ಮರಳಿ ಅರಳಿದ ವಿರಾಟ್, ಅಜಿಂಕ್ಯ

7
ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌; ಮೂರು ರನ್‌ಗಳಿಂದ ಕೊಹ್ಲಿ ಶತಕ ವಂಚಿತ

ಮರಳಿ ಅರಳಿದ ವಿರಾಟ್, ಅಜಿಂಕ್ಯ

Published:
Updated:
Deccan Herald

ನಾಟಿಂಗಂ: ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಅನುಭವಿಸಿದ ಸೋಲಿನಿಂದಾಗಿ ಎದುರಿಸಿದ್ದ ಟೀಕೆಗಳ ಸರಪಣಿಯನ್ನು ಕಳಚಿಕೊಳ್ಳುವತ್ತ ವಿರಾಟ್ ಕೊಹ್ಲಿ ಬಳಗವು ದಿಟ್ಟ ಹೆಜ್ಜೆ  ಇಟ್ಟಿದೆ.

ಶನಿವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್‌ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ (97 ರನ್‌) ಮತ್ತು ಅಜಿಂಕ್ಯ ರಹಾನೆ (81 ರನ್) ಅವರ ಅಮೋಘ ಆಟದ ಬಲದಿಂದ ದಿನದಾಟದ ಅಂತ್ಯಕ್ಕೆ  ಭಾರತ ತಂಡವು 87 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 307 ರನ್‌ ಗಳಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ  ಮಾಡಿಕೊಂಡಿತು. ಶಿಖರ್ ಧವನ್ (35; 65ಎಸೆತ, 7ಬೌಂಡರಿ) ಮತ್ತು ಕೆ.ಎಲ್. ರಾಹುಲ್ (23; 53 ಎಸೆತ, 4ಬೌಂಡರಿ) ಅವರಿಬ್ಬರು ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. 60 ರನ್‌ ಆಗಿದ್ದ ಸಂದರ್ಭದಲ್ಲಿ ಕ್ರಿಸ್‌ ವೋಕ್ಸ್‌ ಎಸೆತವನ್ನು ಹೊಡೆದ ಶಿಖರ್, ಜೋಸ್ ಬಟ್ಲರ್‌ಗೆ ಕ್ಯಾಚಿತ್ತರು. ನಂತರ ಬಂದ ಚೇತೇಶ್ವರ್ ಪೂಜಾರ ನಿಧಾನವಾಗಿ ಆಡಿದರು. 21ನೇ ಓವರ್‌ನಲ್ಲಿ ವೋಕ್ಸ್‌ ರಾಹುಲ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಐದು ಓವರ್‌ಗಳ ನಂತರ ಪೂಜಾರ ಕೂಡ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೊಹ್ಲಿ ಮತ್ತು ಅಜಿಂಕ್ಯ ಇನಿಂಗ್ಸ್‌ಗೆ ಸುಂದರ ರೂಪ ನೀಡಿದರು. ಇಬ್ಬರೂ ಕಲಾತ್ಮಕ ಹೊಡೆತಗಳ ಮೂಲಕ ರನ್‌ ಗಳಿಸಿದರು.  4ನೇ ವಿಕೆಟ್‌ಗೆ 161 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಗಿದೆ. ಆದರೆ ಶತಕದತ್ತ ಹೆಜ್ಜೆಯಿಟ್ಟಿದ್ದ ಅಜಿಂಕ್ಯ 67ನೇ ಓವರ್‌ ನಲ್ಲಿ ಸ್ಟುವರ್ಟ್‌ ಬ್ರಾಡ್‌ ಎಸೆತದಲ್ಲಿ ಕೆಟ್ಟ ಹೊಡೆತವಾಡಿ ಔಟಾದರು.

ಶತಕ ವಂಚಿತ ಕೊಹ್ಲಿ: 97 ರನ್‌ ಗಳಿಸಿ ಶತಕದತ್ತ ದಾಪುಗಾಲಿಟ್ಟಿದ್ದ ವಿರಾಟ್‌, 76ನೇ ಓವರ್‌ನಲ್ಲಿ ಆದಿಲ್‌ ರಶೀದ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಅವರು ಹನ್ನೊಂದು ಬೌಂಡರಿಗಳನ್ನು ಸಿಡಿಸಿದರು. ‌‌

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌: ಭಾರತ: 87 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 307 (ಶಿಖರ್ ಧವನ್ 35, ಕೆ.ಎಲ್‌. ರಾಹುಲ್ 23, ಚೇತೇಶ್ವರ್ ಪೂಜಾರ 14, ವಿರಾಟ್ ಕೊಹ್ಲಿ 97,  ಅಜಿಂಕ್ಯ ರಹಾನೆ 81,  ಹಾರ್ದಿಕ್ ಪಾಂಡ್ಯ 18, ರಿಷಬ್‌ ಪಂತ್‌ ಬ್ಯಾಟಿಂಗ್‌ 22, ಕ್ರಿಸ್ ವೋಕ್ಸ್‌ 75ಕ್ಕೆ3, ಸ್ಟುವರ್ಟ್‌ ಬ್ರಾಡ್ 64ಕ್ಕೆ1, ಆದಿಲ್‌ ರಶೀದ್‌ 46ಕ್ಕೆ 1, ಜೇಮ್ಸ್‌ ಆ್ಯಂಡರ್ಸನ್‌ 52ಕ್ಕೆ 1)

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !