ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಫೈನಲ್: ಮುಂಬೈಗೆ ಬಲ ತುಂಬಿದ ಶಾರ್ದೂಲ್

ಹರ್ಷ ದುಬೆ, ಯಶ್ ಠಾಕೂರ್‌ಗೆ ತಲಾ ಮೂರು ವಿಕೆಟ್
Published 10 ಮಾರ್ಚ್ 2024, 15:01 IST
Last Updated 10 ಮಾರ್ಚ್ 2024, 15:01 IST
ಅಕ್ಷರ ಗಾತ್ರ

ಮುಂಬೈ: ಶಾರ್ದೂಲ್ ಠಾಕೂರ್ ಅವರ  ಆಲ್‌ರೌಂಡ್ ಆಟದ ಬಲದಿಂದ ಮುಂಬೈ ತಂಡವು ಭಾನುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನ ಮೊದಲ ದಿನದ ಗೌರವ ಗಳಿಸಿತು. 

ಟಾಸ್ ಗೆದ್ದ ವಿದರ್ಭ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವಿ ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು  ಅಜಿಂಕ್ಯ ರಹಾನೆ ಅವರ ರನ್‌ ಬರ ಮುಂದುವರಿಯಿತು. ವಿದರ್ಭ ತಂಡದ ಹರ್ಷ ದುಬೆ ಮತ್ತು ಯಶ್ ಠಾಕೂರ್ ಅವರ ಧಾಳಿಗೆ ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಕುಸಿಯಿತು. ಆದರೆ ಶಾರ್ದೂಲ್ (75; 69ಎ, 4X8, 6X3) ಬೀಸಾಟದಿಂದಾಗಿ ತಂಡವು 64.3 ಓವರ್‌ಗಳಲ್ಲಿ 224 ರನ್‌ಗಳನ್ನು ಕಲೆಹಾಕಿತು. 

ಇದಕ್ಕೆ ಪ್ರತಿಕ್ರಿಯೆಯಾಗಿ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡಕ್ಕೆ ಶಾರ್ದೂಲ್ ಅವರೇ ಮೊದಲ ಪೆಟ್ಟು ಕೊಟ್ಟರು. ವಿದರ್ಭ ಆರಂಭಿಕ ಬ್ಯಾಟರ್ ಧ್ರುವ ಶೋರೆ ಅವರು ಖಾತೆ ತೆರೆಯುವ ಮುನ್ನವೇ ಶಾರ್ದೂಲ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇನ್ನೊಂದೆಡೆ ಮಧ್ಯಮವೇಗಿ ಧವಳ್ ಕುಲಕರ್ಣಿ (9ಕ್ಕೆ2) ಅಮನ್ ಮೊಖಾಡೆ  (8 ರನ್) ಮತ್ತು 12 ಎಸೆತ ಎದುರಿಸಿ ಒಂದೂ ರನ್ ಗಳಿಸದ ಕರುಣ್ ನಾಯರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇವರಿಬ್ಬರು ಬ್ಯಾಟರ್‌ಗಳನ್ನು ಹಾರ್ದಿಕ್ ತಮೋರೆ ಕ್ಯಾಚ್ ಮಾಡಿದರು. 

ವಿದರ್ಭ ತಂಡವು ದಿನದಾಟದ ಮುಕ್ತಾಯಕ್ಕೆ 13 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 31 ರನ್ ಗಳಿಸಿತು. 

42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡಕ್ಕೆ ಪೃಥ್ವಿ ಶಾ (46 ರನ್) ಮತ್ತು ಭೂಪೆನ್ ಲಾಲ್ವಾನಿ (37 ರನ್) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು. ಆದರೆ, 20ನೇ ಓವರ್‌ನಲ್ಲಿ ಯಶ್ ಠಾಕೂರ್ ಬೌಲಿಂಗ್‌ನಲ್ಲಿ ಭೂಪೆನ್ ಔಟಾದರು. ನಂತರ ಮುಂಬೈ ತಂಡದ ಕುಸಿತ ಆರಂಭವಾಯಿತು. ತಂಡದ ಮೊತ್ತ 100ರ ಗಡಿ ಮುಟ್ಟುವ ಮುನ್ನವೇ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.  ನಂತರ ಶಾರ್ದೂಲ್ ಚೇತರಿಕೆ ನೀಡಿದರು. ಏಕಾಂಗಿಯಾಗಿ ಬ್ಯಾಟ್ ಬೀಸಿದರು. ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಶಾರ್ದೂಲ್ ಅವರು ಶತಕ ಗಳಿಸಿದ್ದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್–  ಮುಂಬೈ 64.3 ಓವರ್‌ಗಳಲ್ಲಿ 224 (ಪೃಥ್ವಿ ಶಾ 46, ಭೂಪೇನ್ ಲಾಲ್ವಾನಿ 37, ಶಾರ್ದೂಲ್ ಠಾಕೂರ್ 75, ತುಷಾರ್ ದೇಶಪಾಂಡೆ 14, ಉಮೇಶ್ ಯಾದವ್ 43ಕ್ಕೆ2, ಹರ್ಷ ದುಬೆ 62ಕ್ಕೆ3, ಯಶ್ ಠಾಕೂರ್ 54ಕ್ಕೆ3) ವಿದರ್ಭ: 13 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 31 (ಅಥರ್ವ್ ತೈಡೆ ಬ್ಯಾಟಿಂಗ್ 21, ಧವಳ್ ಕುಲಕರ್ಣಿ 9ಕ್ಕೆ2, ಶಾರ್ದೂಲ್ ಠಾಕೂರ್ 14ಕ್ಕೆ1) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT