌ ಪುಟಿದೇಳಬಲ್ಲರೇ ಎಂಬುದನ್ನು ಕಾದುನೋಡಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.30.

ಮುಖಾಮುಖಿ

ಆಡಿದ ಪಂದ್ಯಗಳು: 21

ಮುಂಬೈ ಗೆಲುವು 12

ಸನ್‌ರೈಸರ್ಸ್‌ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT